ದಾರಿ ಯಾವುದಯ್ಯಾ... | Vartha Bharati- ವಾರ್ತಾ ಭಾರತಿ

ದಾರಿ ಯಾವುದಯ್ಯಾ...

ಸೌಮ್ಯಾಳಿಗೆ ತಿಳಿಯಲಿಲ್ಲ ಅಮ್ಮ ಅಪ್ಪನಿಗೆ ನನ್ನ ಮೇಲೆ ಇಷ್ಟೇಕೆ ಕೋಪ? ಕ್ಷಣ ಕ್ಷಣಕ್ಕೂ ತನ್ನ ಮೇಲೆ ಉರಿದು ಬೀಳುವ ಅಮ್ಮ, ಗದರುವ ಅಪ್ಪ, ಇನ್ನು ತಂಗಿಯರು ಕೂಡ ತನ್ನಿಂದ ದೂರ ಆಗಿದ್ದರು. ರೂಮಿನಲ್ಲಿ ಒಬ್ಬಳೇ ಕೂತು ಎಷ್ಟು ಕಣ್ಣೀರು ಹಾಕಿದರೂ ಕಣ್ಣೀರು ಬತ್ತಿತೇ ಹೊರತು ಪರಿಹಾರ ತಿಳಿಯಲಿಲ್ಲ. ಮನೆಯವರ ಪ್ರೀತಿ ವಿಶ್ವಾಸದ ಸೆಲೆಗಾಗಿ ಹಾತೊರೆದು ಮಹಾಕೂಪ ಒಂದರ ಸುಳಿಯಿಂದ ತಪ್ಪಿಸಿಕೊಂಡು ಓಡೋಡಿ ಬಂದಿದ್ದಳು. ಅಮ್ಮನ ಮಮತೆಯ ಮಡಿಲು ಸೇರಲು ಹಾತೊರೆಯುತ್ತಿದ್ದಳು. ಆದರೆ ಆದದ್ದೇನು. ಅದಾಗಲೇ ತಾನು ಮನೆ ಸೇರಿ ಒಂದು ವಾರವೇ ಕಳೆದಿತ್ತು. ಬಂದ ದಿನ ಇದ್ದ ಸಂತೋಷ ಬರು ಬರುತ್ತಾ ತಾತ್ಸಾರವಾಗಿ ಬದಲಾಗಿತ್ತು. ಮೊದಲ ವಿಶ್ವಾಸ ಹೋಗಿ ಸಂಶಯದ ಹೊಗೆ ಶುರುವಾಗಿತ್ತು.

ತಂಗಿ ಕುಸುಮ ಬಂದು ಕರ್ತವ್ಯವೆಂಬಂತೆ ಊಟಕ್ಕೆ ಬಾ ಎಂದು ಕರೆದು ಹೋದಳು. ಊಟ ಯಾರಿಗೆ ಬೇಕಾಗಿದೆ. ಒಮ್ಮೆ ಅವಳ ದುಃಖ ಏನೆಂದು ಕೇಳಿದ್ದರೆ ಅಮ್ಮನ ಸೆರಗಿನಲ್ಲಿ ಅದುವರೆಗೂ ಅದುಮಿಟ್ಟಿದ್ದ ನೋವು, ಕಟು ಸತ್ಯಗಳನ್ನು ಹೊರ ಹಾಕಿ ಮನಸ್ಸು ಹಗುರ ಮಾಡಿಕೊಳ್ಳಬೇಕೆಂಬ ಬಯಕೆ. ತಾನೂ ಆ ಮನೆಯ ಮಗಳೇ ಎನ್ನುವುದನ್ನೇ ಮರೆತಂತಿದೆ. ತಿರಸ್ಕಾರ ಉದಾಸೀನ ಭಾವ ಹೊರತು ಬೇರಾವ ಸಂಬಂಧದ ಸುಳಿವೂ ಕಾಣುತ್ತಿಲ್ಲ. ಅಕ್ಕಪಕ್ಕದವರು ಓರಗೆಯ ಸ್ನೇಹಿತರು ಏನೋ ನೆಪ ಮಾಡಿ ಬಂದರೂ ಅಮ್ಮ ತಂಗಿಯರೊಂದಿಗೆ ಮಾತನಾಡಿ ಅನುಮಾನದ ಬೀಜ ಬಿತ್ತಿ ಹೋಗುತ್ತಿದ್ದರು. ಉರಿಯುವ ಕೆಂಡಕ್ಕೆ ತುಪ್ಪ ಸುರಿದಂತೆ ಅಪ್ಪ-ಅಮ್ಮನ ಕೋಪ ನೆತ್ತಿಗೇರುತ್ತಿತ್ತು. ಹಾಲಿನಲ್ಲಿ ಅಪ್ಪ-ಅಮ್ಮನ ಮಾತು ಕೇಳಿಸುತ್ತಿತ್ತು. ಅಮ್ಮ ಹೇಳುತ್ತಿದ್ದಳು, ಅಲ್ಲಾ ಬೆಳೆದ ಹೆಣ್ಣು ಮಕ್ಕಳನ್ನು ದಡ ಸೇರಿಸುವವರೆಗೆ ಮನೆಯಲ್ಲಿ ಇಟ್ಟುಕೊಳ್ಳುವುದೇ ಕಷ್ಟ. ನಾವು ಮಾನ ಮರ್ಯಾದೆಗಂಜಿ ಬದುಕುವವರು. ಅಂತಹದ್ರಲ್ಲಿ ಇವಳು ಮನೆಗೆ ಹಿರಿ ಮಗಳಾಗಿ ಇಂತಹ ಕೆಲಸವೇ ಮಾಡುವುದು? ಹೊರಗೆ ಹೇಗೆ ಮುಖವೆತ್ತಿ ಓಡಾಡುವುದು? ಅಪ್ಪನ ಮಾತು- ಇದೊಂದು ಶನಿ ನಮ್ಮ ಹೊಟ್ಟೇಲಿ ಹುಟ್ಟದಿದ್ದರೆ ಎಷ್ಟೋ ಚೆನ್ನಾಗಿತ್ತು. ಹೋದವಳು ಮನೆ ಕಡೆಗೆ ಯಾಕೆ ಬರಬೇಕಿತ್ತು. ನನ್ನ ಮಗಳು ಸತ್ತು ಹೋದಳೆಂದು ಗಟ್ಟಿ ಮನಸ್ಸು ಮಾಡಿಕೊಳ್ಳಬಹುದಿತ್ತು. ಊರಲ್ಲಿ ಎಲ್ಲರ ಬಾಯಲ್ಲೂ ಅದೇ ನಿಮ್ಮ ಮಗಳು ಎಲ್ಲೋ ಓಡಿ ಹೋಗಿದ್ದಳಂತೆ? ಹೆಣ್ಣು ಹೆತ್ತ ಮೇಲೆ ಅವರ ಜವಾಬ್ದಾರಿ ನಿಭಾಯಿಸುವುದು ಕಷ್ಟವೇ ಎಂದು ಕೊಂಕು ಮಾತುಗಳನ್ನಾಡುವ ಜನರ ಬಾಯಿ ಮುಚ್ಚಿಸುವರಾರು? ಬಡತನಕ್ಕೆ ಅಂಜಿದವರೆಲ್ಲ. ಆದರೆ ಇದೆಲ್ಲಿಯ ಪ್ರಾರಬ್ದ, ಮರ್ಯಾದೆ ಹೋದ ಮೇಲೆ ಬದುಕಿದರೆಷ್ಟು, ಸತ್ತರೆಷ್ಟು? ಹೀಗೆ ಅವರ ಮಾತುಗಳನ್ನು ಕೇಳಿ ಜೀವ ಬಾಯಿಗೆ ಬಂದಂತಾಗಿತ್ತು. ತಾನು ವಾಪಸ್ ಬಂದಿದ್ದೇ ತಪ್ಪಾಯಿತೆ? ತಾನು ಹುಟ್ಟಿದ ಮನೆ, ತನ್ನ ಪ್ರೀತಿಯ ಅಪ್ಪ-ಅಮ್ಮ, ತಂಗಿಯರು, ತಮ್ಮ ಅದೆಷ್ಟು ಚೆಂದ ಇತ್ತು ಮೊದಲಿನ ದಿನಗಳು. ಎಲ್ಲದಕ್ಕೂ ಅಕ್ಕ ಅಕ್ಕ ಎಂದು ಹಿಂದೆ ಸುತ್ತುವ ತಮ್ಮ ತಂಗಿಯರು. ಅವರಿಗೆ ಜಡೆ ಹಾಕುವುದು, ಹೂ ಕಟ್ಟಿ ಮುಡಿಸುವುದು, ಸ್ಕೂಲ್ ಬ್ಯಾಗ್ ರೆಡಿ ಮಾಡುವುದು, ಓದಿಸುವುದು, ತಮ್ಮನಿಗಂತೂ ಶರ್ಟ್ ಬಟನ್ ಹೋದರೂ ಅಕ್ಕನೇ ಹಾಕಿಕೊಡಬೇಕು. ಹೆಸರಿಗೆ ತಕ್ಕಂತೆ ಸೌಮ್ಯಾ ತನ್ನ ಒಳ್ಳೆತನ ಮೃದು ಮನಸ್ಸು, ಸೌಮ್ಯಾ ಸ್ವಭಾವ ಎಲ್ಲರಿಗೂ ಅಚ್ಚುಮೆಚ್ಚು. ತೀರಾ ರೂಪವತಿ ಅಲ್ಲದಿದ್ದರೂ ಕುರೂಪಿಯಂತು ಅಲ್ಲ. ಗೆಳತಿಯರಲ್ಲೂ ಎಲ್ಲರಿಗೂ ಸೌಮ್ಯಾಳೆ ಹೆಚ್ಚು ಪ್ರಿಯ. ಅಮ್ಮ ಹೇಳಿಕೊಡುವ ಅಡುಗೆ ಕಲಿಯುವುದು, ಓರಗೆಯವರ ಜೊತೆ ರಂಗೋಲಿ ಹಾಡು ಕಸೂತಿ ಕೆಲಸ ಕಲಿಯುವುದು ಇಷ್ಟವಾದ ಕೆಲಸ. ಎಸೆಸೆಲ್ಸಿ ಮುಗಿಸಿ ಅದಾಗಲೇ 5 ವರ್ಷಗಳೇ ಕಳೆದಿತ್ತು. ಮುಂದೆ ಓದಲು ಊರಲ್ಲಿ ಅವಕಾಶವಿಲ್ಲದಿದ್ದಾಗ ಅಷ್ಟಕ್ಕೆ ತೃಪ್ತಿಪಟ್ಟುಕೊಂಡು ಅಮ್ಮನಿಗೆ ಮನೆ ಕೆಲಸದಲ್ಲಿ ನೆರವಾಗುತ್ತಿದ್ದಳು. ಇವಳ ಜೊತೆ ಓದಿದವರು ಕೆಲವರು ಬೇರೆ ಊರಿಗೆ ಹೋಗಿ ಕಾಲೇಜು ವಿದ್ಯಾಭ್ಯಾಸ ಮುಂದುವರಿಸಿದರು. ಒಂದಿಬ್ಬರು ಸಂಬಂಧಿಕರ ಮನೆಗೆ ಓದಲು ಸೇರಿಕೊಂಡಿದ್ದರು.

