ಶೋಷಿತರ ಬಾಳನ್ನು ಬೆಳಗಿಸಿದ ಕುದ್ಮುಲ್ ರಂಗರಾಯರು | Vartha Bharati- ವಾರ್ತಾ ಭಾರತಿ

ಶೋಷಿತರ ಬಾಳನ್ನು ಬೆಳಗಿಸಿದ ಕುದ್ಮುಲ್ ರಂಗರಾಯರು

ಈದೇಶದ ವಿವಿಧ ಕಡೆಗಳಲ್ಲಿ ಶ್ರಮಿಸಿದ ಹಲವಾರು ಸಾಮಾಜಿಕ ಪರಿವರ್ತನಕಾರರ ಬಗ್ಗೆ ನಾವು ಇತಿಹಾಸದ ಕಡೆಗೆ ಗಮನಹರಿಸಿದಾಗ ತಿಳಿದುಬರುತ್ತದೆ. ಹಾಗೇನೆ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತನ್ನ ಬದುಕನ್ನೇ ಸಮರ್ಪಣೆ ಮಾಡಿ ದಲಿತೋದ್ಧಾರಕ್ಕಾಗಿ ಶ್ರಮಿಸಿದವರು ಕುದ್ಮಲ್ ರಂಗರಾಯರು’

   ಕುದ್ಮುಲ್ ರಂಗರಾಯರು ದಕ್ಷಿಣ ಕನ್ನಡ ಜಿಲ್ಲೆಯೊಂದಿಗೆ ಒಂದಾಗಿದ್ದ ಕಾಸರಗೋಡಿನ ‘ಕುದ್ಮುಲ್’ ಎಂಬ ಚಿಕ್ಕ ಹಳ್ಳಿಯಲ್ಲಿ ಸಾರಸ್ವತ ಬ್ರಾಹ್ಮಣ ಸಮುದಾಯದಲ್ಲಿ 29-6-1859ರಂದು ಜನಿಸಿದ ಇವರ ತಂದೆ ದೇವಪ್ಪಯ್ಯ, ತಾಯಿ ಶ್ರೀಮತಿ ಗೌರಿ. ರಂಗರಾಯರ ತಂದೆ ದೇವಪ್ಪಯ್ಯನವರು ಬಡತನದಲ್ಲಿದ್ದು, ಓರ್ವ ಮುಸ್ಲಿಂ ಸಾಹುಕಾರರ ಅಂಗಡಿಯಲ್ಲಿ ಗುಮಸ್ತನಾಗಿ ದುಡಿಯುತ್ತಿದ್ದರು. ರಂಗರಾಯರು ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಅವರ ತಂದೆ ದೇವಪ್ಪಯ್ಯನವರು ನಿಧನರಾಗುತ್ತಾರೆ. ಬಳಿಕ ರಂಗರಾಯರ ಪತ್ನಿ ಹಾಗೂ ಮಕ್ಕಳು ಮಂಗಳೂರು ಕೊಡಿಯಾಲ್ ಬೈಲ್‌ನಲ್ಲಿ ಚಿಕ್ಕ ಹುಲ್ಲಿನ ಗುಡಿಸಲನ್ನು ಬಾಡಿಗೆಗೆಪಡೆದು ಜೀವನ ನಡೆಸಿದರು. ಈ ಸಂದರ್ಭದಲ್ಲಿ ರಂಗರಾಯರು ಆರ್ಥಿಕ ಸಮಸ್ಯೆಯಿಂದ ಓದು ಮುಂದುವರಿಸಲಾಗದೆ ಶಿಕ್ಷಕ ವೃತ್ತಿಗೆ ಸೇರುತ್ತಾರೆ. ಬಳಿಕ ಖಾಸಗಿಯಾಗಿ ಮೆಟಿಕ್ಯುಲೇಶನ್ ಪಾಸು ಮಾಡಿ, ಆನಂತರ ಮಂಗಳೂರು ಜಿಲ್ಲಾ ನ್ಯಾಯಾಲಯದಲ್ಲಿ ವಕೀಲ ವೃತ್ತಿಯನ್ನು ಪ್ರಾರಂಭಿಸುತ್ತಾರೆ. ಇವರು ವಕೀಲರಾಗಿದ್ದಾಗ ಪ್ರಮುಖವಾಗಿ ಬಡವರ ಅದರಲ್ಲೂ ದೀನದಲಿತರ ವ್ಯಾಜ್ಯಗಳಿಗೆ ಆದ್ಯತೆ ನೀಡಿ ಅವರಿಗೆ ನ್ಯಾಯ ಒದಗಿಸುತ್ತಿದ್ದರು. ಒಮ್ಮೆ ದಲಿತ ವರ್ಗದ ಮಹಿಳೆಯೊಬ್ಬಳು ಮೇಲು ಜಾತಿಯವನಿಂದ ಗರ್ಭವತಿಯಾದಾಗ ಆ ಮಹಿಳೆಯ ಪರವಾದ ಮಂಡಿಸಿ ಆಕೆಗೆ ನ್ಯಾಯ ಕೊಡಿಸಿದ್ದರು. ಇದರಿಂದಾಗಿ ಅವರು ಮೇಲು ಜಾತಿಯವರ ಸಿಟ್ಟು, ನಿಂದನೆಗೆ ಗುರಿಯಾಗ ಬೇಕಾಯಿತು. ಆದರೂ ಅವರು ಇಂತಹ ವಿರೋಧಾಭಾಸಗಳಿಗೆ ವಿಚಲಿತರಾಗದೆ ‘ಬಡವರ ಬಂಧು, ಬಡವರ ವಕೀಲ’ರೆಂದೇ ಪ್ರಸಿದ್ಧರಾಗಿದ್ದರು. ರಂಗರಾಯರ ನಿಸ್ವಾರ್ಥ ಸೇವೆ, ಧೀಮಂತ ವ್ಯಕ್ತಿತ್ವ ಆ ಕಾಲದ ಆಂಗ್ಲ ನ್ಯಾಯಾಧೀಶರನ್ನು ಕೂಡಾ ಆಕರ್ಷಿಸಿತ್ತು ಹಾಗೂ ಇವರು ಜಾರ್ವ ಆದರ್ಶ, ಪ್ರಾಮಾಣಿಕ ವಕೀಲರೆಂದು ತಿಳಿದುಕೊಂಡು ಅವರನ್ನು ತುಂಬಾ ಗೌರವದಿಂದ ಕಾಣುತ್ತಿದ್ದರು.

