ಸುಪ್ರೀಂಕೋರ್ಟ್‌ಗೆ ನ್ಯಾಯವಾದಿಗಳ ಚಾಟಿಯೇಟು! | Vartha Bharati- ವಾರ್ತಾ ಭಾರತಿ

ಸುಪ್ರೀಂಕೋರ್ಟ್‌ಗೆ ನ್ಯಾಯವಾದಿಗಳ ಚಾಟಿಯೇಟು!

ಮನಸೋ ಇಚ್ಛೆ ನಿರ್ಬಂಧಗಳನ್ನು ಹೇರುತ್ತಿರುವ ಸರಕಾರವು ಸಾಂವಿಧಾನಿಕ ಆಶ್ವಾಸನೆಗಳಾದ ಸಮಾನತೆ, ಪ್ರಾಣ, ಸ್ವಾತಂತ್ರ ಹಾಗೂ ಘನತೆಗಳನ್ನು ಸಾರಾಸಗಟಾಗಿ ಕಡೆಗಣಿಸಿದೆ ಎಂಬುದರ ಕುರುಹು ಈ ವಲಸೆ ಸಂಕಟ. ಈ ಲಕ್ಷೋಪಲಕ್ಷ ಬಡವರಿಗೆ ಪರಿಹಾರ ಒದಗಿಸುವಲ್ಲಿ ಮತ್ತು ಈ ಕುರಿತು ಸರಕಾರವನ್ನು ಜವಾಬ್ದಾರಿ ಆಗಿಸಲು ಗೌರವಾನ್ವಿತ ಸುಪ್ರೀಂಕೋರ್ಟ್‌ಗೆ ಮನಸ್ಸೇ ಇಲ್ಲ. ಈ ನಿಷ್ಕ್ರಿಯೆಯು ನಾಗರಿಕರ ಮೂಲಭೂತ ಹಕ್ಕುಗಳ ರಕ್ಷಕನೆಂಬ ನ್ಯಾಯಾಲಯದ ಸ್ಥಾನಮಾನವನ್ನು ಕೊರೆದು ಕೆಡವಿದೆ.


ಆತ್ಮನಿರ್ಭರ ಭಾರತದ ಕರುಳು ಕಿವಿಚುವ ಚಿತ್ರಗಳಿಗೆ ಭಕ್ತ ಭಾರತದ ಆತ್ಮಸಾಕ್ಷಿ ಸತ್ತು ಹೋಗಿದೆ. ಆತ್ಮನಿರ್ಭರ ಭಾರತದ ಹೃದಯ ಹಿಂಡುವ ಚಿತ್ರಗಳು ನಾಗರಿಕ ಸಮಾಜದ ಮುಖಕ್ಕೆ ರಾಚುತ್ತಿವೆ. ಭಕ್ತ ಭಾರತದ ಆತ್ಮಸಾಕ್ಷಿ ಕಡೆಯುಸಿರು ಎಳೆದು ವರ್ಷಗಳೇ ಉರುಳಿವೆ. ದಿನಗಟ್ಟಲೆ ರೈಲಿನಲ್ಲಿ ಅನ್ನ ನೀರಿಲ್ಲದೆ ಪ್ರಯಾಣ ಮಾಡಿ ಸತ್ತ ತನ್ನ ತಾಯಿಯ ಹೊದಿಕೆಯನ್ನು ಹಿಡಿದೆಳೆದು ಎಚ್ಚರಿಸಲು ಅಮಾಯಕ ಹಸುಳೆ ಪ್ರಯತ್ನಿಸುವ ದೃಶ್ಯಾವಳಿ ಭಕ್ತ ಭಾರತದ ಕಲ್ಲು ಮನಸ್ಸನ್ನು ಕರಗಿಸಲಾರದು. ಅರ್ಥಾತ್ ದೇಶ- ಸಮಾಜ ತೀವ್ರ ಅಪಾಯಕರ ಸ್ಥಿತಿಯಲ್ಲಿವೆ. ಮನಸ್ಸಾಕ್ಷಿಗಳಿಗೆ ಲಕ್ವ ಹೊಡೆದಿದೆ. ಹನ್ನೊಂದರ ಪ್ರಾಯದ ಎಳೆಯ ಬಾಲಕ ತನ್ನ ಕುರುಡು ತಾಯಿ ಮತ್ತು ಕುಂಟ ತಂದೆಯನ್ನು ತ್ರಿಚಕ್ರ ಸೈಕಲ್‌ನಲ್ಲಿ ಕೂರಿಸಿ ವಾರಣಾಸಿಯಿಂದ ಬಿಹಾರಕ್ಕೆ ಒಯ್ಯುವ ದೃಶ್ಯವಾಗಲಿ, ಹೆದ್ದಾರಿಯಲ್ಲಿ ಹಸಿದ ವ್ಯಕ್ತಿಯೊಬ್ಬ ವಾಹನಗಳ ಚಕ್ರಗಳಡಿ ಸಿಲುಕಿ ನಜ್ಜುಗುಜ್ಜಾಗಿದ್ದ ನಾಯಿಯ ಕಳೇಬರದಿಂದ ಮಾಂಸವನ್ನು ಕಿತ್ತು ತಿನ್ನುವ ನೋಟವಾಗಲಿ, ನಡೆ ನಡೆದು ಎಳೆಯ ಮಕ್ಕಳ ಅಂಗಾಲುಗಳಲ್ಲಿ ಬೊಕ್ಕೆಗಳಾಗಿ ಕಂಗೆಟ್ಟು ಕಣ್ಣುಗಳಲ್ಲಿ ನೀರು ತುಂಬಿಕೊಂಡ ನೋವಾಗಲೀ ಭಕ್ತ ಭಾರತದ ಕಣ್ಣಿಗೆ ಕಾಣುವುದೇ ಇಲ್ಲ. ತನ್ನ ವಿಶ್ವರೂಪವನ್ನು ಕಾಣಲು ಶ್ರೀಕೃಷ್ಣನು ಅರ್ಜುನನಿಗೆ ವಿಶೇಷ ದೃಷ್ಟಿಯನ್ನು ಪ್ರಸಾದಿಸಿದಂತೆ ಭಕ್ತ ಭಾರತಕ್ಕೂ ವಿಶೇಷ ಕಣ್ಣುಗಳನ್ನೂ, ಚಲಿಸುವ ಮನಸ್ಸನ್ನೂ ನೀಡಬೇಕಿದೆ. ಆ ಕಾಲ ಬರುವುದೆಂದೋ ಸದ್ಯಕ್ಕೆ ತಿಳಿಯದು.

