ಡಿಮಿಟ್ರಿ ಮೆಂಡಲೀವ್‌ನ ಆವರ್ತ ಕೋಷ್ಟಕಕ್ಕೀಗ 150ರ ಸಂಭ್ರಮ | Vartha Bharati- ವಾರ್ತಾ ಭಾರತಿ
2019ನ್ನು ‘ಆವರ್ತ ಕೋಷ್ಟಕ ವರ್ಷ’ ಎಂದು ಘೋಷಿಸಿದ ಯುನೆಸ್ಕೋ

ಡಿಮಿಟ್ರಿ ಮೆಂಡಲೀವ್‌ನ ಆವರ್ತ ಕೋಷ್ಟಕಕ್ಕೀಗ 150ರ ಸಂಭ್ರಮ

A systematic way of gaining knowledge is called 'SCIENCE'. ಹೌದು, ಕ್ರಮ ಬದ್ಧ ಮತ್ತು ವ್ಯವಸ್ಥಿತ ರೀತಿಯಲ್ಲಿ ಜ್ಞಾನ ಸಂಪಾದನೆಯೇ ‘ವಿಜ್ಞಾನ’ ಎಂದೆನಿಸಿಕೊಳ್ಳುತ್ತದೆ.ಇಡೀ ಜಗತ್ತು, ನಮ್ಮ ಜೀವನ ಎಲ್ಲವೂ ವಿಜ್ಞಾನಮಯ! ಸದ್ಯ ರಾಸಾಯನ ಶಾಸ್ತ್ರದಲ್ಲಿ ಅತೀ ಮುಖ್ಯವಾಗಿ ಬರುವ ಧಾತುಗಳ ಕ್ರಮ ಬದ್ಧ ಜೋಡಣೆಯಾದ ‘ಮೆಂಡಲೀವ್’ನ ಆವರ್ತ ಕೋಷ್ಟಕಕ್ಕೀಗ 150 ರ ಸಂಭ್ರಮ. ಆದ್ದರಿಂದ ವಿಶ್ವ ಸಂಸ್ಥೆಯ ಅಂಗ ಸಂಸ್ಥೆಯಾದ ‘ಯುನೆಸ್ಕೋ’, 2019ನ್ನು ‘ಆವರ್ತ ಕೋಷ್ಟಕ ವರ್ಷ’ ಎಂದು ಆಚರಿಸುತ್ತಿದೆ. ಹಾಗಾದರೆ ಅದು ಸಾಗಿ ಬಂದ ದಾರಿಯನ್ನೊಮ್ಮೆ ಅವಲೋಕಿಸೋಣ.

ಸಾಮಾನ್ಯವಾಗಿ ನಾವು ನಮ್ಮಮನೆಯಲ್ಲಿನ ವಸ್ತುಗಳನ್ನು ಯಾವನ್ನು ಎಲ್ಲಿಡಬೇಕೋ ಅಲ್ಲಿ ವ್ಯವಸ್ಥಿತವಾಗಿ ಜೋಡಿಸಿಟ್ಟಿ ರುತ್ತೇವೆ.ಉದಾಹರಣೆಗೆ, ರೀಡಿಂಗ್ ರೂಮ್‌ಗೆ ಬಂದಾಗ ಪುಸ್ತಕಗಳನ್ನು ಜೋಡಿಸಿಡಲಿಕ್ಕಾಗೇ ಇರುವ ಸೆಲ್ಪ್‌ಗಳು ಇಲ್ಲವೇ ಕಪಾಟುಗಳಲ್ಲಿ, ಪುಸ್ತಕಗಳನ್ನು ಹೇಗೆ ಬೇಕೋ ಹಾಗೆ ಇಡುವುದಿಲ್ಲ. ಬದಲಿಗೆ ಕ್ರಮಬದ್ಧವಾಗಿ, ಅಂದರೆ, ಪಠ್ಯಕ್ಕೆ ಸಂಬಂಧಿಸಿದ, ಕತೆ-ಕಾದಂಬರಿ, ವಿಜ್ಞಾನ ಕುತೂಹಲ, ಕವನ ಸಂಕಲನ, ದಿನನಿತ್ಯ ಬರೆಯುವ ದಿನಚರಿ ಪುಸ್ತಕ ಹೀಗೆ ಎಲ್ಲವನ್ನು ಅವುಗಳದ್ದೇ ಆದ ಸೆಲ್ಪ್‌ಗಳಲ್ಲಿ ವ್ಯವಸ್ಥಿತವಾಗಿ ಜೋಡಿಸಿಟ್ಟಿರುತ್ತೇವಲ್ಲವೆ. ಹಾಗೇ ವಾರ್ಡ್ ರೋಬಿನಲ್ಲಿನ ವಿವಿಧ ಖಾನೆಗಳನ್ನು ನಾವು ಸಂದರ್ಭಕ್ಕನುಸಾರ ತೊಡುವ ಬಟ್ಟೆಗಳನ್ನು ಇಡಲು ಬಳಸುತ್ತೇವೆ. ದಿನನಿತ್ಯ ತೊಡುವ ಬಟ್ಟೆಗಳ ಒಂದು ಖಾನೆ, ಹೊರಗೆ ಹೋಗುವಾಗ ತೊಡುವ ಬಟ್ಟೆಗಳಿಗೆ ಇನ್ನೊಂದು ಖಾನೆ, ಅಲ್ಲದೇ ವಿಶೇಷ ಸಭೆ ಸಮಾರಂಭಗಳಿಗಾಗಿ ಧರಿಸಿಕೊಂಡು ಹೋಗುವ ಬಟ್ಟೆಗಳಿಗಾಗಿ ಮಗದೊಂದು ಖಾನೆ... ಇದೇ ರೀತಿ ಅಡುಗೆ ಮನೆಯಲ್ಲೂ ಮಸಾಲೆ ಸಾಮಾನು, ಅಕ್ಕಿ, ಬೇಳೆ, ಬೆಲ್ಲ... ಮುಂತಾದವುಗಳನ್ನು ವಿಭಿನ್ನ ಡಬ್ಬಗಳಲ್ಲಿ ನಮಗೆ ಗೊತ್ತಾಗುವ ರೀತಿಯಲ್ಲಿ ಜೋಡಿಸಿಟ್ಟಿರುತ್ತೇವೆ. ಒಟ್ಟಿನಲ್ಲಿ ವಸ್ತುಗಳ ಕ್ರಮಬದ್ಧ ಜೋಡಣೆ ಮತ್ತು ಅವುಗಳ ವರ್ಗೀಕರಣದಲ್ಲೂ ಒಂದು ವಿಜ್ಞಾನ ಅಡಗಿದೆ ಎಂದಾಯಿತು.

