---

ಸಂದರ್ಶನದಲ್ಲಿ ಸುಬ್ರಮಣಿಯನ್‍ ಸ್ವಾಮಿ

ಮೋದಿ ಆಡಳಿತದಲ್ಲಿ ಆರ್ಥಿಕತೆ ಭಯಾನಕವಾಗಿದೆ, ಆದರೆ ಹಿಂದುತ್ವದಿಂದ ಅಧಿಕಾರಕ್ಕೆ ಬರುತ್ತೇವೆ

#“ಬಿಜೆಪಿ ಕಾರ್ಯಕರ್ತರಿಗೆ ‘ಮೇಕ್ ಇನ್ ಇಂಡಿಯಾ’ ಬೇಕಿಲ್ಲ”

#“ಹಿಂದುತ್ವ ವಿಚಾರಗಳನ್ನು ಬದಿಗಿರಿಸಿದ್ದರಿಂದ ಆರೆಸ್ಸೆಸ್ ಗೆ ಅಸಮಾಧಾನ”

ಮೋದಿ ಸರಕಾರದಲ್ಲಿ ದೇಶದ ಆರ್ಥಿಕ ಸ್ಥಿತಿಗತಿ, ಲೋಕಸಭಾ ಚುನಾವಣೆ, ಮಹಾಮೈತ್ರಿ, ರಫೇಲ್ ಒಪ್ಪಂದ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ huffingtonpost.in ನಡೆಸಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಭಾರತೀಯ ಜನತಾ ಪಕ್ಷದ ಸಂಸದ, ವಿವಾದಾಸ್ಪದ ನಾಯಕ ಮತ್ತು ತಮ್ಮದೇ ಪಕ್ಷದ ಹಾಗು ಅದರ ನೀತಿಯನ್ನೂ ಟೀಕಿಸುವಲ್ಲಿ ಹೆಸರಾದವರು ಸುಬ್ರಮಣಿಯನ್ ಸ್ವಾಮಿ. ಮೋದಿ ಸರ್ಕಾರದ ಅವಧಿಯಲ್ಲಿ ಆರ್ಥಿಕತೆ ಯಾಕೆ ಭಯಾನಕವಾಗಿದೆ ಎನ್ನುವುದನ್ನು ಬಣ್ಣಿಸಿದ್ದಾರೆ. ಜತೆಗೆ ಹಾರ್ವರ್ಡ್ ವಿಶ್ವವಿದ್ಯಾನಿಲಯದ ಮಾಜಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾದ ತಾವು ಹೇಗೆ ಅರುಣ್ ಜೇಟ್ಲಿಯವರಿಗಿಂತ ಒಳ್ಳೆಯ ಅರ್ಥಸಚಿವ ಎನ್ನುವುದನ್ನು ಸಮರ್ಥಿಸಿಕೊಂಡಿದ್ದಾರೆ. "ನಾನು ಮೊದಲ ದಿನವೇ ಆದಾಯ ತೆರಿಗೆ ರದ್ದು ಮಾಡುತ್ತೇನೆ" ಎನ್ನುವುದು ಅವರ ಆಶ್ವಾಸನೆ.

ಆರು ಬಾರಿಯ ಸಂಸದರಾಗಿರುವ ಸ್ವಾಮಿಯವರ ಪತ್ನಿ ಪಾರ್ಸಿ ಹಾಗೂ ಅಳಿಯ ಮುಸ್ಲಿಂ. ಇಷ್ಟಾಗಿಯೂ ಹಿಂದೂ ರಾಷ್ಟ್ರೀಯತೆಯ ಕಟ್ಟಾ ಪ್ರತಿಪಾದಕ.

ಹಣಕಾಸು ಕಾರ್ಯದರ್ಶಿ ಹಸ್ಮುಖ್ ಅಧಿಯಾ ಅವರ ವಿರುದ್ಧವೂ ಕಾನೂನು ಕ್ರಮವನ್ನು ಎದುರು ನೋಡುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಮೋದಿ ಸರ್ಕಾರ, ಭ್ರಷ್ಟಾಚಾರವನ್ನು ಬಯಲಿಗೆಳೆಯುವ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡಿಲ್ಲ ಎನ್ನುವುದು ಅವರ ಸ್ಪಷ್ಟ ಅಭಿಪ್ರಾಯ. "ಸದ್ಯಕ್ಕೆ ಹಣಕಾಸು ಸಚಿವಾಲಯ ಹಲವು ಮಂದಿ ಕಾಂಗ್ರೆಸ್ ಮುಖಂಡರ ವಿರುದ್ಧದ ತನಿಖೆಗೆ ತಡೆ ಉಂಟು ಮಾಡಿದೆ. ಪ್ರಧಾನಿ ಕಚೇರಿಯ ಕೆಲ ಸದಸ್ಯರ ವಿರುದ್ಧವೂ ನಾನು ದಾಳಿ ಮಾಡಿದ್ದೇನೆ. ಈ ವ್ಯಕ್ತಿಗಳ ಬಗ್ಗೆ ಸಿಬಿಐ ಎದುರು ಪ್ರಶ್ನೆ ಎತ್ತಿದ್ದೇನೆ. ಆ ಭಾಗ ದುರ್ಬಲ" ಎನ್ನುವುದು ಅವರ ಅಭಿಮತ.

