---

ಬೆಳೆಯುವ ಪೈರು: ಶಿಕ್ಷಣ ಹೂರಣ

ಸಿಬಿಎಸ್ಇ ಬೇಕು, ಆದರೆ ಹೇಗಿರಬೇಕು?

ಅಧ್ಯಯನ ಮತ್ತು ಅರಿವು

ಭಾಗ 5

ಗಣಿತ ಮತ್ತು ವಿಜ್ಞಾನಗಳಿಗೆ ಪೂರಕವಾಗಿಯೂ ಮತ್ತು ಇತರ ವಿಷಯಾಧಾರಿತವಾದ ನಿಜಜೀವನದ ಅನೇಕಾನೇಕ ವಿಷಯಗಳ ಪ್ರಾಯೋಗಿಕ ತಿಳುವಳಿಕೆಗಳ ಅಗತ್ಯತೆಯ ಬಗ್ಗೆ ಸಿಬಿಎಸ್‌ಇ ಏನೇನೂ ಗಮನ ಕೊಟ್ಟಿಲ್ಲ. ಗಣಿತ ಮತ್ತು ವಿಜ್ಞಾನಗಳಂತಹ ಅನ್ವಯ ವಿಷಯಗಳನ್ನು ಕಲಿಸಿದರೂ ಅದು ಪ್ರಾಯೋಗಿಕವಾಗಿ ಅದನ್ನು ರೂಢಿಸುವುದಕ್ಕಿಂತ ಪಠ್ಯ ಕಲಿಕೆಗೇ ಹೆಚ್ಚಿನ ಮಹತ್ವವನ್ನು ತೋರುತ್ತದೆ. ಇನ್ನು ಜೀವನ ಕೌಶಲ್ಯಗಳನ್ನು ಹೊಂದುವುದರಲ್ಲಿ ಮಗುವು ತೀರಾ ಹಿಂದುಳಿಯುತ್ತದೆ.