ಇಂತಹ ವರ್ಗೀಕರಣವನ್ನು ನೈಜ ಧಾತುಗಳನ್ನು ವ್ಯವಸ್ಥಿತವಾಗಿ ಜೋಡಿಸಿ, ಒಂದು ಚಾರ್ಟ್ ರೂಪದಲ್ಲಿ, ಅದರಲ್ಲೂ ಎಲ್ಲ ವಯೋಮಾನದವರಿಗೂ ಸುಲಭ ರೀತಿಯಲ್ಲಿ ಅರ್ಥವಾಗುವಂತೆ ಮಾಡುವಲ್ಲಿ ವಿಜ್ಞಾನಿಗಳು ಪಟ್ಟ ಶ್ರಮ ಅಷ್ಟಿಷ್ಟಲ್ಲ. ನಮಗೆ ಗೊತ್ತಿರುವ ನೂರಾರು ಮೂಲ ವಸ್ತುಗಳನ್ನು ವರ್ಗೀಕರಣ ಮಾಡಿ ಅವುಗಳನ್ನು ಕೋಷ್ಟಕ ರೂಪದಲ್ಲಿ ಜೋಡಿಸಿ ಅವುಗಳ ಅಧ್ಯಯನಕ್ಕೆ ಸಹಾಯ ಮಾಡಲಾಗಿದೆ. ಈ ಕೋಷ್ಟಕಕ್ಕೆ ಮೂಲ ಧಾತುಗಳ ಆವರ್ತ ಕೋಷ್ಟಕ (periodic table of elements) ಎಂದು ಕರೆಯಲಾಗುತ್ತಿದೆ. ಇದರ ಕುರಿತು ಶಾಲಾ ಹಂತದಲ್ಲೇ ರಾಸಾಯನ ಶಾಸ್ತ್ರದಲ್ಲಿ ಕಲಿತದ್ದನ್ನು ನಾವೀಗ ಸ್ಮರಿಸಿಕೊಂಡರೆ ಸಾಕು.

ಒಂದೇ ಬಗೆಯ ರಾಸಾಯನಿಕ ಗುಣಲಕ್ಷಗಳನ್ನು ಹೊಂದಿರುವ ಪರಮಾಣುಗಳಿಂದ ಕೂಡಿರುವ ವಸ್ತುವಿಗೆ ‘ಮೂಲವಸ್ತು (Element)’ ಎನ್ನಲಾಗುತ್ತದೆ. ಉದಾಹರಣೆಗೆ: ಆಕ್ಸಿಜನ್ (o), ಇಂಗಾಲ (c), ಸೋಡಿಯಂ (Na), ಬಂಗಾರ (Au), ಬೆಳ್ಳಿ (Ag),..... ಜಗತ್ತಿನಲ್ಲಿನ ದ್ರವ್ಯವು ಇಂತಹ ಅನೇಕ ಮೂಲವಸ್ತುಗಳಿಂದ ರಚಿಸಲ್ಪಟ್ಟಿದೆ. ಸದ್ಯ 118 ಮೂಲವಸ್ತುಗಳು ಲಭ್ಯವಿದ್ದು ಅದರಲ್ಲಿ 92 ನೈಸರ್ಗಿಕವಾಗಿ ದೊರಕುತ್ತವೆ. ಉಳಿದವುಗಳನ್ನು ಪ್ರಯೋಗಾಲಯದಲ್ಲಿ ಮಾನವ ಸೃಷ್ಟಿಸಿದ್ದಾನೆ. ಇಷ್ಟೊಂದು ಮೂಲವಸ್ತುಗಳನ್ನು ನೆನ ಪಿಡುವುದು, ಅಲ್ಲದೇ ಅವುಗಳ ಗುಣವಿಶೇಷಣಗಳನ್ನು ತಿಳಿಯುವುದು ಸುಲಭದ ವಿಷಯವಾಗಿರದ ಕಾರಣ ಸಾಮಾನ್ಯ ಗುಣವಿಶೇಷಗಳನ್ನು ಹೊಂದಿರುವ ಮೂಲವಸ್ತುಗಳನ್ನು ಒಂದೆಡೆಗೆ ಸೇರಿಸುವಂತಹ ಕೋಷ್ಟಕವನ್ನು ತಯಾರಿಸಲಾಯಿತು. ಸದ್ಯ ನಾವು ನೋಡುತ್ತಿರುವ ಆವರ್ತ ಕೋಷ್ಟಕ ಮೊದಲಿನಿಂದಲೂ ಹೀಗೆಯೇ ಇರದೆ, ಮೂಲ ಕಲ್ಪನೆಯಿಂದ ಕೆಲವೊಂದಿಷ್ಟು ಮಾರ್ಪಾಡುಗಳಿಗೆ ಒಳಗಾಗುತ್ತ ಇಲ್ಲಿಗೆ ಬಂದು ನಿಂತಿದೆ.