  ಬಳಿಕ ರಂಗರಾಯರು ಸಾವಿರಾರು ವರ್ಷಗಳಿಂದ ಶಿಕ್ಷಣ, ಅಸಮಾನತೆಯಿಂದ ಪ್ರಾಣಿ ಪಕ್ಷಿಗಳಿಗಿಂತಲೂ ಹೀನಾಯವಾಗಿ ಬದುಕುತ್ತಿದ್ದ ದಲಿತರ ಬಗ್ಗೆ ಆಳವಾಗಿ ಚಿಂತಿಸಿ ವಕೀಲ ವೃತ್ತಿಯನ್ನೇ ತೊರೆದು ಈ ಜನಾಂಗವನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶಿಕ್ಷಣ ಅತೀ ಅವಶ್ಯವೆಂದು ಅರಿತು ಕಾರ್ಯೋನ್ಮುಖರಾಗುತ್ತಾರೆ. ಅದಕ್ಕಾಗಿ ಅವರು ತನ್ನ ಸ್ವಂತ ಹಣದಿಂದಲೇ ಮೊತ್ತ ಮೊದಲಾಗಿ 1892ರಲ್ಲಿ ಮಂಗಳೂರು ಉರ್ವ ಚಿಲಿಂಬಿಯ ರಸ್ತೆಯ ಪಕ್ಕದ ಹುಲ್ಲು ಗುಡಿಸಲನ್ನು ಬಾಡಿಗೆಗೆ ಪಡೆದು ಶಾಲೆಯನ್ನು ಪ್ರಾರಂಭಿಸುತ್ತಾರೆ. ಆ ಸಂದರ್ಭದಲ್ಲಿ ಶಾಲೆಗೆ ಸೇರ್ಪಡೆಯಾದ ಮಕ್ಕಳು ತೀರಾ ಕಡಿಮೆ ಪ್ರಮಾಣ. ಆದರೂ ಇದನ್ನು ಸಹಿಸಲಾರದ ಜಾತಿವಾದಿಗಳು ಮುನ್ಸಿಪಾಲಿಟಿಯವರು ಸಮೀಪದ ಪೆಟ್‌ಲ್ಯಾಂಡ್ ಪೇಟೆಯಲ್ಲಿ ಶೇಖರಿಸಿದ ಹೊಲಸನ್ನು ತಂದು ಶಾಲೆಗೆ ಹೋಗುವ ದಾರಿಯಲ್ಲಿ ಚೆಲ್ಲಿ, ಕಲ್ಲುಗಳನ್ನು ದಾರಿಗೆ ಅಡ್ಡಲಾಗಿ ಇರಿಸಿ ಮಕ್ಕಳು ಶಾಲೆಗೆ ಹೋಗದಂತೆ ಅಡ್ಡಿ ಉಂಟು ಮಾಡಿದವರು. ಈ ಬಗ್ಗೆ ಕಟ್ಟಡದ ಮಾಲಕರಿಗೆ ದೂರು ನೀಡಿದರೂ ಏನೂ ಪ್ರಯೋಜನ ಆಗದೆ ಕೊನೆಗೆ ಶಾಲೆಯನ್ನೇ ಮುಚ್ಚುವ ಪರಿಸ್ಥಿತಿ ನಿರ್ಮಾಣವಾಯಿತ್ತು.

    ಇದರಿಂದ ರಂಗರಾಯರು ಧೃತಿಗೆಡದೆ ತನ್ನ ಉದ್ದೇಶವನ್ನು ಸಾಧಿಸಲು ತನ್ನ ಪ್ರಯತ್ನವನ್ನು ಮುಂದುವರಿಸಿ ನಗರದ ಕಂಕನಾಡಿ ಮತ್ತು ಬೋಳೂರು ಎಂಬಲ್ಲಿ ಪ್ರಾಥಮಿಕ ಶಾಲೆಯನ್ನು ಪ್ರಾರಂಭಿಸಿದರು. ಆದರೆ, ಅಲ್ಲಿಯೂ ಜಾತೀಯತೆ ಅವರ ಬೆನ್ನು ಬಿಡಲಿಲ್ಲ. ಹಿಂದೂ ಅಧ್ಯಾಪಕಾರೂ ಪರಿಶಿಷ್ಟ ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಸಲು ಮುಂದೆ ಬರಲಿಲ್ಲ. ಇದರಿಂದಾಗಿ ಅವರು ಕ್ರೈಸ್ತ ಧರ್ಮೀಯ ಅಧ್ಯಾಪಕರನ್ನು ನೇಮಿಸಬೇಕಾಯಿತು. ಮುಂದೆ ಶಿಕ್ಷಣ ಸಂಸ್ಥೆಯನ್ನು ಉತ್ತಮ ರೀತಿಯಲ್ಲಿ ನಡೆಸುವ ಉದ್ದೇಶದಿಂದ 1897ರಲ್ಲಿ ಡಿಪ್ರೆಸ್ಡ್‌ಕ್ಲಾಸ್ ಮಿಶನ್ (ಡಿ.ಸಿ.ಎಂ.)ನನ್ನು ಸ್ಥಾಪಿಸಿ ನಗರದ ಕೊಡಿಯಾಲ್ ಬೈಲ್ ಕೋರ್ಟ್ ಗುಡ್ಡೆಯ ಇಳಿಜಾರು ಸ್ಥಳದಲ್ಲಿ ಕೈಗಾರಿಕಾ ತರಬೇತಿ ಕೇಂದ್ರ ಪ್ರಾರಂಭಿಸಿ ಬಡಗಿ, ನೇಯ್ಗೆ, ಹುರಿಹಗ್ಗ ತಯಾರಿ, ರೇಷ್ಮೆ ಹುಳ ಸಾಕಣೆ ಇತ್ಯಾದಿ ವೃತ್ತಿಪರ ತರಬೇತಿ ನೀಡಲು ಪ್ರಾರಂಭಿಸಿದರು ಇದರಿಂದಾಗಿ ಪರಿಶಿಷ್ಟ ಯುವಕ ಯುವತಿಯರು ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗಿತ್ತು ಹಾಗೂ ಈ ಕೇಂದ್ರದ ಪಕ್ಕದಲ್ಲಿ ಹೆಣ್ಣು ಮಕ್ಕಳಿಗಾಗಿ ಪ್ರತ್ಯೇಕ ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದರು. ಇವರು ಪ್ರಾರಂಭಿಸಿರುವ ಶಾಲೆಗಳಲ್ಲಿ ನಾಲ್ಕನೇ ತರಗತಿ ವರೆಗೆ ಓದಿದ ಪರಿಶಿಷ್ಟ ಜಾತಿಯ ಯುವಕರನ್ನು ಶಿಕ್ಷಕ ತರಬೇತಿಗೆ ಕಳುಹಿಸಿ ತರಬೇತಿ ಮುಗಿದ ನಂತರ ಅವರು ಸ್ಥಾಪನೆ ಮಾಡಿದ ಅತ್ತ್ತಾವರ ಬಾಬುಗುಡ್ಡ, ದಡ್ಡಲ್ ಕಾಡು, ಉಳ್ಳಾಲ, ಮುಲ್ಕಿ ಹಾಗೂ ಉಡುಪಿಯ ಬನ್ನಂಜೆ, ನೇಜಾರು ಮುಂತಾದ ಶಾಲೆಗಳಿಗೆ ಅಧ್ಯಾಪಕರನ್ನಾಗಿ ನೇಮಕ ಮಾಡಿದರು.

