---

ಹುಲಿಯ ಹೆಜ್ಜೆ

ಎರಡು ಮಿಲಿಯನ್ ವರ್ಷಗಳಿಗೂ ಹಳೆಯದಾದ ಪ್ರಾಣಿಗಳಲ್ಲಿ ಹುಲಿಯೂ ಒಂದು. ಅನಿಮೇಲಿಯಾ ಸಾಮ್ರಾಜ್ಯದ, ಕಾರ್ಡೇಟಾ ವಂಶದ, ಸಸ್ತನಿ ವರ್ಗದ, ಕಾರ್ನಿವೋರಾ ಗಣದ, ಫೆಲಿಡೇ ಕುಟುಂಬದ, ಪ್ಯಾಂಥೇರಾ ಕುಲದ, ಪ್ಯಾಂಥೇರಾ ಟೈಗ್ರಿಸ್ ಪ್ರಭೇದಕ್ಕೆ ಸೇರಿದ ಹುಲಿ 13 ಅಡಿ ಉದ್ದ, 300 ಕೆಜಿಯವರೆಗೆ ತೂಕವನ್ನು ಹೊಂದಿರುತ್ತವೆ. ಹುಲಿಗಳಲ್ಲಿ ಎಂಟು ಪ್ರಕಾರಗಳಿವೆ. ಭಾರತೀಯ ಅಥವಾ ಬಂಗಾಳದ ಹುಲಿಗಳು, ಇಂಡೋ ಚೈನೀಸ್ ಹುಲಿಗಳು, ಸುಮಾತ್ರಾದ ಹುಲಿಗಳು, ಸೈಬೀರಿಯಾದ ಹುಲಿಗಳು, ದಕ್ಷಿಣ ಚೀನಾದ ಹುಲಿಗಳು, ಜಾವಾ ಹುಲಿಗಳು 80ರ ದಶಕದಲ್ಲಿ ನಿರ್ನಾಮವಾಗಿವೆ. ಬಾಲಿ ಹುಲಿಗಳು 40ರ ದಶಕದಲ್ಲಿ ನಾಶವಾಗಿವೆ. ಕಾಸ್ಪಿಯನ್ ಹುಲಿಗಳು 70 ರ ದಶಕದಲ್ಲಿ ವಿನಾಶವಾಗಿವೆ.ವಿಶ್ವದ ಒಟ್ಟು ಹುಲಿಗಳ ಪೈಕಿ ಶೇ.70ರಷ್ಟು ಹುಲಿಗಳು ಭಾರತದಲ್ಲೇ ಇವೆ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಅಂಕಿಅಂಶಗಳು ಉಲ್ಲೇಖಿಸುತ್ತವೆ. 2018ರ ಗಣತಿಯಂತೆ ಹುಲಿಗಳ ಸಂಖ್ಯೆ ಜಗತ್ತಿನಲ್ಲಿ 3,890 ಇದೆ. ಅವುಗಳ ಸಂಖ್ಯೆಯಲ್ಲಿ ಸ್ವಲ್ಪ ಏರಿಕೆಯಾಗಿದೆ. ಹೆಚ್ಚು ಹುಲಿಗಳನ್ನು ಹೊಂದಿರುವ ಭಾರತದಲ್ಲಿ 2,264 ಹುಲಿಗಳಿರುವುದಾಗಿ ತಿಳಿದು ಬಂದಿದೆ. ಅವು 90,000 ಚದರ ಕಿ.ಮೀ. ಪ್ರದೇಶದಲ್ಲಿ ಹರಡಿಕೊಂಡಿವೆ. ಆದರೆ ಕಾಡಿನಲ್ಲಿ ಅವುಗಳಿಗೆ ಆಹಾರಕ್ಕೆ ಬೇಕಾದ ಪ್ರಾಣಿಗಳ ಕೊರತೆಯಿಂದ ಕಾಡಿನ ಪಕ್ಕದ ಊರುಗಳಿಗೆ ಪ್ರವೇಶ ಮಾಡುತ್ತಿವೆ. ಸುಮಾತ್ರಾದಲ್ಲಿ 400; ಥಾಯ್ಲೆಂಡ್ ಪ್ರದೇಶದಲ್ಲಿ 340; ರಶ್ಯಾ, ಚೀನಾಗಳಲ್ಲಿ ಸೈಬೀರಿಯಾದ ದೊಡ್ಡ ಜಾತಿಯ 540 ಹುಲಿ; ಥಾಯ್ಲೆಂಡ್ ಮ್ಯಾನ್ಮಾರ್ ಗಡಿ ಪ್ರದೇಶದಲ್ಲಿ 250 ಹುಲಿಗಳು ಇರುವುದಾಗಿ ತಿಳಿದು ಬಂದಿದೆ. ಭಾರತದಲ್ಲಿ ಒಟ್ಟು 102 ರಾಷ್ಟ್ರೀಯ ಉದ್ಯಾನ, 515 ವನ್ಯಜೀವಿಧಾಮಗಳು ಹಾಗೂ 44 ಮೀಸಲು ಅರಣ್ಯ ಪ್ರದೇಶಗಳಲ್ಲಿ ಹುಲಿಯ ಆವಾಸವಿದೆ.