ಮೆಂಡಲೀವ್ 1834 ರಲ್ಲಿ ರಶ್ಯಾದ ‘ವರ್ಕ್ನಿ ಅರೆಂಝಾನಿ’ ಎಂಬ ಸೈಬೀರಿಯಾದಲ್ಲಿರುವ ಹಳ್ಳಿಯಲ್ಲಿ ಜನಿಸಿದರು. ಸೈಂಟ್ ಪೀಟರ್ಸ್ ಬರ್ಗ್‌ನಲ್ಲಿ 1907ರಲ್ಲಿ ಮರಣ ಹೊಂದಿದರು. ಅವರ ಕುಟುಂಬದ ಬಗ್ಗೆ ಸಂಶೋಧಕರಿಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಇವಾನ್ ಪಾವ್ಲೊವಿಚ್ ಮೆಂಡಲೀವ್ ಮತ್ತು ಮರಿಯ ದಿಮಿತ್ರಿಯಿವ್‌ನ ಮೆಂಡಲೀವ, ಮೆಂಡಲೀವ್‌ರವರ ಪೋಷಕರು. ಅವರ ತಾತ ಪಾವೆಲ್ ಮ್ಯಾಗ್ಸಿಮೊವಿಚ್ ಸೊಕೊಲೊವ್ ಟ್ವರ್ ಪ್ರದೇಶದಲ್ಲಿರುವ ರಶ್ಯನ್ ಧಾರ್ಮಿಕ ಚರ್ಚ್‌ನಲ್ಲಿ ಧರ್ಮಗುರುಗಳಾಗಿದ್ದರು. ಮೆಂಡಲೀವ್ ಅವರ ತಾಯಿ ಮಹಾನ್ ದೈವ ಭಕ್ತೆ. ಅಲ್ಲದೇ ವೈಜ್ಞಾನಿಕ ವಿಚಾರಗಳಿಗೆ ಹೆಚ್ಚು ಮನ್ನಣೆ ಕೊಡುವ ಸ್ವಭಾವದವರಾಗಿದ್ದರು. ಮನೆಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿಲ್ಲ. ಮೆಂಡಲೀವ್‌ರ ತಂದೆ ಕಲೆ, ರಾಜಕೀಯ ಹಾಗೂ ತತ್ವಶಾಸ್ತ್ರ ವಿಷಯಗಳ ಶಿಕ್ಷಕರಾಗಿದ್ದರು. ಅವರ ತಂದೆ ತಮ್ಮ ಮನೆಯ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ತಮ್ಮ ಕಣ್ಣುಗಳನ್ನು ದಾನಮಾಡಿದರು. ಆದುದರಿಂದ ತಮ್ಮ ಶಿಕ್ಷಕ ವೃತ್ತಿಯನ್ನು ಕಳೆದುಕೊಂಡರು. ಇದರಿಂದ ಮೆಂಡಲೀವ್ ಅವರ ತಾಯಿಯ ಮೇಲೆ ಸಂಸಾರದ ಭಾರ ಬಿತ್ತು. ಗಾಜಿನ ಕಾರ್ಖಾನೆಯನ್ನು ನಡೆಸುವ ಮೂಲಕ ಜೀವನ ನಿರ್ವಹಣೆ ಮಾಡುತ್ತಿದ್ದರು.ಗಾಜಿನ ಕಾರ್ಖಾನೆಗೂ ಒಮ್ಮೆ ಬೆಂಕಿ ಬಿದ್ದು ನಾಶ ಹೊಂದಿದ್ದರಿಂದ ಮೆಂಡಲೀವ್ ಅವರ ಕುಟುಂಬ ಬಡತನದಿಂದ ನರಳಬೇಕಾಗಿ ಬಂತು.

