ಅಳುತ್ತಿದೆ ಎಂದು ಮೂರು ದಿನದ ಮಗುವಿನ ಕಾಲುಮುರಿದು ಹಾಕಿದ ಆಸ್ಪತ್ರೆಯ ನೌಕರ !
ಡೆಹ್ರಾಡೂನ್,ಫೆ.7: ಮೂರು ದಿನದ ಎಳೆ ಶಿಶು ನಿರಂತರ ಅಳುತ್ತಿದ್ದುದಕ್ಕೆ ಅದರ ಕಾಲನ್ನೇ ಮುರಿದು ಹಾಕುವ ಮೂಲಕ ಆಸ್ಪತ್ರೆಯ ನೌಕರನೊಬ್ಬ ಕ್ರೂರ ಶಿಕ್ಷೆ ನೀಡಿದ್ದಾನೆ. ಉತ್ತರಾಖಂಡದ ರೂರ್ಕಿಯ ಖಾಸಗಿ ಆಸ್ಪತ್ರೆಯಲ್ಲಿ ನಡೆದ ಈ ಘಟನೆಯ ಸಿಸಿಟಿವಿ ದೃಶ್ಯಗಳು ಬೆಚ್ಚಿ ಬೀಳುವಂತೆ ಮಾಡಿದೆ.
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮೂರು ದಿನದ ಮಗುವನ್ನು ಜನವರಿ 28ಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ನೌಕರ ವಿಶ್ರಾಂತಿ ಪಡೆಯುವ ಕೋಣೆಯಲ್ಲೇ ನಿಗಾವಿರಿಸಲಿಕ್ಕಾಗಿ ಮಗುವನ್ನು ಮಲಗಿಸಲಾಗಿತ್ತು. ನಿರಂತರ ಅಳುವ ಮಗುವಿನ ಹತ್ತಿರ ಬಂದ ನೌಕರ ಕ್ರೂರವಾಗಿ ಕಾಲುಗಳನ್ನು ಎಳೆದು ಡಯಪರ್ ಬದಲಾಯಿಸುತ್ತಿರುವುದು ಕ್ಯಾಮರಾದಲ್ಲಿ ಕಾಣಿಸುತ್ತಿದೆ. ಅಳುತ್ತಿರುವ ಮಗುವಿನತ್ತ ಗಮನವನ್ನೇ ಕೊಡದೆ ಆತ ಹೀಗೆಲ್ಲ ಮಾಡಿದ್ದಾನೆ.
ಡೆಹ್ರಾಡೂನ್ನ ಇನ್ನೊಂದು ಆಸ್ಪತ್ರೆಯಲ್ಲಿ ಈ ಮಗುವಿನ ಒಂದು ಕಾಲು ಮುರಿದಿರುವುದು ಪತ್ತೆಯಾಗಿದ್ದು, ನಂತರ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಯಿತು. ಅದರಲ್ಲಿ ನೌಕರನೆಸಗಿದ ಕ್ರೂರ ಕೃತ್ಯ ಬಹಿರಂಗವಾಗಿದೆ. ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿ ನೌಕರನನ್ನು ಪೊಲೀಸರು ತಮ್ಮ ವಶಕ್ಕೆ ಪಡೆದು ಪ್ರಶ್ನಿಸುತ್ತಿದ್ದಾರೆಂದು ವರದಿ ತಿಳಿಸಿದೆ.