                       ಬಂಡೀಪುರ ಅಭಯಾರಣ್ಯದ ಹುಲಿ

►ಕರ್ನಾಟಕಕ್ಕೆ ಮೊದಲ ಸ್ಥಾನ

ಬಂಡೀಪುರ, ಭದ್ರಾ, ನಾಗರಹೊಳೆ, ದಾಂಡೇಲಿ-ಅಂಶಿ- ಬಿಳಿಗಿರಿ ರಂಗನಾಥ ಸ್ವಾಮಿ ಟೆಂಪಲ್ ಹುಲಿ ಪ್ರದೇಶ ಗಳಲ್ಲಿ ಸುಮಾರು 300 ಹುಲಿಗಳಿವೆ. 1970 ದಶಕದಿಂದಲೂ ವನ್ಯಜೀವಿಗಳ ಸಂರಕ್ಷಣೆಯ ಬಗ್ಗೆ ವಿಶೇಷವಾದ ಕಾಳಜಿ ಮತ್ತು ಪ್ರಯತ್ನವನ್ನು ಮಾಡಿದುದರಿಂದಾಗಿ ಇಂದಿಗೂ ನಮ್ಮ ದೇಶದಲ್ಲಿ ಮುಖ್ಯವಾಗಿ ಹುಲಿಗಳ ಅಧ್ಯಯನ, ಉಳಿವಿನ ಬಗ್ಗೆ ವಿಶೇಷವಾದ ಆಸಕ್ತಿ ಬೆಳೆದಿದೆ. ಅದರಲ್ಲೂ ನಾಗರಹೊಳೆ ವನ್ಯಜೀವಿ ಸಂರಕ್ಷಣಾ ವಿಭಾಗದವರು ನಡೆಸಿದ ನಿರಂತರ ಪ್ರಯತ್ನದಿಂದಾಗಿ ಇಷ್ಟು ಪ್ರಮಾಣದ ಹುಲಿಗಳ ಸಂರಕ್ಷಣೆ ಸಾಧ್ಯವಾಗಿದೆ. ಈ ಕಾರ್ಯದಲ್ಲಿ ಪ್ರಮುಖವಾಗಿ ಕೆ.ಎಂ.ಚಿಣ್ಣಪ್ಪ, ಎನ್.ಎಸ್.ದೇವರಾಜ್ ಮತ್ತು ಎ.ಟಿ.ಪೂವಯ್ಯನಂಥವರು ಎಲ್ಲ ಪ್ರತಿಕೂಲಗಳನ್ನೆದುರಿಸಿ ಹುಲಿಗಳ ಉಳಿವಿಗೆ ಬೇಕಾದ ಪರಿಸರವನ್ನು ಒದಗಿಸಿಕೊಟ್ಟು ಅವುಗಳನ್ನು ಸಂರಕ್ಷಣೆ ಮಾಡಿದರು. ಇಂದಿರಾ ಗಾಂಧಿಯವರು ಜಾರಿಗೆ ತಂದ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ ಕಾಯ್ದೆಗಳಿಂದಾಗಿ ಅಕ್ರಮ ಬೇಟೆ, ವ್ಯವಸ್ಥಿತ ಮರಗಳ್ಳತನ, ಕಿರು ಅರಣ್ಯಗಳ ಉತ್ಪನ್ನ ಸಂಗ್ರಹ, ನಿರಂತರ ಕಾಡ್ಗಿಚ್ಚು ಮುಂತಾದವು ಬಹುಮಟ್ಟಿಗೆ ನಿಯಂತ್ರಣಕ್ಕೆ ಬಂದವು. ವನ್ಯಜೀವಿಗಳು ಆವಾಸವಿರುವ ಅಭಯಾರಣ್ಯಗಳಿಗೆ ವಿಶೇಷವಾದ ಸವಲತ್ತುಗಳನ್ನು ಒದಗಿಸುವುದರ ಮೂಲಕ ಈ ಕಾರ್ಯ ನಿರಂತರವಾಗಿ ನಡೆಯುತ್ತಾ ಬಂದಿದೆ. ಅದರಲ್ಲೂ ನಾಗರಹೊಳೆ ಅಭಯಾರಣ್ಯದ ಕಾರ್ಯ ವಿಶ್ವಮಾನ್ಯತೆಯನ್ನು ಪಡೆದಿದೆ. ಎಲ್ಲ ಬಗೆಯ ಪ್ರತಿಕೂಲ ವಾತಾವರಣವನ್ನು ಎದುರಿಸಿಯೂ ಹುಲಿಗಳ ಸಂರಕ್ಷಣೆ ಮಾಡಿದ್ದು ಅತ್ಯದ್ಭುತವಾದ ಶ್ಲಾಘನೀಯ ಕಾರ್ಯವೆನಿಸಿದೆ. ಈ ಹಿನ್ನೆಲೆಯಲ್ಲಿ ವನ್ಯಜೀವಿ ಸಂರಕ್ಷಣಾ ವಿಭಾಗದವರ ಕಾರ್ಯದಕ್ಷತೆ, ಕರ್ತವ್ಯನಿಷ್ಠೆ, ತೋರಿದ ಸಾಹಸಗಳು ಮೇಲ್ಪಂಕ್ತಿಯಾದವು.