ಕಳೆದ ವಾರ huffingtonpost.in ನಡೆಸಿದ ಸಂವಾದದಲ್ಲಿ ಅವರು, ಹೇಗೆ ಮೋದಿ ಸರ್ಕಾರದ ಆರ್ಥಿಕ ವೈಫಲ್ಯವನ್ನು ಹಿಂದುತ್ವ ಮರೆಮಾಚುತ್ತದೆ ಹಾಗೂ ಏಕೆ ಮೋದಿ ಪ್ರಧಾನಿಯಾಗಿ ಬಿಜೆಪಿ ನಿಚ್ಚಳ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಮರಳುತ್ತದೆ ಎನ್ನುವುದನ್ನು ವಿಶ್ಲೇಷಿಸಿದ್ದಾರೆ.

ಪ್ರಶ್ನೆ: 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಜಯ ಸಾಧಿಸುತ್ತದೆಯೇ?

ಉತ್ತರ: ಕಳೆದ ಚುನಾವಣೆಯಲ್ಲಿ ನರೇಂದ್ರ ಮೋದಿ ಸುತ್ತ ಮೀಡಿಯಾ ಹೈಪ್ ಇದ್ದರೂ, ಎರಡು ಇತರ ಅಂಶಗಳಿದ್ದವು: ಯುಪಿಎ ಸರ್ಕಾರದ ಭ್ರಷ್ಟಾಚಾರ ಒಂದು ಅಂಶವಾದರೆ ಹಿಂದೂಗಳಿಗೆ ತಮ್ಮದೇ ದೇಶದಲ್ಲಿ ಯಾವ ಹಕ್ಕೂ ಇಲ್ಲ ಹಾಗೂ ಇತರ ಜನರ ಹಿತಾಸಕ್ತಿಯೇ ಪ್ರಮುಖವಾಗುತ್ತದೆ ಎಂಬ ಭಾವನೆ ಯುವಜನತೆಯಲ್ಲಿ ಅತಿಯಾಗಿ ಇದ್ದುದು ಎರಡನೇ ಅಂಶ. ಈ ಭಾವನೆ, ನಮ್ಮ ಜಾತಿ, ಧರ್ಮ ಹಾಗೂ ಭಾಷೆ ಎದ್ದು ನಿಲ್ಲಬೇಕು ಎಂಬ ಭಾವನೆಯನ್ನು ಬಲಪಡಿಸಿತು. ಇದು ಶೇಕಡ 10ರಷ್ಟು ಮತವನ್ನು ಸೇರಿಸಿತು. ಹೀಗೆ ನಾವು ನಿಚ್ಚಳ ಬಹುಮತ ಸಾಧಿಸಿದೆವು.

ಆದರೆ ಭ್ರಷ್ಟಾಚಾರದ ಬಗ್ಗೆ ನಾವು ಸಾಕಷ್ಟು ಕೆಲಸ ಮಾಡಿಲ್ಲ ಎಂಬ ಅಸಮಾಧಾನ ಇದೆ. ಆದರೆ ನನ್ನ ಪ್ರಯತ್ನದಿಂದ ಸೋನಿಯಾಗಾಂಧಿ ಹಾಗೂ ರಾಹುಲ್‍ಗಾಂಧಿ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾಮೀನು ಪಡೆಯಬೇಕಾಯಿತು. ಚಿದಂಬರಂ ವಿರುದ್ಧ ಏರ್‍ಸೆಲ್ ಮ್ಯಾಕ್ಸಿಸ್ ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ. ಆದಾಗ್ಯೂ ಸಾಕಷ್ಟು ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸವಾಗಿಲ್ಲ; ಸ್ವಲ್ಪಮಟ್ಟಿಗೆ ಆಗಿದೆ ಎಂಬ ಭಾವನೆ ಇದೆ. ಇದೀಗ ಹಿಂದುತ್ವದ ಪ್ರಶ್ನೆ ಎತ್ತರಕ್ಕೆ ಬೆಳೆದಿದೆ. ನನ್ನ ಅಂದಾಜಿನ ಪ್ರಕಾರ ನಮಗೆ ಮತ್ತೆ ಬಹುಮತ ಬರುತ್ತದೆ.