ಅಂದು ತನ್ನ ಹೈಸ್ಕೂಲಿನಲ್ಲಿ ಓದುತ್ತಿದ್ದ ಗೆಳತಿ ಅಕಸ್ಮಾತ್ ಆಗಿ ಊರಿಗೆ ಬಂದಳು. ಹಳೆಯ ಸ್ನೇಹಿತರೆಲ್ಲಾ ಇವರ ಮನೆಯ ಹಿಂದಿನ ಕೈತೋಟದ ನಡುವೆ ಕೂತು ನಕ್ಕು, ಹರಟಿದರು. ಸ್ಕೂಲ್ ದಿನಗಳ ಎಷ್ಟೋ ವಿಷಯಗಳ ಬಗ್ಗೆ ಹರಟಿದ್ದಾಯಿತು. ಅಮ್ಮ ಎಲ್ಲರಿಗೂ ತಿಳಿ ಸಾರು, ಸೌತೆಕಾಯಿ ಗೊಜ್ಜು, ಹಪ್ಪಳ ಸಂಡಿಗೆ ಕರಿದು ಊಟ ಬಡಿಸಿದರು. ಸ್ನೇಹಿತೆ ಗೀತಾಳ ಮದುವೆ ನಿಶ್ಚಯವಾಗಿತ್ತು. ಎಲ್ಲರನ್ನು ಕರೆಯಲೆಂದೇ ಬಂದಿದ್ದಳು. ಎಲ್ಲರ ಮನೆಗೂ ಇನ್ವಿಟೇಷನ್ ಕೊಟ್ಟು ಇವರ ಮನೆಯಲ್ಲೇ ಉಳಿದಳು. ಇವರ ತಂದೆ ತಂಗಿಯರು ತಮ್ಮ ಎಲ್ಲರೂ ತಪ್ಪದೆ ಮದುವೆಗೆ ಬರಬೇಕೆಂದು ಆಹ್ವಾನಿಸಿ ಮಾರನೇ ದಿನ ಹೊರಟಳು. ತಮ್ಮಾಂದಿಗೆ ಸೌಮ್ಯಾಳನ್ನು ಕರೆದುಕೊಂಡು ಹೋಗುವುದಾಗಿಯೂ ಇನ್ನು ಕೆಲವು ಕಡೆ ಪತ್ರಿಕೆ ಕೊಡುವುದಿದೆ ಕಳಿಸಿ ಎಂದು ಒತ್ತಾಯ ಮಾಡಿದ ಮೇಲೆ ಅಪ್ಪನೊಂದಿಗೆ ಹೇಳಿ ಕಳಿಸಿಕೊಟ್ಟರು. ನಾಲ್ಕೈದು ದಿನ ಇದ್ದು ಗೀತಾಳ ಮನೆಯಿಂದ ಊರಿಗೆ ಹೊರಟಳು.ಇನ್ನೇನು ಮದುವೆ ಹತ್ತಿರ ಇದೆ ಮುಗಿಸಿಕೊಂಡೇ ಹೋಗು ಎಂದು ಸ್ನೇಹಿತೆಯ ಮನೆಯಲ್ಲಿ ಎಲ್ಲರೂ ಹೇಳಿದರು. ಆದರೆ ಸೌಮ್ಯಾಳಿಗೆ ಅಷ್ಟು ದಿನ ಉಳಿಯುವುದು ಸರಿ ಎನಿಸಲಿಲ್ಲ. ಆದರೂ ಎಲ್ಲರೂ ಮದುವೆ ಬ್ಯುಸಿಯಲ್ಲಿರುವಾಗ ಬಸ್ ಸ್ಟಾಂಡಿಗೆ ಬಂದು ಬಸ್ ಹತ್ತಿಸಿದರೆ ಹೋಗುವುದಾಗಿ ಒಪ್ಪಿಸಿ ಹೊರಟಳು. ಬೆಳಗ್ಗೆ ತಿಂಡಿ ತಿಂದು ಬಸ್ ಹತ್ತಿದಳು. ಆರು ಗಂಟೆ ಪ್ರಯಾಣ.

ಮಾರ್ಗದ ಮಧ್ಯೆ ಪ್ರೈವೇಟ್ ಹೊಟೇಲ್ ಮುಂದೆ ಬಸ್ ನಿಂತಿತು ಕಂಡೆಕ್ಟರ್ ಇಳಿಯುವವರು ಇಳಿಯಬಹುದು ಸ್ವಲ್ಪ ಹೊತ್ತು ಸಮಯ ಇದೆ ಬೇಗ ವಾಪಸ್ ಬರಬೇಕು ಎಂದು ತಾನು ಡ್ರೈವರ್ ಒಟ್ಟಿಗೆ ಇಳಿದಾಯಿತು. ಕೆಲವರು ಇಳಿದು ತಿಂಡಿಗೆ ಹೋದರು, ಕೆಲವರು ಎಳನೀರು ಕುಡಿದರು, ಹಣ್ಣು ಬಿಸ್ಕೇಟ್‌ನೊಂದಿಗೆ ವಾಪಸ್ ಸೀಟಿಗೆ ಬಂದು ಕುಳಿತರು. ಸೌಮ್ಯಾ ಕೂಡ ಇಳಿದಳು. ಒಬ್ಬಳೆ ಏನೂ ತಿನ್ನಬೇಕೆನಿಸಲಿಲ್ಲ ಹೊಟೇಲ್ ಹಿಂಭಾಗದ ಮೂಲೆಯಲ್ಲಿ ಲೇಡೀಸ್ ಟಾಯ್ಲೆಟ್ ಬೋರ್ಡ್ ಕಣ್ಣಿಗೆ ಬಿತ್ತು ಅತ್ತ ಹೆಜ್ಜೆ ಹಾಕಿದಳು. ತುಸು ದೂರವೇ ಇತ್ತು. ಕೆಲ ಹೆಂಗಸರು ವಾಪಸ್ ಬರುತ್ತಿದ್ದರು. ಅದಾಗಲೇ ಆರು ಗಂಟೆ ಸಮಯ. ಹೊರಗೆ ಬರುವಾಗ ಹಿಂದಿನಿಂದ ಯಾರೋ ಬಂದಂತಾಯಿತು. ಅಷ್ಟೆ ನಂತರ ಏನಾಯಿತೋ ಅವಳಿಗೆ ತಿಳಿಯಲಿಲ್ಲ. ಮರುದಿನ ಎಚ್ಚರವಾದಾಗ ತಲೆಯೆಲ್ಲಾ ಭಾರ, ಮೈ ಕೈ ನೋವು ತಾನೆಲ್ಲಿದ್ದೇನೆ ಎನ್ನುವುದೇ ತಿಳಿಯದಾಯಿತು. ಸುತ್ತಲೂ ನೋಡಿ ಗಾಬರಿಯಾದಳು. ಯಾವುದೋ ಬಂಗಲೆ ಎನಿಸಿತು. ಎದ್ದು ಕೂತಳು ತಲೆಯೆಲ್ಲ ಕೆದರಿಗೆ ಉದ್ದ ಜಡೆ ಹರಡಿದೆ, ಉಟ್ಟ ಕಾಟನ್ ಸೀರೆ ಮುದುರಿದೆ. ಯಾಕೆ ಹೀಗೆ ನನಗೇನಾಯಿತು. ಇದು ಯಾವ ಜಾಗ ಎಂದು ತಿಳಿಯದೆ ಭಯದಿಂದ ಅಳುವಂತಾಗಿತ್ತು.

