ಬಿಸಿಲಿಗೆ ಬೆದರದ ಬೇವು | Vartha Bharati- ವಾರ್ತಾ ಭಾರತಿ

---

ಬಿಸಿಲಿಗೆ ಬೆದರದ ಬೇವು

ಗಂಡನ ಮನೆಯಲ್ಲಿ ನೋವುಂಡು ನಲುಗುವ ಹೆಣ್ಣು ಮಗಳು ತಂದೆ ತಾಯಿಯನ್ನು ಸ್ಮರಣೆ ಮಾಡಿಕೊಂಡು ತನಗೆ ಬಂದ ಸಂಕಷ್ಟಗಳೆಲ್ಲವನ್ನೂ ಮರೆಯುವ ಜಾಣ್ಮೆಯನ್ನು ಕಾಣುತ್ತೇವೆ. ಹಡೆದವ್ವ ನೀ ತಂಪ ನನ್ನ ತವರಿಗೆ ಎಂದು ಹೇಳುವ ಭಾವದಲ್ಲಿ ಹಡೆದವ್ವ ತವರು ಮನೆಯಲ್ಲಿದ್ದರೆ ಸಾಕು ಆ ಮನೆಯಲ್ಲಿ ಯಾವುದೇ ಕಷ್ಟಗಳಿರುವುದಿಲ್ಲ. ಯಾವಾಗಲೂ ತವರು ಮನೆಯಲ್ಲಿ ಸಂತೃಪ್ತತೆ ಇರುತ್ತದೆಂಬ ನಂಬಿಕೆ ಅವಳಲ್ಲಿ ಮನೆ ಮಾಡಿರುತ್ತದೆ. ಹಡೆದವ್ವ ನೀಡುವ ಸುಖಕರ ಅನುಭವ ಕಾಶೀ ಯಾತ್ರೆ ಮಾಡಿದರೂ ಸಿಗುವುದಿಲ್ಲ.

ಬ್ಯಾಸಿಗೆ ದಿವಸಕ್ಕ ಬೇವಿನ ಗಿಡ ತಂಪ

ಭೀಮಾರತಿಯೆಂಬ ಹೊಳಿ ತಂಪ

ಹಡೆದವ್ವ ನೀ ತಂಪ ನನ್ನ ತವರಿಗೆ ॥

ಎಂಬ ಮೂರೇ ಮೂರು ಸಾಲಿನ ಈ ಜಾನಪದ ಸಾಹಿತ್ಯ ಅದೆಷ್ಟು ಅರ್ಥವನ್ನು ತನ್ನೊಡಲೊಳಗೆ ಗರ್ಭೀಕರಿಸಿಕೊಂಡಿದೆ. ಜನಪದ ಸಾಹಿತ್ಯವೂ ಆಕಾಶದಷ್ಟು ವಿಶಾಲ, ಸಾಗರದಷ್ಟು ಆಳವಾದ ಅವ್ಯಕ್ತ ಅರ್ಥವನ್ನು ಜನ ಸಾಮಾನ್ಯರಿಗೆ ಸುಲಭವಾಗಿ ಅರ್ಥೈಸುತ್ತದೆ. ಇಡೀ ಜಗತ್ತಿನ ಸಾಹಿತ್ಯದ ಮೂಲವನ್ನೆಲ್ಲ ಜನಪದ ಸಾಹಿತ್ಯದಲ್ಲಿ ಕಾಣಬಹುದು. ಅದಕ್ಕೆ ಬಿ.ಎಂ. ಶ್ರೆ ಅವರು ಜನಪದ ಸಾಹಿತ್ಯವನ್ನು ‘ಜನವಾಣಿ ಬೇರು; ಕವಿವಾಣಿ ಹೂವು’ ಎಂದು ಬಣ್ಣಿಸಿದ್ದಾರೆ.