ಮೆಂಡಲೀವ್‌ರವರು 1850ರಲ್ಲಿ ಸೈಂಟ್ ಪೀಟರ್ಸ್ ಬರ್ಗ್ ನಲ್ಲಿರುವ ಮೆಯಿನ್ ಪೆಡಗಾಜಿಕಲ್ ಇನ್‌ಸ್ಟಿಟ್ಯೂಟ್‌ನಲ್ಲಿ ಪ್ರವೇಶ ಪಡೆದರು. ಪದವಿ ಪಡೆದ ಬಳಿಕ ಅವರಿಗೆ ಟಿ.ಬಿ. ಸೋಂಕು ತಗುಲಿತು. ಇದರಿಂದಾಗಿ ಕಪ್ಪುಸಾಗರದ ಉತ್ತರ ತೀರದಲ್ಲಿರುವ ಕ್ರಿಮಿಯನ್ ಪೆನಿನ್ಸುಲಗೆ 1855ರಲ್ಲಿ ಪ್ರಯಾಣ ಬೆಳೆಸಿದರು. ಈ ಮಧ್ಯೆ ಮೆಂಡಲೀವ್ ಇಬ್ಬರ ಜೊತೆ ವಿವಾಹವಾದರು. ಅದರಲ್ಲೂ ಎರಡನೇ ಪ್ರೇಮ ವಿವಾಹವನ್ನು ಒತ್ತಾಯದಲ್ಲಿ ಮಾಡಿಕೊಂಡು ಸಾಕಷ್ಟು ಸಾಂಸಾರಿಕ ಕಷ್ಟಗಳನ್ನು ಅನುಭವಿಸಿದರು. ಕ್ರಿಮಿಯನ್ ಪೆನಿನ್ ಸುಲದಲ್ಲಿರುವ ಸಿಮ್ಫೆರೋಪೊಲ್ ಜಿಮ್ನಾಯಿಸಮ್ ನಂ.1 ರಲ್ಲಿ ವಿಜ್ಞಾನದಲ್ಲಿ ಪ್ರಾವಿಣ್ಯ ಹೊಂದಿದರು. ಅವರು 1857ರಲ್ಲಿ ಉತ್ತಮ ಆರೋಗ್ಯದೊಂದಿಗೆ ಸೈಂಟ್ ಪೀಟರ್ಸ್‌ಬರ್ಗ್‌ಗೆ ಮರಳಿದರು. ಮುಂದೆ ದ್ರವ ಕ್ಯಾಪಿಲರಿ ಮತ್ತು ರೋಹಿತದ ಕುರಿತು ಅಧ್ಯಯನ ಕೈಗೊಂಡರು. 1865ರಲ್ಲಿ ಅವರು ನೀರಿನೊಂದಿಗೆ ಆಲ್ಕೋಹಾಲ್ ಮಿಶ್ರಣದ ಕುರಿತು ಬರೆದ ಅವರ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಸಿಕ್ಕಿತು. ಮುಂದೆ ವಿಶ್ವ ವಿದ್ಯಾನಿಲಯದಲ್ಲಿ ಬೋಧನೆ ಮಾಡುವ ಅವಕಾಶ ಸಿಕ್ಕಿತು. 1871ರಲ್ಲಿ ಸೈಂಟ್ ಪೀಟರ್ಸ್‌ಬರ್ಗ್ ರಸಾಯನಶಾಸ್ತ್ರ ವಿಭಾಗವನ್ನು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವ ರೀತಿಯಲ್ಲಿ ಮಾಡಿದರು. 1892ರಲ್ಲಿ ರಾಯಲ್ ಸೊಸೈಟಿಯ ವಿದೇಶ ಪ್ರತಿನಿಧಿಯಾಗಿ ಆಯ್ಕೆಯಾದರು. 1905ರಲ್ಲಿ ರಾಯಲ್ ಸ್ವೀಡಿಷ್ ಅಕಾಡಮಿ ಆಫ್ ಸೈನ್ಸ್‌ನ ಸದಸ್ಯರಾಗಿ ಮೆಂಡಲೀವ್‌ರವರು ಆಯ್ಕೆಯಾದರು. ಮೆಂಡಲೀವ್‌ರವರ ಆವರ್ತ ಕೋಷ್ಟಕದ ಕುರಿತ ಸಂಶೋಧನೆಗಾಗಿ 1906ರಲ್ಲಿ ರಸಾಯನಶಾಸ್ತ್ರದ ನೊಬೆಲ್ ಸಮಿತಿಯು ಸ್ವೀಡಿಷ್ ಅಕಾಡೆಮಿಗೆ, ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸ್‌ನ ಸದಸ್ಯರಾಗಿ ಮೆಂಡಲೀವ್ ಆಯ್ಕೆಯಾದರು. ಇವರ ಸಾಧನೆಗೆ ಕಾರಣಾಂತರಗಳಿಂದ ನೊಬೆಲ್ ಪ್ರಶಸ್ತಿ ದೊರಕದೇ ಹೋಯಿತು.

ಪ್ರತಿಯೊಂದು ವಸ್ತುವು ಪರಮಾಣುಗಳೆಂಬ ಅತ್ಯಂತ ಸೂಕ್ಷ್ಮಅವಿಭಾಜ್ಯ ಕಣಗಳಿಂದಾಗಿವೆ ಎಂದು ಪ್ರತಿಪಾದಿಸಿದ ಡಾಲ್ಟನ್, ಜಲಜನಕದ ಪರಮಾಣು ತೂಕವನ್ನು ಹತ್ತು ಸಾವಿರ ಎಂದು ನಿಗದಿಪಡಿಸಿ ಇದರೊಡನೆ ಹೋಲಿಕೆಯಿಂದ ಇತರ ಮೂಲವಸ್ತುಗಳನ್ನು ಮತ್ತು ಅವುಗಳ ಪರಮಾಣು ತೂಕವನ್ನು ಕಂಡು ಹಿಡಿದ. ಇದರ ಆಧಾರದ ಮೇಲೆ 15 ಮೂಲವಸ್ತುಗಳನ್ನು ಅವುಗಳ ಪರಮಾಣು ತೂಕಾನುಸಾರವಾಗಿ ಒಂದು ಕೋಷ್ಟಕ ತಯಾರಿಸಿದನು. ಮೊದಲು ಜಲಜನಕದಿಂದ ಪ್ರಾರಂಭಿಸಿ ಕ್ಲೋರಿನ್ ಧಾತುವಿನವರೆಗೆ ಡಾಲ್ಟನ್‌ನ ಕೋಷ್ಟಕದಲ್ಲಿ ಇದ್ದವು. ಹೀಗೆ ಚಿತ್ರ ಸಂಕೇತಗಳ ಮೂಲಕ ಧಾತುಗಳ ರಾಸಾಯನಿಕ ಸಂಕೇತಗಳನ್ನು ಜಾರಿಗೆ ತಂದ ಮೊಟ್ಟಮೊದಲಿಗ ಜಾನ್ ಡಾಲ್ಟನ್. ಈತ ಪ್ರತಿಪಾದಿಸಿದ ಸಿದ್ಧಾಂತಕ್ಕೆ ಇಂದಿಗೂ ಸಹ ಡಾಲ್ಟನ್‌ನ ಪರಮಾಣು ಸಿದ್ಧಾಂತವೆಂದೇ ಕರೆಯಲಾಗುತ್ತಿದೆ.