ಅಂದಿನ ಕಾಲದಲ್ಲಿ ರಂಗರಾಯರು ಪರಿಶಿಷ್ಠರಿಗಾಗಿ ಸ್ಥಾಪನೆ ಮಾಡಿದ ಶಾಲೆಗಳಿಗೆ ‘ಪಂಚಮ ಶಾಲೆ’ ಎಂಬುದಾಗಿ ಕರೆಯುತ್ತಿದ್ದರು. ಇವರ ಶಾಲೆಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಹಾಗೂ ಪ್ರೋತ್ಸಾಹ ಧನ ನೀಡುತ್ತಿದ್ದರು. ಇವರ ಶಾಲೆಯಲ್ಲಿ ಓದಿ ಇವರ ಶಾಲೆಯಲ್ಲೇ ಮೊದಲ ಶಿಕ್ಷಕರಾದವರು ವಲಿಂಡ ಮಾಸ್ಟರ್ ಮತ್ತು ಬಾಬು ಮಾಸ್ಟರ್ ಎಂಬವರು. ಅಲ್ಲದೆ ಗಾಂಧೀಜಿಯವರ ಅಸ್ಪಶ್ಯಾತಾ ನಿವಾರಣ ಕಾರ್ಯದಲ್ಲಿ ಸೇವೆ ಸಲ್ಲಿಸಿರುವ ಉಡುಪಿಯ ಗೋವಿಂದರಾವ್ ಎಂಬವರು ಸುಮಾರು 18 ವರ್ಷಗಳ ಕಾಲ ರಂಗರಾಯರ ಡಿ.ಸಿ. ಎಂ. ಸಂಸ್ಥೆಯಲ್ಲಿ ಶಿಕ್ಷಕ, ಮತ್ತು ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ಸಂಸ್ಥೆಗೆ ಹೆಚ್ಚಿನ ಕೀರ್ತಿ ತಂದಿರುವರು. ಇದರಿಂದಾಗಿ ಉಡುಪಿಯ ಗೋವಿಂದರಾಯರ ಹೆಸರು ಅಂದು ಪರಿಶಿಷ್ಟ ಜನಾಂಗದವರಲ್ಲ್ಲಿ ಮನೆ ಮಾತಾಗಿತ್ತು. ಇವರ ಸಂಸ್ಥೆಯಲ್ಲಿ 8ನೇ ತರಗತಿ ಉರ್ತ್ತೀಣರಾದ ಪರಿಶಿಷ್ಟ ಜನಾಂಗದ ವಿದ್ಯಾರ್ಥಿಗಳನ್ನು ಮುಂದಿನ ಶಿಕ್ಷಣಕ್ಕೆ ಮಂಗಳೂರು ಸರಕಾರಿ ಕಾಲೇಜಿನ ಹೈಸ್ಕೂಲಿಗೆ ಸೇರ್ಪಡೆಗೊಳಿಸಲು ಸ್ವತಹ ರಂಗರಾಯರೇ ವ್ಯವಸ್ಥೆ ಮಾಡುತ್ತಿದ್ದರು. ಸರಕಾರಿ ಕಾಲೇಜಿನ ಹೆಸ್ಕೂಲ್ ಸೇರಿದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಪೈಕಿ ಶ್ರೀಬಿ. ಚಂದ್ರಶೇಖರ್ ಶ್ರೀ ಎಸ್. ರಾಮಕೃಷ್ಣ, ಉದ್ಯಾವರ ರಾಮಚಂದ್ರ ಇವರು ಮೊದಲಿಗರು . ತಾನು ನಿಧನ ಹೊಂದುವ ಮೊದಲು ತನ್ನ ವಿದ್ಯಾ ಸಂಸ್ಥೆಯಲ್ಲಿ ಓದಿದ ದಲಿತ ಜನಾಂಗದ ಒಬ್ಬನಾದರೂ, ಮೆಟ್ರಿ ಕ್ಯುಲೇಶನ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಸರಕಾರಿ ನೌಕರಿ ಸೇರಿ ನಮ್ಮೂರ ರಸ್ತೆಯಲ್ಲಿ ಕಾರಿನಲ್ಲಿ ಓಡಾಡಬೇಕು. ಆಗ ಎದ್ದ ಧೂಳು ನನ್ನ ತಲೆಗೆ ತಾಗಿದಾ ಗ ನನ್ನ ಜನ್ಮ ಸಾರ್ಥ ಅಂದಿದ್ದರು. ಆದರೆ ಅವರ ಮಹದಾಕ್ಸಿ ಅವರ ಜೀವಿತ ಅವಧಿಯಲ್ಲಿ ಈಡೇರದೆ ಇರುವುದು ಖೇದಕರ. ಡಿ.ಸಿ. ಎಂ. ಸಂಸ್ಥೆಯ ನಿರ್ವಹಣೆಗೆ ಆರ್ಥಿಕ ಸಮಸ್ಯೆ ಉಂಟಾದಾಗ ಉದಾರಿ ಶ್ರೀಮಂತರಿಗೆ ಮತ್ತು ವಿದೇಶಿ ಗಣ್ಯ ವ್ಯಕ್ತಿಗಳಿಗೆ ರಂಗರಾಯರು ಪತ್ರ ಬರೆಯುತ್ತಿದ್ದರು. ಪತ್ರಗಳನ್ನು ಅಂಚೆ ಪೆಟ್ಟಿಗೆಗೆ ಹಾಕುವಾಗ ‘ದೇವರಲ್ಲಿ ಪ್ರಾರ್ಥಿಸಿ ಹಾಕಿರಿ’ ಎಂದು ಪತ್ರ ಕೊಂಡೊಯ್ಯುವವರಲ್ಲಿ ಹೇಳಲು ಎಂದೂ ಮರೆಯುತ್ತಿರಲಿಲ್ಲವಂತೆ. ಎಷ್ಟೋ ಸಲ ವಿದ್ಯಾರ್ಥಿ ನಿಲಯದ ಮಕ್ಕಳಿಗೆ ಊಟಕ್ಕೆ ನಾಳೆಗೆ ಏನು? ಎಂಬ ಪರಿಸ್ಥಿತಿ ಎದುರಾದಾಗ ಸ್ವತ ಹ ರಂಗರಾಯರೇ ಚೀಲ ಹಿಡಿದುಕೊಂಡು ತನ್ನ ಸಂಗಾತಿಗಳೊಂದಿಗೆ ಭಿಕ್ಷಾ ಪಾತ್ರೆಯಾಗಿ ನಗರದ ಮನೆಗಳಿಗೆ ಹೋಗಿ ಅಕ್ಕಿ, ಕಾಳು, ತೆಂಗಿನಕಾಯಿ ಹಾಗೂ ನಿತ್ಯೋಪಯೋಗಿ ವಸ್ತುಗಳನ್ನು ಸಂಗ್ರಹಿಸಿ ವಿದ್ಯಾರ್ಥಿನಿಲಯವನ್ನು ಬಲು ಕಷ್ಟದಿಂದ ನಡೆಸಿರುವರು. ಈ ಸಂದರ್ಭದಲ್ಲಿ ರಂಗರಾಯರಿಗೆ ಸಕಲ ರೀತಿಯಲ್ಲಿ ಸಹಕರಿಸಿದವರು ನಗರದ ಸಮಾಜ ಸೇವಕರಾಗಿದ್ದ ಮುಂಡಪ್ಪ ಬಂಗೇರ ಮತ್ತು ನರ್ಸಪ್ಪನವರು. ರಂಗರಾಯರು ಅಂದು ದಲಿತರ ಸಾಮಾಜಿಕ ಪರಿವರ್ತನಾ ಕಾರ್ಯಕ್ರಮಗಳಲ್ಲಿ ಅನೇಕ ಸಮಸ್ಯೆಗಳನ್ನು ಜಾತಿವಾದಿಗಳಿಂದ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣ ಆಗಿತ್ತು. ತಮ್ಮ ಸಾರಸ್ವತ ಸಮಾಜದವರಿಂದಲೇ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿದ್ದರು. ಈ ಕುರಿತು ರಂಗರಾಯರು ನ್ಯಾಯಾಲಯದಲ್ಲಿ ದಾವೆಯನ್ನು ಹೂಡುವ ಪರಿಸ್ಥಿತಿ ಕೂಡ ನಿರ್ಮಾಣವಾಗಿತ್ತು. ಅವರ ಹೆಣ್ಣುಮಕ್ಕಳು ಸಾರ್ವಜನಿಕ ರಸ್ತೆಯಲ್ಲಿ ಹೋಗುತ್ತಿದ್ದಾಗ ನಿಂದನೆಯ ಮಾತುಗಳನ್ನಾಡಿ ಅವಮಾನಿಸುತ್ತಿದ್ದರು. ಬಳಿಕ ರಂಗರಾಯರು ತಮ್ಮ ಮಕ್ಕಳನ್ನು ಶಾಲೆಗೆ ಕುದುರೆಗಾಡಿಯಲ್ಲಿ ಕಳುಹಿಸುವ ವ್ಯವಸ್ಥೆ ಮಾಡಬೇಕಾಯಿತು. ರಂಗರಾಯರಿಗೆ ಕ್ಷೌರ ಮಾಡಲು ಕ್ಷೌರಿಕರು, ಬಟ್ಟೆ ಶುಚಿಗೊಳಿಸಲು ಅಗಸರು ನಿರಾಕರಿಸುತ್ತಿದ್ದರು. ಅವರ ಸಾರಸ್ವತ ಸಮಾಜದ ದೇವಾಲಯಗಳಲ್ಲಿಯೇ ಅವರಿಗೆ ಪ್ರವೇಶ ನಿಷಿದ್ಧವಾಗಿತ್ತು. ಇಷ್ಟೆಲ್ಲ ಹಿಂಸೆ ಅವಮಾನಗಳನ್ನು ಅವರು ಅನುಭವಿಸಿದ್ದರೂ ಎಂದೂ ಧೃತಿಗೆಡಲಿಲ್ಲ. ಅವರ ಪತ್ನಿ ರುಕ್ಮಿಣಿ ಅಮ್ಮನವರು ಧೈರ್ಯ ತುಂಬಿ ಸದಾ ಪ್ರೋತ್ಸಾಹಿಸುತ್ತಿದ್ದರು.