ಇಂದಿನ ದಿನದಲ್ಲಿ ನವ್ಯ ನವೋತ್ತರ ಕಾವ್ಯಗಳ ಆರ್ಭಟಗಳ ಮಧ್ಯದಲ್ಲಿ ಜಾನಪದ ಕಾವ್ಯಗಳ ಸೊಗಡು ಮರೆಯಾಗುತ್ತ ಹೊರಟಿರುವುದು ದುರಂತವಾಗಿದೆ. ಆದರೂ ಜನಪದ ಹುಟ್ಟಿದ್ದೇ ಹಳ್ಳಿಗಳಲ್ಲಿ. ಹಾಗಾಗಿ ಅದರ ಐಸಿರಿ ಹೆಚ್ಚಾಗಿ ಹಳ್ಳಿಗಳಲ್ಲಿ ನೋಡಲು ಸಿಗುತ್ತಿದೆ ವಿನಃ ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಕಾಣಲು ಸಾಧ್ಯವಿಲ್ಲ. ಹಳ್ಳಿಗರ ಜನಜೀವನ ಪ್ರಾರಂಭ ವಾಗುವುದೇ ಜನಪದ ಸೊಗಡಿನ ಹಾಡುಗಳಿಂದ. ಹಳ್ಳಿ ಜನರಲ್ಲಿ ಅಕ್ಷರಜ್ಞಾನ ಇಲ್ಲದಿದ್ದರೂ ಜೀವನದ ಅನುಭವದೊಳಗೆ ಜನಪದ ಲಾಲಿತ್ಯವನ್ನು ಪದಕಟ್ಟಿ ಹಾಡುವ ಕಲೆ ಕರಗತವಾಗಿರುತ್ತದೆ.

ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ
ಎಳ್ಳು ಜೀರಿಗೆ ಬೆಳಿಯೋಳ  ಭೂಮಿತಾಯಿ
ಎದ್ದೊಂದು ಗಳಿಗೆ ನೆನೆದೇನು ॥

ಎಂದು ಹೇಳುತ್ತ ಭೂಮಿತಾಯಿಯನ್ನು ನೆನೆಯುತ್ತಲೆ ದಿನ ನಿತ್ಯದ ಬದುಕಿನ ಬಂಡಿ ಎಳೆಯಲು ಪ್ರಾರಂಭಿಸುತ್ತಾರೆ. ಅನ್ನ ನೀಡುವ ಭೂಮಿ ಯಲ್ಲಿ ದೈವವನ್ನು ಕಾಣುತ್ತಾ

ಅನ್ನ ದೇವರ ಮುಂದೆ  ಇನ್ನು ದೇವರು ಉಂಟೆ 

ಅನ್ನವಿರುವನಕ ಪ್ರಾಣವು ಜಗದೊಳಗೆ 

ಅನ್ನವೇ ದೈವ-ಸರ್ವಜ್ಞ

ಎಂಬಂತೆ ಅನ್ನ ಕೊಡುವ ಭೂಮಿತಾಯಿಗೆ ಕೃತಾರ್ಥ ಭಾವದಿಂದ ನಮನ ಸಲ್ಲಿಸುವ ಸಂಸ್ಕೃತಿ ಜನಪದರ ಜೀವಾಳವಾಗಿದೆ. ದೈನಂದಿನ ಪ್ರತಿಯೊಂದು ಕೆಲಸಗಳಿಗೆ ಜಾನಪದ ಸಾಹಿತ್ಯದ ರೂಪ ಕೊಟ್ಟು ಎಷ್ಟೊಂದು ಅರ್ಥಪೂರ್ಣವಾದ ಹಾಡು ಕಟ್ಟಿರುತ್ತಾರೆಂದರೆ, ಅದನ್ನು ಕೇಳಿದರೆ ಮೈಮನ ಒಂದು ಕ್ಷಣ ರೋಮಾಂಚನವಾಗುತ್ತದೆ.

ಏಳೇಳ ಹೊತ್ತ ಹೊಡ ಉರಳಿ ಬಂತ,

ಕಸ ಎತ್ತಿ ಹೊರಗ ಹಾಕ.

ದೊಡ್ಡೆಮ್ಮಿ ಎಲ್ಲಿ ಹೋಗೈತಿ ನೋಡ,

ಕರ ಕಟ್ಟ ಹಿತ್ತಲಾಗ

ಇದೊಂದು ರೈತಾಪಿ ಕುಟುಂಬದಲ್ಲಿ ನಿತ್ಯ ನಡೆಯುವ ಕಾಯಕವಾ ಗಿದ್ದು, ಅದನ್ನು ಕಾವ್ಯದ ರೂಪದಲ್ಲಿ ಕಟ್ಟಿದ ಜನಪದ ಸಾಹಿತ್ಯ ಎಷ್ಟೊಂದು ಸುಂದರ ಮತ್ತು ಅನುಕರಣೀಯವಾಗಿದೆ.