ಎಷ್ಟು ಹೊತ್ತು ಕೂತಿದ್ದಳೋ, ರೂಮಿನ ಯಾವ ಕಿಟಕಿಯಿಂದ ನೋಡಿದರೂ ಏನೂ ತಿಳಿಯುತ್ತಿಲ್ಲ. ತಣ್ಣನೆ ಗಾಳಿ ಬೀಸುತ್ತಿತ್ತು. ಯಾರೋ ಬಾಗಿಲು ತೆಗೆದಂತಾಗಿ ಜೀವ ಬಾಯಿಗೆ ಬಂದಂತೆ ಭಯ. ಅಮ್ಮನ ವಯಸ್ಸಿನ ಒಬ್ಬ ಹೆಂಗಸು ಒಳಗೆ ಬಂದಳು. ಅಳು ಉಕ್ಕಿ ಬಂತು, ನಿಂತಲ್ಲೆ ಕುಸಿದಳು. ಹೆಂಗಸು ಅಳಬೇಡ ಮೇಡಮ್ ಕರೆಯುತ್ತಿದ್ದಾರೆ, ಮುಖ ತೊಳೆದು ಬಾ ಎಂದಳು. ಯಾರು ಮೇಡಮ್, ಎಲ್ಲಿಗೆ ಬರಬೇಕು, ಇದು ಯಾವ ಜಾಗ? ಎಷ್ಟೋ ಪ್ರಶ್ನೆಗಳು ಒಮ್ಮೆಲೆ ಕಾಡಿದವು. ಯಾವುದಕ್ಕೂ ಆ ಹೆಂಗಸಿನಲ್ಲಿ ಉತ್ತರವಿಲ್ಲ ಎಂದು ತಿಳಿದು ಮುಖ ತೊಳೆದು ಅವಳ ಹಿಂದೆ ಹೊರಟಳು ಮಹಡಿ ಮೇಲೆ ವಿಶಾಲವಾದ ಹಾಲ್ ಬೆಲೆ ಬಾಳುವ ಟೀಕ್ ಉಡ್ ಸೋಫಾ ಸೆಟ್, ಗತ್ತಿನ ದಡೂತಿ ಹೆಂಗಸನ್ನು ನೋಡಿ ಇನ್ನೂ ಗಾಬರಿಯಾಯಿತು. ಅವಳು ಸನ್ನೆ ಮಾಡಿ ಪಕ್ಕದಲ್ಲಿ ಕುಡುವಂತೆ ಹೇಳಿ ಭುಜದ ಮೇಲೆ ಕೈ ಹಾಕಿ ಮೃದು ಎನ್ನುವಂತೆ ತಡವಿ ಹೇಳಿದಳು, ಒಂದು ಕ್ಷಣ ಮುಳ್ಳು ಹರಿದಾಡಿದಂತಾಯಿತು. ಮಾತಿಗೆ ಶುರು ಮಾಡಿದಳು,ನೋಡು ಇಲ್ಲಿ ನಿನಗೆ ಏನೂ ತೊಂದರೆಯಾಗುವುದಿಲ್ಲ. ಒಮ್ಮೆ ಇಲ್ಲಿಗೆ ಬಂದವರು ಹೊರಗೆ ಹೋಗುವ ಮಾತೇ ಇಲ್ಲ. ನೀನು ಬುದ್ಧಿವಂತೆಯಂತೆ ಕಾಣುತ್ತೀಯ ನನ್ನ ಮಾತು ಕೇಳಿ ನಡೆದುಕೊಂಡರೆ ನಿನಗೇ ಒಳ್ಳೆಯದು ಎಂದು ಹೇಳಿ, ಲಕ್ಷ್ಮಮ್ಮ ಇವಳಿಗೆ ಸ್ನಾನ, ತಿಂಡಿ ವ್ಯವಸ್ಥೆ ಮಾಡು ಚೆನ್ನಾಗಿ ನೋಡಿಕೋ ಎಂದು ಕಳಿಸಿಕೊಟ್ಟಳು. ಲಕ್ಷ್ಮಮ್ಮನಿಗೆ ಇದು ಮಾಮೂಲಿ, ಆದರೆ ಸೌಮ್ಯಾಳಿಗೆ ಏನೂ ಅರ್ಥವಾಗಲಿಲ್ಲ. ಆ ಹೆಂಗಸು ಒಳ್ಳೆಯವಳಂತೆ ಕಂಡರೂ ಒಡತಿಯ ಅಣತಿ ಮೀರುವುದಿಲ್ಲ ಎಂದು ತಿಳಿಯಿತು.

ಎರಡು ದಿನ ಕಳೆದಿರಬೇಕು ನಾನು ಬಿಡಿಸಿಕೊಳ್ಳಲಾರದ ಜಾಲವೊಂದರಲ್ಲಿ ಸಿಲುಕಿದ್ದೇನೆ ಎನ್ನುವುದು ಅರ್ಥವಾಯಿತ್ತು. ಒಬ್ಬಂಟಿಯಾಗಿ ಕುಳಿತು ಇಲ್ಲಿಂದ ಹೇಗೆ ತಪ್ಪಿಸಿಕೊಳ್ಳುವುದು ಊಟ ತಿಂಡಿ ಏನೂ ಬೇಡ ಅಮ್ಮ ಅಪ್ಪ ಮನೆ ಜ್ಞಾಪಕವಾಗುತ್ತೆ ಬಿಕ್ಕುತ್ತಾಳೆ ಅಷ್ಟೆ, ಮೂರ್ನಾಲ್ಕು ದಿನವಾಗಿರಬೇಕು. ಮೇಡಮ್ ಇವತ್ತು ನಿನ್ನ ಹತ್ತಿರ ಮಾತನಾಡುತ್ತಾರೆ ತಯಾರಾಗಿರು ಎಂದಳು ಲಕ್ಷ್ಮಮ್ಮ. ಹೃದಯ ಹೊಡೆದುಕೊಳ್ಳತೊಡಗಿತು. ಇನ್ನು ಇಲ್ಲಿ ಉಳಿಗಾಲವಿಲ್ಲ ಎನಿಸಿತು. ಮೊಂಡಾಟ ಮಾಡಿದರೆ ಹಿಂದಿನ ರಾತ್ರಿ ಪಕ್ಕದ ರೂಮಿನ ಹುಡುಗಿಯರಿಗೆ ಆದ ಗತಿಯೇ ತನಗೂ ಎಂದು ಗೊತ್ತಿತ್ತು. ಕೂಗಾಟ, ಕಿರುಚಾಟ, ಹೊಡೆಯುವುದು,

