"ಅಕ್ರಮ ಮರಳುಗಾರಿಕೆ" ಮೂಲಕ ಅಮೆಝಾನ್, ಫ್ಲಿಪ್ ಕಾರ್ಟ್ ಗಳಿಗೆ ನಾಮ ಹಾಕಿದ ಖದೀಮರು
ಹೈದರಾಬಾದ್ : ಬರೋಬ್ಬರಿ ನಾಲ್ಕು ತಿಂಗಳುಗಳ ಕಾಲ ಆನ್ಲೈನ್ ಶಾಪಿಂಗ್ ಸೈಟುಗಳಾದ ಅಮೆಝಾನ್ ಹಾಗೂ ಫ್ಲಿಪ್ಕಾರ್ಟ್ನಿಂದ ಎಲೆಕ್ಟ್ರಾನಿಕ್ ವಸ್ತುಗಳನ್ನು ಆರ್ಡರ್ ಮಾಡಿ ಅವುಗಳಿಗೆ ಹಣ ಪಾವತಿಸದೆ ಸಂಸ್ಥೆಗಳಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ಪರಸ್ಪರ ಸಂಬಂಧಿಗಳಾಗಿರುವ ಹೈದರಾಬಾದಿನ ಇಬ್ಬರುಯುವಕರು ಈಗ ಜೈಲು ಕಂಬಿ ಎಣಿಸುತ್ತಿದ್ದಾರೆ.
ಆರೋಪಿಗಳನ್ನು ಯಾಹ್ಯಾ ಮುಹಮ್ಮದ್ ಇಶಾಖ್ ಹಾಗೂ ಆತನ ಮೈದುನ ಮುಹಮ್ಮದ್ ಶಾಹ್ರೋರ್ ಅನ್ಸಾರಿ ಎಂದು ಗುರುತಿಸಲಾಗಿದೆ. ಮೊಬೈಲ್ ಫೋನ್ಗಳಿಂದ ಹಿಡಿದು ಲ್ಯಾಪ್ಟಾಪ್, ಡಿವಿಡಿ, ಕ್ಯಾಮರಾ ಮುಂತಾದ ವಸ್ತುಗಳನ್ನು ಅವರುಆರ್ಡರ್ ಮಾಡುತ್ತಿದ್ದರು. ಡೆಲಿವರಿ ಬಾಯ್ ಅವರ ಮನೆಗೆ ಬಂದಾಗ ಅವರಲ್ಲೊಬ್ಬರು ಆತನೊಡನೆ ಮಾತುಕತೆಗೆ ತೊಡಗಿದರೆ, ಇನ್ನೊಬ್ಬಡೆಬಿಟ್ ಕಾರ್ಡ್ ತರುವುದಾಗಿ ಹೇಳಿ ಪ್ಯಾಕೆಟ್ಟನ್ನು ಒಳಗೆತೆಗೆದುಕೊಂಡು ಹೋಗಿ ಅದನ್ನು ಚಾಕಚಕ್ಯತೆಯಿಂದ ತೆರೆದು ಅದರಲ್ಲಿರುವ ವಸ್ತುವನ್ನು ಹೊರತೆಗೆದು ಅಷ್ಟೇ ಭಾರದ ಮರಳನ್ನು ಹಾಕಿ, ಹಿಂದಿನಂತೆಯೇ ಪ್ಯಾಕ್ ಮಾಡಿ ಡೆಲಿವರಿ ಬಾಯ್ ಹತ್ತಿರ ತನ್ನ ಡೆಬಿಟ್ ಕಾರ್ಡ್ನಲ್ಲಿ ಬ್ಯಾಲೆನ್ಸ್ ಇಲ್ಲವೆಂದು ಹೇಳಿ ಆ ಪ್ಯಾಕೆಟ್ಟನ್ನು ಆತನಿಗೆ ಹಿಂದಿರುಗಿಸುತ್ತಿದ್ದ.
ಅವರಲ್ಲೊಬ್ಬನಾದ ಇಶಾಖ್ ಅಮೆಝಾನ್ ಪುಸ್ತಕ ವಿಭಾಗದಲ್ಲಿ ನೋಂದಣಿಯಾಗಿರುವ ಆನ್ಲೈನ್ ಡೀಲರ್ ಆಗಿರುವುದು ಆತನಿಗೆ ಒಮ್ಮೆ ತೆರೆದ ಪಾರ್ಸೆಲನ್ನು ಮತ್ತೆ ಹಾಗೆಯೇ ಮರು ಪ್ಯಾಕ್ ಮಾಡಲು ಸಹಾಯ ಮಾಡಿತ್ತು. ಆದರೆ ಅವರಿಬ್ಬರ ಅದೃಷ್ಟ ಬಹಳ ಬೇಗನೇ ಕೈಕೊಟ್ಟಿದ್ದು ಅವರನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.