ಕರ್ನಾಟಕದಲ್ಲಿ ನಾಲ್ಕು ಹುಲಿಧಾಮಗಳಿವೆ. ಅವುಗಳೆಂದರೆ 1973ರಲ್ಲಿ ಸ್ಥಾಪನೆಯಾದ ಬಂಡೀಪುರ ಸುಮಾರು 872.24 ಚ.ಕಿ.ಮೀ. ವಿಸ್ತೀರ್ಣವಿದೆ, 1998ರಲ್ಲಿ ಭದ್ರಾ ಸುಮಾರು 496.16 ಚ.ಕಿ.ಮೀ. ವಿಸ್ತೀರ್ಣವಿದೆ, 2000ರಲ್ಲಿ ನಾಗರಹೊಳೆ ಸುಮಾರು 643.39 ಚ.ಕಿ.ಮೀ. ವಿಸ್ತೀರ್ಣ, 2006 ರಲ್ಲಿ ದಾಂಡೇಲಿ - ಅಂಶಿ ಸುಮಾರು 475 ಚ.ಕಿ.ಮೀ. ವಿಸ್ತೀರ್ಣವಿದೆ. 2011ರಲ್ಲಿ ಬಿ.ಆರ್.ಟಿ. ಹಿಲ್ಸ್ ಸುಮಾರು 539.52 ಚ.ಕಿ.ಮೀ.ವಿಸ್ತೀರ್ಣ. ಎಪ್ಪತ್ತರ ದಶಕದಲ್ಲಿ ವನ್ಯಜೀವಿಗಳನ್ನು ಕಾಣುವುದೇ ಅಪರೂಪವಾಗಿತ್ತು. ಈಗ ದೇಶದಲ್ಲೇ ಪ್ರಥಮ ಸ್ಥಾನವನ್ನು ಪಡೆಯು ವಂತಾದುದು ಮಾತ್ರ ಅಧಿಕಾರಿಗಳ ಸಾಧನೆಯ, ಸಾಹಸದ ಗಾಥೆಯೇ ಸೈ! ಎಷ್ಟೋ ಅಧಿಕಾರಿಗಳು ಈ ಕಾರ್ಯದಲ್ಲಿ ಅಡ್ಡಿ, ಆತಂಕ, ಸಂಚು, ಧಮಕಿ, ತೊಂದರೆ, ಕೊಲೆಯ ಭೀತಿ, ವರ್ಗಾವಣೆ, ಯಾರ್ಯಾರನ್ನೋ ಎದುರು ಹಾಕಿಕೊಳ್ಳುವಂತಹ ದುಸ್ಸಾಹಸವನ್ನು ಮಾಡಿಯೂ ಗೆದ್ದಿದ್ದಾರೆ.

