ಹಲವು ಬಾಹ್ಯಾಕಾಶ ಯೋಜನೆಗಳಿಗೆ ಇಸ್ರೋ ಸಜ್ಜು | Vartha Bharati- ವಾರ್ತಾ ಭಾರತಿ

ಹಲವು ಬಾಹ್ಯಾಕಾಶ ಯೋಜನೆಗಳಿಗೆ ಇಸ್ರೋ ಸಜ್ಜು

ಭಾರತದ ಪಾಲಿಗೆ ಈ ವರ್ಷ ಬಾಹ್ಯಾಕಾಶ ವರ್ಷವೆಂದರೆ ತಪ್ಪಾಗಲಾರದು. ಮನುಷ್ಯನಿಗೆ ತಾನಿರುವ ಜಾಗಕ್ಕಿಂತ ಖಗೋಳದ ಬಗ್ಗೆ ತಿಳಿದುಕೊಳ್ಳುವುದೆಂದರೆ, ಎಲ್ಲಿಲ್ಲದ ಖುಷಿ ಮತ್ತು ಕುತೂಹಲ! ಇಂತಹ ಕುತೂಹಲಕ್ಕೆ ಸಾಕ್ಷಿಯೆಂಬಂತೆ ಹಲವು ದಶಕಗಳ ವಿಜ್ಞಾನಿಗಳ ಕನಸಾಗಿದ್ದ, ಬ್ಲಾಕ್ ಹೋಲ್‌ನ ಚಿತ್ರ ಸೆರೆಹಿಡಿದಿದ್ದು ಇತ್ತೀಚೆಗೆ ಸಾಕಾರಗೊಂಡಿದ್ದನ್ನು ನಾವಿಲ್ಲಿ ಸ್ಮರಿಸಬಹುದು. ಚಂದ್ರನ ಮೇಲೆ ಹಲವು ಕಂಪನಗಳು ಉಂಟಾಗುತ್ತಿರುವುದರಿಂದ ಅಲ್ಲಿ ಪ್ಲೆಟೊನಿಕ್ ಪ್ಲೇಟ್‌ಗಳು ಸರಿಯುತ್ತಿವೆ. ಈ ಕಾರಣದಿಂದ ಅಲ್ಲಲ್ಲಿ ನೆರಿಗೆಗಳಂತಹ ಆಕೃತಿಗಳು ಉಂಟಾಗುತ್ತಿವೆ. ಈ ರೀತಿ ಸಂಭವಿಸುವ ಘಟನೆಯು ಚಂದ್ರನ ಅಂತ್ಯ ಕಾಲವನ್ನು ಸೂಚಿಸುತ್ತದೆ ಎಂಬ ಮಾಹಿತಿಯನ್ನೂ ನಾವು ಇತ್ತೀಚೆಗೆ ನಾಸಾ ವಿಜ್ಞಾನಿಗಳಿಂದ ಕೇಳಿ ತಿಳಿದುಕೊಂಡೆವು. ಈ ಬೆನ್ನಲ್ಲೇ ಮತ್ತೊಂದು ಕುತೂಹಲಕಾರಿ ಅಂಶ ಹೊರ ಬಿದ್ದಿದೆ ಅದೇ ಮಂಗಳ ಮತ್ತು ಶುಕ್ರಗ್ರಹಗಳ ಅನ್ವೇಷಣೆಗೆ ಭಾರತದ ಹೆಮ್ಮೆಯ ಸಂಸ್ಥೆ ಇಸ್ರೋ ಸಜ್ಜಾಗಿರುವುದು.

ಇಸ್ರೋ, ಇದೇ ಜುಲೈ 22 ರಂದು ಚಂದ್ರಯಾನ - 2 ನ್ನು ಯಶಸ್ವಿಗೊಳಿಸಿದ್ದಲ್ಲದೇ, ಕೊನೆಯ ಕ್ಷಣದಲ್ಲಿ ಅಂದರೆ ಸೆಪ್ಟಂಬರ್ 7 ರಾತ್ರಿ ವಿಕ್ರಂ ಲ್ಯಾಂಡರ್‌ನ ಸಾಫ್ಟ್ ಲ್ಯಾಂಡಿಗ್‌ನಲ್ಲಾದ ಕೊಂಚ ತೊಡಕನ್ನು ಬಿಟ್ಟರೆ ಪ್ರತಿಶತ 99.99 ಯೋಜನೆ ಯಶಸ್ಸಿನ ಹಾದಿ ಹಿಡಿದಿದೆ. ಅಲ್ಲದೇ ವಿಕ್ರಂ ಲ್ಯಾಂಡರ್, ಸದ್ಯ ಚಂದ್ರನ ಮೆಲೆ ಇರುವುದು ಪತ್ತೆಯಾಗಿದ್ದು, ಅದರಿಂದ ಸಂಜ್ಞೆಗಳು ಬರುವುದೊಂದೇ ಬಾಕಿ. ಈ ಎಲ್ಲ ಕಾರ್ಯಗಳು ಇನ್ನು 14 ದಿನಗಳಲ್ಲಿ ಸಾಫಲ್ಯಗೊಳ್ಳುವುದೆಂದು ಇಸ್ರೋ ಅಧ್ಯಕ್ಷ ಕೆ.ಸಿವನ್ ಹೇಳಿದ್ದಾರೆ.