ಈ ನಡುವೆ ವಿಶೇಷವೊಂದು ಜರುಗಿದೆ. ವಲಸೆ ಕಾರ್ಮಿಕ ಕೋಟಿಯ ಕಷ್ಟ ಪರಂಪರೆಯನ್ನು ಕಡೆಗಣಿಸಿದ್ದ ಸುಪ್ರೀಂಕೋರ್ಟ್‌ಗೆ ಬಿಸಿ ಮುಟ್ಟಿಸುವ ಪತ್ರವೊಂದನ್ನು ದೇಶದ ಹಿರಿಯ ನ್ಯಾಯವಾದಿಗಳು ಬರೆದಿದ್ದಾರೆ. ವಲಸೆ ಕಾರ್ಮಿಕರ ಸಂಬಂಧ ಸರಕಾರ ಕೈಗೊಂಡಿರುವ ಕ್ರಮಗಳಲ್ಲಿ ‘ಕೆಲ ಲೋಪದೋಷಗಳ’ನ್ನು ಸುಪ್ರೀಂಕೋರ್ಟ್ ಬುಧವಾರ (ಮೇ 27) ಸ್ವಯಂಪ್ರೇರಣೆಯ ಮೇರೆಗೆ ಗಮನಕ್ಕೆ ತೆಗೆದುಕೊಂಡಿತ್ತು. ಈ ಬೆಳವಣಿಗೆಗೆ ಕೆಲವೇ ತಾಸುಗಳ ಮುನ್ನ ನ್ಯಾಯವಾದಿಗಳ ಪತ್ರ ನ್ಯಾಯಾಲಯಕ್ಕೆ ತಲುಪಿತ್ತು. ಈ ಪತ್ರವನ್ನೊಮ್ಮೆ ಓದಿಕೊಳ್ಳೋಣ.

ಪ್ರಿಯ ನ್ಯಾಯಮೂರ್ತಿಗಳೇ,
ಭಾರತೀಯ ನಾಗರಿಕರಾಗಿ ಮತ್ತು ಹಿರಿಯ ನ್ಯಾಯವಾದಿಗಳಾಗಿ ಅತೀವ ವ್ಯಥೆ ಮತ್ತು ದಿಗಿಲಿನಿಂದ ನಿಮಗೆ ಈ ಪತ್ರ ಬರೆಯುತ್ತಿದ್ದೇವೆ.
ಈ ದೇಶದ ನಾಗರಿಕರ ಅದರಲ್ಲೂ ವಿಶೇಷವಾಗಿ ಬಡತನ ರೇಖೆಯ ಮತ್ತು ಅದರ ಕೆಳಗೆ ಕನಿಷ್ಠ ಕೂಲಿ ಪಡೆದು ಹೊಟ್ಟೆ ಹೊರೆಯುವ ಮತ್ತು ಹೀಗೆ ಹೊಟ್ಟೆ ಹೊರೆಯುವುದೂ ಕಷ್ಟಕರವಾಗಿ ಪರಿಣಮಿಸಿರುವ ಅಸಂಖ್ಯಾತ ಜನಸಮೂಹಗಳ ಮೂಲಭೂತ ಹಕ್ಕುಗಳ ರಕ್ಷಣೆಯಲ್ಲಿ ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪಾತ್ರ ಅತ್ಯಂತ ಪ್ರಮುಖ.