►ಹುಲಿಯ ಸ್ವಾಭಾವಿಕ ಲಕ್ಷಣ

ಒಂದು ಮೈಲಿಗಿಂತ ದೂರಕ್ಕೆ ಹುಲಿಯ ಘರ್ಜನೆ ಕೇಳಿಸುತ್ತದೆ. 10 ರಿಂದ 15 ವರ್ಷಗಳವರೆಗೆ ಬದುಕುವ ಹುಲಿಗಳ ಆಯುಸ್ಸು ಮೃಗಾಲಯದಲ್ಲಿ 16 ರಿಂದ 20 ವರ್ಷಗಳವರೆಗೆ ವಿಸ್ತರಿಸಲ್ಪಡುತ್ತದೆ. ಇದು ಹುಲಿಗಳ ಪ್ರಭೇದಗಳನ್ನು ಅವಲಂಬಿಸಿರುತ್ತದೆ. 15 -25 ವರ್ಷಗಳವರೆಗೂ ಜೀವಿಸುವುದಿದೆ. ಸೈಬೀರಿಯಾದ ಹುಲಿಗಳು ಗಾತ್ರದಲ್ಲಿ ದೊಡ್ಡದಾದರೆ, ಸುಮಾತ್ರಾದ ಹುಲಿಗಳು ಅತೀ ಚಿಕ್ಕವು. ಮುಂಗಾಲಲ್ಲಿ 5 ಬೆರಳುಗಳಿದ್ದರೆ, ಹಿಂಗಾಲಲ್ಲಿ 4 ಬೆರಳುಗಳನ್ನು ಹೊಂದಿರುತ್ತವೆ. ರಾತ್ರಿಯ ಹೊತ್ತಿನಲ್ಲಿ ಹುಲಿಯ ಕಣ್ಣಿನ ದೃಷ್ಟಿ ಮನುಷ್ಯನಿಗಿಂತ ಆರು ಪಟ್ಟು ಅಧಿಕವಾಗಿರುತ್ತದೆ. ಸುಂದರಬನದಲ್ಲಿ ಬೆಸ್ತರು ಮತ್ತು ಇತರ ವಾಸಿಗಳು ಆಗಾಗ ಹುಲಿಗಳ ಬಾಯಿಗೆ ತುತ್ತಾಗುತ್ತರೆ. ತನ್ನ ದೇಹಕ್ಕೆ ನಾರಿನಂಶದ ಅಗತ್ಯವಿದ್ದಾಗ ಮಾತ್ರ ಹುಲಿಗಳು ಸಸ್ಯಾಹಾರಕ್ಕೆ ಮುಂದಾಗುತ್ತವೆ. ಹೆಣ್ಣು ಹುಲಿಗಳು ಗಾತ್ರದಲ್ಲಿ ಗಂಡು ಹುಲಿಗಳಿಗಿಂತ ಚಿಕ್ಕವು. ದೇಹತೂಕವೂ ಕಡಿಮೆ. ಹುಲಿಯ ಭುಜ ಮತ್ತು ಕಾಲುಗಳು ಬಲಿಷ್ಠವಾಗಿರುತ್ತವೆ. ಕಿವಿಯ ಹಿಂಭಾಗದಲ್ಲಿ ದೊಡ್ಡ ಬಿಳಿಮಚ್ಚೆಯಿರುತ್ತದೆ. ಬೆಕ್ಕುಗಳಲ್ಲಿ ಹುಲಿಯ ತೂಕವೇ ಅತೀ ಅಧಿಕ. ಹುಲಿಗಳು ತನ್ನ ಪ್ರಾಂತವನ್ನು ನಿಖರವಾಗಿಸಿಕೊಂಡು ಬದುಕುವ ಒಂಟಿಜೀವಿ. ತನ್ನ ಸರಹದ್ದಿನಲ್ಲಿ ಸಿಗಬಹುದಾದ ಬೇಟೆ ಮತ್ತು ಸಂಗಾತಿಗಳ ಮೇಲೆ ಹುಲಿಗಳ ಸರಹದ್ದು ನಿರ್ಧರಿತವಾಗುತ್ತದೆ. ಹೆಣ್ಣು ಹುಲಿಯ ಪ್ರಾಂತ 20 ಚ.ಕಿ.ಮೀ ಇದ್ದರೆ ಗಂಡು ಹುಲಿಯದ್ದು 60 ರಿಂದ 100 ಚ.ಕಿ.ಮೀ.ವರೆಗೆ ವ್ಯಾಪ್ತಿಯ ವಿಸ್ತಾರವನ್ನು ಹೊಂದಿರುತ್ತದೆ. ಗಂಡು ಹುಲಿಯ ಪ್ರಾಂತವು ಹೆಣ್ಣು ಹುಲಿಗಳ ಸರಹದ್ದನ್ನು ಹೊಂದಿರುತ್ತದೆ. ಹುಲಿಗಳ ನಡುವಿನ ಸಂಬಂಧ ಸಂಕೀರ್ಣವಾದದ್ದು. ತನ್ನ ಸರಹದ್ದಿನ ಮೇಲೆ ನಿಯಂತ್ರಣ ಸಾಧಿಸುವುದರಲ್ಲಾಗಲೀ, ಅತಿಕ್ರಮಣವಾದಾಗ ಪ್ರತಿಕ್ರಿಯಿಸುವುದರಲ್ಲಾಗಲೀ ನಿರ್ದಿಷ್ಟ ನಿಯಮಾವಳಿಗಳು, ನಡಾವಳಿಗಳು ಹುಲಿಗಳಲ್ಲಿರುವುದಿಲ್ಲ. ದೂರವಿದ್ದರೂ ಸಹ ಬೇಟೆಯನ್ನು ಗಂಡು ಮತ್ತು ಹೆಣ್ಣು ಹುಲಿಗಳು ಹಂಚಿಕೊಂಡು ತಿನ್ನುತ್ತವೆ. ಹೆಣ್ಣು ಮರಿಹುಲಿಗಳು ಬೆಳೆದು ಬಲಿಯುವವರೆಗೂ ತಾಯಿಯನ್ನೇ ಆವಾಸದ ಸುತ್ತಮುತ್ತಲಿನಲ್ಲೇ ವಸತಿಯನ್ನು ಹೂಡುತ್ತದೆ. ಆದರೆ ಗಂಡು ಮರಿಹುಲಿಯು ಕೈಕಾಲುಗಳು ಬಲಗೊಂಡಾಕ್ಷಣ ತಾಯಿಯಿಂದ ದೂರಾಗಿ ಪ್ರತ್ಯೇಕ ನೆಲೆಯನ್ನು ಗುರುತಿಸಿಕೊಂಡು ಸ್ವೇಚ್ಛೆಯಾಗಿ ಬದುಕಲು ಮುಂದಾಗುತ್ತದೆ. ಅನಂತರ ತಾನಿದ್ದ ಪ್ರದೇಶದ ಗಂಡು ಹುಲಿಗೆ ಪ್ರತಿಸ್ಪರ್ಧಿಯಾಗಿ ನಿಲ್ಲುತ್ತದೆ. ಆಗಲೇ ಹುಲಿಗಳ ಮಧ್ಯೆ ಕಾಳಗ ಏರ್ಪಡುವುದು. ಕಡಿಮೆ ಬಲವಿರುವ ಹುಲಿಗಳು ಒಂದೋ ಸಾಯಬೇಕು, ಇಲ್ಲ ಪಲಾಯನ ಮಾಡಬೇಕು. ಯೌವ್ವನದಲ್ಲಿರುವ ಹುಲಿಗಳು ಸಾಯುವುದಕ್ಕೆ ಇದೂ ಒಂದು ಬಲುದೊಡ್ಡ ಕಾರಣವೆಂದು ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ. ಪರಸ್ಪರ ಅಸಹನೆ ಹುಟ್ಟಿಕೊಂಡಾಗಲೂ ಗಂಡು ಹುಲಿಗಳ ಮಧ್ಯೆ ಸಂಘರ್ಷಗಳು ತಾರಕಕ್ಕೇರುತ್ತವೆ. ಹೆಣ್ಣು ಹುಲಿಗಳಿಗಿಂತ ಗಂಡು ಹುಲಿಗಳಲ್ಲೇ ಅಸಹನೆ ಹೆಚ್ಚಿರುತ್ತದೆ. ಹೆಣ್ಣು ಹುಲಿಯ ವಿಷಯದಲ್ಲೂ ಸಂಗ್ರಾಮಗಳಾಗುತ್ತವೆ. ಸೋಲನ್ನು ಒಪ್ಪುವ ಹುಲಿಯು ಬೆನ್ನು ಅಡಿಯಾಗಿ ಬಿದ್ದು ಹೊಟ್ಟೆಯ ಕೆಳಭಾಗವನ್ನು ಎದುರಾಳಿಗೆ ತೋರಿಸುವುದು ಶರಣಾಗತಿಯ ಸೂಚನೆಯಾಗಿದೆ.