ಜಾನಪದ ಗೀತೆಗಳು ಆಯಾ ಪ್ರದೇಶದ ಜನರ ದೈನಂದಿನ ಚಟುವಟಿಕೆ ಗಳನ್ನು, ಕೌಟುಂಬಿಕ ಜೀವನವನ್ನು, ಸಂಬಂಧಗಳನ್ನು, ಧಾರ್ಮಿಕ ಆಚರಣೆಗಳನ್ನು, ಅನುಭವ ಹಾಗೂ ಅನುಭಾವಗಳನ್ನು ನಮ್ಮ ಮುಂದೆ ತೆರೆದಿಡುತ್ತವೆ. ಜೀವನದ ಸಂತೃಪ್ತತೆಯನ್ನು ಅರಸುತ್ತ, ಬಳಲಿದ ದೇಹಕ್ಕೆ ಮುದ ನೀಡುವ ಸಂಗತಿಗಳನ್ನು ಅನುಭವಿಸಿಕೊಂಡು ಕಟ್ಟಿದ ಹಲವಾರುಜಾನಪದ ಗೀತೆಗಳಿವೆ. ಅವುಗಳನ್ನು ಸೃಷ್ಟಿಸಿದವರು ಯಾರೆಂದು ಹೇಳು ವುದಕ್ಕೆ ಸಾಧ್ಯವಿಲ್ಲ. ಇವು ಹಳ್ಳಿಯು ಸಾಮಾನ್ಯ ಜನರ ನಡುವೆ ಹುಟ್ಟಿ ಬಾಯಿಂದ ಬಾಯಿಗೆ ಹರಿದು ಬಂದಿರುವ ಸಿರಿನುಡಿ ಎನ್ನಬಹುದು. ಇಂತಹ ಹಲವು ಜಾನಪದ ಸಿರಿ ನುಡಿಗಳಲ್ಲಿ ಬಹುಶಃ ಬೇಸಿಗೆ ದಿನಮಾನ ದಲ್ಲಿ ಎಲ್ಲರೂ ನೆನಪಿಸಿಕೊಳ್ಳುವಂತಹ ಜಾನಪದ ಗೀತೆ