ಸರಕಾರಿ ಆದೇಶದ ಮೇರೆಗೆ ಕಳೆದ ಮಾರ್ಚ್ 25ರಿಂದ ಇಡೀ ದೇಶ ಮತ್ತು ಅದರ ಆರ್ಥಿಕ ವ್ಯವಸ್ಥೆಗೆ ಬೀಗ ಬಿದ್ದಿರುವ ಇಂದಿನ ಬಿಕ್ಕಟ್ಟಿನ ಸ್ಥಿತಿಯಲ್ಲಿ ಸುಪ್ರೀಂಕೋರ್ಟ್ ಪಾತ್ರ ಮತ್ತು ಕರ್ತವ್ಯ ಅಪಾರ ಪ್ರಾಮುಖ್ಯತೆ ಗಳಿಸಿಕೊಳ್ಳುತ್ತದೆ. ದೇಶದ ಶೇ.75ಕ್ಕೂ ಹೆಚ್ಚು ಶ್ರಮಜೀವಿಗಳು ಅಸಂಘಟಿತ ವಲಯದಲ್ಲಿರುವವರು. ಆರ್ಥಿಕ ಚಟುವಟಿಕೆಯ ಸ್ಥಗಿತವು ಅವರ ಹೊಟ್ಟೆಪಾಡುಗಳ ಮೇಲೆ ತಕ್ಷಣದ ಪರಿಣಾಮ ಬೀರುತ್ತದೆ.

ಕೋಟಿಗಳ ಸಂಖ್ಯೆಗಳಲ್ಲಿರುವ ಈ ಶ್ರಮಿಕ ವರ್ಗ ಮುಖ್ಯವಾಗಿ ವಲಸೆ ಕಾರ್ಮಿಕ ಸ್ವರೂಪದ್ದು. ಮಾರ್ಚ್24ರಂದು ‘ಲಾಕ್‌ಡೌನ್’ ಘೋಷಿಸಿದಾಗ ಇವರ ಪಡಿಪಾಟಲನ್ನು ಲೆಕ್ಕಕ್ಕೇ ಇಟ್ಟುಕೊಳ್ಳಲಿಲ್ಲ. ಕೇವಲ ನಾಲ್ಕು ತಾಸುಗಳ ಕಾಲಾವಧಿ ನೀಡಿ ಲಾಕ್‌ಡೌನ್ ಸಾರಲಾಯಿತು. ಈ ಕೋಟ್ಯಂತರ ಕಾರ್ಮಿಕರಿಗೆ ತಮ್ಮ ಊರುಗಳಿಗೆ ತೆರಳುವ ಅವಕಾಶವನ್ನೇ ನೀಡಲಿಲ್ಲ. ಬೇರೆ ದಾರಿಯೇ ಇಲ್ಲದೆ ಹಸಿವು ಹತಾಶೆಗಳಿಂದ ನಡೆಯತೊಡಗಿದ ಇವರನ್ನು ಸರಕಾರಗಳು ತಡೆಯುವ ಪ್ರಯತ್ನ ಮಾಡಿದವು.

ಇವರ ಸಂಚಾರವನ್ನು ಸಾರಿಗೆಯನ್ನು ಪ್ರತಿಬಂಧಿಸಿ ಇವರನ್ನು ಪರಿಹಾರ ಶಿಬಿರಗಳಿಗೆ ವರ್ಗಾಯಿಸಬೇಕೆಂಬ ಸರಕಾರದ ಸುತ್ತೋಲೆಯನ್ನು ಪ್ರಶ್ನಿಸಿ, ವಲಸೆ ಕಾರ್ಮಿಕರ ಅಸಹಾಯಕತೆಯನ್ನು ವಿವರಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಮಾರ್ಚ್ ಅಂತ್ಯದಲ್ಲಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಯಿತು. ‘ಯಾವುದೇ ವಲಸೆ ವ್ಯಕ್ತಿಯೂ ತನ್ನ ಮನೆ, ಊರು, ಗ್ರಾಮ ಸೇರಿಕೊಳ್ಳುವುದಕ್ಕಾಗಿ ರಸ್ತೆಗಳಲ್ಲಿ ನಡೆಯುತ್ತಿಲ್ಲ’ ಎಂದು ಸರಕಾರದ ಪರವಾಗಿ ಸಾಲಿಸಿಟರ್ ಜನರಲ್ ಅವರು ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದರು. ಮಾರ್ಚ್ 31ರಂದು ಈ ಹೇಳಿಕೆಯನ್ನು ಪರಿಗಣಿಸಿದ ಸುಪ್ರೀಂಕೊರ್ಟ್ ಕೋವಿಡ್-19 ಮಹಾಮಾರಿಯನ್ನು ಎದುರಿಸಲು ಕೇಂದ್ರ ಸರಕಾರ ಕೈಗೊಂಡ ಕ್ರಮಗಳ ಕುರಿತು ತೃಪ್ತಿ ವ್ಯಕ್ತಪಡಿಸಿತು. ‘ಲಾಕ್‌ಡೌನ್’ ಮೂರು ತಿಂಗಳ ಕಾಲ ಮುಂದುವರಿಯುತ್ತದೆ ಎಂಬ ಸುಳ್ಳು ಸುದ್ದಿ ಉಂಟು ಮಾಡಿದ ಆತಂಕವೇ ನಗರಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ವಲಸೆಗೆ ಕಾರಣವಾಯಿತು’ ಎಂದು ಹೇಳಿತು.