ಸಿಬಿಎಸ್‌ಇ ಮತ್ತು ರಾಜ್ಯ ಪಠ್ಯಕ್ರಮಕ್ಕೆ ಬಹಳಷ್ಟು ವ್ಯತ್ಯಾಸಗಳಿವೆ. ಎರಡಲ್ಲಿಯೂ ಕೂಡ ಸಕಾರಾತ್ಮಕವಾದ ಅಂಶಗಳೂ ಇವೆ. ಹಾಗೆಯೇ ಲೋಪಗಳೂ ಇವೆ. ಪೋಷಕರು ಈ ಎರಡನ್ನೂ ಗಮನಿಸಿಕೊಂಡು ಮಗುವಿಗೆ ನಿಜಕ್ಕೂ ಏನು ಅಗತ್ಯವಿದೆ ಎಂಬುದನ್ನು ನೋಡಿಕೊಂಡು ಪಠ್ಯಕ್ರಮವನ್ನು ಆಯ್ಕೆ ಮಾಡಿಕೊಳ್ಳಬೇಕು. ಒಂದು ಅರ್ಥದಲ್ಲಿ ಪಠ್ಯಕ್ರಮ ಎಂಬುದು ಮಗುವಿನ ಮುಂದಿನ ಉನ್ನತ ವಿದ್ಯಾಭ್ಯಾಸ ಮತ್ತು ವೃತ್ತಿಗೆ ನೆರವಾಗುತ್ತದೆ, ನಿಜ. ಆದರೆ, ಆ ಉನ್ನತ ವಿದ್ಯಾಭ್ಯಾಸ ಮತ್ತು ವೃತ್ತಿ ಎಂಬುದು ಬರಿಯ ವ್ಯಕ್ತಿಗತ ಬದುಕಿಗೆ ಮಾತ್ರವೇ? ಅಥವಾ ತಾನಿರುವ ಸಮಾಜದಲ್ಲಿ ವೃತ್ತಿಪರವಾಗಿರುವುದರ ಕಡೆಗೆ ಗಮನ ನೀಡುವುದೇ? ಸಮಾಜ ಮತ್ತು ವ್ಯವಸ್ಥೆ ಈ ಎರಡನ್ನೂ ದೃಷ್ಟಿಯಲ್ಲಿಟ್ಟುಕೊಂಡು ತನ್ನ ವಿದ್ಯಾಭ್ಯಾಸ ಮತ್ತು ವೃತ್ತಿಯನ್ನು ಆಯ್ದುಕೊಳ್ಳಬೇಕಾಗುವುದೇ? ಈ ಎಲ್ಲವನ್ನೂ ಗಮನಿಸಬೇಕಾಗುತ್ತದೆ. ಶಿಕ್ಷಣ ಮತ್ತು ವೃತ್ತಿ ಎರಡನ್ನೂ ಆಯ್ಕೆ ಮಾಡಿಕೊಳ್ಳುವಲ್ಲಿ ಹಲವಾರು ಅಂಶಗಳನ್ನು ನಾವು ಗಮನಿಸಲೇಬೇಕಾಗುತ್ತದೆ. ಅವುಗಳಲ್ಲಿ ಮುಖ್ಯವಾಗಿ ಯಾವ ಕ್ಷೇತ್ರದಲ್ಲಿ ಮಗುವಿಗೆ ಆಸಕ್ತಿ ಇದೆ ಎಂಬುದು. ಕೆಲವೊಂದು ಕ್ಷೇತ್ರಗಳು ಮಕ್ಕಳಿಗೆ ಚಿಕ್ಕವರಿರುವಾಗ ತಿಳಿಯುವುದೇ ಇಲ್ಲ. ಅವರು ಪ್ರೌಢಾವಸ್ಥೆಗೆ ಬಂದಾಗ ತಿಳಿಯುತ್ತಾರೆ. ಆದರೂ ಕೂಡ ಅವರಿಗೊಂದು ಆಸಕ್ತಿ ಮತ್ತು ಸಾಮರ್ಥ್ಯ ಎಂಬುದು ಇರುತ್ತವೆ. ಅವುಗಳನ್ನು ಗುರುತಿಸುವಲ್ಲಿ ಪೋಷಕರು ಮತ್ತು ಶಿಕ್ಷಕರು ಎಚ್ಚರವಹಿಸಬೇಕು. ಆದರೆ ಶಿಕ್ಷಕರಿಗೆ ಹಲವಾರು ಮಕ್ಕಳ ನಡುವೆ ವ್ಯಕ್ತಿಗತವಾಗಿ ಗಮನ ಹರಿಸಲು ತೊಡಕಾಗಬಹುದು. ಮಗುವೇ ತನ್ನ ಆಸಕ್ತಿ ಮತ್ತು ಸಾಮರ್ಥ್ಯವನ್ನು ಅಭಿವ್ಯಕ್ತಿಸುತ್ತಿದ್ದರೆ ಶಿಕ್ಷಕರು ಅದಕ್ಕೆ ಪ್ರೋತ್ಸಾಹ ನೀಡಬಹುದು. ಆದರೆ ಬಹಳಷ್ಟು ಮಕ್ಕಳು ಪ್ರದರ್ಶನಾಸಕ್ತಿಯನ್ನು ಹೊಂದಿರುವುದಿಲ್ಲ ಅಥವಾ ಅವರಿಗೆ ತೋರ್ಪಡಿಸಲು ಪರಿಸರ ಅಥವಾ ಅವರಿರುವ ವ್ಯವಸ್ಥೆಯು ಮುಕ್ತ ಅವಕಾಶವನ್ನು ಕಲ್ಪಿಸಿರುವುದಿಲ್ಲ. ಹಾಗಾಗಿ ಮಕ್ಕಳ ಆಸಕ್ತಿ ಮತ್ತು ಸಾಮರ್ಥ್ಯವನ್ನು ಗಮನಿಸುವಲ್ಲಿ ಪೋಷಕರು ವಿಶೇಷ ಗಮನ ನೀಡಬೇಕು. ಸಾಮಾನ್ಯವಾಗಿ ಕಾರ್ಯ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಪೋಷಕರ ಪ್ರಭಾವ ಅಥವಾ ಪರಿಸರದ ಪ್ರಭಾವ ಪ್ರಧಾನವಾದ ಪಾತ್ರವನ್ನು ವಹಿಸುತ್ತವೆ. ಆದರೂ ಪ್ರತಿಯೊಂದು ಮಗುವಿಗೂ ಕುಟುಂಬದವರಿಗೇ ತಿಳಿಯದಂತಹ ಆಸಕ್ತಿ ಮತ್ತು ಸಾಮರ್ಥ್ಯವನ್ನು ಹೊಂದಿರುವ ಸಾಧ್ಯತೆಗಳಿರುತ್ತವೆ. ಅದು ಹೇಗೆ ಮತ್ತು ಏಕೆ ಹಾಗೆ ಬರುತ್ತದೆ ಎಂಬುದು ಪ್ರತ್ಯೇಕ ವಿಷಯ ಮತ್ತು ವಿಶ್ಲೇಷಣೆ. ಆದರೆ ಈಗ ನಾವು ಪಠ್ಯಕ್ರಮಗಳು ಶಿಕ್ಷಣ ಮತ್ತು ಕಾರ್ಯಕ್ಷೇತ್ರಗಳಿಗೆ ಹೇಗೆ ಪೂರಕವಾಗಿರುತ್ತವೆ ಎಂಬುದನ್ನು ಗಮನಿಸೋಣ.