ಬ್ಯಾಸಿಗೆ ದಿವಸಕ್ಕ ಬೇವಿನ ಗಿಡ ತಂಪ

ಭೀಮಾರತಿಯೆಂಬ ಹೊಳಿ ತಂಪ  ಹಡೆದವ್ವ

ನೀ ತಂಪ ನನ್ನ ತವರಿಗೆ ॥

ಭೀಮಾರತಿ ಹೊಳಿ ತಂಪ ಎಂಬುದನ್ನು ಉಲ್ಲೇಖಿಸಿ ಹೇಳುವು ದಾದರೆ ಭಾರತೀಯರಿಗೆ ನದಿ ಬರೀ ಹರಿಯುವ ನೀರು ಮಾತ್ರವಲ್ಲ. ಆಕೆ ದೇವತೆ. ಹೀಗಾಗಿ ವೇದ ವ್ಯಾಸರು ನದಿಗಳನ್ನು ವಿಶ್ವ ಮಾತರಃ ಎಂದಿದ್ದಾರೆ. ಋಗ್ವೇದದಲ್ಲಿ ನದಿಗಳನ್ನು ಆಪೋ ದೇವತಾ ಎಂದು ಕರೆದು ಗೌರವಿಸಿದ್ದಾರೆ. ಅದು ಪಾವನ ತೀರ್ಥ. ಮೈಮನ ಶುದ್ಧ ಗೊಳಿಸುವ ಮೂಲಕ ಗಂಗಾ ಸ್ನಾನಂ ತುಂಗಾ ಪಾನಂ ಎಂಬ ಮಾತು ಜನಜನಿತವಾಗಿನದಿಗಳ ಮಹತ್ವವನ್ನು ಸಾರಿ ಸಾರಿ ಹೇಳುತ್ತದೆ. ನದಿ ಬಯಲು ಪ್ರದೇಶ ವೆಲ್ಲ ಸಮೃದ್ಧಿಯಿಂದ ಕೂಡಿದ್ದು ಪರಿಸರದ ರಮಣೀಯತೆ ಯನ್ನು ಸವಿಯುವ ಸೌಭಾಗ್ಯವನ್ನು ಕಲ್ಪಿಸುತ್ತದೆ. ಉಗಮದಿಂದ ಸಾಗರವನ್ನು ಸೇರುವವರೆಗೂ ನದಿಗಳು, ನದಿ ಪಾತ್ರದ ಜನ ಜಾನುವಾರುಗಳಿಗೆ ಬಹು ಉಪಕಾರಿಯಾಗಿವೆ. ಬಯಲು ಸೀಮೆಯ ನೆಲಕ್ಕೂ ನದಿ ಪಾತ್ರದ ನೆಲಕ್ಕೂ ಹೋಲಿಕೆ ಮಾಡಿದಾಗ ಸಂತೃಪ್ತಿಯಿಂದ ಬದುಕು ಕಟ್ಟಿಕೊಂಡು ಜೀವನ ತಂಪಾಗಿಸಿ ಕೊಂಡವರೆಂದರೆ ಯಾರು ಎಂದು ಪ್ರಶ್ನಿಸಿಕೊಂ ಡಾಗ ಸುಲಭವಾಗಿ ಹೊಳೆಸಾಲಿನ ಮಂದಿ ಎಂದು ತಿಳಿಯುತ್ತದೆ. ವರ್ಷ ದುದ್ದಕ್ಕೂ ರೈತಾಪಿ ಚಟುವಟಿಕೆಗಳೊಂದಿಗೆ ಮೀನುಗಾರಿಕೆ, ಪಶು ಸಂಗೋಪಣೆ, ಹೈನುಗಾರಿಕೆ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಹೀಗಾಗಿ ಜನಪದರು ಭೀಮಾರತಿ ಹೊಳಿ ತಂಪು ಎಂದು ಹೇಳುವ ಮೂಲಕ ನದಿಗಳ ಪಾವಿತ್ರವನ್ನು ಬಣ್ಣಿಸಿದ್ದಾರೆ. ಎಲ್ಲ ಕಲ್ಮಶಗಳನ್ನು ತನ್ನೊಡಲಾಳದಲ್ಲಿಟ್ಟುಕೊಂಡು, ಇಲ್ಲವೆ ತನ್ನೊಡನೆ ಎತ್ತಿಕೊಂಡು ಹರಿಯುವ ನದಿಗಳು ನಿರಂತರತೆಯ ಸಂಕೇತವಾಗಿದೆ. ಮಾನವನ ಬದುಕು ನದಿಗಳಂತೆ ಚಲನಶೀಲವಾಗಿರಬೇಕು, ನೋವು ನಲಿವುಗಳನ್ನು ಸಮಚಿತ್ತದಿಂದ ಸ್ವೀಕರಿಸಿ ನೋವನ್ನು ಕಲ್ಮಶದಂತೆ ತಳದಲ್ಲಿಟ್ಟುಕೊಂಡು, ಶುದ್ಧತೆಯ ನೀರಿನ ನಗುವನ್ನು ತೋರುತ್ತ ಸಮಾಜಕ್ಕೆ ಉಪಕಾರಿಯಾಗಬೇಕು. ಪರೋಪಕಾರಿಯಾಗಿ ಹರಿಯುವ ನದಿಗಳ ಗುಣವನ್ನು ಮೈಗೂಡಿಸಿಕೊಂಡು ಅದರ ತಂಪಿನಲ್ಲಿ ಜೀವನ ಕಂಪನ್ನು ಸೂಸುತ್ತ ಸಂತೃಪ್ತಿಯನ್ನು ಕಾಣಬೇಕು. ಉಪಕಾರಿಯಾದ ನದಿಗಳಿಗೆ ಅಪಕಾರ ಮಾಡದೆ ನದಿಗಳ ಸಂರಕ್ಷಣೆಯನ್ನು ಮಾಡುವ ಜವಾಬ್ದಾರಿಯನ್ನು ಜನಪದರು ಎಚ್ಚರಿಸಿದ್ದಾರೆ. ಅಂತೆಯೇ ಪರೋಪಕಾರಾಯ ಫಲಂತಿ ವೃಕ್ಷಃ  ಪರೋಪಕಾರಾಯ ವಹಂತಿ ನದ್ಯಃ ಪರೋಪಕಾರಾಯ ದುಹಂತಿ ಗಾವಹಃ ಪರೋಪಕಾ ರಾಥರ್ಂ ಮಿದಂ ಶರೀರಂ ॥