ಪ್ರಶ್ನೆ: ಎತ್ತರಕ್ಕೆ ಬೆಳೆದಿದೆ?, ಹಿಂದುತ್ವ ದೌರ್ಬಲ್ಯ ಎಂಬ ಭಾವನೆ ನಿಮಗಿಲ್ಲವೇ?

ಉತ್ತರ: ಇಲ್ಲ. ದೌರ್ಬಲ್ಯವಲ್ಲ. ಇಂಗ್ಲಿಷ್ ಪತ್ರಿಕೆಗಳು ನಮ್ಮನ್ನು ಅಸಹಿಷ್ಣು ಎನ್ನಬಹುದು; ಆದರೆ ಸಾಮಾನ್ಯ ಹಿಂದೂಗಳು.. ಅಮೆರಿಕದಲ್ಲಿ ಟ್ರಂಪ್ ಇದ್ದಂತೆ ಎಂಬ ಭಾವನೆ ಹೊಂದಿದ್ದಾರೆ. ಸಿಎನ್ ಎನ್ ಟ್ರಂಪ್ ಅವರನ್ನು ಬೆಂಬತ್ತಿದೆ ಆದರೆ ಸಂಪ್ರದಾಯವಾದಿಗಳ ಬೆಂಬಲ ಅವರಿಗೆ ನೆರವಾಗುತ್ತಿದೆ ಮತ್ತು ಅವರು ಆರ್ಥಿಕವಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ.

ಆದ್ದರಿಂದ, ಒಂದರ್ಥದಲ್ಲಿ ನಮಗೆ ಹೆಮ್ಮೆಯ ಭಾವನೆ ಇದೆ. ಹಿಂದೂಗಳು ಅದರಲ್ಲೂ ಮುಖ್ಯವಾಗಿ ಯುವಜನಾಂಗ ಹಿಂದಿಗಿಂತ ಹೆಚ್ಚು ಎತ್ತರಕ್ಕೆ ಹಿಂದುತ್ವ ಬೆಳೆದಿದೆ ಎಂಬ ಭಾವನೆಯಲ್ಲಿದ್ದಾರೆ. ನಾವು ತ್ರಿವಳಿ ತಲಾಕ್ ರದ್ದತಿಯ ಧೈರ್ಯ ತೋರಿದ್ದೇವೆ. ಶಬರಿಮಲೆಯಲ್ಲಿ ಮಹಿಳೆಯರ ಹಕ್ಕಿನ ಪ್ರಕರಣದಲ್ಲಿ ನಾವು ಹಿಂಜರಿದಿಲ್ಲ. ಹಿಂದಿಗಿಂತ ಹೆಚ್ಚು ನಮ್ಮ ಅಭಿಪ್ರಾಯ ಗೌರವಿಸಲಾಗುತ್ತಿದೆ ಎಂಬ ಭಾವನೆ ಇದೆ.

ಪ್ರಶ್ನೆ: ಆದರೆ ಮೋದಿ ಸರ್ಕಾರ ಆರ್ಥಿಕತೆಯ ವಿಚಾರದಲ್ಲಿ ತೀರಾ ಒಳ್ಳೆಯ ಸಾಧನೆ ಮಾಡಿಲ್ಲ?