MoM ಚಂದ್ರನಷ್ಟೆ ನಮಗೆ ಕುತೂಹಲ ಕೆರಳಿಸಿರುವ ಇನ್ನೊಂದು ಆಕಾಶ ಕಾಯ ಅದು ಮಂಗಳ ಗ್ರಹ. ಇದನ್ನು ಅಂಗಾರಕ ಎಂದೂ ಸಹ ಕರೆಯುವರು. ಹಲವು ದಶಕಗಳಿಂದ ಮಂಗಳನಲ್ಲಿ ನೀರಿನ ಅಂಶವಿದೆ ಎಂದು ಕೇಳುತ್ತಾನೆ ಬಂದಿದ್ದೇವೆ.ಆದರೆ ಅದಕ್ಕೆ ಸೂಕ್ತ ವೈಜ್ಞಾನಿಕ ನಿಖರ ದಾಖಲೆಗಳು ಇದುವರೆಗೂ ನಮಗೆ ಸಿಕ್ಕಿಲ್ಲ ಅಂತಾನೇ ಹೇಳಬಹುದು. ಜಗತ್ತಿನ ಹಲವು ದೇಶಗಳು ಮಂಗಳನ ಕುರಿತು ಅಧ್ಯಯನ ಕೈಗೊಂಡಂತೆ ನಮ್ಮ ಭಾರತೀಯ ಬಾಹ್ಯಾಕಾಶ ವಿಜ್ಞಾನಿಗಳು - ಮಾರ್ಸ್ ಅರ್ಬಿಟರರಿ ಮಿಷನ್‌ನ್ನು ಕೈಗೊಂಡು ಮಂಗಳನ ಅಂಗಳದ ಕುರಿತು ನಿರಂತರ ಆರು ವರ್ಷಗಳಿಂದ ಅಧ್ಯಯನ ಮಾಡುತ್ತಾನೆ ಇದ್ದಾರೆ.

ಮೊಟ್ಟ ಮೊದಲ ಮಂಗಳಯಾನ ಪ್ರಾಜೆಕ್ಟ್‌ನಲ್ಲಿ ಯಶಸ್ಸನ್ನು ಸಾಧಿಸಿದ ಇಸ್ರೋ ಸದ್ಯ ಮಂಗಳಯಾನ 2 ನ್ನು 2022 - 2023 ರಲ್ಲಿ ಕೈಗೊಳ್ಳಲು ತಯಾರಿ ನಡೆಸಿದೆ. ಮೊದಲಿನ ಯಾನಕ್ಕಿಂತಲೂ ಉತ್ತಮ ಕಕ್ಷೆಯಲ್ಲಿ ಸೇರ್ಪಡೆಯಾಗಿ, ಮತ್ತಷ್ಟು ಸ್ಪಷ್ಟವಾಗಿ ಸಂಶೋಧನೆ ನಡೆಸುವ ಉದ್ದೇಶ ಹೊಂದಲಾಗಿದೆ. ಇಸ್ರೋ ಜತೆಗೆ ಫ್ರಾನ್ಸ್‌ನ ಸಿಎನ್‌ಇಎಸ್ ಸಂಸ್ಥೆಗಳು ಜಂಟಿಯಾಗಿ ನೌಕೆ ನಿರ್ಮಿಸುವ ಒಪ್ಪಂದ ಮಾಡಿಕೊಂಡಿದ್ದವು. ಆದರೆ ಫ್ರಾನ್ಸ್ ಹೆಚ್ಚಾಗಿ ಆಸಕ್ತಿ ತೋರಲಿಲ್ಲ. ಇಸ್ರೋವನ್ನು ಮತ್ತಷ್ಟು ಉತ್ತೇಜಿಸುವ ಸಲುವಾಗಿ ಮಂಗಳಯಾನ ಯೋಜನೆಗೆ ಹೆಚ್ಚಿನ ಅನುದಾನವನ್ನು ಕೇಂದ್ರ ಸರಕಾರ 2017ರ ಬಜೆಟ್‌ನಲ್ಲಿ ನೀಡಿತ್ತು. ಸದ್ಯ ಮಂಗಳನ ಮೇಲೆ ಆರ್ಬಿಟರ್, ಲ್ಯಾಂಡರ್, ರೋವರ್ ಕಳಿಸುವುದೋ ಅಥವಾ ಮಂಗಳಯಾನ 1ಕ್ಕಿಂತಲೂ ಅತ್ಯಾಧುನಿಕವಾದ ಉಪಕರಣಗಳ ಜತೆಗೆ ಆರ್ಬಿಟರ್ ಮಾತ್ರವೇ ರವಾನೆ ಮಾಡುವುದೋ ಎಂಬ ನಿರ್ಧಾರ ಮಾಡಬೇಕಿದೆಯಷ್ಟೆ.