ಹಿಂಸಿಸುವುದು ತಿಳಿದು ನಡುಗಿದ್ದಳು. ಏನೂ ಹೇಳದೆ ರೆಡಿಯಾಗಿ ಮೇಡಮ್ ಎಂಬ ಹೆಂಗಸಿನ ಮುಂದೆ ಬಂದು ನಿಂತಳು. ಬಹಳ ಮೃದುವಾಗೇ ಮಾತನಾಡಿದರೂ ಹೇಳಿದಂತೆ ಕೇಳಬೇಕು ಎನ್ನುವ ಕಠೋರ ಆದೇಶವಿತ್ತು. ರೂಮಿಗೆ ಬಂದು ಬೋರಲಾಗಿ ಮಲಗಿ ಬಿಕ್ಕಿದಳು. ಎಷ್ಟು ಹೊತ್ತು ಕಳೆದಿತ್ತೋ ಬಹುಶಃ ರಾತ್ರಿಯಾಗಿರಬಹುದು. ರೂಮಿನ ಬಾಗಿಲು ತೆಗೆದ ಶಬ್ದವಾಯಿತು. ಏನಾದರೇನಂತೆ ಎಂದು ದೇವರನ್ನು ನೆನೆದು ಮುದುರಿ ಮಲಗಿದಳು. ಹತ್ತಿರದಲ್ಲೇ ನಡೆದು ಬಂದ ಸಪ್ಪಳವಾಯಿತು. ಒಳಗೆ ಬಂದ ಒಂದು ಗಂಡಸು ಧ್ವನಿ ನೋಡು ನೀನೇನೂ ಹೆದರಿಕೊಳ್ಳಬೇಡ. ನಾನು ನಿನ್ನನ್ನು ಬಲವಂತ ಮಾಡುವುದಿಲ್ಲ. ಮೇಡಮ್ ನಿನ್ನ ಬಗ್ಗೆ ಎಲ್ಲಾ ಹೇಳಿದ್ದಾರೆ. ನಾನು ನಿನಗಾಗಿ ಯಜಮಾನಿಗೆ ಹಣ ಕೊಟ್ಟಾಗಿದೆ. ಆದರೂ ಎರಡು ದಿನ ಅವಕಾಶ ಕೊಡುತ್ತೇನೆ. ನೀನಾಗೇ ಒಲಿದರೆ ಹೆಚ್ಚು ಖುಷಿ, ಹಾಗೆಂದು ಹೆಚ್ಚು ದಿನ ಕಾಯಿಸಬೇಡ, ಮತ್ತೇ ಬರುತ್ತೇನೆ ಎಂದ. ತಕ್ಷಣ ಎದ್ದು ಅವನ ಕಾಲು ಹಿಡಿದುಕೊಂಡಳು. ನೀವಾರೋ ನನಗೆ ಗೊತ್ತಿಲ್ಲ. ನಾನು ಇದನ್ನೆಲ್ಲ ಬಯಸಿ ಬಂದವಳಲ್ಲ. ನನ್ನನ್ನು ಈ ಕೂಪಕ್ಕೆ ತಳ್ಳಬೇಡಿ ಬಿಟ್ಟುಬಿಡಿ ಎಂದಳು. ಆತ ಕಿರುನಗೆ ನಗುತ್ತಾ ಸುಂಕದವನ ಮುಂದೆ ಸುಖ ದುಃಖ ಹೇಳಿದಂತಾಗಿದೆ. ಈ ಜಾಗವೇ ಅಂತಾದ್ದು, ಬಂದಿದ್ದೀಯಾ ಬದುಕುವ ದಾರಿ ನೋಡು. ಆದರೆ ಇನ್ನೆರಡು ದಿನ ನಿನಗೆ ಅವಕಾಶ ಎಂದು ಹೊರಟುಹೋದ. ಹೋದವನೇ ಏನ್ ಮೇಡಮ್ ಇಂತಹಾ ಹೊಸಬರನ್ನು ಸ್ವಲ್ಪ ತಯಾರು ಮಾಡಿ ತಾನೆ ಗಿರಾಕಿಗಳಿಗೆ ಪರಿಚಯಿಸಬೇಕು. ನನ್ನ ಸ್ವಭಾವ ನಿಮಗೆ ಗೊತ್ತಲ್ಲಾ. ನಾಡಿದ್ದು ಮತ್ತೇ ಬರುತ್ತೇನೆ ಎಂದ. ಬಡಿವಾರದ ನಗೆ ಬೀರಿ ಮೇಡಮ್ ಆಯ್ತು ಸಾಹುಕಾರ್ರೇ ನೀವೇ ಅನುಸರಿಸಿಕೊಂಡಿರುವಾಗ ಮತ್ತೇನು ನಾಡಿದ್ದು ಬನ್ನಿ. ಕಮ್ ಕಮ್ ಎನ್ನದ ಹಾಗೆ ಮಾಡುತ್ತೇನೆ ಎಂದು ಅವನು ಕೊಟ್ಟ ಹಣ ಎಣಿಸತೊಡಗಿದಳು. ಮಾರನೇ ದಿನ ಇನ್ನು ತನಗೆ ಇಲ್ಲಿ ಉಳಿಗಾಲವಿಲ್ಲವೆಂದು ಧೈರ್ಯ ಮಾಡಿ ಲಕ್ಷ್ಮಮ್ಮ ಬರುವುದನ್ನೇ ಕಾದು ಬೆಳಗ್ಗೆ ಅವಳು ಹೂ ಮುಡಿದು ಅಲಂಕಾರ ಮಾಡಿಕೊಳ್ಳಬೇಕು ಇಲ್ಲಿಯ ರೂಲ್ಸ್ ಫಾಲೋ ಮಾಡಬೇಕು ಎಂದು ಹೇಳತೊಡಗಿದಳು. ತಕ್ಷಣ ಅವಳ ಎರಡೂ ಕೈ ಹಿಡಿದು ಬಿಕ್ಕತೊಡಗಿದಳು. ಸೌಮ್ಯಾ ಯಾಕವ್ವಾ ಏನಾತು, ಯಾರು ಹೆತ್ತ ಮಕ್ಕಳೋ ಇಲ್ಲಿಗೆ ಬಂದು ಹಠ ಮಾಡಿದರೆ ನಡೀತದೇನವ್ವಾ, ಎಂದಳು. ಅಮ್ಮ ಇದ್ದ ಹಾಗೆ ಎಂದ ಕೂಡಲೇ ಲಕ್ಷ್ಮಮ್ಮನಿಗೆ ಏನನ್ನಿಸಿತೋ ಹ್ಯಾಗವ್ವಾ ಹ್ಯಾಗೆ ಪಾರು ಮಾಡುವುದು, ನನಗೂ ನಿನ್ನ ವಯಸ್ಸಿನ ಮಗಳಿದ್ದಳು ಮದುವೆನೂ ಆಗಿತ್ತು. ಚಂಡಾಳ ಅಳಿಯ ಎನಿಸಿಕೊಂಡವನು ನನ್ನ ಮಗಳನ್ನು ಬಾಳಿಸದೆ ಸಾಯಿಸಿಬಿಟ್ಟ ಎಂದು ಅವಳನ್ನು ಸಮಾಧಾನ ಮಾಡಲು ನೋಡಿದಳು. ನೋಡು ನಾನೂ ನಿನ್ನ ಮಗಳೇ ಎಂದುಕೋ ಹೇಗಾದರೂ ಬಚಾವ್ ಮಾಡು ಎಂದಳು. ಲಕ್ಷ್ಮಮ್ಮ ಏನೂ ಮಾತನಾಡದೆ ವೌನಿಯಾದಳು. ನೋಡು ಇವತ್ತು ರಾತ್ರಿ ಹೊದಿಕೆ ಕೊಡುವ ನೆಪದಲ್ಲಿ ಬರುತ್ತೇನೆ ಏನಾದ್ರೂ ಮಾಡಾವಾ ಈಗ ಹೋಗು ಎಂದಳು. ಅವಳ ಮಾತು ಕೇಳಿ ಅವಳನ್ನು ತಬ್ಬಿಕೊಂಡು ಅಳಬೇಕೆನಿಸಿತು ಹಾಗೆ ಮಾಡದೆ ರೂಮಿನೊಳಗೆ ಹೋಗಿ ಬಾಗಿಲು ಹಾಕಿಕೊಂಡಳು. ರಾತ್ರಿ ಸುಮಾರು ಒಂಬತ್ತಾಗಿರಬೇಕು ಲಕ್ಷ್ಮಮ್ಮ ಬಾಗಿಲು ಬಡಿದು ಒಳಗೆ ಬಂದಳು. ನೋಡು ಇಲ್ಲಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲ. ನಾನು ಸಹಾಯ ಮಾಡಿದೆನೆಂದು ಗೊತ್ತಾದರೆ ನನ್ನ ಜೀವ ಹೋಗುತ್ತೆ ಎಂದಳು. ನೋಡು ಇವತ್ತು ರಾತ್ರಿ ಹನ್ನೆರಡು ಗಂಟೆ ನಂತರ ನಾನು ಬರುತ್ತೇನೆ. ಇಲ್ಲಿ ತೋಟದೊಳಗೆ ಕಿರುದಾರಿಯಲ್ಲಿ ಹಾದು ಮುಳ್ಳಿನ ತಂತಿ ಬೇಲಿ ದಾಟಿದರೆ ಹೇಗೋ ತಪ್ಪಿಸಿಕೊಳ್ಳಬಹುದು. ಆದರೆ ಅಲ್ಲಿವರೆಗೆ ಹೋಗುವುದೇ ಕಷ್ಟ ಸುತ್ತಲೂ ಕಾವಲಿಟ್ಟ್ಟಿರುತ್ತಾರೆ ಈ ಜೀವ ಯಾರಿಗಾಗಿ ಉಳೀಬೇಕು ನೀನಾದರೂ ಚೆನ್ನಾಗಿರು ಎಂದು ಹೇಳಿ ಸರಿಯಾಗಿ ಹನ್ನೆರಡು ಗಂಟೆ ಹೊತ್ತಿಗೆ ರೂಂ ಬಾಗಿಲು ತೆಗೆದಿಟ್ಟಿರುವಂತೆ ಹೇಳಿ ಹೊರಟಳು. ಸೌಮ್ಯಾಳ ಮನಸ್ಸಿನ ಹೊಯ್ದಿಟ, ಚಡಪಡಿಕೆ, ನಿಜವಾಗಲೂ ಸಹಾಯ ಸಿಗುತ್ತಾ, ನಾನು ಇಲ್ಲಿಂದ ಪಾರಾಗುತ್ತೇನಾ ದೇವರೇ ಕಾಪಾಡು ಎಂದು ಮನದಲ್ಲೇ ಎಲ್ಲಾ ದೇವರ ನೆನೆಯುತ್ತಾ ಕೂತಳು. ಬಂಗಲೆಯಲ್ಲಿ ನಿಧಾನವಾಗಿ ಚಟುವಟಿಕೆಗಳು ಕಡಿಮೆಯಾಗಿ ಗಿರಾಕಿಗಳು ಒಳ ಹೊಕ್ಕು ನಿಶ್ಯಬ್ಧವಾಗುತ್ತಾ ಬಂತು. ನೀರವ ವೌನ ಹನ್ನೆರಡರ ಆಚೆ ಈಚೆ ಇರಬೇಕು. ಲಕ್ಷ್ಮಮ್ಮ ಮೆಲ್ಲಗೆ ಒಳಗೆ ಬಂದವಳೆ ಕೈ ಸನ್ನೆಯಿಂದಲೇ ಅವಳನ್ನು ಕರೆದುಕೊಂಡು ಕೈಯಲ್ಲಿ ಚಿಕ್ಕ ಲಾಟೀನು ಹಿಡಿದು ಹೊರಟಳು. ಸುತ್ತಲು ಹಸಿರು ಮಧ್ಯೆ ಮಧ್ಯೆ ಅಲ್ಲೊಂದು ಇಲ್ಲ್ಲೊಂದು ದೀಪಗಳು ಮಾಸಲು ಬೆಳಕು. ತರಗೆಲೆ ಗಿಡಗಳ ಮಧ್ಯ ಜೀರುಂಡೆಯ ಶಬ್ಧ ಸಂಜೆಯೇ ಯಾವ ಕಡೆ ತಪ್ಪಿಸಿಕೊಳ್ಳಲು ಅನುಕೂಲ ಹೇಗೆ ಹೋಗುವುದು ಎಂದು ಪರಿಚಯವಿದ್ದ ತುಸು ಸುರಕ್ಷಿತ ಎನ್ನುವ ದಾರಿ ನಿರ್ಧಾರ ಮಾಡಿದಂತೆ ಅವಳ ಕೈ ಹಿಡಿದು ಬೆನ್ನು ಬಾಗಿ ಕಾವಲುಗಾರರು ನಿದ್ದೆಗೆ ಜಾರಿರುವುದನ್ನು ಖಾತರಿಪಡಿಸಿಕೊಂಡು ಹೊರಟಳು. ಸ್ವಲ್ಪ ದೂರ ಹೋಗಿರಬೇಕು ಹಿಂದೆ ಸಪ್ಪಳವಾದಂತಾಗಿ ಜೀವ ಬಾಯಿಗೆ ಬಂದಂತೆ ನಿಂತಳು. ಮೆಲ್ಲನೆ ತಿರುಗಿ ನೋಡಿದರೆ ಗಿಡದ ಒಣಗಿದ ಟೊಂಗೆಯೊಂದು ಸೀರೆ ಸೆರಗಿಗೆ ಹತ್ತಿ ಸಪ್ಪಳ ಮಾಡುತ್ತಿತ್ತು. ಥತ್ ಎಷ್ಟು ಹೆದರಿ ಸಿತು. ಬೇಗ ಬೇಗ ಬಾ ಎಂದು ಆದಷ್ಟೂ ಸಪ್ಪಳವಾಗದಂತೆ ನಡೆಸಿಕೊಂಡು ಹೊರಟಳು. ಸೌಮ್ಯಾಳಿಗೂ ಅಪರಿಚಿತ ಜಾಗ, ನಿಶ್ಯಬ್ಧ ಭಯಾನಕ ಕತ್ತಲು ಹೆಜ್ಜೆ ಇಡಲು ಭಯ ಅಂತೂ ಒಂದು ಫರ್ಲಾಂಗ್ ದೂರ ಹೋಗಿರಬಹುದು ಯಾರೋ ತಿರುಗಾಡಿದ ಅನುಮಾನ ಒಂದು ಗಿಡದ ಹಿಂದೆ ಅವಿತುಕೊಂಡರು. ಯಾರು ಇಲ್ಲ ಎಂದು ಖಾತ್ರಿಪಡಿಸಿಕೊಂಡು ಪುನಃ ನಡೆಯಲು ಪ್ರಾರಂಭಿಸಿದರು. ಇನ್ನು ಎರಡು ಮೂರು ಫರ್ಲಾಂಗ್ ನಡೆದರೆ ಬದಿ ಮುಟ್ಟಬಹುದೆಂಬ ಅಂದಾಜಿನ ಮೇಲೆ ನಡೆದರು. ಲಕ್ಷ್ಮಮ್ಮ ತಂದಿದ್ದ ಪುಟ್ಟ ಲಾಟೀನಿನಲ್ಲಿ ದಾರಿ ಹಿಡಿದು ನಡೆಯಲು ಸಹಾಯವಾಗಿತ್ತು.