ಉತ್ತರ: ಪಿ.ವಿ.ನರಸಿಂಹರಾವ್ ಐದು ವರ್ಷಗಳ ಅವಧಿಯಲ್ಲಿ ಅತ್ಯದ್ಭುತ ಪ್ರಗತಿಯನ್ನು ಸಾಧಿಸಿದರು. ಆದರೆ ಅವರು ತೀರಾ ಹೀನಾಯ ಸೋಲು ಕಂಡರು. ವಾಜಪೇಯಿಯವರನ್ನು ಎಲ್ಲ ‘ಉದಾರವಾದಿಗೂ ಉದಾರಿ’ ಎಂದು ಪರಿಗಣಿಸಿದರು. ಅವರು ರಾಮಮಂದಿರಕ್ಕೆ ಹೆಚ್ಚಿನ ಮಹತ್ವ ನೀಡದೇ ‘ಇಂಡಿಯಾ ಶೈನಿಂಗ್’ ಎಂದರು. ಅವರು ಎಷ್ಟು ವಿಶ್ವಾಸದಲ್ಲಿದ್ದರು ಎಂದರೆ ಆರು ತಿಂಗಳು ಮುಂಚಿತವಾಗಿಯೇ ಚುನಾವಣೆಗೆ ತಯಾರಾದರು. ಆದರೆ ನಮ್ಮ ಪಕ್ಷದ ಕಾರ್ಯಕರ್ತರು ಕೆಲಸ ಮಾಡದ ಕಾರಣ ಬಿಜೆಪಿ ಹೀನಾಯ ಸೋಲು ಕಂಡಿತು. ಬಿಜೆಪಿ ಕಾರ್ಯಕರ್ತರ ಪಕ್ಷ. ಅವರು ‘ಮೇಕ್ ಇನ್ ಇಂಡಿಯಾ’ಗೆ ಗಮನ ನೀಡುವುದಿಲ್ಲ. ಅವರು ವಿರಾಟ ಹಿಂದೂ ಪರಿಕಲ್ಪನೆಯನ್ನು ಬಯಸುತ್ತಾರೆ. ಆದ್ದರಿಂದ ಹಿಂದಿನ ಅನುಭವದ ಹಿನ್ನೆಲೆಯಲ್ಲಿ, ಕೇವಲ ಆರ್ಥಿಕ ಅಭಿವೃದ್ಧಿ ಮಾತ್ರವೇ ಚುನಾವಣಾ ಯಶಸ್ಸನ್ನು ತರಲಾರದು. ಮೊರಾರ್ಜಿ ದೇಸಾಯಿ ಕೂಡಾ ಬೆಲೆಗಳನ್ನು ಚೆನ್ನಾಗಿ ನಿಯಂತ್ರಿಸಿದ್ದರು. ಆದರೆ ಅದಕ್ಕೆ ಪರಿಹಾರ ಪಡೆಯಲೇ ಇಲ್ಲ. ಆದರೆ ಆರ್ಥಿಕತೆ ನಿಜವಾಗಿಯೂ ಕೆಟ್ಟದಾಗಿದ್ದರೆ ಅದು ಕೆಟ್ಟದಾಗಿಯೇ ಮುಂದುವರಿಯಬಹುದು. ಇಂದು ನನ್ನ ಅಭಿಪ್ರಾಯದ ಪ್ರಕಾರ ಆರ್ಥಿಕತೆ ತೀರಾ ಭಯಾನಕವಾಗಿದೆ. ಆದರೆ ಭ್ರಷ್ಟಾಚಾರದ ವಿರುದ್ಧದ ಹೋರಾಟ, ಹಿಂದುತ್ವ, ರಾಮಮಂದಿರ ನಿರ್ಮಾಣದಂತಹ ವಿಚಾರಗಳು ಆರ್ಥಿಕತೆಯ ವೈಫಲ್ಯದ ಬಗೆಗಿನ ಋಣಾತ್ಮಕ ಅಂಶಗಳನ್ನು ತೊಡೆದುಹಾಕಬಲ್ಲವು.

ಪ್ರ: 2019ರ ಚುನಾವಣೆಯಲ್ಲಿ ವಿರಾಟ ಹಿಂದೂಸ್ತಾನದ ಮೇಲೆ ಹೋರಾಟ ನಡೆಯುತ್ತದೆಯೇ?

ಉತ್ತರ: ನಿಶ್ಚಿತವಾಗಿ. ನಾವು ವಿರಾಟ ಹಿಂದೂಸ್ತಾನ ಎನ್ನಲಾಗದು. ಆದರೆ ನಾವು ವಿರಾಟ ಹಿಂದೂಸ್ತಾನದ ಸಂಕೇತಗಳಾದ ರಾಮಮಂದಿರ ಬಗ್ಗೆ, ಸಮಾನ ನಾಗರಿಕ ಸಂಹಿತೆ ಬಗ್ಗೆ, ಗೋಸಂರಕ್ಷಣೆ ಬಗ್ಗೆ ಮಾತನಾಡುತ್ತೇವೆ. ಚುನಾವಣೆ ಹಿಂದುತ್ವದ ವಿಷಯಾಧಾರಿತವಾಗಿರುತ್ತದೆ.

ಪ್ರ: ಆದರೆ ಬಿಜೆಪಿಗೆ ಹಿಂದುತ್ವ ಮಾರಾಟಕ್ಕೆ ಹೊಸ ಯೋಚನೆಗಳೇ ಇಲ್ಲ?