1817ರಲ್ಲಿ ಜರ್ಮನಿಯ ರಾಸಾಯನಶಾಸ್ತ್ರಜ್ಞನಾಗಿದ್ದ ಜೋಹಾನ್ ವೂಲ್ಪ್ ಗ್ಯಾಂಗ್ ಡೊಬರೈನ್, ಒಂದೇ ರೀತಿಯ ಗುಣಲಕ್ಷಣಗಳನ್ನು ತೋರ್ಪಡಿಸುವ ಧಾತುಗಳನ್ನು ವರ್ಗೀಕರಿಸಲು ಪ್ರಯತ್ನಿಸಿದನು. ಅವನು ತಲಾ ಮೂರು ಧಾತುಗಳಿರುವ ಕೆಲವು ಧಾತುಗಳ ಗುಂಪುಗಳನ್ನು ಗುರುತಿಸಿದನು.ಆದ್ದರಿಂದ ಈ ಗುಂಪುಗಳನ್ನು ‘ತ್ರಿವಳಿ ’ ಎಂದು ಕರೆಯಲಾಯಿತು.ಡೊಬರೈನ್‌ರ ತ್ರಿವಳಿ ನಿಯಮದ ಪ್ರಕಾರ ಮೂರು ಧಾತುಗಳು ಅವುಗಳ ಪರಮಾಣುರಾಶಿಯ ಏರಿಕೆ ಕ್ರಮದಲ್ಲಿ ಬರೆದಾಗ; ಅವುಗಳ ಮಧ್ಯದ ಧಾತುವಿನ ಪರಮಾಣು ರಾಶಿಯು ಉಳಿದೆರಡು ಧಾತುಗಳ ಪರಮಾಣು ರಾಶಿಗಳ ಸರಿಸುಮಾರು ಸರಾಸರಿ ಎಂದು ತಿಳಿಯಲಾಯಿತು.ಉದಾಹರಣೆಗೆ: ಲೀಥಿಯಂ(Li)-40, ಸೋಡಿಯಂ (Na)-87.6, ಪೋಟ್ಯಾಶಿಯಂ(K)-137.3. ಈ ರೀತಿ ಕೇವಲ ಕೆಲವೇ ಕೆಲವು ಧಾತುಗಳು ಮಾತ್ರ ಡೊಬರೈನ್ ನ ನಿಯಮ ಪಾಲಿಸಿದವು. ಇನ್ನುಳಿದ ಧಾತುಗಳಿಗೆ ಈ ನಿಯಮ ಸರಿ ಹೊಂದಲಿಲ್ಲ.

1862ರಲ್ಲಿ ಜರ್ಮನಿಯಲ್ಲಿ ನಡೆದ ರಾಸಾಯನಶಾಸ್ತ್ರದ ಒಂದು ಸಭೆಯಲ್ಲಿ ಈ ಮೂಲ ವಸ್ತುಗಳ ಪರಮಾಣು ದ್ರವ್ಯರಾಶಿಯ ಪಟ್ಟಿಯನ್ನು ಬಿಡುಗಡೆಮಾಡಲಾಯಿತು. ಆ ಮೂಲಕ ಇಂದಿನ ಆವರ್ತ ಕೋಷ್ಟಕದ ಆವಿಷ್ಕಾರಕ್ಕೆ ಹೊಸ ಹಾದಿಯೊಂದು ಸಿಕ್ಕಂತಾಯಿತು. ಇದಾದ ನಂತರ ರಾಸಾಯನಶಾಸ್ತ್ರಜ್ಞನಲ್ಲದ ಭೂಗರ್ಭಶಾಸ್ತ್ರಜ್ಞನಾಗಿದ್ದ ಫ್ರೆಂಚ್ ದೇಶದ ವಿಜ್ಞಾನಿ ‘ಅಲೆಗಾಔಂಡ್ರೆ ಡ ಶಾಂಕೋರ್ಟ್ವಾ’ ನು ‘ಟೆಲ್ಯೂರಿಕ್ ಸ್ಕ್ರೂ’ ಎಂದು ಕರೆಯಲ್ಪಡುವ ಮಾದರಿಯಲ್ಲಿ ವಸ್ತುಗಳನ್ನು ಅವುಗಳ ದ್ರವ್ಯರಾಶಿಯ ಆಧಾರದ ಮೇಲೆ, ಒಂದು ಸಿಲಿಂಡರಿನ ಒಂದೇ ಉದ್ದಸಾಲಿನಲ್ಲಿ ಬರುವಂತೆ ಕೆಲವು ಧಾತುಗಳನ್ನು ಜೋಡಿಸಿದ್ದ. ಆದರೆ ಮುಂದೆ ಈ ವಿಧಾನವೂ ಕೂಡ ಕೆಲವು ಲೋಪ ದೋಷಗಳಿಂದ ತಿರಸ್ಕರಿಸಲ್ಪಟ್ಟಿತು. ಇದಾದನಂತರ 1863ರಲ್ಲಿ ಇನ್ನೊಬ್ಬ ಬ್ರಿಟಿಷ್ ರಾಸಾಯನಶಾಸ್ತ್ರಜ್ಞ ‘ಜಾನ್ ನ್ಯೂಲೆಂಡ್’ ನು ಧಾತುಗಳ ಪರಮಾಣು ರಾಶಿಗಳ ಏರಿಕೆ ಕ್ರಮದಲ್ಲಿ ಆಗ ಸಂಶೋಧಿಸಿದ್ದ 56 ಮೂಲವಸ್ತುಗಳನ್ನು ಕೋಷ್ಟದ ಮಾದರಿಯಲ್ಲಿ ಜೋಡಿಸಿ ವರ್ಗೀಕರಿಸಿದ. ‘ಧಾತುಗಳು ಅವುಗಳ ಪರಮಾಣು ರಾಶಿಯ ಏರಿಕೆ ಕ್ರಮದಲ್ಲಿ ವ್ಯವಸ್ಥೆಗೊಳಿಸಿದಾಗ ಆ ಜೋಡಣೆಯಲ್ಲಿ 8ನೇ ಧಾತು ಮೊದಲನೆಯ ಧಾತುವನ್ನು ಹೋಲುತ್ತದೆ’. ಇದನ್ನು ‘ನ್ಯೂಲೆಂಡ್‌ನ ಅಷ್ಟಕ ಜೋಡಣಾ ವಿಧಾನ’ (ಲಾ ಆಪ್ ಆಕ್ಟೇವ್) ಎಂದು ಕರೆಯಲಾಗುತ್ತದೆ. ಈ ರೀತಿಯ ವರ್ಗೀಕರಣವೂ ಸಹ ಸೀಮಿತ ಧಾತುಗಳಿಗೆ ಸರಿಹೊಂದಿದ್ದರಿಂದ ತಿರಸ್ಕರಿಸಲ್ಪಟ್ಟಿತು. 1864ರಲ್ಲಿ ಜರ್ಮನಿಯ ರಾಸಾಯನ ಶಾಸ್ತ್ರಜ್ಞ ‘ಜ್ಯೂಲಿಯಸ್ ಮಾಯರ್’ ನು ಕೂಡ ಕೋಷ್ಟಗಳನ್ನು ಸಿದ್ಧಪಡಿಸುತ್ತಲೇ ಸಾಗಿದ, ವಸ್ತುಗಳ ಗುಣವಿಶೇಷಗಳು ನಿಯಮಿತವಾಗಿ ಪರಿವರ್ತನೆ ಆಗುವುದನ್ನು ಗ್ರಾಫ್ ಮೂಲಕ ವಿಶ್ಲೇಷಿಸಿದ್ದ. ಇವನ ಯಾವ ಸಂಶೋಧನಾ ಪ್ರಬಂಧಗಳೂ ಮೆಂಡಲೀವ್‌ನ ಸಂಶೋಧನೆಗಿಂತ ಮುನ್ನ ಪ್ರಕಟಗೊಳ್ಳಲಿಲ್ಲ. ಹೀಗಾಗಿ ಮಾಯರ್‌ನ ಪ್ರಯತ್ನಗಳಿಗೂ ಸಹ ತಕ್ಕ ಪ್ರತಿಫಲ ಸಿಗಲಿಲ್ಲ.