 ಒಂದು ಗಂಟೆಗೂ ಮೀರಿ ನಡೆದಿರಬೇಕು ತಂತಿ ಬೇಲಿಯ ವರೆಗೆ ಬಂದರು. ಸುತ್ತಲೂ ಯಾರೂ ಇಲ್ಲವೆಂದು ತಿಳಿದ ಮೇಲೆ ಮೆಲ್ಲನೆ ತಂತಿ ಬೇಲಿಯನ್ನು ಲಾಟೀನ್ ಬೆಳಕಿನಲ್ಲಿ ಎತ್ತಿ ಹಿಡಿದು ತೀರಾ ಚಿಕ್ಕದಾದ ಜಾಗ ಅದು ಶರೀರವನ್ನು ಅತ್ಯಂತ ಕುಗ್ಗಿಸಿ ಹೆಚ್ಚು ಕಮ್ಮಿ ಮಲಗಿ ತೆವಳಿದಂತೆ ಹೋದರೆ ಮಾತ್ರ ಹೊರಹೋಗಬಹುದಾಗಿತ್ತು, ಒಬ್ಬರೊಗೊಬ್ಬರು ತಂತಿ ಮೇಲೆ ಮಾಡಿ ಬಹಳ ಕಷ್ಟದಿಂದ ಉಟ್ಟ ಬಟ್ಟೆ ಎಲ್ಲೂ ಸಿಕ್ಕಿಕೊಳ್ಳದಂತೆ ಶರೀರವನ್ನು ಹಿಡಿ ಮಾಡಿ ತೆವಳಿಕೊಡು ದಾಟಿದರು.

ಸೌಮ್ಯಾಳಿಗೆ ಜೀವ ಬಂದಾತಾಗಿತ್ತು ದೊಡ್ಡ ನಿಟ್ಟುಸಿರು ಬಿಟ್ಟು ಲಕ್ಷ್ಮಮ್ಮನನ್ನು ತಬ್ಬಿಕೊಂಡಳು. ಇಬ್ಬರಿಗೂ ಮೈಯೆಲ್ಲಾ ತರಚಿದ ಗಾಯ ಗಮನಕ್ಕೆ ಬರಲೇ ಇಲ್ಲ. ಅಲ್ಲಿಂದ ಇಳಿಜಾರು ದಂಡೆಯಲ್ಲಿ ನಡೆದು ಹಳ್ಳ ಕೊಳ್ಳ ದಾಟಿ ಅಂತೂ ಯಾವುದೋ ರಸ್ತೆ ಬುಡಕ್ಕೆ ಬಂದು ನಿಂತಾಗ ಆದಾಗಲೇ ಬೆಳಗಿನ ಜಾವ ಆಗಿರಬೇಕು. ಇನ್ನು ತಡ ಮಾಡುವಂತಿರಲಿಲ್ಲ ಒಮ್ಮೆ ಆ ಹೆಂಗಸಿಗೇನಾದರೂ ಸ್ವಲ್ಪ ಅನುಮಾನ ಬಂದರೆ ಮುಗಿಯಿತು ಜನ ಬಿಟ್ಟು ಜಾಲಾಡಿ ಹಿಡಿಯುವುದಂತೂ ನಿಜ. ಯಾವ ಕಡೆಗೆ ಹೋಗುವುದು ಎಂದು ತಿಳಿಯಲಿಲ್ಲ. ಸೌಮ್ಯಾ ಈಗ ಏನು ಮಾಡುವುದು ಲಕ್ಷ್ಮಮ್ಮ ಎಂದಳು. ಇದು ಮುಖ್ಯ ರಸ್ತೆಯಂತು ಅಲ್ಲ ಇನ್ನು ಒಂದು ಕಿಮೀ ನಡೆದರೆ ಮುಖ್ಯ ರಸ್ತೆ ಸಿಗುತ್ತದೆ ಯಾವುದಾದರೂ ಲಾರಿ ಹಿಡಿದು ಸಿಟಿ ಸೇರಬಹುದು ಎಂದಳು. ಪುನಃ ನಡೆಯಲು ಶುರುವಿಟ್ಟುಕೊಂಡರು. ಸುಮಾರು ಐದು ಗಂಟೆ ವೇಳೆಗೆ ಮುಖ್ಯ ರಸ್ತೆಯಲ್ಲಿ ಓಡಾಡುತ್ತಿದ್ದ ಲಾರಿಗೆ ಕೈ ಅಡ್ಡ ಹಿಡಿದು ಹತ್ತಿಕೊಂಡರು. ಅವರಿಗೂ ಅನುಮಾನ ಇಲ್ಲ ಪ್ರಶ್ನೆ ಕೇಳಲು ಶುರುಮಾಡಿದರು. ಒಂದಕ್ಕೊಂದು ಸುಳ್ಳು ಪೋಣಿಸಿ ಸಿಟಿಗೆ ಬಿಡುವಂತೆ ಸೆರಗಿನಲ್ಲಿ ಕಟ್ಟಿ ತಂದಿದ್ದ ಹಣ ಎಣಿಸಿ ಕೊಟ್ಟು ಖರ್ಚಿಗೆ ಸ್ವಲ್ಪ ಉಳಿಸಿಕೊಂಡಳು.