ಉತ್ತರ: ನಮಗೆ ಹೊಸ ಕಲ್ಪನೆಗಳ ಅಗತ್ಯವಿಲ್ಲ. ಹಳೆ ವಿಚಾರಗಳನ್ನೇ ಅನುಷ್ಠಾನಕ್ಕೆ ತರುವ ಅಗತ್ಯವಿದೆ. ನಮ್ಮ ಯುವಕರ ಮನಮುಟ್ಟುವಂತಹ ಐದು ವಿಚಾರಗಳ ಬಗ್ಗೆ ನಾನು ಹೇಳುತ್ತೇನೆ. ನಿಮ್ಮ ಐಡೆಂಟಿಟಿ ಏನು?, ಭಾರತ ನೈಜ ಇತಿಹಾಸ ಏನು?, ನಾವೆಲ್ಲ ಏಕೆ ಸಂಸ್ಕೃತ ಕಲಿಯಬೇಕು?, ನಮ್ಮ ಆರ್ಥಿಕ ನೀತಿ ಏನಾಗಿರಬೇಕು?, ಅದು ನಮ್ಮ ಆಧ್ಯಾತ್ಮಿಕ ಮೌಲ್ಯಗಳ ಜತೆ ಸಾಮರಸ್ಯ ಹೊಂದಿರುವ ನೀತಿಯಾಗಿರಬೇಕು. ಅಂತಿಮವಾಗಿ, ನಮ್ಮ ದೇಶದ ಭದ್ರತೆಗೆ ಸಂಬಂಧಿಸಿದಂತೆ ನಮ್ಮ ಸಿದ್ಧಾಂತ ಏನಿರಬೇಕು?

ಪ್ರ: ಈ ವಿಚಾರಗಳು ಮತದಾರರಿಗೆ ಸ್ಫೂರ್ತಿ ತುಂಬುವಂತಹದ್ದಲ್ಲ. ಇನ್ನೊಂದೆಡೆ ನಿರುದ್ಯೋಗ ತಾಂಡವವಾಡುತ್ತಿದೆ.

ಉತ್ತರ: ಅದು ನಿಮಗೆ ಸ್ಫೂರ್ತಿದಾಯಕವಾಗದಿರಬಹುದು. ಆದರೆ ನನ್ನ ಯಾವುದೇ ಸಭೆಗೆ ಬಂದು ಮುಖ್ಯವಾಗಿ ಯುವಜನರ ಪ್ರತಿಕ್ರಿಯೆ ನೋಡಿ. ಆದರೆ ಆರ್ಥಿಕವಾಗಿ ನಾವು ವಿಫಲರಾಗಿದ್ದೇವೆ. ಆದರೆ ನಾವು ನಿಚ್ಚಳ ಬಹುಮತ ಪಡೆಯುತ್ತೇವೆ ಎಂಬ ವಿಚಾರದಲ್ಲಿ ಯಾವ ಸಂದೇಹವೂ ಇಲ್ಲ. ಆರ್ಥಿಕತೆಯಲ್ಲಿ ಸ್ವಲ್ಪ ಸರಿಪಡಿಸುವಿಕೆಗೆ ಅವಕಾಶವಿದೆ. ಆದರೆ ಪ್ರಸ್ತುತ ಆರ್ಥಿಕ ಸಚಿವಾಲಯದ ಸಂರಚನೆಯಲ್ಲಿ ಒಳ್ಳೆಯದನ್ನು ನೀಡಲು ಸಾಧ್ಯವಿಲ್ಲ.

ಪ್ರ: ನೋಟು ರದ್ದತಿ, ಜಿಎಸ್‍ಟಿ ಹಾಗೂ ದಾಖಲೆ ಇಂಧನ ಬೆಲೆ ವಿಚಾರಗಳಿಗೆ ಹಿಂದುತ್ವ ಪ್ರತಿಯಾಗುತ್ತದೆ ಎಂದು ನಿಮಗೆ ಅನಿಸುತ್ತಿದೆಯೇ?

ಉತ್ತರ: ಆರ್ಥಿಕತೆ ಭಯಾನಕವಾಗಿದೆ ಎಂದು ನಾನು ಮತ್ತೆ ಹೇಳುತ್ತಿದ್ದೇನೆ. ಈ ಬಗ್ಗೆ ಹಣಕಾಸು ಸಚಿವಾಲಯದ ಮಂದಿಗೂ ಯಾವುದೇ ಸುಳಿವು ಇಲ್ಲ. ಇದರಿಂದ ತೊಂದರೆಗೀಡಾದ ಜನರೇ ಹಿಂದುತ್ವದಿಂದ ಪ್ರೇರಣೆ ಪಡೆಯುತ್ತಾರೆ. ಉದಾಹರಣೆಗೆ ವ್ಯಾಪಾರಿಗಳು. ಇವರಿಗೆ ವ್ಯತಿರಿಕ್ತ ಪರಿಣಾಮವಾಗಿದೆ. ಆದರೆ ಅವರು ನಮ್ಮ ಹಿಂದುತ್ವದ ನೆಲೆಗಟ್ಟು.