ಇದರ ಜೊತೆಯಲ್ಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ, ತನ್ನ ಮುಂದಿನ 10 ವರ್ಷಗಳಲ್ಲಿ ಶುಕ್ರ ಗ್ರಹದ ಅಧ್ಯಯನವೂ ಸೇರಿದಂತೆ ಒಟ್ಟು 6 ವೈಜ್ಞಾನಿಕ ಬಾಹ್ಯಾಕಾಶ ಯೋಜನೆಗಳ ಕಡೆ ದೃಷ್ಟಿ ಹರಿಸಿದೆ. ಭೂಮಿಯ ಅವಳಿ ಸೋದರಿ ಎಂದೇ ಕರೆಯಲ್ಪಡುವ ಶುಕ್ರ ಗ್ರಹವು ತನ್ನ ಗಾತ್ರ, ಸಾಂಧ್ರತೆ ಮತ್ತು ಗುರುತ್ವದಲ್ಲಿ ಮಂಗಳ ಗ್ರಹವನ್ನು ಹೋಲುತ್ತದೆ. ಈ ಗ್ರಹದ ಹೊರ ಹಾಗೂ ಒಳ ಮೇಲ್ಮೈ ವಾತಾವರಣ, ಸೌರ ಕಿರಣ ಅಥವಾ ಸೌರ ಗಾಳಿಗೆ ಪ್ರತಿಸ್ಪಂದಿಸುವಿಕೆ ಕುರಿತು ಅಧ್ಯಯನಕ್ಕೆ ನಮ್ಮ ಇಸ್ರೋ 2023 ರಲ್ಲಿ ಗಗನನೌಕೆಯೊಂದನ್ನು ಉಡಾವಣೆ ಮಾಡಲಿದೆ ಎಂದು ಇಸ್ರೋ ಅಧಿಕೃತವಾಗಿ ಇತ್ತೀಚೆಗೆ ಹೇಳಿದೆ. ಸದ್ಯ ಶುಕ್ರಗ್ರಹದ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳುವುದಾದರೆ; ಸೌರಮಂಡಲದ ಗ್ರಹಗಳ ಪೈಕಿ ಸೂರ್ಯನಿಗೆ ಎರಡನೇ ಅತಿ ಸಮೀಪದ ಗ್ರಹ ಎಂದರೆ ಅದು ಶುಕ್ರ ಗ್ರಹ. ಸೂರ್ಯನನ್ನು 224.7 ಭೂಮಿ ದಿನಗಳಿಗೊಮ್ಮೆ ಪರಿಭ್ರಮಿಸುತ್ತದೆ. -4.6 ಗೋಚರ ಪ್ರಮಾಣವಿರುವ ಶುಕ್ರವು, ಚಂದ್ರನ ನಂತರ ರಾತ್ರಿಯ ಆಗಸದಲ್ಲಿ ಅತ್ಯಂತ ಪ್ರಕಾಶಮಾನವಾದ ಕಾಯವಾಗಿದೆ. 47.8 ಡಿಗ್ರಿ ಕೋನದಲ್ಲಿ ಗರಿಷ್ಠ ನೀಳತೆಯನ್ನು ಹೊಂದಿದೆ. ಗಾತ್ರ 9.28x10 ಘಾತ 11 ಘನ ಕಿ.ಮೀ ಗಳು.ದ್ರವ್ಯರಾಶಿ 4.86x10 ಘಾತ 24 ಕಿ.ಗ್ರಾಂ. ಹೊಂದಿರುವ ಶುಕ್ರವು ಭೂಮಿಯನ್ನೇ ಹೋಲುತ್ತದೆ. ಶುಕ್ರಗ್ರಹವು ಪ್ರಾಂತಕಾಲ, ನಸುಕಿನಲ್ಲಿ ಇಲ್ಲವೇ ಮುಸ್ಸಂಜೆಯ ಸೂರ್ಯಾಸ್ತದ ನಂತರ ಚೆನ್ನಾಗಿ ಕಾಣುತ್ತದೆ. ಇದನ್ನು ಹಗಲು ನಕ್ಷತ್ರ ಮತ್ತು ಸಂಜೆ ನಕ್ಷತ್ರ,ಇನ್ನು ಕೆಲವು ಕಡೆ ಬೆಳ್ಳಿ ಚುಕ್ಕಿ ಅಂತಲೂ ಕರೆಯಿಸಿಕೊಳ್ಳುತ್ತದೆ.