ನಂತರದಲ್ಲಿ ಡಾಲ್ಟನ್‌ನ ಧಾತುಗಳ ಪಟ್ಟಿಯನ್ನು, ನ್ಯೂಲೆಂಡ್‌ನ ಅಷ್ಟಕ ನಿಯಮ ಪಟ್ಟಿಯನ್ನೂ 1869ರಲ್ಲಿ ರಶ್ಯಾ ದೇಶದ ವಿಜ್ಞಾನಿ ಮೆಂಡಲೀವ್ ಪರಿಷ್ಕರಿಸಿದರು. ಮೆಂಡಲೀವ್ 63 ಮೂಲ ವಸ್ತುಗಳ ಗುಣಗಳನ್ನು ಬೇರೆ ಬೇರೆ ಕಾರ್ಡುಗಳಲ್ಲಿ ಬರೆದನು. ತದನಂತರ ಮೂಲವಸ್ತುಗಳ ಹೆಸರುಗಳನ್ನು ಪರಮಾಣು ತೂಕಾನುಸಾರವಾಗಿ ಜೋಡಿಸಿದರು. ಅತ್ಯಂತ ಕಡಿಮೆ ಪರಮಾಣು ತೂಕವಿರುವ ಮೂಲವಸ್ತುವಿನಿಂದ ಪ್ರಾರಂಭಿಸಿ ಗರಿಷ್ಠ ಪರಮಾಣು ತೂಕವಿರುವ ಮೂಲ ವಸ್ತುವಿನ ಹೆಸರನ್ನು ಕೊನೆಯಲ್ಲಿ ಸೇರಿಸಿದರು. ಹೀಗೆ ಒಂದು ಕೋಷ್ಟಕ ತಯಾರಿಸಿದರು. ಪರಮಾಣು ತೂಕಕ್ಕನುಸಾರವಾಗಿ ಜೋಡಿಸಿದ ಧಾತುಗಳ ಅಡ್ಡ ಸಾಲುಗಳಿಗೆ ‘ಆವರ್ತ’(periods) ಗಳೆಂದು, ಉದ್ದ ಸಾಲುಗಳಿಗೆ ‘ಗುಂಪು’(Groups)ಗಳೆಂದು ಕರೆದನು. ಮೆಂಡಲೀವ್ 7 ಆವರ್ತಗಳು ಹಾಗೂ 9 ಗುಂಪುಗಳನ್ನಾಗಿ ಮಾಡಿ ಧಾತುಗಳನ್ನು ವಿಂಗಡಿಸಿದ್ದ. ಒಂದು ಗುಂಪಿನಲ್ಲಿರುವ ಮೂಲ ವಸ್ತುಗಳ ಗುಣಗಳಲ್ಲಿ ಹೋಲಿಕೆಯಿದೆ, ಅವುಗಳ ಸಂಯೋಗ ಸಾಮರ್ಥ್ಯದಲ್ಲೂ ಹೋಲಿಕೆ ಇದೆ. ಉದಾಹರಣೆ ತೆಗೆದುಕೊಂಡು ನೋಡುವುದಾದರೆ; ಜೋಡಣೆಯ ಮೊದಲ ಗುಂಪಿನಲ್ಲಿರುವ ಲೀಥಿಯಂ, ಸೋಡಿಯಂ, ಪೋಟ್ಯಾಶಿಯಂಗಳ ಗುಣಗಳಲ್ಲಿ ಸಾಮ್ಯವಿದೆ. ಹೀಗೆ ರಚಿಸಿದ ಮೆಂಡಲೀವ್‌ನ ಆವರ್ತಕೋಷ್ಟಕ ಧಾತುಗಳ ವರ್ಗೀಕರಣಕ್ಕೆ ಬಹು ಉಪಯುಕ್ತವಾಯಿತು.ಅಲ್ಲಿಯವರೆಗೆ ಆವಿಷ್ಕರಿಸಿದ ಮೂಲವಸ್ತುಗಳನ್ನು ಆತ ಈ ಜೋಡಣೆಯಿಂದ ಊಹಿಸಿ ಆ ಧಾತುಗಳಿರುವ ಬಗ್ಗೆ ಮುನ್ಸೂಚಿಸಿದ, ತನ್ನ ಆವರ್ತ ಕೋಷ್ಟಕದಲ್ಲಿ ಅವುಗಳಿಗಾಗಿ ಖಾಲಿ ಸ್ಥಳಗಳನ್ನು ಬಿಟ್ಟನು. ಆವರ್ತ ಕೋಷ್ಟಕದಲ್ಲಿ ಖಾಲಿ ಸ್ಥಳಗಳಲ್ಲಿರುವ ಧಾತುಗಳ ಗುಣಲಕ್ಷಗಳು, ಪರಮಾಣು ರಾಶಿ ದೊರೆಯಬಲ್ಲ ಸಾಧ್ಯತೆ ಇರುವ ಅದಿರುಗಳು ಇತ್ಯಾದಿ ಮೊದಲಾದ ವಿವರಗಳನ್ನು ಆತ ಆವರ್ತ ಕೋಷ್ಟಕದ ಆಧಾರದ ಮೇಲೆ ಸೂಚಿಸಿದ. ಆದರೆ ಮೆಂಡಲೀವ್ ಜೀವಿಸಿದ ಅವಧಿಯಲ್ಲಿ ಖಾಲಿ ಸ್ಥಳಗಳಿಗೆ ಸಂಬಂಧಿಸಿದ ಧಾತುಗಳು ಪತ್ತೆಯಾದವು. ಇದರಿಂದ ಮೆಂಡಲೀವ್ ಕೆಲವು ಧಾತುಗಳ ಪರಮಾಣು ರಾಶಿ ಆಧರಿಸಿ ಆವರ್ತ ಕೋಷ್ಟಕದ ಸ್ಥಾನದ ಮೇಲಿಂದ ಸರಿಪಡಿಸಲು ಈ ಕೋಷ್ಟಕ ಸಹಾಯಕವಾಯಿತು.