►ಸಿಬಿಎಸ್‌ಇ

ಕೇಂದ್ರೀಯ ವಿದ್ಯಾನಿಲಯಗಳು, ಜವಾಹರ್ ನವೋದಯ ವಿದ್ಯಾನಿಲಯಗಳು, ಖಾಸಗಿ ಶಾಲೆಗಳು ಕೇಂದ್ರ ಸರಕಾರದಿಂದ ಮಾನ್ಯತೆ ಪಡೆದಿರುತ್ತವೆ. ಅವರ ಪರೀಕ್ಷಾ ಪದ್ಧತಿಯ ಮಾದರಿಯೆಂದರೆ, ಆಲ್ ಇಂಡಿಯಾ ಸೀನಿಯರ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಶನ್ (ಎಐಎಸ್‌ಎಸ್‌ಸಿಇ) ಅದು ಹತ್ತನೇ ತರಗತಿ ಮತ್ತು ಹನ್ನೆರಡನೆಯ ತರಗತಿಯ ಪರೀಕ್ಷೆಗಳಾಗಿರುತ್ತವೆ. ಭಾರತ, ಮಲೇಶಿಯಾ, ದುಬೈ ಸೇರಿದಂತೆ ಸುಮಾರು 25 ದೇಶಗಳಲ್ಲಿ ಈ ಪಠ್ಯಕ್ರಮದ ಮಾದರಿಯನ್ನು ಗಮನಿಸಬಹುದು. ಎಷ್ಟೆಷ್ಟೋ ಆಪ್ಟಿಟ್ಯೂಡ್ ಎಕ್ಸಾಮಿನೇಶನ್‌ಗಳು ಮತ್ತು ಸ್ಕಾಲರ್‌ಷಿಪ್ ಪರೀಕ್ಷೆಗಳು (ಎಸ್‌ಎಸ್‌ಟಿಎಸ್‌ಇ, ಎನ್‌ಎಸ್‌ಇಬಿ, ಎನ್‌ಎಸ್‌ಇಸಿ ಮಾದರಿಯವು, ಇವುಗಳ ಬಗ್ಗೆ ಮುಂದೆ ತಿಳಿಯೋಣ.) ನಡೆಯುವುದು ಸಿಬಿಎಸ್‌ಇ ಪಠ್ಯಕ್ರಮವನ್ನೇ ಆಧರಿಸಿರುತ್ತವೆ. ಇದಕ್ಕೆ ಮುಖ್ಯ ಕಾರಣ ಈ ಪಠ್ಯಕ್ರಮ ಹೆಚ್ಚು ಪ್ರಚಲಿತವಾಗಿದೆ ಎಂದು ಮಾತ್ರವಷ್ಟೇ.

ಐಎಎಸ್, ಐಎಫ್‌ಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳೂ ಕೂಡಾ ಸಿಬಿಎಸ್‌ಇ ಅನುಮೋದಿಸುವ ಎನ್‌ಸಿಇಆರ್ ಟಿ ಪಠ್ಯಪುಸ್ತಕಗಳನ್ನು ಅವಲಂಬಿಸುತ್ತದೆ. ಮುಖ್ಯವಾಗಿ ಗಣಿತ ಮತ್ತು ವಿಜ್ಞಾನದಂತಹ ಆನ್ವಯಿಕ ವಿಷಯಗಳನ್ನು ಕೇಂದ್ರೀಕರಿಸುತ್ತದೆ. ಭಾರತದಲ್ಲಿ ಸುಮಾರು ಶೇ.ಎಂಬತ್ತರಷ್ಟು ವಿದ್ಯಾರ್ಥಿ ಸಮೂಹವು ಸಿಬಿಎಸ್‌ಇ ಪಠ್ಯ ಮಾದರಿಯನ್ನು ಅನುಸರಿಸುತ್ತದೆ. ಪಠ್ಯಪುಸ್ತಕಗಳಲ್ಲಿ ಮುದ್ರಣದ ಮತ್ತು ಕಾಗದದ ಗುಣಮಟ್ಟವನ್ನು ಕಾಯ್ದು ಕೊಳ್ಳಲಾಗಿದೆ. ಹಾಗೆಯೇ ವ್ಯಾಕರಣ ಮತ್ತು ಅಕ್ಷರಗಳು ತಪ್ಪುಗಳಿರದಂತೆ ಎಚ್ಚರವಹಿಸಲಾಗಿದೆ.