ಸೂರ್ಯನಿಂದ ಶುಕ್ರಗ್ರಹ ಸುಮಾರು 11 ಕೋಟಿ ಕಿ.ಮೀ. ದೂರದಲ್ಲಿ ಸುತ್ತುತ್ತಿದೆ. ಅಂತೆಯೇ ಭೂಮಿ ಸೂರ್ಯನಿಂದ ಸುಮಾರು 15 ಕೋಟಿ ಕಿ.ಮೀ. ದೂರದಲ್ಲಿ ಸುತ್ತುತ್ತಿದೆ. ಆದರೆ, ಭೂಮಿ ಮತ್ತು ಶುಕ್ರಗ್ರಹಗಳ ದೂರ ಯಾವಾಗಲೂ ಒಂದೇ ಸಮನಾಗಿರುವುದಿಲ್ಲ. 18 ತಿಂಗಳಿಗೊಮ್ಮೆ ಇವುಗಳ ದೂರದ ಅಂತರ ಸುಮಾರು 4.5 ಕೋಟಿ ಕಿ.ಮೀ. ಬಂದು ಅತಿ ಸಮೀಪದಲ್ಲಿರುತ್ತದೆ. ಆಗ ಶುಕ್ರ ದೊಡ್ಡದಾಗಿ ಕಾಣಿಸುತ್ತದೆ. ಹಾಗೆಯೇ 18 ತಿಂಗಳಿಗೊಮ್ಮೆ ಶುಕ್ರ ಭೂಮಿಯಿಂದ ಅತಿ ದೂರದಲ್ಲಿ ಅಂದರೆ ಸುಮಾರು 26 ಕೋಟಿ ಕಿ.ಮೀ. ದೂರದಲ್ಲಿರುತ್ತದೆ. ಆಗ ಚಿಕ್ಕದಾಗಿ ಕಾಣಿಸುತ್ತದೆ. ಶುಕ್ರಗ್ರಹ ಹೊಳೆಯುವುದು ಅದರ ಸ್ವಯಂಪ್ರಭೆಯಿಂದಲ್ಲ. ಸೂರ್ಯನಿಂದ ಬಿದ್ದ ಬೆಳಕು ಪ್ರತಿಫಲಿಸಿ ಹೊಳೆದಂತೆ ಕಾಣುವುದು. ಇನ್ನು ಭೂಮಿಗೆ ಸಮೀಪ ಬರುವಾಗ ಹೊಳೆವ ಸಂಪೂರ್ಣ ಭಾಗ ಭೂಮಿಗೆ ಕಾಣಿಸುವುದಿಲ್ಲವಾದ್ದರಿಂದ ಆಂಶಿಕವಾಗಿ ಶುಕ್ಲಪಕ್ಷದ ಚಂದ್ರನಂತೆ ದೂರದರ್ಶಕದಲ್ಲಿ ಕಾಣಸಿಗುತ್ತದೆ.

ಶುಕ್ರಗ್ರಹವು ಭೂಮಿಯ ವಿರುದ್ಧ ದಿಕ್ಕಿನಲ್ಲಿ ಸುತ್ತುತ್ತದೆ.ಇದರ ವಾತಾವರಣದಲ್ಲಿ ಇಂಗಾಲಾಮ್ಲ ಹೆಚ್ಚಾಗಿರುವುದರಿಂದ ಈ ಗ್ರಹದಲ್ಲಿ ಜೀವಮೂಲವಿಲ್ಲ. ಇದರ ಮೇಲ್ಮೈ ಸೀಸವನ್ನೂ ಕರಗಿಸಬಲ್ಲಷ್ಟು ಶಾಖದಿಂದ ಕೂಡಿದೆ. ಅಂದರೆ 327.5 ಡಿಗ್ರಿ ಸೆಂಟಿಗ್ರೇಡ್ ನಷ್ಟು ಉಷ್ಣತೆ ಹೊಂದಿದೆ.ಇಷ್ಟೊಂದು ತಾಪದಿಂದ ಕೂಡಿದ ಶುಕ್ರಗ್ರಹ ರಾತ್ರಿ ಆಕಾಶದಲ್ಲಿ ಬಹುವಿಧವಾಗಿ ಹೊಳೆಯುತ್ತದೆ. ಆ ನೋಟ ನೋಡಲು ಬಲು ಚಂದ.