ಸಿಟಿಯಲ್ಲಿ ಇಳಿದು ರಸ್ತೆ ಬದಿಯ ನಲ್ಲಿಯಲ್ಲಿ ಮುಖ ತೊಳೆದು ನೀರು ಕುಡಿದು ಹತ್ತಿರದಲ್ಲಿ ಕಾಫಿ ಕುಡಿದರು. ಸ್ವಲ್ಪ ಸಮಾಧಾನವಾಗಿತ್ತು. ಈಗ ಸೌಮ್ಯಾಳ ಊರಿನ ಬಗ್ಗೆ ವಿಚಾರಿಸಿ ದಾಗ ಸುಮಾರು ಆರು ಏಳು ಗಂಟೆಗಳ ಕಾಲ ಪ್ರಯಾಣ ಮಾಡಬೇಕಿತ್ತು. ಅಂತೂ ಅಲ್ಲಿ ಇಲ್ಲಿ ವಿಚಾರಿಸಿ ಊರಿನ ದಾರಿ ಹಿಡಿದರು. ಇನ್ನೇನು ಊರು ತಲುಪಲು ಹತ್ತು ಹನ್ನೆರಡು ಕಿಮೀ ಇರಬೇಕು ಸಿಕ್ಕ ಒಂದು ಊರಿನಲ್ಲಿ ಲಕ್ಷ್ಮಮ್ಮ ತಾನು ಇಳಿದುಕೊಂಡು ಸೌಮ್ಯಾಳನ್ನು ಹರಸಿ ಕಳಿಸಿಕೊಟ್ಟಳು. ಮುಂದೆ ನೀನು ಎಲ್ಲಿಗೆ ಹೋಗುತ್ತೀಯಾ, ಹೇಗೆ ಬದುಕುತ್ತಿಯಾ ನನಗೋಸ್ಕರ ಇಷ್ಟು ಕಷ್ಟ ಪಟ್ಟೆ ನಿನ್ನ ಜೀವನ ಹೇಗೆ ಎಂದಳು. ನನ್ನದೇನವ್ವಾ ಇಷ್ಟು ದಿನ ವಿಧಿ ಇಲ್ಲದೆ ಪಾಪದ ಕೂಪದಲ್ಲಿ ಎಷ್ಟು ಹೆಣ್ಣುಮಕ್ಕಳನ್ನು ಅಯ್ಯೋ ಎನಿಸಿದ್ದೇನೇ ಹೇಗೂ ಆಗುತ್ತದೆ ನೀನು ಹೋಗಿ ನಿಮ್ಮವರನ್ನು ಸೇರಿಕೋ ಎಂದಿದ್ದಳು. ಸೌಮ್ಯಾಳಿಗೆ ದುಃಖ ತಡೆಯಲಾಗಲಿಲ್ಲ ಅವಳ ಕಾಲಿಗೆ ಬಿದ್ದು ಅಪ್ಪಿಕೊಂಡು ಬೀಳ್ಕೊಟ್ಟಳು.

ಹೀಗೆ ಊರು ಸೇರಿ ಒಂದು ವಾರವೇ ಕಳೆದಿದೆ. ಆದರೆ ತನ್ನ ಸ್ಥಿತಿ ಅಲ್ಲಿಗಿಂತ ಭಿನ್ನವಾಗೇನು ಇಲ್ಲ ಎನಿಸಹತ್ತಿತು. ಅಲ್ಲಿ ಲಕ್ಷ್ಮಮ್ಮನಾದರೂ ಸಹಾಯಕ್ಕಿದ್ದಳು. ಆದರೆ ಪ್ರತಿದಿನ ಒಬ್ಬರಲ್ಲಾ ಒಬ್ಬರು ಬರುವುದು ಏನಾದರೂ ಕೊಂಕು ಮಾತನಾಡುವುದು. ತನ್ನದೇನೂ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡು ಎಲ್ಲರಿಗೂ ಮನವರಿಕೆ ಮಾಡಿಕೊಡುವವರಾರು? ತನಗೆ ಯಾರಿದ್ದಾರೆ. ಹೀಗೆ ಎಷ್ಟು ದಿನ ಕಾಲ ಕಳೆಯಬೇಕು ತಿಳಿಯದಾಗಿತ್ತು.

ಸೌಮ್ಯಾಳ ಗೆಳತಿ ಗೀತಾಳ ಮದುವೆಗೆಂದು ಸೌಮ್ಯಾಳ ತಾಯಿ ಗಿರಿಜಮ್ಮ ಇಬ್ಬರು ಹೆಣ್ಣುಮಕ್ಕಳೊಂದಿಗೆ ಬಂದರು. ಗೀತಾ ವರಪೂಜೆಗೆಂದು ರೆಡಿಯಾಗುತ್ತಿದ್ದವಳು ಇವರನ್ನು ನೋಡಿದ ತಕ್ಷಣ ಆಂಟಿ ಈಗ ಬಂದ್ರಾ ಸೌಮ್ಯಾ ಎಲ್ಲಿ ಅವಳಿಗೆ ಎರುಡುಮೂರು ದಿನ ಮುಂಚೆ ಬರಬೇಕೆಂದು ಹೇಳಿದ್ದೆ ಎಂದಳು. ಅವಳ ಮಾತು ಕೇಳಿ ಸೌಮ್ಯಾಳ ತಾಯಿಗೆ ಗಾಬರಿಯಾಯಿತು. ಆದರೆ ಏನೂ ಹೇಳದೆ ತೋಚದೆ ಒದ್ದಾಡುತ್ತಿರುವಾಗಲೇ ಗೀತಾಳ ಅಮ್ಮ ಬಂದು ಓ ಈಗ ಬಂದಿರಾ ಕಾಫಿ ತಿಂಡಿ ಮುಗಿಸಿ ವರಪೂಜೆಗೆ ರೆಡಿಯಾಗಿ ಎಂದು ಮಂಟಪದ ಕಡೆ ಹೋದರು. ಗಿರಿಜಮ್ಮ ಮಗಳು ಸೌಮ್ಯಾ ಮದುವೆ ಮುಗಿಸಿಕೊಂಡೇ ಬರುತ್ತಾಳೆಂದು ಗೀತಾಳ ಮನೆಯಲ್ಲೇ ಇರಬೇಕೆಂದು ತಿಳಿದಿದ್ದವರಿಗೆ ವಿಷಯ ಕೇಳಿ ಕೈ ಕಾಲೇ ಆಡಲಿಲ್ಲ. ಒಂದು ಸಾರಿ ಮದುವೆ ಮನೆಯೆಲ್ಲ ಸುತ್ತಾಡಿ ಸೌಮ್ಯಾಳ ಇತರ ಗೆಳತಿಯರು ಯಾರಾದರೂ ಸಿಗಬಹುದೆಂದು ನೋಡಿದರು. ಆದರೆ ಸೌಮ್ಯಾಳ ಬಗ್ಗೆ ಹೇಳುವವರು ಯಾರೂ ಇರಲಿಲ್ಲ. ಗೀತಾ ಮತ್ತೆ ಮತ್ತೆ ಕೇಳಿದಾಗ ಅವಳು ಬರುವಂತಿರಲಿಲ್ಲ ಎಂದು ನೆಪ ಹೇಳಿ ಮಾರನೆ ದಿನ ಧಾರೆ ಮುಗಿದಾಕ್ಷಣ ಊಟದ ಶಾಸ್ತ್ರ ಮಾಡಿ ಮಕ್ಕಳೊಂದಿಗೆ ಊರಿಗೆ ಬಂದಿದ್ದರು. ಮನೆಯಲ್ಲಿ ವಿಷಯ ತಿಳಿದು ಮನೆಯವರೆಲ್ಲಾ ಆತಂಕಪಟ್ಟರು. ಒಂದು ದಿನವೂ ಸೌಮ್ಯಾ ಹೀಗೆಲ್ಲಾ ಹೋದವಳಲ್ಲಾ ಇಪ್ಪತ್ತು ದಿನವಾದರೂ ಒಂದು ಪತ್ರವಾದರೂ ಬರೆಯಬಹುದಿತ್ತು ಎಂದುಕೊಂಡಿದ್ದವರು ಮದುವೆ ಮುಗಿದ ಮೇಲೆ ಬರುತ್ತಾಳೆ ಎಂದುಕೊಂಡು ಸುಮ್ಮನಿದ್ದ ವರಿಗೆ ಅವಳು ಎಲ್ಲೂ ಸಿಗದಿದ್ದಾಗ ಆತಂಕ ಹೆಚ್ಚಾಯಿತು. ಆದಾಗಲೇ ನೆರೆಹೊರೆಯವರು ಸೌಮ್ಯಾಳ ಬಗ್ಗೆ ಕೇಳಲು ಶುರುಮಾಡಿದ್ದರು. ಏನು ಹೇಳುವುದು ಎಷ್ಟು ದಿನ ಸುಳ್ಳಿನ ಅರಮನೆಯಲ್ಲಿ ಮಗಳನ್ನು ಬಚ್ಚಿಡುವುದು. ಒಂದು ತಿಂಗಳಾಗಿತ್ತು ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡಿಕೊಳ್ಳುತ್ತಿದ್ದರು. ಸರಿಕರು ಏನೋ ನೆಪ ಮಾಡಿ ಮನೆಗೆ ಬಂದು ಮಗಳ ವಿಷಯ ಕೆದಕಿದರೆ ಏನು ಹೇಳಲೂ ತೋಚದೆ ಚಡಪಡಿಸುವಂತಾಗಿತ್ತು. ಮರ್ಯಾದೆಗಂಜಿ ಬದುಕುತ್ತಿದ್ದ. ಇನ್ನು ಇಬ್ಬರು ಹೆಣ್ಮಕ್ಕಳ ಒಬ್ಬ ಮಗನ ಜವಾಬ್ದಾರಿ ಇದ್ದ ತಂದೆ ತಾಯಿಗೆ ಸೌಮ್ಯಾಳಿಂದಾಗಿ ಊರಲ್ಲಿ ಬದುಕುವುದೇ ಕಷ್ಟವಾಯಿತು. ಬರಬರುತ್ತಾ ಹೊಟ್ಟೆ ಯಲ್ಲಿನ ಸಂಕಟ ಮಗಳ ಮೇಲಿನ ದ್ವೇಷವಾಗಿ ಬದಲಾಗುತ್ತಿತ್ತು. ಮಗಳು ಒಳ್ಳೆಯವರೇ ಆದರೆ ಇಷ್ಟು ದಿನ ಎಲ್ಲಿಗೆ ಹೋಗಿದ್ದಳು. ಏನಾಯಿತು ಎನ್ನುವುದನ್ನು ಕೇಳಿ ತಿಳಿದುಕೊಳ್ಳುವ ಮನಸ್ಸು ಮುರಿದಿತ್ತು. ಸೌಮ್ಯಾ ಮನೆಗೆ ಬಂದ ಕೂಡಲೇ ಅಮ್ಮನನ್ನು ಅಪ್ಪಿಕೊಂಡು ಅತ್ತಿದ್ದಳು. ತಕ್ಷಣ ಏನು ಕೇಳಿದರೂ ಉತ್ತರಿಸಲು ಸಾಧ್ಯವಾಗಿರಲಿಲ್ಲ. ಆದರೆ ತಾಯಿಯಾದವರಿಗೆ ಒಂದು ವಾರ ಕಳೆದರೂ ಏನಾಯಿತು ಎಂದು ತಿಳಿದುಕೊಳ್ಳುವ ವ್ಯವಧಾನ ಸಂಯಮ ಇರಲಿಲ್ಲ. ಮದುವೆ ಮನೆಯಲ್ಲಿ ವಿಷಯ ತಿಳಿದಾಗಲೇ ಅವರ ಮನಸ್ಸು ಕೆಟ್ಟದ್ದನ್ನೇ ಯೋಚಿಸಿ ಸಾಕಾಗಿತ್ತು.