ಪಠ್ಯ ಪುಸ್ತಕಗಳಿಗೆ ಪೂರಕವಾಗಿರುವಂತಹ ಚಟುವಟಿಕೆಯ ಪುಸ್ತಕಗಳು, ಕಾರ್ಯ ಸೂಚಿಗಳು, ಖಾಸಗಿ ಶಿಕ್ಷಕರು ಸುಲಭವಾಗಿ ಸಿಗುತ್ತಾರೆ. ಇಂಗ್ಲಿಷ್ ಮತ್ತು ಹಿಂದಿ; ಈ ಎರಡೂ ಭಾಷೆಗಳ ಮಾಧ್ಯಮಗಳಲ್ಲಿ ಶಿಕ್ಷಣ ಪಡೆಯಬಹುದು. ಭಾರತದ ಎಲ್ಲಾ ಕಾಲೇಜುಗಳಲ್ಲಿ ಸಿಬಿಎಸ್‌ಇ ಪಠ್ಯಕ್ರಮದ ಶಿಕ್ಷಣ ಪದ್ಧತಿಯನ್ನು ಮಾನ್ಯ ಮಾಡುತ್ತಾರೆ. ಅಲ್ಲದೇ ಪೋಷಕರು ತಮ್ಮ ಕಾರ್ಯಕಾರಣ ಯಾವುದೇ ಸ್ಥಳಕ್ಕೆ ವರ್ಗಾವಣೆಯಾದರೂ ಕೂಡಾ ಮಕ್ಕಳು ಸಿಬಿಎಸ್‌ಇ ಪಠ್ಯಕ್ರಮವನ್ನು ಅನುಸರಿಸುವುದರಿಂದ ಎಲ್ಲಿಗೇ ಹೋದರೂ ಸಮಸ್ಯೆ ಇರುವುದಿಲ್ಲ. ಅದೇ ಪಠ್ಯಕ್ರಮವನ್ನು ದೇಶ ಪೂರ್ತಿ ಅನುಸರಿಸುತ್ತಿರುತ್ತದೆ.

ಜಾಯಿಂಟ್ ಎಂಟ್ರೆಂಸ್ ಎಕ್ಸಾಮಿನೇಶನ್ (ಐಐಟಿ-ಜೆಇಇ), ಆಲ್ ಇಂಡಿಯಾ ಇಂಜಿನಿಯರಿಂಗ್ ಎಂಟ್ರೆನ್ಸ್ ಎಕ್ಸಾಮಿನೇಶನ್ (ಎಐಇಇಇ) ಮತ್ತು ಆಲ್ ಇಂಡಿಯಾ ಪ್ರೀಮೆಡಿಕಲ್ ಟೆಸ್ಟ್ (ಎಐಪಿಎಂಟಿ) ಇಂತಹ ಪರೀಕ್ಷೆಗಳಿಗೆಲ್ಲಾ ಸಿಬಿಎಸ್‌ಇ ಸೂಕ್ತವಾಗಿರುತ್ತದೆ. ಸಿಬಿಎಸ್‌ಇಯಲ್ಲಿ ಪರಿಸರ ವಿಜ್ಞಾನ ಕಡ್ಡಾಯವೇನಿಲ್ಲ. ಇದು ಮಕ್ಕಳಿಗೆ ಕಲಿಕೆಯ ವಿಷಯದಲ್ಲಿ ಒತ್ತಡ ಕಡಿಮೆಯಾಯಿತೆಂದರೂ, ಈಗ ಪರಿಸರ ವಿಜ್ಞಾನವು ಅತ್ಯಂತ ಅಗತ್ಯವಾದಂತಹ ಮತ್ತು ಎಚ್ಚರಿಕೆಯ ಕರೆಗಂಟೆಗೆ ಓಗೊಡುವ ವಿಷಯವಾದ್ದರಿಂದ ಅದು ತೀರಾ ಅಗತ್ಯವೂ ಕೂಡಾ. ಹಾಗಾಗಿ ಪರಿಸರ ವಿಜ್ಞಾನವನ್ನು ಕಡ್ಡಾಯ ಮಾಡದಿರುವುದು ಒಂದು ರೀತಿಯಲ್ಲಿ ಒಳ್ಳೆಯದು ಎಂದರೂ, ನನ್ನ ದೃಷ್ಟಿಯಲ್ಲಿ ಪರಿಸರ ವಿಜ್ಞಾನ ತೀರಾ ಅಗತ್ಯದ ವಿಷಯವಾಗಿರುತ್ತದೆ.