ಶುಕ್ರದ ಮೇಲ್ಮೈನ ಬಹಳಷ್ಟು ಭಾಗಗಳು ಜ್ವಾಲಾಮುಖಿಗಳ ಚಟುವಟಿಕೆಗಳಿಂದ ರೂಪುಗೊಂಡಿವೆ. ಶುಕ್ರನ ಮೇಲೆ ಭೂಮಿಗಿಂತ ಹಲವು ಪಟ್ಟು ಹೆಚ್ಚು ಜ್ವಾಲಾಮುಖಿಗಳಿದ್ದು, ಇವುಗಳಲ್ಲಿ 167 ಜ್ವಾಲಾಮುಖಿಗಳು 100 ಕಿ.ಮೀ. ಗಿಂತ ಹೆಚ್ಚು ವ್ಯಾಸವನ್ನು ಹೊಂದಿವೆ. ಭೂಮಿಯ ಮೇಲೆ ಇಷ್ಟು ದೊಡ್ಡದಾದ ಏಕಮಾತ್ರ ಜ್ವಾಲಾಮುಖಿ ವ್ಯವಸ್ಥೆಯೆಂದರೆ ಹವಾಯಿನಲ್ಲಿರುವ ‘ಬಿಗ್ ಐಲ್ಯಾಂಡ್’ ಆದರೆ, ಇದರರ್ಥ ಶುಕ್ರವು ಭೂಮಿಗಿಂತ ಹೆಚ್ಚು ಜ್ವಾಲಾ ಚಟುವಟಿಕೆಯನ್ನು ಹೊಂದಿದೆ ಎಂದಲ್ಲ. ಬದಲಿಗೆ, ಶುಕ್ರದ ಮೇಲ್ಮೈ ಭೂಮಿಯ ಮೇಲ್ಮೈಗಿಂತ ತುಂಬ ಹಳೆಯದಾಗಿರುವುದು ಇದಕ್ಕೆ ಕಾರಣ. 2015 ರಲ್ಲಿ ನಿಯೋಜಿಸಲಾಗಿರುವ ಬಾಹ್ಯಾಕಾಶ ದೂರದರ್ಶಕ ಆಸ್ಟ್ರೋಸ್ಯಾಟ್-1 ರ ಆಯಸ್ಸು 5 ವರ್ಷ ಅಂದರೆ 2020ಕ್ಕೆ ಮುಕ್ತಾಯವಾಗಲಿದೆ. ಇದರ ಯಶಸ್ಸನ್ನು ಮನಗಂಡಿರುವ ಇಸ್ರೋ ಇದೀಗ ಮತ್ತೊಂದು ಉಪಗ್ರಹ ರವಾನಿಸುವ ಉದ್ದೇಶ ಹೊಂದಿದೆ. ಬಾಹ್ಯಾಕಾಶ ಕಾಯಗಳ ಕುರಿತು ಹೆಚ್ವಿನ ಅಧ್ಯಯನ ನಡೆಸಲು ಇದರಿಂದ ಸಾಧ್ಯವಾಗುತ್ತಿದೆ. ಎಕ್ಸ್‌ರೇ ಹಾಗೂ ಯುವಿ ಬ್ಯಾಂಡ್ ಗಳನ್ನು ಆಕಾಶ ಸಮೀಕ್ಷೆ ನಡೆಸಲಾಗುತ್ತಿದೆ. ಸದ್ಯ, ಬಾಹ್ಯಾಕಾಶ ಸಂಶೋಧನಾ ಯೋಜನೆಗಳಾದ ಆದಿತ್ಯ ಎಲ್-1, ಎಕ್ಸ್ ಪೋಸ್ಯಾಟ್ ಮಿಷನ್ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದ್ದು, ಮಂಗಳ ಕಕ್ಷೆಗಾಮಿ ಮಿಷನ್ - 2, ಶುಕ್ರಾನ್ವೇಷಣೆ, ಚಂದ್ರ ಯಾನ-3 ಮತ್ತು ಎಕ್ಸೋವಲ್ಡ್ಸ್ ಪ್ರಾಜೆಕ್ಟ್ ಮುಂತಾದವು ಮುಂದಿನ ದಿನಮಾನಗಳಲ್ಲಿ ಪ್ರವರ್ಧಮಾನಕ್ಕೆ ಬರಲಿವೆ. ಈ ಕುರಿತು ಇತ್ತೀಚೆಗೆ ಇಸ್ರೋ ಅಧ್ಯಕ್ಷ ಕೆ.ಸಿವನ್ ಶ್ರೀಹರಿ ಕೋಟಾದ ಯುವಿಕಾ-2019 ಕಾರ್ಯಕ್ರಮದಲ್ಲಿ ಹೇಳಿದರು. ಚಂದ್ರಯಾನ -2 ಜಾರಿಯಲ್ಲಿದ್ದಾಗಲೇ, ಮುಂದಿನ ದಶಕದಲ್ಲಿ ಚಂದ್ರಯಾನ-3 ಕೈಗೊಳ್ಳುವುದಾಗಿ ಇಸ್ರೋ ಅಧ್ಯಕ್ಷ ಕೆ.ಸಿವನ್ ಘೋಷಣೆ ಮಾಡಿದ್ದರು. ಬಾಹ್ಯಾಂತರಿಕ್ಷ ಚಟುವಟಿಕೆಗಳ ಪ್ರದರ್ಶನಕ್ಕೆ ಚಂದ್ರ ಅತ್ಯುತ್ತಮ ಆಯ್ಕೆಯಾಗಿ ದೆಯೇ ಎಂಬುದನ್ನು ಅಧ್ಯಯನ ನಡೆಸಬೇಕಿದೆ. ಚಂದ್ರನ ಮೇಲೆ ಭಾರತೀಯ ರೊಬೋಟರ್ ನಿಯೋಜಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ. ಚಂದ್ರಯಾನ - 3 ನಡೆಯುವುದು ಖಚಿತವಾಗಿದೆಯಾದರೂ, ಚಂದ್ರಯಾನ - 2 ರ ಅಂತಿಮ ಫಲಿತಾಂಶದ ಕುರಿತು ಸಣ್ಣ ಗೊಂದಲ ಇರುವ ಕಾರಣ ಚಂದ್ರಯಾನ - 3 ರ ಸ್ವರೂಪ, ಉದ್ದೇಶದಲ್ಲಿ ಬದಲಾವಣೆ ಯಾಗಬಹುದೇ ಎಂಬುದನ್ನು ಕಾಲವೇ ನಿರ್ಧರಿಸಬೇಕಿದೆ.