           ಅತೀ ದೊಡ್ಡ ಗಾತ್ರ ಹೊಂದಿರುವ ಸೈಬೀರಿಯಾದ ಹುಲಿ

►ಬಂಗಾಳದ ಹುಲಿ

ಬಂಗಾಳದ ಹುಲಿಗಳು ಉತ್ತರ ಭಾರತ, ನೇಪಾಳಗಳಲ್ಲಿ ಕಂಡುಬರುತ್ತವೆ. ಚಿನ್ನದ ಮೈಬಣ್ಣ ಹೊಂದಿರುವ ಬಂಗಾಲಿ ಹುಲಿಗಳಿವೆಯೆಂದು ಅಧ್ಯಯನ ಹೇಳುತ್ತದೆ. ಇದನ್ನು ಸುಳ್ಳೆಂದು ಅಲ್ಲಗಳೆಯುವವರಿದ್ದಾರೆ. ಇಂಥ ಹುಲಿಗಳು ಕೇವಲ 30 ಮಾತ್ರ ಇವೆಯೆಂದು ನಂಬಲಾಗಿದೆ. ದಕ್ಷಿಣ ಭಾರತದ ಹುಲಿಗಳಿಗಿಂತ ದೊಡ್ಡ ದೇಹವನ್ನು ಹೊಂದಿರುತ್ತವೆ. ಇವುಗಳ ಸಂಖ್ಯೆ ಸುಮಾರು 2,000 ದಷ್ಟಿವೆ. ಭಾರತದ ಸುರಕ್ಷಿತ ವನ್ಯಜೀವಿಗಳ ಸಾಲಿಗೆ ಇವನ್ನು ಸೇರಿಸಲಾಗಿದೆ. ಭಾರತ, ಬಾಂಗ್ಲಾದೇಶ, ಭೂತಾನ್, ಬರ್ಮಾ, ನೇಪಾಳಗಳಲ್ಲೂ ಇವು ಇವೆ. ಇಂಡೋಚೀನಿ ಹುಲಿಗಳು ಲಾವೋಸ್, ಕಾಂಬೋಡಿಯಾ, ಚೀನಾ, ಬರ್ಮಾ, ಥಾಯ್ಲೆಂಡ್, ವಿಯೆಟ್ನಾಂಗಳಲ್ಲಿವೆ. 1,200 ರಿಂದ 1,800 ರಷ್ಟು ಇವುಗಳ ಸಂಖ್ಯೆ ಇವೆ. ಮಲಯ ಸಂಬಂಧೀ ಹುಲಿಗಳು 600 ರಿಂದ 800ರಷ್ಟಿವೆ. ಮಲಯ ಜಂಬೂದ್ವೀಪದ ದಕ್ಷಿಣ ಭಾಗದಲ್ಲಿವೆ. ಸುಮಾತ್ರಾ ಹುಲಿಗಳು ಇಂಡೋನೇಶ್ಯಾ ಸುಮಾತ್ರಾ ದ್ವೀಪಗಳಲ್ಲಿವೆ. ಸಣ್ಣಗಾತ್ರದ ದೇಹವನ್ನು ಹೊಂದಿರುವ ಇವು ಕಡಿಮೆ ದೇಹತೂಕವನ್ನು ಹೊಂದಿರುತ್ತವೆ. ಸೈಬೀರಿಯಾದ ಹುಲಿಗಳು ಅಮೂರ್ ನದಿ, ಎಸ್ಸೂರಿ ನದಿತೀರಗಳಲ್ಲಿವೆ. ಹುಲಿಗಳಲ್ಲೇ ದೊಡ್ಡ ಗಾತ್ರದ ದೇಹವನ್ನು ಹೊಂದಿರುವ ಸದಾಕಾಲ ತಂಪನೆಯ ಪ್ರದೇಶಗಳಲ್ಲಿರು ವುದರಿಂದ ಇವುಗಳ ತುಪ್ಪಳ ಕೂಡ ಬಲುಮಂದ ವಾಗಿರುತ್ತದೆ.