►ಸಿಬಿಎಸ್‌ಇಯ ಇತಿಮಿತಿಗಳು

ಇಡೀ ದೇಶದಲ್ಲಿ ಇದೇ ಪಠ್ಯ ಮಾದರಿಯಾಗಿದ್ದು ಪ್ರವೇಶ ಪರೀಕ್ಷೆಗಳಲ್ಲಿ ಸ್ಪರ್ಧೆಯು ಕಠಿಣವೂ ಆಗಿರುತ್ತದೆ ಮತ್ತು ಅಂಕಗಳನ್ನು ಕಡಿತಗೊಳಿಸುವುದಕ್ಕೆ ತೀರಾ ಬಿಗಿಯಾದ ನಿಲುವುಗಳನ್ನು ಹೊಂದಿರುತ್ತಾರೆ. ಬಹುತೇಕರಿಗೆ ಪಠ್ಯಕ್ರಮವೇನೋ ಸಿಬಿಎಸ್ ಇ ಆಗಿರುತ್ತದೆ. ಆದರೆ ಅದನ್ನು ಕಲಿಸಿಕೊಡುವ ಶಿಕ್ಷಣ ಸಂಸ್ಥೆಗಳ ಮೇಲೆ ಮಕ್ಕಳ ಕಲಿಕೆಯು ಅವಲಂಬಿತವಾಗಿರುತ್ತದೆ. ಹಾಗಾಗಿ ಸಿಬಿಎಸ್‌ಇಯ ಪಠ್ಯಕ್ರಮಕ್ಕೆ ಪೂರಕವಾಗಿ ಕಲಿಕೆಯ ಮಟ್ಟವನ್ನು ಕಾಯ್ದುಕೊಳ್ಳಲಾಗದ ಶಾಲೆಗಳು ಅತ್ಯಂತ ದುರ್ಬಲ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಗೆ ಕಳುಹಿಸುತ್ತವೆ. ಇದು ಬಹಳ ದೊಡ್ಡ ಲೋಪ.

ಅದೇ ರೀತಿ ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿ ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಕಡಿಮೆ ಮಾನ್ಯತೆ ಇರುತ್ತದೆ. ಅಲ್ಲದೇ ರಾಜ್ಯದ ಪಠ್ಯಕ್ರಮಗಳಲ್ಲಿ ಶಿಕ್ಷಣ ಪಡೆದವರಿಗೆ ಆದ್ಯತೆ ಮತ್ತು ಪ್ರಾತಿನಿಧ್ಯವಿರುತ್ತದೆ.