ಸೂರ್ಯನ ಸಂಶೋಧನೆಯ ಕುರಿತಾಗಿರುವ ಆದಿತ್ಯ ಎಲ್ - 1 ಮಿಷನ್ ವ್ಯೆಮನೌಕೆ 2020ರ ಮಧ್ಯ ಭಾಗದಲ್ಲಿ ಉಡಾವಣೆಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಕಣ್ಣಿಗೆ ಕಾಣುವ ಗೋಳದಿಂದ ಸಾವಿರಾರು ಕಿ.ಮೀ. ಬಾಚಿಕೊಂಡಿರುವ ಸೂರ್ಯನ ಹೊರ ಕವಚವಾದ ಲರೋನಾ ಅಧ್ಯಯನ ನಡೆಸುವ ಯೋಜನೆ ಇದಾಗಿದೆ. ಸುಮಾರು 9 ಲಕ್ಷ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹೊಂದಿರುವ ಕರೋನಾ ಇಷ್ಟು ಉಷ್ಣಾಂಶವನ್ನು ಹೊಂದಿದ್ದಾದರೂ ಹೇಗೆ ಎಂಬ ಪ್ರಶ್ನೆ ಖಭೌತಶಾಸ್ತ್ರಜ್ಞರಿಗೆ ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಈ ಕುರಿತು ಸ್ಪಷ್ಟವಾಗಿ ಅಧ್ಯಯನ ಮಾಡಲು ಆದಿತ್ಯ ಎಲ್ - 1 ಯೋಜನೆ ಮಹತ್ವದ್ದೆನಿಸಿದೆ. ಭೂಮಿಯಿಂದ 15 ಲಕ್ಷ ಕಿ.ಮೀ. ದೂರದಲ್ಲಿರುವ ಲೈಬ್ರೇಷನ್ ಆರ್ಬಿಟ್‌ನ ಸೂರ್ಯ ಮತ್ತು ಭೂಮಿಯ ಮಧ್ಯೆ ಶೇ.1ರಷ್ಟು ಅಂತರದಲ್ಲಿ ನಿಲ್ಲಲಿದೆ. ಈ ಪ್ರದೇಶದಲ್ಲಿ ಎರಡೂ ಕಾಯಗಳ ಗುರುತ್ವಾಕರ್ಷಣಾ ಬಲ ಸಮಾನವಾಗಿರಲಿದೆ. ಈ ಸ್ಪೇಸ್ ವೆಹಿಕಲ್ ಸೂರ್ಯನ ಪ್ರಭಾವಲಯದ, ಅಂದರೆ ಕರೋನ ಭಾಗದ ಅಧ್ಯಯನ ನಡೆಸಲಿದೆ. ಇದರಿಂದ ಮೇಲ್ಮಟ್ಟದ ವಾತಾವರಣದಲ್ಲಿ ಕರೋನ ಪ್ರಭಾವ ಮತ್ತು ಭೂಮಿಯ ಹವಾಮಾನ ಬದಲಾವಣೆಯ ಮೇಲಾಗುವ ಪರಿಣಾಮ ಗೊತ್ತಾಗುತ್ತದೆ. ಒಂದು ವೇಳೆ ಈ ಸ್ಪೇಸ್ ವೆಹಿಕಲ್‌ನ ಅಧ್ಯಯನವನ್ನು ಸಂಪೂರ್ಣವಾಗಿ ಅರ್ಥೈಸಿಕೊಂಡಿದ್ದೇ ಆದರೆ, ಜಾಗತಿಕ ಸಮಸ್ಯೆಯಾಗಿರುವ ವಾತಾವರಣದಲ್ಲಾಗುವ ಬದಲಾವಣೆಯ ಮುನ್ಸೂಚನೆ ನಿಖರವಾಗಿ ತಿಳಿಯಲಿದೆ. ಇಸ್ರೋದ ‘ಎಕ್ಸ್ ಪೋ ಸ್ಯಾಟ್’ ಇದು ಐದು ವರ್ಷದ ಬಹುನಿರೀಕ್ಷಿತ ಯೋಜನೆಯಾಗಿದ್ದು, ಬೆಂಗಳೂರಿನ ರಾಮನ್ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿರುವ ‘ಪೋಲಾರ್ ಮೀಟರ್’ ಸಾಧನವನ್ನು ಹೊತ್ತೊಯ್ಯುವ ಈ ಉಪಗ್ರಹ, ಭೂಮಿಯಿಂದ 500 ರಿಂದ 700 ಕಿ.ಮೀ. ದೂರದಲ್ಲಿರುವ ವರ್ತುಲಾಕಾರದ ಕಕ್ಷೆಯಲ್ಲಿ ಸ್ಥಿತವಾಗಿ ಬ್ರಹ್ಮಾಂಡದ ವಿಕಿರಣದ ಬಗ್ಗೆ ಅಧ್ಯಯನ ಕೈಗೊಳ್ಳಲಿದೆ.