ಹೀಗೆ ಒಂದು ವಾರ ಕಳೆದಿರಬೇಕು ಸೌಮ್ಯಾಳಿಗೆ ಬದುಕು ಸಾಕಾಗಿತ್ತು. ಎಲ್ಲರೂ ತನ್ನನ್ನು ದೂರುವವರೆ, ಆದರೆ ತನ್ನ ಮನಸ್ಸಿಗಾದ ಆಘಾತ ನೋವನ್ನು ಯಾರೂ ಅರ್ಥ ಮಾಡಿಕೊಳ್ಳಲಿಲ್ಲ. ಮಾರನೇ ದಿನ ಅಮ್ಮ ಒಬ್ಬಳೆ ಅಡುಗೆ ಮಾಡುತ್ತಿದ್ದಾಗ ಹೋದಳು. ಅಮ್ಮನ ತಿರಸ್ಕಾರದ ನೋಟ ಅರಿವಿದ್ದೂ ಹೋಗಿ ಎಲ್ಲಾ ಹೇಳಿಬಿಡುವ ನಿರ್ಧಾರ ಮಾಡಿ ಬಂದಿದ್ದಳು. ಅಮ್ಮನ ನೇರ ದೃಷ್ಟಿ ಎದುರಿಸಲಾಗದೆ ಅಮ್ಮಾ.. ಎಂದ ಅವಳ ಧ್ವನಿಯಲ್ಲಿ ದೀನತೆ ತುಂಬಿತ್ತು. ಎಷ್ಟೇ ಆದರೂ ಮಗಳಲ್ಲವೇ ತಾಯಿ ಕರುಳು ಚುರುಕ್ ಎನಿಸಿರಬೇಕು. ಮಂಚದ ಮೇಲೆ ಕೂರಿಸಿಕೊಂಡು ಮೈ ತಡವಿ ಹೋಗಲಿ ಈಗಲಾದರೂ ಹೇಳು ಏನಾಯಿತು ಎಂದು ಕೇಳಿದರು. ಅಷ್ಟು ಸಾಕಿತ್ತು ಅವಳಿಗೆ ಅಮ್ಮನ ಮಡಿಲಲ್ಲಿ ತಲೆ ಇಟ್ಟು ಬಿಕ್ಕಿದಳು. ಎಷ್ಟು ಹೊತ್ತು ಅತ್ತಳೋ, ತಾಯಿಗೆ ನಡೆದದ್ದನ್ನು ವಿವರಿಸಿ ನಿಜವಾಗಲೂ ನಂಬು ಅಮ್ಮಾ ನಾನು ‘‘ದುರ್ಗಂಧದ ನಡುವೆ ಹಚ್ಚಿಟ್ಟ ಸುಗಂಧದ ಕಡ್ಡಿಯಂತೆ’’ ಬದುಕಿ, ನನ್ನ ಮಾನ ಪ್ರಾಣ ಎರಡನ್ನೂ ಉಳಿಸಿಕೊಂಡು ಬಂದಿದ್ದೇನಮ್ಮ. ನೀನಲ್ಲದೆ ನನ್ನನ್ನು ಯಾರು ನಂಬಬೇಕು ಎಂದಳು. ಅಮ್ಮನಿಗೆ ಎಲ್ಲವೂ ಅರ್ಥವಾಯಿತು. ಆದರೆ ಇದನ್ನೆಲ್ಲ ಸಮಾಜ ನಂಬಬೇಕಲ್ಲ, ನೆರೆ ಹೊರೆಯವರು, ನೆಂಟರಿಷ್ಟರು ಆಡುವ ಒಂದೊಂದು ಮಾತೂ ಅವರನ್ನು ಕುಗ್ಗಿಸುತ್ತಿತ್ತು. ಗಿರಿಜಮ್ಮ ರಾತ್ರಿ ಗಂಡನೊಂದಿಗೆ ಮಗಳ ವಿಷಯ ಪ್ರಸ್ತಾಪಿಸಿ ನಡೆದದ್ದನ್ನು ವಿವರಿಸಿದರು. ಅದೇನೋ ಸರಿ ಆದರೆ ಈಗ ಅವಳನ್ನು ಯಾರು ಮದುವೆಯಾಗುತ್ತಾರೆ. ದೊಡ್ಡವಳದ್ದಾಗದೆ ಚಿಕ್ಕವರಿಗೆ ಹೇಗೆ ಮದುವೆ ಮಾಡುವುದು.? ಎಲ್ಲಾ ನಮ್ಮ ಹಣೆಬರಹ ಎಂದುಕೊಂಡರು.

ಒಂದು ದಿನ ಪುಟ್ಟ ಜೋಯಿಸರು ಮನೆಗೆ ಬಂದಿದ್ದರು ಹಳೆಯ ಸ್ನೇಹ ಸುತ್ತ ಮುತ್ತಲ ಪೌರೋಹಿತ್ಯದ ಜೊತೆಗೆ ಗಂಡು ಹೆಣ್ಣು ಹುಡುಕಿಕೊಡುವ ವೃತ್ತಿ ಅವರದು ಸೌಮ್ಯಾಳಿಗೆ ಎರಡು ಮೂರು ಸಂಬಂಧಗಳನ್ನು ತಂದಿದ್ದರು. ಅವರ ಕಿವಿಗೂ ಅಲ್ಪ ಸ್ವಲ್ಪ ವಿಷಯ ಬಿದ್ದಿತ್ತಾದರೂ, ಋಣಾನುಬಂಧ ಇದ್ದರೆ ಯಾಕಾಗಬಾರದು ಎಂದುಕೊಂಡಿದ್ದರು. ಬಂದವರು ಸೌಮ್ಯಾಳನ್ನು ನೋಡಿ ಒಪ್ಪಿಕೊಂಡು ಮನೆಗೆ ಹೋಗಿ ಮಾತನಾಡಿ ತಿಳಿಸುತ್ತೇವೆ ಎಂದು ಹೋದವರು ಇನ್ನೇನು ಸಂಬಂಧ ಕುದುರಿ ಮದುವೆ ಆಗಬಹುದು ಎಂದುಕೊಳ್ಳುವಷ್ಟರಲ್ಲಿ ಏನೋ ಒಂದು ನೆಪ ಹೇಳಿ ಬೇಡ ಎನ್ನುತ್ತಿದ್ದರು. ಬರಬರುತ್ತಾ ಒಬ್ಬರಿಂದ ಒಬ್ಬರಿಗೆ ಸೌಮ್ಯಾಳ ವಿಷಯ ಹರಡಿ ಸಂಬಂಧಗಳು ಬರುವುದೇ ಕಡಿಮೆಯಾಯಿತು. ಹೇಗಾದರೂ ದೊಡ್ಡವಳಿಗೆ ಮಾಡಿಬಿಟ್ಟರೆ ಇನ್ನು ಇಬ್ಬರಿಗೆ ನಿಧಾನವಾಗಿ ಮಾಡಬಹುದು ಎಂದುಕೊಳ್ಳುತ್ತಿದ್ದ ಸೌಮ್ಯಾಳ ತಂದೆ ತಾಯಿಗೆ ಮಗಳಿಗೆ ಗಂಡು ಸಿಗುವುದು ಕಷ್ಟ ಎನಿಸತೊಡಗಿ ಅವಳ ಬಗ್ಗೆ ಇದ್ದ ಅಲ್ಪ ಸ್ವಲ್ಪ ಪ್ರೀತಿ ವಿಶ್ವಾಸ ಅಸಹನೆ ತಿರುಗತೊಡಗಿತು.