ರಂಗರಾಯರ ನಿಸ್ವಾರ್ಥ ಸಾಮಾಜಿಕ ಕಾರ್ಯಕ್ರಮ ದೇಶ ವಿದೇಶಗಳಲ್ಲಿ ಪ್ರಚಾರಗೊಂಡು ಅನೇಕ ವಿದೇಶಿ ಗಣ್ಯರು ರಂಗರಾಯರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವರು. ಕೆಲವರು ಸದ್ದಿಲ್ಲದೆ ಡಿ.ಸಿ.ಎಂ. ಸಂಸ್ಥೆಗೆ ಹಣ ಕಳುಹಿಸುತ್ತಿದ್ದರು. ಗ್ರಂಥಪಾಲಕರು, ಲೇಖಕರು ತಾವು ಬರೆದ ಅಮೂಲ್ಯ ಲೇಖನ ಪುಸ್ತಕಗಳನ್ನು ಡಿ.ಸಿ.ಎಂ. ಸಂಸ್ಥೆಯ ಗ್ರಂಥಾಲಯಕ್ಕೆ ಕಳುಹಿಸುತ್ತಿದ್ದರು. ಮಾತ್ರವಲ್ಲ ಅಂದಿನ ದಿನಗಳಲ್ಲಿ ನಗರಕ್ಕೆ ಆಗಮಿಸುತ್ತಿದ್ದ ಗವರ್ನರ್ ಹಾಗೂ ಗಣ್ಯ ವ್ಯಕ್ತಿಗಳು ರಂಗರಾಯರ ಡಿ.ಸಿ.ಎಂ ಸಂಸ್ಥೆಯನ್ನು ಸಂದರ್ಶಿಸದೆ ಹೋಗುತ್ತಿರಲಿಲ್ಲ. ರಾಷ್ಟ್ರಕವಿ ರವೀಂದ್ರ ನಾಥ ಠಾಕೂರು, ದೀನಬಂಧು ಸಿ.ಎನ್. ಆಂಡ್ರೂಸ್ ಡಾ.ಅನ್ನಿಬೆಸೆಂಟ್ ಮೊದಲಾದ ಗಣ್ಯರು ರಂಗರಾಯರ ನಿಸ್ವಾರ್ಥ ಸೇವೆಯನ್ನು ಕಣ್ಣಾರೆ ಕಂಡು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿರುವರು. ಗಾಂಧೀಜಿಯವರು 1934 ಫೆಬ್ರವರಿ 24ರಂದು ತಮ್ಮ ಪರಿವಾರದೊಂದಿಗೆ ರಂಗರಾಯರ ಡಿ.ಸಿ.ಎಂ. ಸಂಸ್ಥೆಗೆ ಭೇಟಿ ನೀಡಿ ಅವರ ದಲಿತೋದ್ಧ್ದಾರ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ‘ರಂಗರಾಯರು ತನ್ನ ನಿಜ ಜೀವನದಲ್ಲಿ ದಲಿತೋದ್ಧಾರಕ್ಕೆ ಪ್ರೇರಕ ಶಕ್ತಿ ಹಾಗೂ ನನ್ನ ಗುರುಗಳು’ ಎಂಬುದಾಗಿ ಅಂದಿನ  ಬೃಹತ್ ಸಾರ್ವಜನಿಕ ಸಭೆಯಲ್ಲಿ ಘೋಷಿಸಿರುವರು.