ಹಾಗೆಯೇ ಸಿಬಿಎಸ್‌ಇ ವಿದ್ಯಾರ್ಥಿಗಳು ಸ್ಟೇಟ್ ಯೂನಿವರ್ಸಿಟಿ ಕಾಲೇಜ್‌ಗಳಿಗೆ ಅಗತ್ಯವಿರುವ ಪ್ರವೇಶ ಪರೀಕ್ಷೆಗಳನ್ನು ಎದುರಿಸಲು ಅತ್ಯಂತ ಕಷ್ಟಪಡಬೇಕಾಗುತ್ತದೆ. ಸುಲಭವೂ ಆಗಿರುವುದಿಲ್ಲ. ಹಾಗೆಯೇ ಭಿನ್ನವಾದ ರೀತಿಯದೇ ಆಗಿರುತ್ತವೆ. ಕಲೆ, ಸಾಹಿತ್ಯ, ಸ್ಥಳೀಯ ಸಂಸ್ಕೃತಿಗಳ ವಿಷಯಗಳಲ್ಲಿ ವ್ಯಾಪಕವಾದ ಆಯ್ಕೆಗಳು ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಇರುವುದಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಕಲೆ, ಸಾಹಿತ್ಯ ಮತ್ತು ಸ್ಥಳೀಯ ಸಂಸ್ಕೃತಿಗಳಲ್ಲಿ ಆಯ್ಕೆಗಳಿರದ ಕಾರಣದಿಂದ ಅವರಿಗೆ ತಮ್ಮದೇ ನೆಲದ ಬಗ್ಗೆ ಅಧ್ಯಯನವಾಗಲಿ, ಅರಿವಾಗಲಿ ಇರುವುದಿಲ್ಲ. ಹೋಗಲಿ ಅದಕ್ಕೆಂದೇ ಪ್ರತ್ಯೇಕವಾದ ಶಿಕ್ಷಣವನ್ನು ಪಡೆಯುವ ಯೋಚನೆ ಮಾಡಿದರೆ ಸಮಯವೇ ಇರುವುದಿಲ್ಲ. ಇದು ಬಹುದೊಡ್ಡ ಸಮಸ್ಯೆಯಾದ್ದರಿಂದ ವಿಜ್ಞಾನ, ಗಣಿತ ಮತ್ತು ತಂತ್ರಜ್ಞಾನಗಳ ಹೊರತಾಗಿ ಭಾಷೆ, ಸಮಾಜ ವಿಜ್ಞಾನ, ಕಲೆ, ಸಂಸ್ಕೃತಿಗಳ ವಿಷಯಗಳಲ್ಲಿ ಸಿಬಿಎಸ್‌ಇ ಪ್ರಾದೇಶಿಕತೆಯನ್ನು ಪರಿಗಣಿಸುವ ಮತ್ತು ಸ್ಥಳೀಯ ಸಂಸ್ಕೃತಿಗೆ ಮಾನ್ಯತೆ ನೀಡುವಂತಹ ದಿಕ್ಕಿನಲ್ಲಿ ಯೋಜನೆಗಳನ್ನು ರೂಪಿಸಿದ್ದಲ್ಲಿ ಅದರ ಉದ್ದೇಶವು ಸಾರ್ಥಕವೂ ಆಗುತ್ತದೆ. ಶಿಕ್ಷಣದ ಲಭ್ಯತೆಯೂ ಕೂಡ ಸಮರ್ಪಕವಾಗಿ ಪ್ರಾದೇಶಿಕವಾಗಿ ರೂಪುಗೊಳ್ಳುತ್ತದೆ. ಯಾವುದೇ ವಿದ್ಯಾರ್ಥಿಯು ಮೊದಲು ಪ್ರಾದೇಶಿಕವಾಗಿ ರೂಪುಗೊಳ್ಳುವುದು ಬಹಳ ಮಹತ್ವದ ಮತ್ತು ಅಗತ್ಯದ ವಿಷಯವಾಗಿರುತ್ತದೆ. ಅದರ ನಂತರ ಅವನು ತನ್ನ ಅರಿವಿನ ಮತ್ತು ಕಾರ್ಯಕ್ಷೇತ್ರದ ವಿಸ್ತಾರವನ್ನು ಮಾಡಿಕೊಳ್ಳಬೇಕಾಗುತ್ತದೆ. ಬಹಳಷ್ಟು ಸಿಬಿಎಸ್‌ಇ ವಿದ್ಯಾರ್ಥಿಗಳು ತಮ್ಮ ವೃತ್ತಿ ಮತ್ತು ಉನ್ನತ ಅಧ್ಯಯನದ ವಿಷಯಗಳಲ್ಲಿ ಯಶಸ್ಸು ಕಾಣದಿರುವುದಕ್ಕೆ ಕಾರಣವೇ ಇದಾಗಿರುತ್ತದೆ.

ರಾಜ್ಯ ಶಿಕ್ಷಣವೆಂದರೇನು?

ರಾಜ್ಯ ಶಿಕ್ಷಣಾ ಮಂಡಳಿಯು ಮಾಧ್ಯಮಿಕವೆಂದು ಕರೆಯಲಾಗುತ್ತದೆ. ಭಾರತದ ಎಲ್ಲಾ ರಾಜ್ಯಗಳೂ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢ ಶಾಲೆಗಳಿಗೆ ತಮ್ಮದೇ ಆದಂತಹ ಪಠ್ಯಕ್ರಮವನ್ನು ಹೊಂದಿರುತ್ತಾರೆ. ಅವರದೇ ಆದಂತಹ ಪಠ್ಯಕ್ರಮವಿದ್ದಂತೆ ತಮ್ಮದೇ ಆದಂತಹ ಪರಿಕ್ಷಾಪದ್ಧತಿಯನ್ನೂ ಅನುಸರಿಸುತ್ತಾರೆ.