ಅಪ್ಪ ಅಮ್ಮನ ಮಾತುಗಳು, ವರ್ತನೆ, ತಂಗಿಯರ ತಮ್ಮರ ತಾತ್ಸಾರ ಬರಬರುತ್ತಾ ಸೌಮ್ಯಾಳಿಗೆ ತನ್ನ ಮನೆಯೇ ತನಗೆ ಪರಕೀಯ ಎನಿಸಿ ಉಸಿರುಕಟ್ಟಿದ ವಾತಾವರಣದಂತೆ ಚಡಪಡಿಸುವಂತಾಗುತ್ತಿತ್ತು. ಓರಗೆಯವರೆಲ್ಲಾ ಮದುವೆಯಾಗಿ ಹೊರಟುಹೋಗಿದ್ದರು. ಹೊರಗೆ ಹೋಗುವಂತಿಲ್ಲ ಸಿಕ್ಕವರೆಲ್ಲ ಏನಾದರೂ ಕೊಂಕು ಪ್ರಶ್ನೆ ಕೇಳುತ್ತಿದ್ದರು. ಮನೆಯಲ್ಲೇ ಇದ್ದರೂ ಬಂದವರು ಸುಮ್ಮನೆ ಹೋಗುತ್ತಿರಲಿಲ್ಲ. ಮನೆಯವರಿಗೆಲ್ಲ ಇದೇ ಸಮಸ್ಯೆಯಾಗಿತ್ತು. ತನ್ನಿಂದ ಎಲ್ಲರಿಗೂ ಕಷ್ಟ ನೋವು ಅವರ ನಡತೆಯಿಂದ ತನಗಾಗುವ ಮಾನಸಿಕ ವೇದನೆ ಇದಕ್ಕೆಲ್ಲ ಪರಿಹಾರವೇ ಇಲ್ಲವೇ ಎನಿಸತೊಡಗಿತು.

ಒಂದೆರಡು ತಿಂಗಳು ಕಳೆದಿರಬಹುದು ಮನೆಯ ನೀರವ ವಾತಾವರಣ ಒಬ್ಬರ ಮುಖದಲ್ಲೂ ನಗೆಯಿಲ್ಲ, ಮೊದಲಿನ ಸಂತೋಷವಿಲ್ಲ ಅಪ್ಪನಂತೂ ತಂಗಿಯರಿಗೂ ವಿಪರಿತ ಸ್ಟ್ರಿಕ್ಟ್ ಮಾಡುತ್ತಿದ್ದರು. ಕೊನೆಯವಳು ಎಸೆಸೆಲ್ಸಿ ಮುಗಿಸಿ ಪಕ್ಕದ ಊರಿನ ಕಾಲೇಜಿಗೆ ಸೇರಿ ಓದು ಮುಂದುವರಿಸಲು ಅಡ್ಡಿಪಡಿಸಿದರು. ಸಾಕು ನೀವೆಲ್ಲಾ ಹೆಣ್ಣು ಮಕ್ಕಳು ಓದಿ ಉದ್ಧಾರವಾಗುವುದು. ಖರ್ಚು ಮಾಡಿ ಓದಿಸಲು ಆಗುವುದಿಲ್ಲ ಎಂದುಬಿಟ್ಟಿದ್ದರು. ತಂಗಿಯರ ಓದು ನಿಲ್ಲುವುದಕ್ಕೆ ತಾನೇ ಕಾರಣ ಎನಿಸಿತು. ಮುಂದೊಂದು ದಿನ ಅವರ ಮದುವೆಗೂ ತಾನೇ ಅಡ್ಡಿಯಾಗಬಹುದು. ಇದು ಎಲ್ಲಿಯವರೆಗೆ ಹೀಗೆ? ಎಂದು ಸದಾ ರೂಮಲ್ಲಿ ಕೂತು ಪಂಜರದ ಪಕ್ಷಿಯಾಗಿದ್ದಳು.

ಆ ದಿನ ಸೌಮ್ಯಾ ಎಲ್ಲಿಲ್ಲದ ಉತ್ಸಾಹದಿಂದ ಮನೆಯೆಲ್ಲ ಓಡಾಡಿ ಬಂದಳು. ಹಿತ್ತಲಲ್ಲಿ ಸ್ನೇಹಿತರೊಂದಿಗೆ ಹರಟುತ್ತಿದ್ದ ಕಲ್ಲ ಮೇಲೆ ಕುಳಿತು ಹೂ, ಮರ ಗಿಡ ನೋಡಿ. ನೆನಪಿನಂಗಳವನ್ನೆಲ್ಲಾ ಸುತ್ತು ಹಾಕಿದಳು. ತಾನೇ ಅಮ್ಮನನ್ನು ಕೇಳಿ ಊಟ ಬಡಿಸಿಕೊಂಡು ತೃಪ್ತಿಯಾಗಿ ಊಟ ಮಾಡಿದಳು. ತಂಗಿಯರಿಬ್ಬರು ತಮ್ಮನನ್ನು ಆತ್ಮೀಯವಾಗಿ ಮಾತನಾಡಿಸಿ ಖುಷಿಯಾಗಿ ಕಳೆದಳು. ಹಿಂದೆಲ್ಲ ಪ್ರತಿ ದಿನ ಹೋಗುತ್ತಿದ್ದ ತನ್ನೂರಿನ ಏಕಮಾತ್ರ ದೇವಸ್ಥಾನಕ್ಕೆ ಹೋಗಿ ನಮಸ್ಕರಿಸಿ ತೀರ್ಥ ಪ್ರಸಾದ ಸ್ವೀಕರಿಸಿ ಬಂದಳು. ಮಗಳ ನಡೆನುಡಿಯಲ್ಲಿ ಖುಷಿ ನೋಡಿ ತಾಯಿಗೆ ಸಮಾಧಾನವಾದರೂ ಮನಸ್ಸಿನ ಆತಂಕ ಕಡಿಮೆಯಾಗಿರಲಿಲ್ಲ. ಎಲ್ಲರಿಗೂ ಆಶ್ಚರ್ಯ ತಂದೆಯಂತೂ ಏನೂ ನೋಡದವರಂತೆ ತಮ್ಮ ಪಾಡಿಗೆ ತಾವು ನಿರ್ಲಿಪ್ತವಾಗೇ ಇದ್ದರು. ಎಲ್ಲರೊಟ್ಟಿಗೆ ಊಟ ಮಾಡಿ ಏನೋ ನಿರ್ಧಾರ ಮಾಡಿದವಳಂತೆ ತನ್ನದೇ ಮನೆಯಲ್ಲಿ ನೆಮ್ಮದಿಯಾಗಿ ನಿದ್ರಿಸಿದಳು.

ಮಾರನೇ ದಿನ ಬೆಳಗಿನ ಜಾವಕ್ಕೆ ಎದ್ದು ಮಲಗಿದ್ದ ಅಪ್ಪ ಅಮ್ಮನ ಬಳಿಗೆ ಬಂದು ಅವರಿಗೆ ಎಚ್ಚರವಾಗದಂತೆ ಕಾಲುಮುಟ್ಟಿ ನಮಸ್ಕ ರಿಸಿದಳು. ಗಾಡ ನಿದ್ರೆಯಲ್ಲಿದ್ದ ತಮ್ಮ ತಂಗಿಯರನ್ನು ಕಣ್ತುಂಬ ನೋಡಿ, ನಿಧಾನವಾಗಿ ಬಾಗಿಲು ತೆರೆದು ಸರಸರನೆ ನಡೆಯಲು ಶುರುಮಾಡಿದಳು. ಎಲ್ಲಿಗೆ,ಏತಕ್ಕೆ, ಎಷ್ಟು ದೂರ ಹೇಗೆ ಎಂಬ ಯಾವ ಪ್ರಶ್ನೆಗೂ ಅವಳಲ್ಲಿ ಉತ್ತರ ಇರಲಿಲ್ಲ. ಗುರಿ ಇಲ್ಲದೆ ಅದೆಷ್ಟೋ ದೂರ ನಡೆದಿದ್ದಳು. ಊರಿಂದ ಬಹಳ ದೂರ ಬಂದ ಮೇಲೆ ಮನದ ಮೂಲೆಯಲ್ಲಿದ್ದ ಲಕ್ಷ್ಮಮ್ಮನ ಚಿತ್ರ ಕಣ್ಣ ಮುಂದೆ ಬಂದಿತ್ತು. ದಾರಿ ಕಾಣದೆ ನರಳುತ್ತಿದ್ದವಳಿಗೆ ಲಕ್ಷ್ಮಮ್ಮನ ನೆನಪು ಬದುಕುವ ಆಸೆ ಚಿಗುರಿ, ಮುಂದಿನ ದಾರಿ ಮಾಡಿಕೊಟ್ಟಿತ್ತು. ಇಷ್ಟು ದಿನ ತನ್ನ ಬದುಕಿನಲ್ಲಿ ನಡೆದ ಎಲ್ಲಾ ಘಟನೆಗಳ ಸತ್ಯ ಅರಿತಿದ್ದ ಲಕ್ಷ್ಮಮ್ಮ ಅವಳ ಕಣ್ಣಲ್ಲಿ ತಾಯಿಗಿಂತ ಮಿಗಿಲಾಗಿ ಕಂಡಿದ್ದಳು. ಹಂಗಿನ ಅರಮನೆಗಿಂತ ಗುಡಿಸಲು ಮೇಲೆಂದು ಹೆಜ್ಜೆ ಹಾಕಿದಳು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top