ಇನ್ನು ಕೊನೆಯ ಸಾಲಿನಲ್ಲಿನಲ್ಲಿರುವ ಹಡೆದವ್ವ ನೀ ತಂಪ ನನ್ನ ತವರಿಗೆ ಎಂಬುದನ್ನು ಉಲ್ಲೇಖಿಸಿ ಹೇಳುವುದಾದರೆ, ಬಹುಶಃ ಗಂಡನ ಮನೆಯಲ್ಲಿ ಬಾಳುವ ಹೆಣ್ಣು ಮಗಳು ತನ್ನ ತವರನ್ನು ನೆನಪಿಸಿಕೊಂಡು ಹೇಳಿದ್ದಾಳೆಂದು ಸ್ಪಷ್ಟವಾಗಿ ಕಾಣುತ್ತದೆ. ಹೆಣ್ಣು ಮಕ್ಕಳು ತವರನ್ನು ನೆನಪಿಸಿ ಕೊಳ್ಳದ ದಿನಗಳೇ ಇರುವುದಿಲ್ಲ. ಗಂಡನ ಮನೆಯಲ್ಲಿ ಎಷ್ಟೇ ಐಶ್ವರ್ಯ ವಿದ್ದರೂ ತವರು ಮನೆಯಲ್ಲಿ ಕಳೆದ ಕ್ಷಣಗಳನ್ನು ನೆನಪಿಸಿಕೊಳ್ಳುತ್ತ, ತವರಿನ ಸಿರಿಯನ್ನು ಕೊಂಡಾಡುತ್ತ, ತವರನ್ನು ಹರಸಿ ಹಾರೈಸುವ ಅದೆಷ್ಟು ಜನಪದ ಹಾಡುಗಳು ನಮ್ಮ ಕಣ್ಮುಂದಿವೆ.

ಹಾಲುಂಡ ತವರಿಗೆ ಏನೆಂದು ಹಾಡಲಿ

ಹೊಳೆ ದಂಡಿಲಿರುವ ಕರಕೀಯ ಕುಡಿಯಂಗ

ಹಬ್ಬಲೇ ಅವರ ರಸಬಳ್ಳಿ॥

ಅಂತ ತನ್ನ ತವರಿನ ಕೀರ್ತಿ ಬೆಳೆಯಲಿ ಎಂದು ಹಾರೈಸುತ್ತಾಳೆ. ತನ್ನ ಗಂಡನ ಮನೆಯಲ್ಲಿ ಕಷ್ಟಗಳನ್ನು ಅನುಭವಿಸುವಾಗ ತಂದೆ ತಾಯಿ ಯನ್ನು ನೆನಪಿಸಿಕೊಂಡು