                                      ತಾಕತ್ತಿಗೆ ಹೆಸರಾದ ಬಂಗಾಳಿ ಹುಲಿ

 ಪ್ರಕೃತಿಯ ಕೇಂದ್ರ ತಾನು, ಈ ಪರಿಸರ ತನ್ನ ಅಧೀನದಲ್ಲಿದೆ ಎಂದು ಭಾವಿಸುವ ಮಾನವನ ಉದ್ಧಟತನದಿಂದಾಗಿ ನಾವಿಂದು ದುಸ್ಥಿತಿಗೆ ತಲುಪಿದ್ದೇವೆ. ಈ ಪರಿಸರದಲ್ಲಿ ಕೇಂದ್ರವೆಂಬುದೇ ಇಲ್ಲ. ಮನುಷ್ಯನನ್ನೂ ಸೇರಿ ಎಲ್ಲವೂ ಅಧೀನವೇ. ನಮ್ಮ ಬದುಕಿನ ವ್ಯಾಪ್ತಿ ಮತ್ತು ವಿಸ್ತಾರ ಹೆಚ್ಚಿದಂತೆ ನಮ್ಮ ಇತಿಮಿತಿಗಳು ಸರಳತೆಯ ಬದುಕನ್ನು ದಾಟಿರುವುದರಿಂದ ನಮ್ಮ ಭೋಗ ಜೀವನಕ್ಕೆ ಹೇತುವಾಗಿ ಈ ಪರಿಸರವನ್ನು ಸ್ವೇಚ್ಛೆಯಿಂದ ಬಳಸುತ್ತಿದ್ದೇವೆ. ಇದೇ ನಮ್ಮ ಅಸ್ತಿತ್ವಕ್ಕೆ ಆಘಾತವನ್ನು ನೀಡುತ್ತಿದೆ. ಕೇವಲ ವನ್ಯಜೀವಿಗಳು ಮಾತ್ರವಲ್ಲ, ಪರಿಸರವನ್ನೇ ಕಲುಷಿತಗೊಳಿಸುತ್ತಾ ನಾವಿಂದು ಎಲ್ಲವನ್ನೂ ನಿರ್ನಾಮಗೊಳಿಸುತ್ತಿದ್ದೇವೆ. ಹಾಗಂತ ಪರಿಸರದ ಉಳಿವಿನ ಪ್ರಜ್ಞೆ ಸಮೂಹದ್ದಾದರೂ ವೈಯಕ್ತಿಕಪ್ರಜ್ಞೆಯೇ ಬಹುಮುಖ್ಯ. ನೆಲವನ್ನೇ ಅಂಟಿಕೊಂಡು ಬದುಕುವ ಜೀವಿಗಳಾದಿಯಾಗಿ ಮನುಷ್ಯನವರೆಗೂ ಎಲ್ಲದರ ಅಸ್ತಿತ್ವವೂ ಪರಿಸರದ ಸಮತೋಲನದ ದೃಷ್ಟಿಯಿಂದ ಅಗತ್ಯವೂ ಆವಶ್ಯವೂ ಆಗಿದೆ. ನಮ್ಮ ಸ್ವಾರ್ಥಕ್ಕೆ ಪರಿಸರವನ್ನೇ ಲೂಟಿ ಮಾಡುತ್ತಾ ಬಂದಿರುವುದರಿಂದ ಏನೇನು ದುರಂತಗಳು ಸಂಭವಿಸುತ್ತಿದೆ ಎಂಬುದನ್ನು ಜಗತ್ತೇ ಅನುಭವಿಸುತ್ತಿದೆ. ಕನ್ನಡ ಸಾಹಿತ್ಯದಲ್ಲಿ ಹುಲಿ, ಸಿಂಹ, ಆನೆಗಳ ಬದುಕನ್ನು ವಿವರಿಸುವ ಕೃತಿಗಳಿವೆ. ರೋಚಕ ಕತೆಗಳಿವೆ. ಆ ರೋಚಕತೆ ಅನುಭವಜನ್ಯವಾದುದು. ನಮ್ಮ ಮುಂದಿನ ತಲೆಮಾರಿಗೆ ಇವುಗಳು ಕಲ್ಪನೆಯ ಪ್ರಪಂಚದಲ್ಲಿ ಉಳಿಯುವಂತಾಗ ಬಾರದೆಂದರೆ ಈಗಿರುವ ವನ್ಯಜೀವಿಗಳನ್ನು ಉಳಿಸಿಕೊಳ್ಳುವ ಬಹುದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಕೆಲವು ಪ್ರಾಣಿಪಕ್ಷಿಗಳ ಹೆಸರು ಕೇಳುವುದಕ್ಕೆ ಮಾತ್ರ ಸಾಧ್ಯವೇ ಹೊರತು ವಿಶ್ವದಲ್ಲೇ ಅವುಗಳ ಅಸ್ತಿತ್ವವಿಲ್ಲ. ಈಗ ಲಭ್ಯವಿರುವ ವನ್ಯಜೀವಿಗಳ ಉಳಿವಿನ ಚಿಂತನೆಯನ್ನು ಇಡೀ ವಿಶ್ವವೇ ಒಂದಾಗಿ ಮಾಡಬೇಕಿದೆ.