ಪ್ರ: ತಮ್ಮ ವಹಿವಾಟಿಗೇ ಧಕ್ಕೆಯಾಗಿರುವಾಗ ವ್ಯಾಪಾರಿಗಳು ಗೋರಕ್ಷಣೆ ಬಗ್ಗೆ ಕಾಳಜಿ ವಹಿಸುತ್ತಾರೆಯೇ?

ಉತ್ತರ: ಪರಿಸ್ಥಿತಿ ಬದಲಾಗುತ್ತದೆ ಎಂಬ ನಿರೀಕ್ಷೆಯನ್ನು ನಾವು ಅವರಲ್ಲಿ ತುಂಬಿದ್ದೇವೆ. ನಮ್ಮ ಭಾವನೆಗಳಿಗಿಂತ ಹೆಚ್ಚಾಗಿ ಆರ್ಥಿಕತೆ ಕೆಲಸ ಮಾಡುತ್ತದೆ ಎಂಬ ಭಾವನೆ ನನಗಿಲ್ಲ. ಕಾಂಗ್ರೆಸ್‍ ಗಿಂತ ನಮ್ಮ ಪಕ್ಷ ಉತ್ತಮ ಎಂದು ಖಂಡಿತವಾಗಿಯೂ ಅವರು ಯೋಚಿಸುತ್ತಾರೆ. ಇತರ ಪಕ್ಷಗಳು ಛಿದ್ರವಾಗಿವೆ. ಇತರ ಯಾವ ರಾಷ್ಟ್ರೀಯ ಪಕ್ಷವೂ ಇಲ್ಲ.

ಪ್ರ: 2019ರ ಚುನಾವಣೆಯನ್ನು ದೇಶದ ಆತ್ಮಕ್ಕಾಗಿ ಹೋರಾಟ ಎಂಬ ಭಾವನೆ ಇದೆ. ಜಾತ್ಯತೀತ ಮತ್ತು ಹಿಂದುತ್ವದ ನಡುವಿನ ಆಯ್ಕೆ. ನೀವು ಒಪ್ಪುತ್ತೀರಾ?

ಉತ್ತರ: ಹೌದು. ಆದರೆ ಇಲ್ಲಿ ವ್ಯಾಖ್ಯೆಯ ಸಮಸ್ಯೆ ಇದೆ. ಹಿಂದೂ ಎಂದಿಗೂ ಜಾತ್ಯತೀತ ಅಲ್ಲ ಎಂಬ ಅರ್ಥವಲ್ಲ. ಆದರೆ ಪ್ರಶ್ನೆ ಇರುವುದು ನಮಗೆ ಜವಾಹರಲಾಲ್ ನೆಹರೂ ಪ್ರತಿಪಾದಿಸಿದ ಜಾತ್ಯತೀತತೆ ಅಂದರೆ ಶೇಕಡ 83ರಷ್ಟು ಜನಸಂಖ್ಯೆ ಹೊಂದಿರುವ ಸಂಘಟನೆ ಹೊಡೆಸಿಕೊಳ್ಳಬೇಕೇ ಅಥವಾ ನಾವು ಹಿಂದುತ್ವ ಕಲ್ಪನೆಗಳನ್ನು ಒಳಗೊಂಡ ಹೊಸ ಕ್ರಿಯಾತ್ಮಕ ಮಾದರಿಗಾಗಿ ಕೆಲಸ ಮಾಡಬೇಕೇ?. ಹಿಂದುತ್ವ ಎಂದರೆ ಹಿಂದೂಗಳಾಗಿ ಇರುವುದು. ಹಿಂದುತ್ವವೆಂದರೆ ಜನರ ಸಬಲೀಕರಣ. ಜಾತ್ಯತೀತತೆ ಎಂದರೆ ಇಂಗ್ಲಿಷ್ ಶಿಕ್ಷಣ ಪಡೆದ ಜನರ ಪ್ರಾಬಲ್ಯ ಎಂಬ ಅರ್ಥ ಪಡೆದುಕೊಂಡಿದೆ. ಅದು ಈ ರೀತಿ ಶೋಧಗೊಂಡಿದೆ.