ತಂದಿಯ ನೆನೆದರ ತಂಗಳ ಬಿಸಿಯಾಯ್ತು

ಗಂಗಾದೇವಿ ನನ್ನ ಹಡದವ್ವನ ನೆನೆದರೆ

ಮಾಸಿದ ತಲೆಯು ಮಡಿಯಾಯ್ತು ॥

ಎಂದು ಹೇಳುವ ಮೂಲಕ ಗಂಡನ ಮನೆಯಲ್ಲಿ ನೋವುಂಡು ನಲುಗುವ ಹೆಣ್ಣು ಮಗಳು ತಂದೆ ತಾಯಿಯನ್ನು ಸ್ಮರಣೆ ಮಾಡಿಕೊಂಡು ತನಗೆ ಬಂದ ಸಂಕಷ್ಟಗಳೆಲ್ಲವೂ ಮರೆಯುವ ಜಾಣ್ಮೆಯನ್ನು ಕಾಣುತ್ತೇವೆ. ಹಡೆದವ್ವ ನೀ ತಂಪ ನನ್ನ ತವರಿಗೆ ಎಂದು ಹೇಳುವ ಭಾವದಲ್ಲಿ ಹಡೆದವ್ವ ತವರು ಮನೆಯಲ್ಲಿದ್ದರೆ ಸಾಕು ಆ ಮನೆಯಲ್ಲಿ ಯಾವುದೇ ಕಷ್ಟಗಳಿರುವುದಿಲ್ಲ. ಯಾವಾಗಲೂ ತವರು ಮನೆಯಲ್ಲಿ ಸಂತೃಪ್ತತೆ ಇರುತ್ತದೆಂಬ ನಂಬಿಕೆ ಅವಳಲ್ಲಿ ಮನೆ ಮಾಡಿರುತ್ತದೆ. ಹಡೆದವ್ವ ನೀಡುವ ಸುಖಕರ ಅನುಭವ ಕಾಶೀ ಯಾತ್ರೆ ಮಾಡಿದರೂ ಸಿಗುವುದಿಲ್ಲ ವೆಂದು ಹೇಳುತ್ತ