ಮೆಂಡಲೀವ್ ತನ್ನ ಕಾಲದಲ್ಲಿ ಲಭ್ಯವಿದ್ದ 63 ಧಾತುಗಳನ್ನು ಈ ತನ್ನ ಕೋಷ್ಟಕದ ಆಧಾರದಲ್ಲಿ ಜೋಡಿಸಿದ್ದ. ಭವಿಷ್ಯದನಲ್ಲಿ ಅನ್ವೇಷಣೆಗೊಂಡು ಇನ್ನೂ ಸಿಗಬಹುದಾದ ಧಾತುಗಳಿಗೆ ಆತ ತನ್ನ ಕೋಷ್ಟಕದಲ್ಲಿ ಬಿಟ್ಟ ಖಾಲಿ ಜಾಗಗಳು ಆತನ ಅಸಾಧಾರಣ ಬುದ್ಧಿ ಶಕ್ತಿಗೆ ಹಿಡಿದ ಕನ್ನಡಿಯಂತಿದೆ.

ಮೆಂಡಲೀವ್‌ನ ಈ ಅದ್ಭುತ ಕೋಷ್ಟಕಕ್ಕೆ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಬರದಿದ್ದರೂ ಆಧುನಿಕ ಆವರ್ತ ಕೋಷ್ಟಕದ 101ನೆಯ ಮೂಲವಸ್ತುವನ್ನು ಈತನ ಗೌರವಾರ್ಥಕ ‘ಮೆಂಡೆಲಿವಿಯಮ್’ (ಸಂಕೇತ - Md) ಎಂದು ನಾಮಕರಣ ಮಾಡಲಾಗಿದೆ. ಅವರ ಸಂಶೋಧನೆ ರಾಸಾಯನಶಾಸ್ತ್ರದಲ್ಲಿ ಒಂದು ಮೈಲುಗಲ್ಲಾಗಿ ಪರಿವರ್ತನೆಗೊಂಡಿತು. 1880ರಲ್ಲಿ ಡಿಮಿಟ್ರಿ ಇವಾನೋವಿಕ್ ಮೆಂಡಲೀವ್ ಅವರ ಆವರ್ತ ಕೋಷ್ಟಕ ಜಗಮಾನ್ಯವಾಯಿತು. ಸದ್ಯ ಈ ವರ್ಷ ಅದಕ್ಕೆ 150 ವರ್ಷಗಳು. ಅವರ ಸ್ಮರಣೆಯ ಉದ್ದೇಶದಿಂದ ವಿಶ್ವ ಸಂಸ್ಥೆ 2019ನ್ನು ‘ಆವರ್ತ ಕೋಷ್ಟಕ ವರ್ಷ’ ಎಂದು ಘೋಷಿಸಿದೆ.