ಮಧ್ಯಪ್ರವೇಶಿಸಲು ಸುಪ್ರೀಂಕೋರ್ಟ್ ವಿಫಲವಾದ ಕಾರಣ ಲಕ್ಷೋಪಲಕ್ಷ ಕಾರ್ಮಿಕರು ತಮ್ಮ ಸಣ್ಣಪುಟ್ಟ ಇಕ್ಕಟ್ಟಿನ ಖೋಲಿಗಳೋ, ರಸ್ತೆಬದಿಯ ಕಾಲುದಾರಿಗಳಲ್ಲೋ ಉದ್ಯೋಗವಿಲ್ಲದೆ, ಒಪ್ಪೊತ್ತಿನ ಊಟಕ್ಕೂ ದಾರಿ ಇಲ್ಲದೆ ದಿನ ದೂಡುವಂತಾಯಿತು. ಆಗ ಕೋವಿಡ್-19 ಪ್ರಕರಣಗಳ ಸಂಖ್ಯೆ ಕೆಲವೇ ನೂರರಷ್ಟಿತ್ತು. ಅವರನ್ನು ಮರಳಲು ಬಿಡದೆ ಕಟ್ಟಿ ಹಾಕಿದ ಈ ಬಲಾತ್ಕಾರವು ಈ ಬಡಪಾಯಿಗಳನ್ನು ಮಹಾಮಾರಿ ಕೊರೋನ ಸೋಂಕಿನ ಅಪಾಯಕ್ಕೆ ನೇರವಾಗಿ ನೂಕಿದಂತಾಗಿತ್ತು.

ಸರಕಾರದ ಹೇಳಿಕೆಯು ವಾಸ್ತವ ಸ್ಥಿತಿಗತಿಗಳಿಗೆ ವ್ಯತಿರಿಕ್ತವಾಗಿತ್ತು. ಶೇ.90ರಷ್ಟು ವಲಸೆ ಕೆಲಸಗಾರರಿಗೆ ಸರಕಾರಿ ಪಡಿತರ ಸಿಗಲಿಲ್ಲವೆಂದೂ, ಆಹಾರದ ತೀವ್ರ ಕೊರತೆಗೆ ತುತ್ತಾಗಿದ್ದಾರೆಂದೂ ಹಲವು ವರದಿಗಳು ಹೇಳಿದವು.

ಮಾರ್ಚ್ ತಿಂಗಳಿನಲ್ಲಿ ಸುಪ್ರೀಂಕೊರ್ಟ್ ಮಧ್ಯಪ್ರವೇಶಿಸಲು ವಿಫಲವಾದ ನಂತರ ಲಕ್ಷೋಪಲಕ್ಷ ಕಾರ್ಮಿಕರ ಮಹಾವಲಸೆ ಪ್ರಾರಂಭವಾಯಿತು. ಆ ಹೊತ್ತಿಗೆ ಕೋವಿಡ್-19 ಸೋಂಕಿತರ ಸಂಖ್ಯೆ 50 ಸಾವಿರ ದಾಟಿತ್ತು. ಈ ಕಾರ್ಮಿಕರೂ ಸೋಂಕಿಗೆ ತುತ್ತಾದರು. ಈ ಹಂತದಲ್ಲೂ ಇವರ ಸಂಚಾರವನ್ನು ಸರಕಾರ ಪ್ರತಿಬಂಧಿಸಿತ್ತು. ನಡೆದು ಹೋಗುವ ಬಡಪಾಯಿಗಳನ್ನೂ ತಡೆದು ಥಳಿಸಿದವು ಪೊಲೀಸರ ಲಾಠಿಗಳು. ಬೀದಿಗೆ ಬಿದ್ದಿದ್ದವರನ್ನು ಬಗೆ ಬಗೆಯಾಗಿ ಅವಮಾನಿಸಲಾಯಿತು. ತರುವಾಯ ಬಸ್ ಮತ್ತು ರೈಲುಗಳಲ್ಲಿ ಅವರ ಸಂಚಾರಕ್ಕೆ ಅನುಮತಿ ನೀಡಲಾಯಿತು. ವೈದ್ಯಕೀಯ ಪ್ರಮಾಣಪತ್ರ ತರಬೇಕೆಂಬ ಅಸಾಧ್ಯ ಷರತ್ತನ್ನು ಈ ಬಡಪಾಯಿಗಳಿಗೆ ವಿಧಿಸಲಾಯಿತು. ರಸ್ತೆ ಮಾರ್ಗವಾಗಿ ಸಾಗಾಟದ ಏರ್ಪಾಡು ಮಾಡಿದಾಗಲೂ ಅವರವರ ರಾಜ್ಯಗಳ ಸರಹದ್ದುಗಳಲ್ಲೇ ಅವರನ್ನು ಇಳಿಸಲಾಯಿತು. ರಾಜ್ಯ ಸರಕಾರಗಳು ಇವರನ್ನು ಬರಮಾಡಿಕೊಳ್ಳಲು ತಯಾರಿರಲಿಲ್ಲ. ಈ ಬಡಪಾಯಿಗಳ ಹಕ್ಕುಗಳಿಗೆ ಅರ್ಥವೇ ಇಲ್ಲವಾಯಿತು.