2018 ರ ಸ್ವಾತಂತ್ರ ದಿನದ ಭಾಷಣದಲ್ಲಿ ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗಗನಯಾನ ಯೋಜನೆಯಲ್ಲಿ 2022ಕ್ಕೆ ಬಾಹ್ಯಾಕಾಶಕ್ಕೆ ಮಾನವರನ್ನು ಕಳುಹಿಸುವುದಾಗಿ ಘೋಷಿಸಿದ್ದನ್ನು ನಾವಿಲ್ಲಿ ಸ್ಮರಿಸಬಹುದು. ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ದೇಶವಾಗಿ ಭಾರತ ಹೊರಹೊಮ್ಮಲಿದ್ದು, ಈ ಕಾರ್ಯಕ್ಕೆ 10 ಸಾವಿರ ಕೋಟಿ ರೂ. ಮೀಸಲಿಟ್ಟಿರುವುದಾಗಿಯೂ ಸಹ ಹೇಳಿದ್ದರು.ಗಗನಯಾತ್ರಿಗಳ ವಾಸ್ತವ್ಯಕ್ಕೆ ಕ್ಯಾಪ್ಸೂಲ್, ಬಾಹ್ಯಾಕಾಶದಲ್ಲಿ ಉಸಿರಾಟಕ್ಕೆ ಅನುಕೂಲವಾಗಲು ವ್ಯವಸ್ಥೆ ಹಾಗೂ ನಿಯಂತ್ರಣ ವ್ಯವಸ್ಥೆಯನ್ನು ಈಗಾಗಲೇ ಅಭಿವೃದ್ಧಿಪಡಿಸಲಾಗಿದ್ದು, ಪರೀಕ್ಷಾ ಹಂತದಲ್ಲಿದೆ. ಮಾನವಸಹಿತ ಬಾಹ್ಯಾಕಾಶ ಯೋಜನೆಗಾಗಿಯೇ ಇಸ್ರೋ ಕೇಂದ್ರದಲ್ಲಿ ತೆರೆಯಲಾಗಿರುವ ಹೊಸ ಕೇಂದ್ರದಲ್ಲಿ ಈ ಪರೀಕ್ಷೆಗಳು ನಡೆಯುತ್ತಿವೆ. ಅಂದರೆ ಸಂಪೂರ್ಣವಾಗಿ ದೇಶಿ ನಿರ್ಮಿತ. 2020ರ ಡಿಸೆಂಬರ್ ಮತ್ತು 2021ರ ಜುಲೈನಲ್ಲಿ ಮಾನವರಹಿತ ಪರೀಕ್ಷಾರ್ಥ ಉಡಾವಣೆಗಳು ನಡೆಯಲಿದ್ದು, ಪರೀಕ್ಷೆಗಳ ಫಲಿತಾಂಶ ಸಮಾಧಾನಕರವಾಗಿದ್ದಲ್ಲಿ 2021ರ ಅಂತ್ಯದ ಅಥವಾ 2022 ರಲ್ಲಿ ಮೂವರು ಬಾಹ್ಯಾಕಾಶ ಯಾತ್ರಿಗಳು ನಭಕ್ಕೆ ಹಾರಿ ನಂತರದಲ್ಲಿ ಸುರಕ್ಷಿತವಾಗಿ ಭೂಮಿಗೆ ಮರಳಲಿದ್ದಾರೆ. ನಂತರ 2023 ರಲ್ಲಿ ಅಮೆರಿಕದ ನಾಸಾ, ರಶ್ಯದ ರೋಸ್ ಕಾಸ್ಮೋಸ್, ಜಪಾನ್‌ನ ಜಾಕ್ಸಾ, ಯುರೋಪ್‌ನ ಇಎಸ್‌ಎ, ಕೆನಡಾದ ಸಿಎಸ್‌ಎ ಸಹಭಾಗಿತ್ವದಲ್ಲಿ ಇದೀಗ ಭೂಮಿಯ ಕಕ್ಷೆಯಲ್ಲಿ ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (ಐಎಸ್‌ಎಸ್ ) ಕಾರ್ಯನಿರ್ವಹಿಸುತ್ತಿದೆ.ಇದೇ ಮಾದರಿಯಲ್ಲಿ ಭಾರತದ ಬಾಹ್ಯಾಕಾಶ ಕೇಂದ್ರವು 15 - 20 ಟನ್ ತೂಕವಿರಲಿದ್ದು, 15 - 20 ದಿನಗಳವರೆಗೆ ಬಾಹ್ಯಾಕಾಶ ಯಾನಿಗಳಿಗೆ ವಸತಿ ಕಲ್ಪಿಸುವ ನಿರೀಕ್ಷೆಯಿದೆ. 2022ಕ್ಕೆ ಮಾನವ ಸಹಿತ ಬಾಹ್ಯಾ ಕಾಶಯಾನ ಗಗನಯಾನದ ತಾರ್ಕಿಕ ಮುಂದುವರಿಕೆ ಎಂದು ಇಸ್ರೋ ಅಧ್ಯಕ್ಷ ಕೆ. ಸಿವನ್ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