ಸರ್ವಧರ್ಮೀಯರನ್ನು ಸಮಾನರಾಗಿ ಕಾಣುತ್ತಿದ್ದ ರಂಗರಾಯರು ಅವರ ಡಿ.ಸಿ.ಎಂ. ಸಂಸ್ಥೆಗೆ ಧರ್ಮ ನಿರಪೇಕ್ಷತೆಯನ್ನು ಸಾರುವ ಧ್ವಜವನ್ನು ಆಯ್ಕೆ ಮಾಡಿಕೊಂಡಿದ್ದರು. ಆ ಧ್ವಜದ ಮೇಲ್ಭಾಗದಲ್ಲಿ ‘ದೀನೋದ್ಧ್ದಾರಂ ದೇಶೋದ್ಧ್ದಾರಂ’ ಎಂಬ ನುಡಿಮುತ್ತುಗಳಿವೆ. ಅದರ ಕೆಳಗೆ ಒಂದು ಮಂದಿರವಿದೆ. ಮಂದಿರದ ಎದುರು ಮುಸ್ಲಿಮ್, ಹಿಂದೂ, ಕ್ರೈಸ್ತ ಮೂವರು ಒಟ್ಟಿಗೆ ಕೂತಿರುವರು. ಸಮೀಪದಲ್ಲೇ ಕೆಸರು ತುಂಬಿರುವ ಹಳ್ಳವಿದೆ. ಆ ಹಳ್ಳದ ಹಾದಿಯ ಪಕ್ಕದಲ್ಲೇ ಓರ್ವ ವ್ಯಕ್ತಿಯು ನಿಂತಿರುತ್ತಾನೆ. ಪೂಜ್ಯಳಾದ ಭಾರತ ಮಾತೆಯು ಬ್ರಿಟಿಷ್ ಯೂನಿಯನ್ ಜೇಕ್ -ರಾಷ್ಟ್ರ ಧ್ವಜವನ್ನು ಧರಿಸಿಕೊಂಡು ಕೆಸರಿನ ಹಳ್ಳದಿಂದ ಆ ವ್ಯಕ್ತಿಯನ್ನು ಮೇಲಕ್ಕೆ ಎತ್ತಲು ತನ್ನ ಹಸ್ತವನ್ನು ಚಾಚಿರುತ್ತಾಳೆ. ಇದು ಸಮಾಜದ ಅಂದಿನ ಅಸಮಾನತೆಯ ನೈಜ್ಯ ಚಿತ್ರಣವನ್ನು ನೆನಪಿಸುವಂತಿದೆ. ಆ ಧ್ವಜವನ್ನು ಡಿ.ಸಿ.ಎಂ. ಸಂಸ್ಥೆಯ ವಿಶೇಷ ಕಾರ್ಯಕ್ರಮದಲ್ಲಿ ನಗರದ ರಸ್ತೆಯಲ್ಲಿ ಮೆರವಣಿಗೆ ಹೋಗುವ ಸಂದರ್ಭದಲ್ಲ್ಲಿ ವಿದ್ಯಾರ್ಥಿಗಳು ಎದುರುಗಡೆ ಎಲ್ಲರಿಗೂ ಕಾಣುವಂತೆ ಪ್ರದರ್ಶಿಸುತ್ತಿದ್ದರು.