ಕಾಶೀಗೆ ಹೋಗಲಾಕ ಎಸೊಂದು ದಿನ ಬೇಕ

ತಾಸು ಹೊತ್ತಿನ ಹಾದಿ ತವರೂರ ಮನೆಯಾಗೆ 

ಕುಂತಾಳೆ ಕಾಶಿ ಹಡೆದವ್ವ ॥

ಎಂದು ಗರತಿಯು ತವರು ಮನೆಗೆ ಹೋಗುವ ಅನುಭವ ಕಾಶಿ ಯಾತ್ರೆಗಿಂತ ಪುಣ್ಯದ್ದು ಎಂದು ಹೇಳಿಕೊಳ್ಳುತ್ತಾಳೆ. ಅಂದರೆ ಪ್ರಪಂಚ ದಲ್ಲಿ ಬೆಲೆ ಕಟ್ಟಲಾಗದ ವಸ್ತು ಎಂದರೆ ಅದು ತಾಯಿ. ತಾಯಿಗೆ ಸರಿಸಾಟಿಯಾಗಿ ನಿಲ್ಲಬಲ್ಲ ವಸ್ತು ಮತ್ತೊಂದಿಲ್ಲ. ಗರ್ಭ ಗುಡಿಯಲ್ಲಿನ ದೇವರಿಗಿಂತ ಗರ್ಭಧರಿಸುವ ತಾಯಿಯು ಶ್ರೇಷ್ಠಳಾಗುತ್ತಾಳೆ. ತ್ಯಾಗಕ್ಕೆ ಮತ್ತೊಂದು ಹೆಸರೇ ತಾಯಿ. ಹೀಗಾಗಿ ತಾಯಿ ತೋರುವ ಪ್ರೀತಿ ನಿಷ್ಕಳಂಕವಾಗಿದೆ. ಅಂತೆಯೇ ‘ಕುಪುತ್ರೋ ಜಾಯತೇ ಕ್ವಚಿದಪಿ ಕುಮಾತಾ ನ ಭವತಿ’ ಶಂಕರಾಚಾರ್ಯರು ಹೇಳುವಂತೆ ಈ ಜಗತ್ತಿನಲ್ಲಿ ಕೆಟ್ಟ ಮಕ್ಕಳಿರಬಹುದು, ಆದರೆ ಕೆಟ್ಟ ತಾಯಿ ಇರಲು ಸಾಧ್ಯವೇ ಇಲ್ಲ. ಒಮ್ಮೆ ತಾಯಿ ಮಗನೊಂದಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿರುವಾಗ ತಾಂತ್ರಿಕ ದೋಷದಿಂದ ವಿಮಾನವು ಅಪಘಾತಕ್ಕೀಡಾಗುವ ಮುನ್ಸೂಚನೆ ದೊರೆಯುತ್ತದೆ. ಅಲ್ಲಿನ ಗಗನ ಸಖಿಯರು ಎಲ್ಲರಿಗೂ ಪ್ಯಾರಾಚೂಟ್ ನೀಡಿದಾಗ ಕೊನೆಗೆ ತಾಯಿ ಮಗನಿಗೆ ಒಂದೇ ಪ್ಯಾರಾಚೂಟ್ ಉಳಿದಿರುತ್ತದೆ. ಈ ಸಮಯದಲ್ಲಿ ತಾಯಿಯು ತನ್ನ ವಯಸ್ಸಿನ ಮಗನ ಕೈಯಲ್ಲಿ ಪ್ಯಾರಾಚೂಟ್ ಕೊಟ್ಟು ಮಗನೇ ಒಂದು ಕೈಯಲ್ಲಿ ಪ್ಯಾರಾಚೂಟ್, ಇನ್ನೊಂದು ಕೈಯಲ್ಲಿ ನನ್ನನ್ನು ಹಿಡಿದು ಧೈರ್ಯ ದಿಂದ ಜಿಗಿ ಎಂದು ಹೇಳುತ್ತಾಳೆ. ಮಗ ಹಟ ಹಿಡಿದು ನೀನೇ ಆ ಕೆಲಸ ವನ್ನು ಮಾಡು ಎನ್ನುತ್ತಾನೆ. ಆಗ ತಾಯಿ ಅನಿವಾರ್ಯವಾಗಿ ಆ ಜವಾಬ್ದಾರಿಯನ್ನು ಹೊತ್ತು ಸುರಕ್ಷಿತವಾಗಿ ಮಗನೊಂದಿಗೆ ಧರೆ ಯನ್ನು ತಲುಪುತ್ತಾಳೆ. ಮಗನನ್ನು ಉದ್ದೇಶಿಸಿ ಏಕೆ ಮಗು ಅಂತಹ ಕಠಿಣ ಸನ್ನಿವೇಶದಲ್ಲಿ ಹಠ ಹಿಡಿದು, ನನ್ನನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಎಂದಾಗ, ಅಮ್ಮ ನಾನು ಆ ಕೆಲಸವನ್ನು ಮಾಡಿದ್ದೆನೆಂದರೆ ನಿನ್ನನ್ನು ಸುರಕ್ಷಿತವಾಗಿ ತಲುಪಿಸುವ ನಂಬಿಕೆ ನನ್ನಲ್ಲಿರಲಿಲ್ಲ ಎಂದಾಗ ತಾಯಿ ತನಗೆಷ್ಟೆ ಸಂಕಷ್ಟ ಬಂದರೂ ಕೂಡ ಮಕ್ಕಳನ್ನು ಸಂರಕ್ಷಿಸುತ್ತಾಳೆಂಬುದು ಅರಿವಾಗುತ್ತದೆ. ಕೆಟ್ಟ ಮಕ್ಕಳಿರಬಹುದು, ಆದರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಎಂಬುದು ಈ ದೃಷ್ಟಾಂತದಿಂದ ತಿಳಿಯುತ್ತದೆ. ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಸಕಲವನ್ನೂ ತ್ಯಾಗ ಮಾಡುವ ತಾಯಿ ಇಲ್ಲದ ತವರು ಮನೆಯನ್ನು ನೆನಪಿಸಿಕೊಂಡು, ಹೆಣ್ಣು ಅನುಭವಿಸುವ ನೋವು ಸಂಕಟ ಮತ್ತೊಂದಿಲ್ಲ.