ಲಾಕ್‌ಡೌನ್- 2ರಲ್ಲೂ ಈ ಲಕ್ಷ ಲಕ್ಷ ನಿರ್ಗತಿಕರ ಇರವನ್ನೇ ಗುರುತಿಸಲಿಲ್ಲ ಕೇಂದ್ರ ಸರಕಾರ. ಇನ್ನು ಅವರ ಬವಣೆಯನ್ನು ನಿವಾರಿಸುವುದು ದೂರವೇ ಉಳಿಯಿತು. ವಲಸೆ ಕಾರ್ಮಿಕರ ಕಣ್ಣೀರು ಒರೆಸುವ ಅವಕಾಶವನ್ನು 2020ರ ಮೇ 15ರಂದು ಇನ್ನೊಮ್ಮೆ ಕಳೆದುಕೊಂಡಿತು. ಹೆದ್ದಾರಿಗಳು, ರೈಲುದಾರಿಗಳಲ್ಲಿ ಸಾವಿರಾರು ಕಿ.ಮೀ. ಉದ್ದಕ್ಕೆ ದುಃಖ, ಹಸಿವು, ವ್ಯಥೆ, ವಿಷಾದ ಹಾಗೂ ತಬ್ಬಲಿ ಭಾವಗಳ ನದಿಗಳಂತೆ ಹರಿಯತೊಡಗಿದ್ದರು ವಲಸೆ ಕಾರ್ಮಿಕರು. ಅವರನ್ನು ಗುರುತಿಸಿ ಅನ್ನ- ನೀರು-ನೆರಳು ಹಾಗೂ ಉಚಿತ ಪಯಣವನ್ನು ಏರ್ಪಡಿಸುವಂತೆ ದೇಶದ ಎಲ್ಲ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಬೇಕೆಂಬ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದ್ದು ಅರ್ಜಿಯ ಗುಣಗಳನ್ನು ಪರಿಗಣಿಸಲೂ ಇಲ್ಲ.

ಸರಕಾರದ ಪರವಾಗಿ ಮಂಡಿಸಲಾಗುವ ಹೇಳಿಕೆಗಳಿಗೆ ನ್ಯಾಯಾಲಯ ನೀಡುತ್ತಿರುವ ಸಾಂಸ್ಥಿಕ ಗೌರವ- ಮಾನ್ಯತೆ-ಮನ್ನಣೆ ಮತ್ತು ಈ ಅಗಾಧ ಮಾನವೀಯ ಬಿಕ್ಕಟ್ಟಿನ ಕುರಿತು ನ್ಯಾಯಾಲಯ ತೋರಿರುವ ನಿರ್ಲಕ್ಷವನ್ನು ತಕ್ಷಣವೇ ಸರಿಪಡಿಸಬೇಕು. ಇಲ್ಲದೆ ಹೋದರೆ ಲಕ್ಷೋಪಲಕ್ಷ ಹಸಿದ ನಿರ್ಗತಿಕ ವಲಸಿಗರ ಸಂಬಂಧ ತಾನು ವಹಿಸಬೇಕಿರುವ ಸಾಂವಿಧಾನಿಕ ಪಾತ್ರ ಮತ್ತು ಕರ್ತವ್ಯಗಳಿಂದ ನ್ಯಾಯಾಲಯ ಕೈ ತೊಳೆದುಕೊಂಡಂತೆಯೇ ಸರಿ.