             ಅಪರೂಪದ ಚಿನ್ನದ ಮೈಬಣ್ಣವಿರುವ ಬಂಗಾಳಿ ಹುಲಿ

ಹುಲಿಯ ಬೇಟೆ

                  ಬಲಿಗೆ ಹೊಂಚುಹಾಕಿ ಕುಳಿತ ಹುಲಿಯ ತೀಕ್ಷ್ಣ ದೃಷ್ಟಿ

ಪ್ರಕೃತಿಯೊಂದಿಗೆ ಸಹಜವಾಗಿ ಸುಲಭವಾಗಿ ಹೊಂದಾಣಿಕೆ ಮಾಡಿಕೊಂಡು ಬದುಕುವ ಹುಲಿಗಳು ಆಕರ್ಷಕ ರೂಪ, ಬಲ ಮತ್ತು ಸಾಹಸ ಪ್ರವೃತ್ತಿಗಳಿಂದ ಎಂಥವರನ್ನೂ ಆಕರ್ಷಿಸುತ್ತವೆ. ಮಾತ್ರವಲ್ಲ, ಉಳಿದ ಪ್ರಾಣಿಗಳಿಗೆ ಭೀತಿಯನ್ನು ಹುಟ್ಟಿಸುತ್ತವೆ. ಉದ್ದನೆಯ ದೇಹ, ಕಿರಿದಾದ ಕುತ್ತಿಗೆ ಹೊಂದಿರುವ ಕಿತ್ತಳೆ ಅಥವಾ ಹಳದಿ ಬಣ್ಣದ ಹುಲಿಗಳ ಮೇಲೆ ಕಪ್ಪು ಪಟ್ಟೆಗಳಿರುತ್ತವೆ. ನೂರಕ್ಕಿಂತ ಹೆಚ್ಚು ಪಟ್ಟೆಗಳಿರುತ್ತವೆ. ಹುಲಿಗಳ ಪಟ್ಟೆಗಳು ಆಕಾರ ಮತ್ತು ಸಾಂದ್ರತೆಯು ಜಾತಿಯಿಂದ ಜಾತಿಗೆ ಬದಲಾಗುತ್ತವೆ. ವಿನ್ಯಾಸವೂ ಬದಲಾಗುತ್ತದೆ. ಒಂಟಿಯಾಗಿ ಬದುಕುವ ಹುಲಿಗಳು ಮನುಷ್ಯನನ್ನು ಬೇಟೆಯಾಡುವುದು ಕಡಿಮೆ. ಮನುಷ್ಯನೇ ಹುಲಿಯನ್ನು ದುರಾಸೆಗಾಗಿ ಬೇಟೆಯಾಡುತ್ತಾನೆ. ಹುಲಿಗಳು ತಮ್ಮ ಆಹಾರಕ್ಕಾಗಿ ಸಾಂಬಾರ ಜಿಂಕೆ, ಕಾಡುಕೋಣ, ಚೀತಾಲ್ ಜಿಂಕೆ, ಕಾಡುಹಂದಿ, ನೀಲಗಾಯ್ ಇತ್ಯಾದಿ ಪ್ರಾಣಿಗಳನ್ನು ಬೇಟೆಯಾಡುತ್ತವೆ. ಪ್ರಾಣಿಗಳನ್ನು ಬೇಟೆಯಾಡುವ ಸಾಮರ್ಥ್ಯವನ್ನು ಕಳೆದುಕೊಂಡಾಗ ಮಾತ್ರ ಹುಲಿಗಳು ನರಭಕ್ಷಕವಾಗುತ್ತವೆ. ಉತ್ತಮವಾಗಿ ಈಜುವ ಸಾಮರ್ಥ್ಯವನ್ನು ಪ್ರಾಕೃತಿಕವಾಗೇ ಪಡೆದಿರುವ ಹುಲಿಗಳು ನೀರೊಳಗಿರುವ ಚಿರತೆ, ಕರಡಿ, ಹೆಬ್ಬಾವು, ಮೊಸಳೆಗಳನ್ನು ಬೇಟೆಯಾಡುತ್ತವೆ. 10 ಮೀಟರ್‌ವರೆಗೆ ಜಿಗಿಯುವ ಹುಲಿಗಳು ಹಿಡಿಯುವ 20 ಬೇಟೆಗಳಲ್ಲಿ ಒಂದು ಮಾತ್ರ ಯಶಸ್ವಿಯಾಗುತ್ತದೆ. ಮನುಷ್ಯನ ಭಯ ಹುಲಿಗಳಿಗೆ ಇಲ್ಲವಾದರೆ ಅದು ಅತ್ಯಂತ ಭಯಾನಕವೇ. ಚಂಪಾವತ್ ಎಂಬ ಹುಲಿ ಜಿಮ್ ಕಾರ್ಬೆಟ್ ಎಂಬುವವನಿಂದ ಕೊಲ್ಲಲ್ಪಡುವವರೆಗೆ ಸುಮಾರು 430 ನರಬಲಿ ತೆಗೆದುಕೊಂಡಿದೆ. ಸಾಮಾನ್ಯವಾಗಿ ಹುಲಿಗಳು ರಾತ್ರಿಯ ಹೊತ್ತಿನಲ್ಲಿ ಬೇಟೆಯಾಡುತ್ತವೆ. ತನ್ನ ಬೇಟೆಯನ್ನು ಹಿಡಿದಾಕ್ಷಣ ನೆಲಕ್ಕೆ ಬೀಳಿಸಿ ಬೇಟೆಯನ್ನು ವಶಪಡಿಸಿಕೊಳ್ಳುತ್ತದೆ. ಸ್ವಾಮ್ಯವನ್ನು ಸಾಧಿಸುತ್ತದೆ. ದೊಡ್ಡ ಗಾತ್ರದ ಪ್ರಾಣಿಗಳನ್ನು ಬೇಟೆಯಾಡುವಾಗ ತನ್ನ ಮುಂಗಾಲಿನಿಂದ ಗಟ್ಟಿಯಾಗಿ ಹಿಡಿದು ಕುತ್ತಿಗೆಯನ್ನು ತನ್ನ ಹಲ್ಲುಗಳಿಂದ ಕಚ್ಚಿ ಹಿಡಿಯುತ್ತದೆ. ಉಸಿರುಗಟ್ಟಿ ಪ್ರಾಣ ಹೋಗುವವರೆಗೂ ತನ್ನ ಬೇಟೆಯನ್ನು ಹುಲಿಯು ಬಿಡುವುದಿಲ್ಲ. ಈ ವಿಧಾನದಿಂದಲೇ ತನಗಿಂತ ದೊಡ್ಡ ಪ್ರಾಣಿಯನ್ನು ಹುಲಿ ಹಿಡಿಯುವುದು. ಸಣ್ಣಪ್ರಾಣಿಗಳನ್ನು ಬೇಟೆಯಾಡುವಾಗ ಅದರ ಬೆನ್ನುಹುರಿ, ಶ್ವಾಸನಾಳ ಮತ್ತು ಮುಖ್ಯ ರಕ್ತನಾಳಗಳನ್ನು ತನ್ನ ಹಲ್ಲುಗಳಿಂದ ಛೇದಿಸುವುದರ ಮೂಲಕ ಕೊಲ್ಲುತ್ತದೆ. ದೊಡ್ಡ ಜಿಗಿತಕ್ಕೆ ಹೆಸರಾದ ಹುಲಿ ಭಾರೀ ಗಾತ್ರದ ದೇಹತೂಕವನ್ನು ಹೊಂದಿದ್ದರೂ ಗಂಟೆಗೆ 50 ರಿಂದ 65 ಕಿಮೀವರೆಗೂ ಓಟದ ವೇಗದೊಂದಿಗೆ ಗಮ್ಯವನ್ನು ತಲುಪುತ್ತದೆ. ಆದರೆ ಇಂಥ ವೇಗದ ಓಟ ಬಹುದೂರದ್ದಾಗಿರುವುದಿಲ್ಲ. ಅರೆಗಳಿಗೆಯಲ್ಲಿ ತನ್ನ ಬಲಿಯನ್ನು ಆಹುತಿ ತೆಗೆದುಕೊಳ್ಳುತ್ತದೆ. ಹುಲಿಯು ತನ್ನ ಎತ್ತರದ ಎರಡರಷ್ಟು ಎತ್ತರಕ್ಕೆ ಜಿಗಿಯುವ ಸಾಮರ್ಥ್ಯವನ್ನು ಹೊಂದಿದೆ.