ಹಡೆದವ್ವನಿದ್ದಾಗ ನಡುಮನಿ ನನಗಿತ್ತ

ಕಡಗದ ಸೊಸಿ ಬಂದು  ನಡೆದಾಗ

ತವರು ಮನೆ ನನಗೆ ಎರವಾಯ್ತು ॥

ಎಂದು ಹೇಳುವ ಈ ಮಾತು ಹೆಣ್ಣಿಗೆ ಹೆಣ್ಣೇ ಶತ್ರು ಎಂಬುದು ನನ್ನ ಅಭಿಪ್ರಾಯವಾಗಿದೆ. ಏಕೆಂದರೆ, ಇತ್ತಿಚೀನ ದಿನಮಾನದಲ್ಲಿ ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬಗಳಾಗಿ ತಂದೆ ತಾಯಿಯರನ್ನು ವೃದ್ಧಾ ಶ್ರಮಕ್ಕೆ ತಳ್ಳುವವರನ್ನು ನೋಡಿದಾಗ ಈ ಮಾತು ಸಾಕ್ಷೀಕರಿಸುತ್ತದೆ. ತವರು ಮನೆಯಲ್ಲಿನ ತಂದೆ ತಾಯಿಯರನ್ನು ಮುದ್ದಿಸುವಷ್ಟು, ಗಂಡನ ಮನೆಯಲ್ಲಿನ ಅತ್ತೆ ಮಾವರನ್ನು ಮುದ್ದಿಸದ ಹೆಣ್ಣು ಇಬ್ಬಗೆಯ ನೀತಿಯನ್ನು ಅನುಸರಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದರೂ ಸಹ, ತಂದೆ ತಾಯಿಗಳು ತಮ್ಮ ಮನೆಗೆ ಬಂದ ಸೊಸೆಗೆ ಮಗಳಂತೆ ಪ್ರೀತಿಯನ್ನು ತೋರದೆ, ಗಂಡನ ಮನೆಯಲ್ಲಿನ ತಮ್ಮ ಮಗಳು ಅತ್ತೆ ಮಾವನ ಕಿರಿಕಿರಿಯಿಲ್ಲದೆ ಸುಖವಾಗಿರಲೆಂದು ಬಯಸುವ ಇಬ್ಬಗೆಯ ನೀತಿಯನ್ನು ಇಲ್ಲಿಯೂ ಕಾಣುತ್ತೇವೆ. ಹಾಗಾಗಿ ದೇವಲೀಲೆಯೋ ಕಾಣೆ ಕರ್ಮಜಾಲವೋ ಕಾಣೆ ಅದು ನಮ್ಮ ಬುದ್ಧಿಯಾಚೆಗಿನ ಮಾತು ಯಾವುದೇನೇ ಇರಲಿ ಪ್ರೀತಿಯಂತಹ ವಸ್ತು ಭವದಲ್ಲಿ ಕಾಣೆ ಮನಗಂಡ ಮಾತು ಈ ಜೀವನಕ್ಕೆ ಜೀವಕಳೆಯನ್ನು ತುಂಬುವ ಪ್ರೀತಿಯನ್ನು ಪರಸ್ಪರ ಹಂಚುತ್ತಾ ನಮ್ಮಲ್ಲಿನ ಅಹಂಭಾವದ ಸ್ವಾಭಿಮಾನವನ್ನು ನಾಶಮಾಡಿ, ನಿಸ್ವಾರ್ಥ ಭಾವದಿಂದ ಬಾಳುತ್ತ ಸಂಸಾರದ ಏರುಪೇರುಗಳನ್ನು ಸಮನಾಗಿ ಸ್ವೀಕರಿಸಿ, ಪರಸ್ಪರ ಪ್ರೀತಿ ವಿಶ್ವಾಸವನ್ನು ಕೊಟ್ಟು ತೆಗೆದು ಕೊಂಡಾಗ ಮಾತ್ರ ಸಂಸಾರವು ಸೊನ್ನೆಯಿರದೆ ಸಸಾರವಾಗುತ್ತದೆ.

ಸಂಸಾರ ಸಂಸಾರ ಒಲಿ ಮ್ಯಾಲಿನ ಹಂಚಿನ್ಯಾಂಗ

ಮೊದಲ ಕೈಗೆ ಬಿಸಿ ಹತ್ತಿ, ಸುಟ್ಟ ಮ್ಯಾಲೆನ

ಸಿಗತದ ರುಚಿ ರುಚಿ ರೊಟ್ಟಿ ॥

ಎಂಬಂತೆ ಜನಪದ ಲಾಲಿತ್ಯದಲ್ಲಿನ ಸಾಹಿತ್ಯದ ಸಾರವನ್ನು ಸವಿದು ರಸವೇ ಜನನ, ವಿರಸವೇ ಮರಣ ಸಮರಸವೇ ಜೀವನ ಎಂಬಂತೆ ಬದುಕು ಸಾಗಿಸೋಣ. ಬ್ಯಾಸಿಗೆ ದಿವಸದಲ್ಲಿ ಬಿಸಿಲಿಗೆ ಬೆದರದೆ ನಿಂತು, ತಂಪು ನೀಡುವ ಬೇವಿನ ಮರವಾಗಿ ಜನಪದ ಸಾಹಿತ್ಯವನ್ನು ಉಳಿಸಿ ಅದರೊಳ ಗಿನ ಭಾವವನ್ನು ಭಾಗ್ಯವಾಗಿಸಿಕೊಂಡು ಬದುಕೋಣ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top