ವಿಜ್ಞಾನದ ಅನ್ವೇಷಣೆಗಳು ನಿಂತ ನೀರಲ್ಲ. ಅವು ಯಾವಾಗಲೂ ತಮ್ಮ ಜ್ಞಾನದ ವಿಸ್ತರಣೆಯನ್ನು ಹೆಚ್ಚು ಮಾಡುತ್ತಾ ಸಾಗುತ್ತಿರುತ್ತವೆ. ಇಷ್ಟೆಲ್ಲಾ ಸಾಧಿಸಿ ತೋರಿಸಿದ ಮೆಂಡಲೀವ್‌ನ ಆವರ್ತ ಕೋಷ್ಟಕ ಇನ್ನೂ ಕೆಲವು ಧಾತುಗಳ ಗುಣಲಕ್ಷಣಗಳಿಗನುಸಾರವಾಗಿ ಜೋಡಿಸುವುದನ್ನು ತಿಳಿಸಿಕೊಡಲಿಲ್ಲ. ಅಂದರೆ ಕ್ಷಾರಲೋಹ ಮತ್ತು ಲವಣಜನಕ ಇವೆರಡರ ಗುಣವಿಶೇಷಗಳನ್ನು ಹೊಂದಿದ್ದ ‘ಜಲಜನಕ ’(H) ಕ್ಕೆ ಒಂದು ಸ್ಥಿರ ಸ್ಥಾನವನ್ನು ಕೊಡಲು ಮೆಂಡಲೀವ್‌ನ ಆವರ್ತ ಕೋಷ್ಟಕ ವಿಫಲವಾಯಿತು. ಅಷ್ಟೇ ಅಲ್ಲಾ ಧಾತುಗಳ ದ್ರವ್ಯರಾಶಿಗನುಗುಣವಾಗಿ ಜೋಡಿಸಿದ ಆತನ ಕೋಷ್ಟಕ ಕೆಲವು ಸಂದರ್ಭದಲ್ಲಿ ಕೆಲವು ಧಾತುಗಳ ಜೋಡಣೆಗೆ ಕರಾರುವಾಕ್ಕಾಗಿ ಮಾಹಿತಿ ಒದಗಿಸಲು ವಿಫಲವಾಯಿತು.ಮೆಂಡಲೀವ್‌ನ ನಂತರ 1914ರಲ್ಲಿ ‘ಹೆನ್ರಿ ಮಾಸ್ಲೆ’ ಎಂಬ ಭೌತಶಾಸ್ತ್ರಜ್ಞ ಆವರ್ತ ಕೋಷ್ಟಕವನ್ನು ಪರಿಷ್ಕರಿಸಿದ. ಮಾಸ್ಲೆಯು ಮೂಲ ವಸ್ತುಗಳನ್ನು ಕ್ಷ-ಕಿರಣಗಳ ಸಹಾಯದಿಂದ ಪರೀಕ್ಷಿಸಿ ಅವುಗಳ ತರಂಗಾಂತರಗಳ ಅನುಸಾರವಾಗಿ ಪಟ್ಟಿ ಮಾಡಿದ. ಜಲಜನಕಕ್ಕೆ 1 ಎಂದು ಪ್ರಾರಂಭಿಸಿ 92ನೇ ವಸ್ತು ಯುರೇನಿಯಂ ಎಂಬ ಮೂಲವಸ್ತುವಿನವರೆಗೆ ಕ್ರಮವಾಗಿ ಸಂಖ್ಯೆಯನ್ನು ಕೊಡಮಾಡಿದನು. ಇದೇ ಪರಮಾಣು ಸಂಖ್ಯೆ.

ಪರಮಾಣು ಸಂಖ್ಯೆಯು ಪರಮಾಣುವಿನಲ್ಲಿರುವ ಪ್ರೋಟಾನ್ ಗಳ ಅಥವಾ ಎಲೆಕ್ಟ್ರಾನ್‌ಗಳ ಸಂಖ್ಯೆಗೆ ಸಮನಾಗಿರುವುದರಿಂದ ಮಾಸ್ಲೆಯು ಆವರ್ತ ಕೋಷ್ಟಕವನ್ನು ಪರಮಾಣು ಸಂಖ್ಯೆಗಳ ಆಧಾರದ ಮೇಲೆ ರಚಿಸಿದನು. ಇದೇ ನಾವಿಂದು ಬಳಸುತ್ತಿರುವ ಆಧುನಿಕ ಆವರ್ತ ಕೋಷ್ಟಕ (ವಿರಳ ಆವರ್ತಕೋಷ್ಟಕ) ವಾಗಿದೆ. ‘ಧಾತುಗಳ ಗುಣಲಕ್ಷಣಗಳು ಅವುಗಳ ಪರಮಾಣು ಸಂಖ್ಯೆಗೆ ಅನುಗುಣವಾಗಿ ಆವರ್ತನವಾಗುತ್ತವೆ’ಎಂಬುದು ಆಧುನಿಕ ಆವರ್ತ ನಿಯಮ. ಈ ಆವರ್ತ ಕೋಷ್ಟಕದಲ್ಲಿ 7 ಅಡ್ಡ ಸಾಲುಗಳಿವೆ, ಅಂದರೆ ಏಳು ಆವರ್ತನಗಳು ಮತ್ತು 18 ಕಂಬಸಾಲುಗಳಿವೆ, ಅಂದರೆ ಗುಂಪುಗಳು. ಅದೇನೇ ಇರಲಿ, ಎಲ್ಲ ಮೂಲವಸ್ತುಗಳು ಅವುಗಳ ಗುಣಲಕ್ಷಣಗಳಿಗನುಸಾರವಾಗಿ, ಸುಲಭವಾಗಿ ಅಧ್ಯಯನ ಮಾಡಲು ಸಾಮಾನ್ಯರ ಕೈಗೆಟುಕುವಂತೆ ಒಂದು ಕೋಷ್ಟಕದಲ್ಲಿ ಸಿಗುವಂತೆ ಮಾಡಿದ ಎಲ್ಲ ವಿಜ್ಞಾನಿಗಳೂ ಪ್ರಾತಃಸ್ಮರಣೀಯರಲ್ಲವೆ!.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top