ತಮ್ಮ ವೃತ್ತಿಯಲ್ಲಿ ರಾಜ್ಯದಿಂದ ರಾಜ್ಯಕ್ಕೆ ವರ್ಗಾವಣೆಯಾಗದಂತಹ ಪೋಷಕರು ರಾಜ್ಯ ಶಿಕ್ಷಣದ ಪಠ್ಯಕ್ರಮವನ್ನು ಮಕ್ಕಳಿಗೆ ಅನುಸರಿಸುವಂತೆ ಮಾಡುವುದು ನಿಜಕ್ಕೂ ಸೂಕ್ತ. ಅಲ್ಲದೇ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ತೊಡಗುವುದಕ್ಕೂ ಉತ್ತಮ ಅವಕಾಶವಿರುತ್ತದೆ. ಅಂತೆಯೇ ಸಿಬಿಎಸ್‌ಸಿ ಪಠ್ಯಕ್ರಮದ ಶಾಲೆಗಳಿಗೆ ಹೋಲಿಸುವುದಾದರೆ ಖರ್ಚೂ ಕಡಿಮೆ. ಹಾಗೆಯೇ ರಾಜ್ಯ ಶಿಕ್ಷಣ ಕ್ರಮದಲ್ಲಿ ಓದಿರುವವರಿಗೆ ಸಹಜವಾಗಿಯೇ ರಾಜ್ಯ ಶಿಕ್ಷಣ ಮಂಡಳಿಯಿಂದ ಮಾನ್ಯತೆ ಪಡೆದಿರುವಂತಹ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಪ್ರಾತಿನಿಧ್ಯತೆ ಇರುತ್ತದೆ. ಆದರೆ ಸಮಸ್ಯೆ ಏನೆಂದರೆ, ಎಷ್ಟೆಷ್ಟೋ ಪ್ರವೇಶ ಪರೀಕ್ಷೆಗಳನ್ನು ಎದುರಿಸಲು ಸರಿಯಾದ ತಯಾರಿ ಇರುವುದಿಲ್ಲ. ಹಾಗೆಯೇ ಸರಕಾರಗಳು ಬದಲಾದಂತೆಲ್ಲಾ ಶಿಕ್ಷಣ ಮಂಡಳಿಯ ರೀತಿ ನೀತಿಗಳು ಮತ್ತು ಧೋರಣೆ ನಿಯಮಗಳೂ ಕೂಡಾ ಬದಲಾಗುತ್ತಿರುತ್ತವೆ. ಇನ್ನೂ ಮುಖ್ಯವಾಗಿ ಪೋಷಕರ ದೃಷ್ಟಿ ಮತ್ತು ಅಂದಾಜುಗಳನ್ನು ಮೀರಿ ಮಕ್ಕಳು ಅಧ್ಯಯನ ಮಾಡಬಹುದು. ಅವರ ಸಾಮರ್ಥ್ಯ ಮತ್ತು ಕೌಶಲ್ಯ ಇನ್ನೂ ಬಹಳ ವಿಸ್ತಾರದ್ದಿರಬಹುದು. ಹಾಗಾಗಿ ವಿದ್ಯಾಭ್ಯಾಸದ ವಿಷಯದಲ್ಲಿ ವ್ಯಾಪಕ ಅವಕಾಶವಿರುವಂತಹದನ್ನು ನೋಡಿ ಕೊಂಡು ಸ್ಥಳೀಯ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ಅರಿಯಲು, ಅಧ್ಯಯನ ಮಾಡಲು, ಅನುಭವಗಾಣಲು ವಿಶೇಷವಾದಂತಹ ವ್ಯವಸ್ಥೆಗಳನ್ನು ಮಾಡಬೇಕು.