  ರಂಗರಾಯರು ತನ್ನ ಜೀವನವನ್ನು ದಲಿತರ ಶಿಕ್ಷಣಕ್ಕೆ ಮಾತ್ರ ಸೀಮಿತಗೊಳಿಸದೆ, ಸ್ವಂತ ನೆಲೆ ಇಲ್ಲದೆ ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿದ್ದ ನೂರಾರು ದಲಿತ ಕುಟುಂಬಗಳಿಗೆ ನಗರದ ಬಿಜೈ, ಕಾಪಿಕಾಡು, ದಡ್ಡಲ್‌ಕಾಡು, ಬಾಬುಗುಡ್ಡೆ, ಕೋಡಿಕಲ್, ತನ್ನೀರು ಬಾವಿ, ಪಣಂಬೂರು, ಬೈಕಂಪಾಡಿ ಹಾಗೂ ಅವಿಭಜಿತ ಉಡುಪಿ ಜಿಲ್ಲೆಯ ಪುತ್ತೂರು , ಬನ್ನಂಜೆ, ಕುಂಜಬೆಟ್ಟು, ಮಲ್ಪೆ ಮೊದಲಾದ ಕಡೆ ಸರಕಾರಿ ಜಮಿನು ಹಾಗೂ ಭೂಮಾಲಕರಿಂದ ಗೇಣಿಗೆ ಪಡೆದು ಮತ್ತು ತನ್ನ ಸ್ವಂತ ಹಣದಿಂದ ಜಮೀನನ್ನು ಖರೀದಿಸಿ ಅವರಿಗೆ ನೀಡಿ ಸ್ವತಂತ್ರವಾಗಿ ಜೀವಿಸಲು ಅವಕಾಶಮಾಡಿಕೊಟ್ಟಿರುವುದು ಕೂಡಾ ಬಹುದೊಡ್ಡ ಸಾಧನೆ ಆಗಿರುತ್ತದೆ. ಅಲ್ಲದೆ ನಗರದ ಕಾಪಿಕಾಡು ಕಾಲನಿಯಲ್ಲಿ ಜನರು ಸಭೆ, ಸಮಾರಂಭ ನಡೆಸಲು ‘ಸ್ಟಾರ್ ಹೋಲ್’ ಎಂಬ ಹೆಸರಿನ ಸಮಾಜ ಮಂದಿರವನ್ನು ನಿರ್ಮಿಸಿರುವರು.

ಅಲ್ಲದೆ ಸ್ಥಳೀಯ ಸಂಸ್ಥೆಗಳಾದ ಜಿಲ್ಲಾ ಬೋರ್ಡ್ ಮತ್ತು ಪುರಸಭೆಯಲ್ಲಿ ಪರಿಶಿಷ್ಟರಿಗೆ ಪ್ರಾತಿನಿಧ್ಯ ನೀಡಲು ಬೇಡಿಕೆ ಇಟ್ಟು ಅದನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸಿರುವುದರಿಂದ ಶ್ರೀ ಅಂಗಾರ ಮಾಸ್ತರ್ ಎಂಬವರನ್ನು ಜಿಲ್ಲಾ ಬೋರ್ಡ್ ಸದಸ್ಯರನ್ನಾಗಿಯೂ ಹಾಗೂ ಉಡುಪಿ ಪುತ್ತೂರಿನ ಜನಪ್ರಿಯ ಶಿಕ್ಷಕರಾಗಿದ್ದ ಶ್ರೀ ಗೋವಿಂದ ಮಾಸ್ತರ್ ಅವರನ್ನು ಮಂಗಳೂರುನಗರ ಸಭೆಗೆ ಪ್ರಥಮ ಬಾರಿಗೆ ನೇಮಕ ಮಾಡಲಾಗಿತ್ತು ಹಾಗೂ ಕೊಡಿಯಾಲ್‌ಬೈಲ್ ಕೋರ್ಟ್ ಹಿಲ್ಸ್‌ನಲ್ಲಿ ‘ಆದಿ ದ್ರಾವಿಡ ಸಹಕಾರ ಸಂಘ’ವನ್ನು ಸ್ಥಾಪಿಸಿ ಪರಿಶಿಷ್ಟರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದರು. ಈ ಸಂಘವು ಅವರ ಅವಧಿಯಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿತ್ತು.

ಅನಾಥ ಮಹಿಳೆಯರಿಗಾಗಿ ಮತ್ತು ಬಾಲ ವಿಧವೆಯರ ಕಲ್ಯಾಣಕ್ಕಾಗಿ ಜಿಲ್ಲೆಯಲ್ಲಿ ಪ್ರತ್ಯೇಕ ಆಶ್ರಮ ಶಾಲೆಯೊಂದನ್ನು ತೆರೆಯಬೇಕೆಂಬ ಇಚೆ ರಂಗರಾಯರಿಗೆ ಇತ್ತು. ಆದರೆ ಅವರ ಜೀವಿತ ಅವಧಿಯಲ್ಲಿ ಅದನ್ನು ಕಾರ್ಯಗತಗೊಳಿಸಲು ಸಾಧ್ಯವಾಗಿರುವುದಿಲ್ಲ. ಅವರ ಈ ಆಶಯವನ್ನು ನಂತರ ನಗರದ ಜನಪ್ರಿಯ ವೈದ್ಯರಾಗಿದ್ದ ಡಾ.ಬೆನಗಲ್ ರಾಘವೇಂದ್ರರಾಯರು ಅವರ ಸ್ವಂತ ಪರಿಶ್ರಮದಿಂದ ರಂಗರಾಯರ ಸ್ಮರಣಾರ್ಥವಾಗಿ ‘ಸ್ವಾಮಿ ಈಶ್ವರಾನಂದ ಮಹಿಳಾ ಸೇವಾಶ್ರಮ’ ಎಂಬ ಹೆಸರಿನಲ್ಲಿ ಆಶ್ರಮವನ್ನು ನಗರದ ಬಂಟ್ಸ್ ಹಾಸ್ಟೆಲ್ ಮುಂಭಾಗದ ಕಟ್ಟಡದಲ್ಲಿ ಪ್ರಾರಂಭಿಸಿದರು. ಬಳಿಕ ಈ ಆಶ್ರಮವನ್ನು ಕಂಕನಾಡಿ ಕುದ್ಕೋರಿ ಗುಡ್ಡೆಗೆ ವರ್ಗಾಯಿಸಿ ವ್ಯವಸ್ಥಿತ ರೀತಿಯಲ್ಲಿ ನಡೆಸಿಕೊಂಡು ಬಂದವರು.