ಹುಲಿಗಳ ವಾಸಸ್ಥಾನ

ಹುಲಿಗಳ ವಾಸದ ನೆಲೆಯು ಮೂರು ಮುಖ್ಯ ಲಕ್ಷಣಗಳನ್ನು ಹೊಂದಿರಬೇಕು ಅಥವಾ ಹೊಂದಿರುತ್ತವೆ:

1. ದಟ್ಟ ಕಾಡಿನಿಂದಾಗುವ ಪ್ರಾಕೃತಿಕ ನೆರಳು 2. ಕೊರತೆಯಿಲ್ಲದ ನೀರಿನಾಶ್ರಯ 3. ಧಾರಾಳವಾಗಿ ಒದಗುವ ಆಹಾರದ ಪ್ರಾಣಿಗಳು. ಬಂಗಾಳದ ಹುಲಿಗಳು ಎಲ್ಲಾ ಪ್ರಕಾರದ ಕಾಡುಗಳಲ್ಲೂ ಹೊಂದಾಣಿಕೆಯನ್ನು ಕಂಡುಕೊಂಡು ಬದುಕಬಲ್ಲವು. ದಟ್ಟ ಸಸ್ಯರಾಶಿಯನ್ನು ಹುಲಿಗಳು ಬಯಸುತ್ತವೆ. ಒಂದು ಬಾರಿಗೆ 4 ಮೈಲಿಗಳಷ್ಟು ದೂರ ಈಜಬಲ್ಲಷ್ಟು ಸಾಮರ್ಥ್ಯವನ್ನು ಹೊಂದಿರುವ ಹುಲಿಗಳು ನೀರಿನಲ್ಲೇ ತನ್ನ ಬೇಟೆಯನ್ನು ಕೊಂಡೊಯ್ಯಬಲ್ಲವು.

ಹುಲಿಯು ತನ್ನ ಎತ್ತರದ ಎರಡರಷ್ಟು ಎತ್ತರಕ್ಕೆ ಜಿಗಿಯಬಲ್ಲದು

ಸಂತಾನೋತ್ಪತ್ತಿ

ವರ್ಷದ ಯಾವ ಸಮಯ ಸಂದರ್ಭಗಳಲ್ಲೂ ಹುಲಿಗಳಲ್ಲಿ ಸಂತಾನೋತ್ಪತ್ತಿ ನಡೆಯುವುದಾದರೂ ಹೆಣ್ಣುಗಂಡುಗಳ ಸಮಾಗಮವೆಂಬುದು ನವೆಂಬರ್‌ನಿಂದ ಎಪ್ರಿಲ್‌ವರೆಗೆ ಆಗುತ್ತದೆ. ಗರ್ಭಧಾರಣೆಯ ಅವಧಿ 16 ತಿಂಗಳುಗಳು. ಒಮ್ಮೆಗೆ 3-4 ಮರಿಗಳಿಗೆ ಜನ್ಮನೀಡುವ ಸಾಮರ್ಥ್ಯ ಹೆಣ್ಣುಹುಲಿಗಳಿಗಿವೆ. ಆಗತಾನೇ ಹುಟ್ಟಿದ ಹುಲಿಯು ಒಂದು ಕೆಜಿಯ ತೂಕದ್ದಾಗಿದ್ದು ಕುರುಡಾಗಿರುತ್ತದೆ. ತಾಯಿಯೇ ಪಾಲನೆ ಪೋಷಣೆ ಮಾಡುತ್ತದೆ. ಕೊರಕಲು ಬಂಡೆಗಳಲ್ಲಿ, ದಟ್ಟಪೊದೆಗಳಲ್ಲಿ ಹುದುಗಿಸಿಟ್ಟು ಮರಿಗಳನ್ನು ಸಾಕುತ್ತದೆ. ಗಂಡು ಹುಲಿಯನ್ನು ತನ್ನ ಮರಿಗಳ ಬಳಿ ಸುಳಿದಾಡಲು ಹೆಣ್ಣುಹುಲಿಗಳು ಬಿಡುವುದಿಲ್ಲ. ಹುಲಿಗಳಲ್ಲಿ ಶಿಶುಮರಣದ ಸಂಭವನೀಯತೆ ಅಧಿಕವಾಗಿರುವುದರಿಂದ ಹೆಚ್ಚಿನ ಮರಿಗಳು ಎರಡು ವರ್ಷಗಳೊಳಗೆ ಸಾಯುತ್ತವೆ. 8 ವಾರಗಳ ಆನಂತರ ತಾಯಿಯನ್ನು ಹಿಂಬಾಲಿಸಿಕೊಂಡು ಮರಿಹುಲಿ ಮನೆಯ ಸುತ್ತಮುತ್ತ ಓಡಾಡಲಾರಂಭಿಸುತ್ತದೆ. 18 ತಿಂಗಳೊಳಗೆ ಹುಲಿ ಸ್ವಾವಲಂಬಯಾಗುತ್ತದೆ. ಲೈಂಗಿಕ ಪ್ರೌಢಾವಸ್ಥೆಗೆ ಬರಲು ಹೆಣ್ಣುಹುಲಿಗೆ 3 ರಿಂದ 4 ವರ್ಷಗಳು ಬೇಕಾದರೆ, ಗಂಡು ಹುಲಿಗೆ 4 ರಿಂದ 5 ವರ್ಷಗಳೇ ಬೇಕು. ಬಂಧನದಲ್ಲೂ ಹುಲಿಗಳು ಸಂತಾನೋತ್ಪತ್ತಿಯನ್ನು ಮಾಡಬಲ್ಲವು.

   

 

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top