ಇನ್ನು ವೃತ್ತಿಪರ ಶಿಕ್ಷಣಗಳಿಗಂತೂ ಏನೇನೂ ಮಾನ್ಯತೆ ಇಲ್ಲ. ಅವುಗಳನ್ನು ಪರಿಗಣಿಸಬೇಕೆಂದು ಅವರ ಪಠ್ಯಕ್ರಮದ ಉದ್ದೇಶಗಳಿಲ್ಲದ್ದರೂ ಅದು ಬಹಳ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಏಕೆಂದರೆ ಅದು ಮುಖ್ಯವಾಹಿನಿಗೆ ಪೂರಕವಾಗಿರುವುದು ಎಂಬ ಆಲೋಚನೆ ಶಿಕ್ಷಣ ಸಂಸ್ಥೆಗಳಿಗೂ ಇಲ್ಲ, ಪೋಷಕರಿಗೂ ಇಲ್ಲ. ಪೋಷಕರ ಕಣ್ಣಿಗೆ ಬೀಳುವುದೇ ಬಹಳ ಮುಖ್ಯವಾಗಿ ಎರಡು ಕ್ಷೇತ್ರಗಳು. ಒಂದು ಇಂಜಿನಿಯರಿಂಗ್ ಮತ್ತೊಂದು ಮೆಡಿಕಲ್. ಇವೆರಡನ್ನು ಬಿಟ್ಟು ಇನ್ನೂ ಬಹಳಷ್ಟು ಮಹತ್ವದ ಮತ್ತು ಅತ್ಯಗತ್ಯವಾದಂತಹ ಕ್ಷೇತ್ರಗಳಿವೆ ಎಂಬ ಅರಿವು ಇರದಿರುವುದೇ ಶಿಕ್ಷಣ ವ್ಯವಸ್ಥೆಗೆ ಒಂದು ತೊಡರುಗಾಲಾಗಿದೆ. ಗಣಿತ ಮತ್ತು ವಿಜ್ಞಾನಗಳಿಗೆ ಪೂರಕವಾಗಿಯೂ ಮತ್ತು ಇತರ ವಿಷಯಾಧಾರಿತವಾದ ನಿಜಜೀವನದ ಅನೇಕಾನೇಕ ವಿಷಯಗಳ ಪ್ರಾಯೋಗಿಕ ತಿಳುವಳಿಕೆಗಳ ಅಗತ್ಯತೆಯ ಬಗ್ಗೆ ಸಿಬಿಎಸ್‌ಇ ಏನೇನೂ ಗಮನ ಕೊಟ್ಟಿಲ್ಲ. ಗಣಿತ ಮತ್ತು ವಿಜ್ಞಾನಗಳಂತಹ ಅನ್ವಯ ವಿಷಯಗಳನ್ನು ಕಲಿಸಿದರೂ ಅದು ಪ್ರಾಯೋಗಿಕವಾಗಿ ಅದನ್ನು ರೂಢಿಸುವುದಕ್ಕಿಂತ ಪಠ್ಯ ಕಲಿಕೆಗೇ ಹೆಚ್ಚಿನ ಮಹತ್ವವಾಗಿ ತೋರುತ್ತದೆ. ಇನ್ನು ಜೀವನ ಕೌಶಲ್ಯಗಳನ್ನು ಹೊಂದುವುದರಲ್ಲಿ ಮಗುವು ತೀರಾ ಹಿಂದುಳಿಯುತ್ತದೆ. ನಿಜ, ಒಂದು ಪಠ್ಯಕ್ರಮವನ್ನು ಇಡೀ ದೇಶಕ್ಕೆ ಸಮರ್ಪಕವಾಗಿ ಮತ್ತು ಸಮನಾಗಿ ರೂಪಿಸಲು ಬಹಳ ಕಷ್ಟವಿರುತ್ತದೆ. ಆದರೆ, ಪ್ರಾದೇಶಿಕ ಅಗತ್ಯತೆ ಮತ್ತು ಸಾಂಸ್ಕೃತಿಕ ಮೌಲ್ಯಗಳಿಗೆ ಅನುಗುಣವಾಗಿ ರೂಪಿಸುವ ನಿಟ್ಟಿನಲ್ಲಿ ಸಿಬಿಎಸ್‌ಇ ಕೆಲಸ ಮಾಡಲೇಬೇಕು. ಇಲ್ಲವಾದರೆ ಪೀಳಿಗೆಗಳನ್ನು ಯಾಂತ್ರಿಕ ಕಲಿಕೆಯ ರೊಬೋಟ್‌ಗಳನ್ನಾಗಿ ಮಾಡಿದಂತಾಗುತ್ತದೆ ಅಷ್ಟೇ. ಇರುವ ಸಮಸ್ಯೆಗಳೆಲ್ಲವೂ ಇದ್ದಂತೇ ಮುಂದುವರಿಯುವುದರ ಜೊತೆ ವ್ಯಕ್ತಿಗತವಾಗಿಯಾಗಿಯೂ ಸಾಧಿಸಲಾಗದೇ, ಸಾಮಾಜಿಕವಾಗಿ ಸೇವೆ ಸಲ್ಲಿಸಲಾಗದೆ ಎಡಬಿಡಂಗಿಗಳಾಗುವವರ ಸಂಖ್ಯೆ ಬೃಹತ್ ಪ್ರಮಾಣದಲ್ಲಿ ಬೆಳೆಯುತ್ತಾ ಹೋಗುತ್ತದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top