ಪ್ರ: ಮುಸ್ಲಿಮರನ್ನು ಹತ್ಯೆ ಮಾಡಿದ ವ್ಯಕ್ತಿಯೊಬ್ಬ ಸಂಸತ್ತಿಗೆ ಆಯ್ಕೆಯಾಗುವಂತೆ ಮಾಡಲು ಒಬ್ಬ ವ್ಯಕ್ತಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡುವ ಇಚ್ಛೆ ಹೊಂದಿದ್ದಾರೆ. ಈ ವಿಷಪೂರಿತ ವಾತಾವರಣಕ್ಕೆ ಬಿಜೆಪಿ ಹೊಣೆಯೇ?

ಉತ್ತರ: ನೀವು ಅಮೆರಿಕಕ್ಕೆ ಹೋಗಿ ನೋಡಿ. ಇನ್ನೂ ವರ್ಣಬೇಧ ನೀತಿಯ ಜನ ಚುನಾವಣೆಗೆ ಸ್ಪರ್ಧಿಸುತ್ತಾರೆ.

ಪ್ರ: ಮುಸ್ಲಿಮರನ್ನು ಹತ್ಯೆ ಮಾಡಿದ ವ್ಯಕ್ತಿ ಚುನಾವಣೆಗೆ ಸ್ಪರ್ಧಿಸುವುದು ಕೆಟ್ಟದು ಎಂದು ನೀವು ಒಪ್ಪಿಕೊಳ್ಳಬೇಕಾಗುತ್ತದೆ.

ಉತ್ತರ: ಹೌದು. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಬಿಜೆಪಿ ಅವರನ್ನು ಕಣಕ್ಕೆ ಇಳಿಸುವುದಿಲ್ಲ. ಈ ಸ್ಥಳಾವಕಾಶವನ್ನು ನಾವು ಸೃಷ್ಟಿಸಿಲ್ಲ. ಪಕ್ಷ ಅವರಿಗೆ ಟಿಕೆಟ್ ನೀಡಲು ನಿರ್ಧರಿಸಿದರೆ, ಆ ಬಗ್ಗೆ ಧ್ವನಿ ಎತ್ತುವವರಲ್ಲಿ ನಾನು ಮೊದಲಿಗ. ಅದಕ್ಕೆ ನಾವು ಸಂಪೂರ್ಣ ವಿರೋಧವಿದ್ದೇವೆ. ಅದು ಸಂಪೂರ್ಣವಾಗಿ ಹಿಂದೂವಾದ ಅಲ್ಲ.

ಪ್ರ: ಮೋದಿ ಮತ್ತೆ ಪ್ರಧಾನಿಯಾಗುತ್ತಾರೆ ಎಂಬ ನಿರೀಕ್ಷೆ ನಿಮ್ಮದೇ?

ಉತ್ತರ: ಅವರಿಗೆ ಯಾವುದೇ ಸವಾಲು ಇದೆ ಎಂದು ನನಗೆ ಅನಿಸುವುದಿಲ್ಲ. ಯಾರಾದರೂ ಒಬ್ಬ ವ್ಯಕ್ತಿ ಮುಂದೆ ಬಂದರೆ ಸಂಸದೀಯ ಪಕ್ಷದಲ್ಲಿ ಚುನಾವಣೆ ನಡೆಯುತ್ತದೆ. ಅಂತಹ ವ್ಯಕ್ತಿಗಳು ಯಾರೂ ಕಾಣುವುದಿಲ್ಲ. ಮೋದಿಯವರಲ್ಲಿ ಸಾಕಷ್ಟು ಒಳ್ಳೆಯ ಗುಣಗಳಿವೆ. ಆದರೆ ಈ ಹೊಗಳಿಕೆಯನ್ನು ಅವರ ತಂಡಕ್ಕೆ ನಾನು ವಿಸ್ತರಿಸುವುದಿಲ್ಲ. ಅವರ ತಂಡದ ಬಹಳಷ್ಟು ಮಂದಿ ಅಸಮರ್ಥರು; ಬಹುಶಃ ಅವರು ಕೂಡಾ ಹಾಗೆಯೇ ಯೋಚಿಸುತ್ತಾರೆ. ಹೊಸ ತಂಡವನ್ನು ಹೊಂದಲು ಬಹುಶಃ ಅವರು ಚುನಾವಣೆಗೆ ಕಾಯುತ್ತಿದ್ದಾರೆ.

ಪ್ರ: ಕಳೆದ ಬಾರಿ ನಾವು ಮಾತನಾಡಿದಾಗ, ನೀವು ಹಣಕಾಸು ಸಚಿವರಾಗುವ ಇಂಗಿತ ವ್ಯಕ್ತಪಡಿಸಿದ್ದೀರಿ. ಅದನ್ನು ನೀವು ಇಂದಿಗೂ ಇಷ್ಟಪಡುತ್ತೀರಾ?

ಉತ್ತರ: ನಿಚ್ಚಳವಾಗಿ.