ಮನಸೋ ಇಚ್ಛೆ ನಿರ್ಬಂಧಗಳನ್ನು ಹೇರುತ್ತಿರುವ ಸರಕಾರವು ಸಾಂವಿಧಾನಿಕ ಆಶ್ವಾಸನೆಗಳಾದ ಸಮಾನತೆ, ಪ್ರಾಣ, ಸ್ವಾತಂತ್ರ ಹಾಗೂ ಘನತೆಗಳನ್ನು ಸಾರಾಸಗಟಾಗಿ ಕಡೆಗಣಿಸಿದೆ ಎಂಬುದರ ಕುರುಹು ಈ ವಲಸೆ ಸಂಕಟ. ಈ ಲಕ್ಷೋಪಲಕ್ಷ ಬಡವರಿಗೆ ಪರಿಹಾರ ಒದಗಿಸುವಲ್ಲಿ ಮತ್ತು ಈ ಕುರಿತು ಸರಕಾರವನ್ನು ಜವಾಬ್ದಾರಿ ಆಗಿಸಲು ಗೌರವಾನ್ವಿತ ಸುಪ್ರೀಂಕೋರ್ಟ್‌ಗೆ ಮನಸ್ಸೇ ಇಲ್ಲ. ಈ ನಿಷ್ಕ್ರಿಯೆಯು ನಾಗರಿಕರ ಮೂಲಭೂತ ಹಕ್ಕುಗಳ ರಕ್ಷಕನೆಂಬ ನ್ಯಾಯಾಲಯದ ಸ್ಥಾನಮಾನವನ್ನು ಕೊರೆದು ಕೆಡವಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಿಗೆ ನ್ಯಾಯ ಒದಗಿಸಿದ ಉಜ್ವಲ ಪರಂಪರೆ ಗೌರವಾನ್ವಿತ ಸುಪ್ರೀಂಕೋರ್ಟ್‌ನದು. ಭಾರತದ ಸಾಂವಿಧಾನಿಕ ನ್ಯಾಯವ್ಯವಸ್ಥೆಯ ಚಹರೆಯನ್ನು ಎಲ್ಲ ಕಾಲಕ್ಕೂ ಬದಲಾಯಿಸಿದ ನಡೆ, ಜೀತಪದ್ಧತಿ ನಿರ್ಮೂಲನೆ, ಜೈಲು ಸುಧಾರಣೆಗಳು, ಪರಿಸರ ಕಾಳಜಿ, ಆಹಾರದ ಹಕ್ಕು ಮುಂತಾದವುಗಳು ಈ ಮಾತಿಗೆ ಕೆಲವು ನಿದರ್ಶನಗಳು. ಈ ಪೈಕಿ ಪ್ರತಿಯೊಂದು ತೀರ್ಪು ಸರಕಾರಗಳ ನೀತಿ ನಿರ್ಧಾರಗಳನ್ನು ಬದಲಿಸಿದೆ. ಕೋಟ್ಯಂತರ ಜನರ ಬದುಕುಗಳನ್ನು ಸುಧಾರಿಸಿದೆ. ಆದರೆ ಹಾಲಿ ಸನ್ನಿವೇಶದಲ್ಲಿ ಸರಕಾರದ ಮಾತಿಗೆ ಹಿಂದು ಮುಂದು ನೋಡದೆ ಮಾನ್ಯತೆ-ಮನ್ನಣೆ ನೀಡುವ ಮತ್ತು ಮಧ್ಯಪ್ರವೇಶಿಸಲು ಒಲ್ಲದ ಮನಸ್ಥಿತಿಯು ದೇಶದ ಸಾಂವಿಧಾನಿಕ ರಚನೆಯ ಮೇಲೆ ನೀಳ ಕರಿನೆರಳನ್ನು ಚಾಚಿದೆ.

ಅಸಹಾಯಕ- ನಿರ್ಗತಿಕ ಭಾರತೀಯ ನಾಗರಿಕರನ್ನು ಕಾರ್ಯಾಂಗದ ಮರ್ಜಿಗೆ ಬಿಟ್ಟು ತನ್ನ ಮುಖವನ್ನು ತಾನೇ ಮರೆಸಿಕೊಂಡು ಪಲಾಯನಗೈದು ಸರಕಾರದ ಮನ್ನಣೆಗೆ ನಿಲ್ಲಲು ಬರುವುದಿಲ್ಲ. ಮಹಾಮಾರಿಯನ್ನು ಎದುರಿಸುವ ಹೆಸರಿನಲ್ಲಿ ದೇಶದ ನಾಗರಿಕರ, ಅದರಲ್ಲಿಯೂ ವಿಶೇಷವಾಗಿ ದೀನದರಿದ್ರರ ಹಕ್ಕುಗಳನ್ನು ಕಾರ್ಯಾಂಗವು ಭಂಡತನದಿಂದ ಬೇಕಾಬಿಟ್ಟಿ ಉಲ್ಲಂಘಿಸತೊಡಗಿದೆ. ಲಕ್ಷೋಪಲಕ್ಷ ಮಂದಿ ಜೀವನೋಪಾಯ ಇಲ್ಲದೆ ವಾರಗಟ್ಟಲೆ ಕೊಳೆಗೇರಿಗಳ ‘ಕೋಳಿಗೂಡು’ಗಳಲ್ಲಿ ಕೊಳೆತಿದ್ದಾರೆ. ಅವರ ಪಾಲಿಗೆ ಪ್ರಾಣದ ಹಕ್ಕು ಮತ್ತು ಸ್ವಾತಂತ್ರದ ಹಕ್ಕುಗಳನ್ನು ತಿರಸ್ಕರಿಸಲಾಗಿದೆ.