ರಂಗರಾಯರಿಗೆ ತನ್ನ ಜೀವನದ ಕೊನೆಗಳಿಗೆಯಲ್ಲಿ ಡಿ.ಸಿ.ಎಂ .ಸಂಸ್ಥೆಯನ್ನು ಆರ್ಥಿಕ ಸಮಸ್ಯೆಯಿಂದ ಮುನ್ನಡೆಸಲು ಸಾಧ್ಯವಾಗದೆ 1922ರಲ್ಲಿ ಮಹಾರಾಷ್ಟ್ರದ ಲೋಕಮಾನ್ಯ ಗೋಪಾಲಕೃಷ್ಣ ಗೋಖಲೆಯವರ ‘ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ’ (ಭಾರತ ಸೇವಾ ಸಂಘ)ಗೆ ಹಸ್ತಾಂತರಿಸಿದರು.

 ರಂಗರಾಯರು ತನ್ನ ವೃದ್ಧಾಪ್ಯದ ಅವಧಿಯನ್ನು ಧಾರ್ಮಿಕ ಚಟುವಟಿಕೆಗಳಲ್ಲಿ ಕಳೆಯಲು ನಿರ್ಧರಿಸಿದರು. ಅದಕ್ಕಾಗಿ ಅವರು ಬ್ರಹ್ಮ ಸಮಾಜದ ದಯಾನಂದ ಸರಸ್ವತಿಯವರ ಶಿಷ್ಯ ಶ್ರದ್ಧಾನಂದ ಸ್ವಾಮೀಜಿಯವರಿಂದ ಸನ್ಯಾಸ ದೀಕ್ಷೆ ಸ್ವೀಕರಿಸಲು 1924ರಲ್ಲಿ ನಿರ್ಧರಿಸಿದರು. ಆದರೆ ಅದೇ ಸಮಯದಲ್ಲಿ ಶ್ರದ್ಧಾನಂದ ಸ್ವಾಮೀಜಿಯವರು ಹತ್ಯೆ ಆಗಿರುವುದರಿಂದ ಅವರ ಉದ್ದೇಶ ಕಾರ್ಯಗತ ಆಗಿಲ್ಲ. ಮುಂದೆ 1927ರಲ್ಲಿ ಶೃದ್ಧಾನಂದ ಸ್ವಾಮೀಜಿಯವರ ಶಿಷ್ಯರಾದ ಸುವಿಚಾರನಂದ ಸ್ವಾಮೀಜಿಯವರಿಂದ ಸನ್ಯಾಸ ದೀಕ್ಷೆಯನ್ನು ಪಡೆದರು. ಈ ಸಂದರ್ಭದಲ್ಲಿ ಪಂಡಿತ ಧರ್ಮದೇವ ವಿದ್ಯಾವಾಚಸ್ಪತಿಯವರು ರಂಗರಾಯರಿಗೆ ‘ಈಶ್ವರಾನಂದ ಸನ್ಯಾಸಿ’ಯೆಂದು ನಾಮಕರಣ ಮಾಡಿದರು. ಈ ಸಂದರ್ಭದಲ್ಲಿ ರಂಗರಾಯರು ಸರಕಾರವು ತನಗೆ ನೀಡಿರುವ ‘ರಾವ್ ಸಾಹೇಬ್’ ಎಂಬ ಬಿರುದಿನ ಪ್ರಶಸ್ತಿ ಮತ್ತು ಸೇವಾ ದಾಖಲೆ ಪತ್ರಗಳನ್ನು ಅಂದಿನ ಪೂಜಾ ಸಮಾರಂಭದ ಹೋಮಕುಂಡದ ಅಗ್ನಿಗೆ ಸಮರ್ಪಿಸಿ ನಿಶ್ಚಿಂತರಾದರು. ಬಿರುದು ಪತ್ರಗಳು ಮನುಷ್ಯನಲ್ಲಿ ಇದ್ದರೆ ಆತನಲ್ಲಿ ಅಹಂಭಾವ, ದರ್ಪಗಳಿಗೆ ಕಾರಣ ಆಗುವುದು ಎಂಬ ಭಾವನೆ ಅವರದಾಗಿತ್ತು.