    ಇಸ್ರೋ ಇನ್ನು ಮುಂದೆ ಕೈಗೊಳ್ಳುವ ಬಾಹ್ಯಾಕಾಶ ಯೋಜನೆಗಳು ಈ ರೀತಿ ಇವೆ: 2020ರಲ್ಲಿ ‘ಎಕ್ಸ್ ಪೋಸ್ಯಾಟ್’ ಮೂಲಕ ಬ್ರಹ್ಮಾಂಡದ ಕಾಸ್ಮಿಕ್ ವಿಕಿರಣಗಳ ಅಧ್ಯಯನ.

    2021 ರಲ್ಲಿ ಸೂರ್ಯನ ಅಧ್ಯಯನಕ್ಕೆ ಆದಿತ್ಯ ಎಲ್ - 1 ಪ್ರಾಜೆಕ್ಟ್.

    2022ರಲ್ಲಿ ಮಂಗಳನ ಅಧ್ಯಯನಕ್ಕೆ ಮಂಗಳ ಕಕ್ಷೆಗಾಮಿ ಮಿಷನ್-2.

    2023 ರಲ್ಲಿ ಶುಕ್ರಗ್ರಹದ ಅನ್ವೇಷಣೆ.

    2024 ರಲ್ಲಿ ಚಂದ್ರನ ಕುರಿತು ಮತ್ತಷ್ಟು ಅಧ್ಯಯನಕ್ಕಾಗಿ ‘ಚಂದ್ರಯಾನ-3’.

    2028 ರಲ್ಲಿ ಸೌರವ್ಯೆಹದಾಚೆಗಿನ ಆಕಾಶಕಾಯಗಳ ಅಧ್ಯಯನಕ್ಕೆ ‘ಎಕ್ಸೋವಲ್ಡ್ಸ್’ ಪ್ರಾಜೆಕ್ಟ್.

ಸದಾ ಬಾಹ್ಯಾಕಾಶದಲ್ಲಿ ಒಂದಿಲ್ಲಾ ಒಂದು ಸಂಶೋಧನೆ ಯಲ್ಲಿ ತೊಡಗಿರುವ ನಮ್ಮ ಹೆಮ್ಮೆಯ ಸಂಸ್ಥೆ ‘ಇಸ್ರೋ’ ಜಾಗ ತಿಕ ಮಟ್ಟದಲ್ಲಿ ಹೆಸರು ಮಾಡಿದೆ. ಈಗ ಜಾಗತಿಕವಾಗಿ ಮುಂ ಚೂಣಿಯಲ್ಲಿರುವ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ವನ್ನು ಇದು ಮುಂದೊಂದು ದಿನ ಹಿಂದಿಕ್ಕಿ ಮುಂದೆ ಸಾಗುವುದರಲ್ಲಿ ಯಾವ ಸಂಶಯವೂ ಇಲ್ಲ!

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top