ನ್ಯಾಯಾಲಯ ಮಾರ್ಚ್ ತಿಂಗಳಿನಲ್ಲಿ ಹೇಳಿದಂತೆ ವಲಸೆ ಕಾರ್ಮಿಕರ ಬಿಕ್ಕಟ್ಟು ಸರಕಾರದ ನೀತಿ ನಿರ್ಧಾರದ ವಿಷಯ ಅಲ್ಲ. ಕಾರ್ಯಾಂಗದ ಪಾತ್ರವನ್ನು ಪರೀಕ್ಷೆಗೊಡ್ಡಬೇಕಿರುವ ಗಂಭೀರ ಸಾಂವಿಧಾನಿಕ ಪ್ರಶ್ನೆಗಳು ಇದರಲ್ಲಿ ಅಡಗಿವೆ. ವಲಸೆ ಕಾರ್ಮಿಕರು ದೇಶಾದ್ಯಂತ ಅಡೆತಡೆಯಿಲ್ಲದೆ ಸಂಚರಿಸುವ ಮತ್ತು ಸುರಕ್ಷಿತವಾಗಿ ಘನತೆಯಿಂದ ಮನೆಗೆ ಮರಳುವ ಸ್ವಾತಂತ್ರ್ಯವನ್ನು ಮೂಲಭೂತ ಹಕ್ಕುಗಳು ಕಲ್ಪಿಸಿವೆ. ಕಾರ್ಯಾಂಗ ಸಂವಿಧಾನ ವಿಧಿಸಿರುವ ತನ್ನ ಬಾಧ್ಯತೆಗಳನ್ನು ನೆರವೇರಿಸುವಂತೆ ಅದನ್ನು ಉತ್ತರದಾಯಿ ಆಗಿಸುವ ಹೊಣೆ ಸುಪ್ರೀಂಕೋರ್ಟ್‌ನದು. ಅದನ್ನು ಬಿಟ್ಟು ಈ ಕುರಿತು ಅಸಹಾಯಕತೆ ವ್ಯಕ್ತಪಡಿಸುವುದು ಈ ನ್ಯಾಯಾಲಯದ ಸ್ಥಾನಮಾನಕ್ಕೆ, ಕರ್ತವ್ಯಕ್ಕೆ ಕುಂದು ಉಂಟು ಮಾಡುತ್ತದೆ.

ಬಾಧಿತರಿಗೆ ಸಂಪೂರ್ಣ ನ್ಯಾಯವನ್ನು ಒದಗಿಸಲು ಯಾವುದೇ ಕ್ರಮವನ್ನು ಕೈಗೊಳ್ಳಬಹುದಾದ ಅಧಿಕಾರವನ್ನು ಭಾರತದ ಸಂವಿಧಾನವು (142ನೆಯ ಅನುಚ್ಛೇದ) ಸುಪ್ರೀಂಕೋರ್ಟ್‌ಗೆ ನೀಡಿದೆ. ‘ಯಥೋ ಧರ್ಮಸ್ತಥೋ ಜಯ’ ಎಂಬುದು ಈ ನ್ಯಾಯಾಲಯದ ಧ್ಯೇಯವಾಕ್ಯ. ತಾನು ಅಸಹಾಯಕತೆ ವ್ಯಕ್ತಪಡಿಸುವುದು ಈ ಧ್ಯೇಯವಾಕ್ಯಕ್ಕೆ ಅನ್ಯಾಯ ಬಗೆದಂತೆ.