ರಂಗರಾಯರು ಜೀವನದ ಕೊನೆಯಲ್ಲಿ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗಿ 1928 ಜನವರಿ 30ರಂದು ಇಹಲೋಕವನ್ನು ತ್ಯಜಿಸಿದರು. ತನ್ನ ಪಾರ್ಥಿವ ಶರೀರವನ್ನು ಸ್ವಚ್ಛತಾ ಕಾರ್ಮಿಕ (ಪೌರ ಕಾರ್ಮಿಕ)ರಿಂದ ನೆರವೇರಿಸಬೇಕೆಂದು ವೀಲುನಾಮೆಯಲ್ಲಿ ಬರೆದಿಟ್ಟಿರುವ ಪ್ರಕಾರ ಅವರಿಂದಲೇ ರಂಗರಾಯರ ಅಂತ್ಯಸಂಸ್ಕಾರ ನಂದಿಗುಡ್ಡೆಯ ಬ್ರಹ್ಮ ಸಮಾಜದ ಸ್ಮಶಾನದಲ್ಲಿ ನಡೆಯಿತು. ಆದರೆ ಬಹು ಸಮಯದಿಂದ ಅನಾಥ ಸ್ಥಿತಿಯಲ್ಲಿದ್ದ ಅವರ ಸಮಾಧಿ ಸ್ಥಳವನ್ನು ನಿವೃತ ಆರ್‌ಟಿಒ ಡಾ.ಎಂ.ಆರ್.ಕೇಶವ ಧರಣಿಯವರ ಮುಂದಾಳತ್ವದಲ್ಲಿ ದ.ಕ. ಜಿಲ್ಲಾ ದಲಿತ ನೇಕಾರರ ಹಿತರಕ್ಷಣಾ ಸಮಿತಿ (ರಿ) ಮಂಗಳೂರು 2001ರಲ್ಲಿ ಪೂಜ್ಯ ವೀರಭದ್ರ ಚೆನ್ನಮಲ್ಲ ಮಹಾ ಸ್ವಾಮಿಯವರಿಂದ ಶಂಕುಸ್ಥಾಪನೆ ಮಾಡಿ ಸ್ಮಾರಕ ನಿರ್ಮಿಸಿರುವುದು ಶ್ಲಾಘನೀಯ. ಮಹಾನಗರ ಪಾಲಿಕೆಯು ಅದನ್ನು ಅಭಿವೃದ್ಧಿಪಡಿಸಲು ಇನ್ನಷ್ಟು ಗಮನ ಹರಿಸಲಿ.

 ಮಹಾತ್ಮ್ಮಾ ಜ್ಯೋತಿಭಾ ಫುಲೆಯವರಂತೆ ಕುದ್ಮುಲ್ ರಂಗರಾಯರು ನೂರು ವರ್ಷಗಳ ಹಿಂದೆ ದಲಿತರ ಸರ್ವಾಂಗೀಣ ಉದ್ಧಾರಕ್ಕಾಗಿ ಮಾಡಿರುವ ಸಾಧನೆಯು ಚಾರಿತ್ರಿಕವಾಗಿರುವಂತಹದ್ದು. ಆದರೆ ಅವರು ಶೋಷಿತರ ಏಳಿಗೆಗಾಗಿ ಮಾಡಿರುವ ಉತ್ತಮ ಕಾರ್ಯಗಳಿಗೆ ಪೂರಕವಾಗಿ ಜಿಲ್ಲಾಡಳಿತವಾಗಲಿ, ಮಹಾನಗರ ಪಾಲಿಕೆಯಾಗಲಿ ಸೂಕ್ತ ಗಮನ ಹರಿಸಿದಂತಿಲ್ಲ. ಮಂಗಳೂರು ಪುರಭವನಕ್ಕೆ ‘ಕುದ್ಮುಲ್ ರಂಗರಾವ್ ಪುರಭವನ’ ಎಂದು ನಾಮಕರಣ ಮಾಡಿದ ಮಾತ್ರಕ್ಕೆ ಅವರ ಮೂಲ ಆಶಯ ಈಡೇರಿದೆ ಎಂದು ಭಾವಿಸುವುದು ಸಮಂಜಸವಲ್ಲ. ಬಹುಮುಖ್ಯವಾಗಿ ಕೊಡಿಯಾಲ್‌ಬೈಲ್‌ನ ವಿದ್ಯಾರ್ಥಿನಿ ನಿಲಯದ ಪಕ್ಕದಲ್ಲಿ ರಂಗರಾಯರು ಕೈಗಾರಿಕ ತರಬೇತಿ ಕೇಂದ್ರ, ವಾಚನಾಲಯ, ಶಾಲೆ ಸ್ಥಾಪಿಸಿರುವರು. ಆದರೆ ಅದೇ ಸ್ಥಳದಲ್ಲಿ ಕೆಲವು ವರ್ಷಗಳ ಹಿಂದೆ ಡಾ.ಬಿ.ಆರ್.ಅಂಬೇಡ್ಕರ್ ಹೆಸರಿನಲ್ಲಿ ವಾಣಿಜ್ಯ ಸಂಕೀರ್ಣವನ್ನು ಪ್ರಾರಂಭಿಸಲಾಗಿದೆ. ಅಂದು ರಂಗರಾಯರು ಆ ಸ್ಥಳವನ್ನು ಯಾವ ಉದ್ದೇಶಗಾಗಿ ಬಳಸಿದ್ದರೋ ಇಂದು ಅದಕ್ಕೆ ತದ್ವಿರುದ್ಧ್ದವಾಗಿ ಬಳಸಲಾಗಿದೆ. ಬದಲಾಗಿ ಆ ಸ್ಥಳದಲ್ಲಿ ವಾಚನಾಲಯ, ವಿದ್ಯಾವಂತ ನಿರುದ್ಯೋಗಿ ದಲಿತ, ಹಿಂದುಳಿದ ಯುವಕ, ಯುವತಿಯರಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾದ ತರಬೇತಿ ನೀಡಲು ಕೇಂದ್ರ ಪ್ರಾರಂಭಿಸಿದ್ದರೆ ಅದು ಅರ್ಥ ಪೂರ್ಣವಾಗುತ್ತಿತ್ತು ಹಾಗೂ ದಲಿತ ಸಮುದಾಯವು ತಮ್ಮಿಳಗಿನ ಉಪಜಾತಿಗಳ ಭಾವನೆಯನ್ನು ಬದಿಗೆ ಸರಿಸಿ ರಂಗರಾಯರು ತಮ್ಮ ಜನಾಂಗದ ವಿಮೋಚನೆಗಾಗಿ ಮಾಡಿರುವ ತ್ಯಾಗ ಮನೋಭಾವನೆಯನ್ನು ಆರಿತು ಮನುಷ್ಯತ್ವದ ಕಡೆಗೆ ಚಿಂತಿಸಬೇಕಾಗಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top