ಲಕ್ಷಾಂತರ ವಲಸೆ ಕಾರ್ಮಿಕರು ಸಾವಿರಾರು ಕಿ.ಮೀ. ದೂರದ ತಮ್ಮ ನಡಿಗೆಯನ್ನು ಮೇ ಮಧ್ಯಭಾಗದ ವೇಳೆಗೆ ಅದಾಗಲೇ ಆರಂಭಿಸಿದ್ದರು. ಆ ಹಂತದಲ್ಲಿ ಮಧ್ಯಪ್ರವೇಶಿಸಿ ಅವರಿಗೆ ಪರಿಹಾರ ಕಲ್ಪಿಸುವಲ್ಲಿ ಸುಪ್ರೀಂಕೋರ್ಟ್ ವಿಫಲವಾಯಿತು. ಪರಿಸ್ಥಿತಿ ಅಗಾಧ ಸ್ವರೂಪ ತಳೆಯಲು ಈ ವೈಫಲ್ಯವೇ ದಾರಿ ಮಾಡಿತು.
ವಿಶೇಷವಾಗಿ ಕೋವಿಡ್-19 ಮಹಾಮಾರಿಯ ಪ್ರಸಕ್ತ ಸನ್ನಿವೇಶದಲ್ಲಿ ಭಾರತೀಯ ಜನತಂತ್ರದ ಉಳಿವು ಮತ್ತು ಕಾನೂನಿನ ಪಾರಮ್ಯವು ಸುಪ್ರೀಂಕೋರ್ಟನ್ನೇ ಅವಲಂಬಿಸಿದೆ. ಪ್ರಭುತ್ವದ ಕ್ರಿಯೆಯ ನಾಗರಿಕರ ಮೂಲಭೂತ ಹಕ್ಕುಗಳನ್ನು ಆಪೋಶನ ತೆಗೆದುಕೊಳ್ಳದಂತೆ ಕಾವಲು ನಿಲ್ಲುವ ತನ್ನ ಸಾಂವಿಧಾನಿಕ ಕರ್ತವ್ಯವನ್ನು ಅದು ಸಕ್ರಿಯವಾಗಿ ನಿಭಾಯಿಸಬೇಕಿದೆ.

ಇಂದಿಗೂ ಈ ಹೊತ್ತಿಗೂ ವಲಸೆ ಕಾರ್ಮಿಕರ ಸಂಕಟ ಮುಂದುವರಿದಿದೆ. ಲಕ್ಷಾಂತರ ಜನ ರೈಲು ನಿಲ್ದಾಣಗಳು ಮತ್ತು ರಾಜ್ಯಗಳ ಸರಹದ್ದುಗಳಲ್ಲಿ ಸಿಕ್ಕಿಬಿದ್ದಿದ್ದಾರೆ. ಇವರಿಗೆ ಅನ್ನ ನೀರು ನೆರಳು ಹಾಗೂ ಪ್ರಯಾಣ ವ್ಯವಸ್ಥೆಯನ್ನು ಉಚಿತವಾಗಿ ಕಲ್ಪಿಸುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ನಿರ್ದೇಶನ ನೀಡುವಂತೆ ನಾವು ಸುಪ್ರೀಂಕೋರ್ಟ್‌ನ್ನು ಆಗ್ರಹಪಡಿಸುತ್ತೇವೆ. ಅನ್ಯಾಯ ಎಲ್ಲಿಯೇ ಜರುಗಿದರೂ ಅದು ನ್ಯಾಯಕ್ಕೆ ಎಲ್ಲೆಡೆಯೂ ಗಂಡಾಂತರವೇ ಎಂಬ ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಅವರ ಮಾತನ್ನು ಇಲ್ಲಿ ನೆನಪಿಸಬಯಸುತ್ತೇವೆ.

(ಪಿ.ಚಿದಂಬರಂ, ಆನಂದ್ ಗ್ರೋವರ್, ಇಂದಿರಾ ಜೈಸಿಂಗ್, ಮೋಹನ್ ಕಾತರಕಿ, ಸಿದ್ಧಾರ್ಥ ಲುಥ್ರಾ, ಸಂತೋಷ ಪೌಲ್, ಮಹಾಲಕ್ಷ್ಮೀ ಪಾವನಿ, ಕಪಿಲ್ ಸಿಬಲ್, ಚಂದರ್ ಉದಯಸಿಂಗ್, ವಿಕಾಸ್ ಸಿಂಗ್ , ಪ್ರಶಾಂತ್ ಭೂಷಣ್, ಇಕ್ಬಾಲ್ ಛಾಗ್ಲಾ, ಅಸ್ಪಿ ಚಿನಾಯ್, ಜನಕ್ ದ್ವಾರಕಾದಾಸ್, ರಜನಿ ಅಯ್ಯರ್, ಯೂಸುಫ್ ಮುಚ್ಚಾಲ, ರಾಜೀವ್ ಪಾಟಿಲ್, ನವರೋಜ್ ಸೀರ್ವೈ, ಮಿಹಿರ್ ದೇಸಾಯಿ,ಗಾಯತ್ರಿ ಸಿಂಗ್, ಸಂಜಯ್ ಸಿಂಘ್ವಿ ಈ ಪತ್ರಕ್ಕೆ ಸಹಿ ಮಾಡಿದ್ದಾರೆ.)

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top