ಪ್ರ: ಬಿಜೆಪಿಗೆ ನಿಚ್ಚಳ ಬಹುಮತ ಬಾರದೇ ಇತರ ಮಿತ್ರ ಪಕ್ಷಗಳ ಜತೆ ಕೈಜೋಡಿಸಬೇಕಾದರೆ?... ಮೋದಿ ಇಂತಹ ಪರಿಸ್ಥಿತಿಯಲ್ಲೂ ಪ್ರಧಾನಿಯಾಗುತ್ತಾರೆಯೇ?

ಉತ್ತರ: ಆದರೆ ನಮಗೆ ನಿಚ್ಚಳ ಬಹುಮತ ಬರುತ್ತದೆ ಎನ್ನುವುದು ನನಗೆ ಖಾತ್ರಿಯಾಗಿರುವುದರಿಂದ, ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ಇಂದು ಶಿಕ್ಷಣತಜ್ಞನಾಗಿಲ್ಲ. ನಾನು ಹೋರಾಟಗಾರ ರಾಜಕಾರಣಿ.

ಪ್ರ: ಆರೆಸ್ಸೆಸ್ ಮೋದಿಯನ್ನು ಇಷ್ಟಪಡುತ್ತದೆಯೇ?

ಉತ್ತರ: ಅವರಿಗೆ ಇಷ್ಟ; ಇಷ್ಟವಲ್ಲ ಎಂಬ ಪ್ರಶ್ನೆಯೇ ಇಲ್ಲ. ಅವರು ಪ್ರಾಯೋಗಿಕ ವ್ಯಕ್ತಿಗಳು. ಆರೆಸ್ಸೆಸ್ ಎಂದರೆ ಶಾಖೆಗಳು, ವ್ಯಾಯಾಮ, ಸೈದ್ಧಾಂತಿಕ ಶಿಕ್ಷಣ ಮತ್ತು ಬಿಜೆಪಿಗೆ ಕಾರ್ಯಕರ್ತರನ್ನು ಒದಗಿಸುವವರು. ಕೆಲವೊಮ್ಮೆ ಅವರು ಹಸ್ತಕ್ಷೇಪ ಮಾಡಿ, ಇಂತಿಂತಹ ವ್ಯಕ್ತಿಗಳನ್ನು ನಮ್ಮ ಪಕ್ಷಕ್ಕೆ ತೆಗೆದುಕೊಳ್ಳಬೇಕು, ಇಂತಿಂತಹ ವ್ಯಕ್ತಿಗಳಿಗೆ ಭಡ್ತಿ ನೀಡಬೇಕು ಎಂದು ಸಲಹೆ ಮಾಡುತ್ತಾರೆ. ಆದರೆ ಎಂದೂ ಒತ್ತಡ ತರುವುದಿಲ್ಲ. ಆರೆಸ್ಸೆಸ್ ನೀಡುವ ಎಲ್ಲ ಆದೇಶಗಳು ಚೌಕಟ್ಟು ಅಷ್ಟೇ.

ಪ್ರ: ಮೋದಿಯವರ ಆರೆಸ್ಸೆಸ್, ಆರೆಸ್ಸೆಸ್‍ಗೆ ಸಾಕಾಗುತ್ತದೆಯೇ?

ಉತ್ತರ: ಹಲವಾರು ಹಿಂದುತ್ವ ವಿಚಾರಗಳನ್ನು ಮೋದಿ ಬದಿಗಿರಿಸಿರುವುದು ಆರೆಸ್ಸೆಸ್ ಗೆ ಸಮಾಧಾನ ತಂದಿಲ್ಲ. ಗುಜರಾತ್‍ನ ಮುಖ್ಯಮಂತ್ರಿಯಾಗಿದ್ದಾಗ ಕೂಡಾ ಅವರು, ಅಹ್ಮದಾಬಾದ್ ನಗರವನ್ನು ಕರ್ಣಾವತಿ ಎಂದು ಮರುನಾಮಕರಣ ಮಾಡಲು ಬಯಸಿದ್ದರು. ಅಂದಿನ ಪ್ರಧಾನಿ ಅದನ್ನು ತಡೆದರು. ಇಂದು ಅವರೇ ಪ್ರಧಾನಿಯಾಗಿದ್ದರೂ ಅದನ್ನು ಮಾಡಿಲ್ಲ. ಪ್ರಾಚೀನ ಸ್ಮಾರಕ ಮತ್ತು ಪ್ರಾಚ್ಯವಸ್ತು ಸ್ಥಳಗಳು ಹಾಗೂ ಪಳೆಯುಳಿಕೆಗಳ ಕಾಯ್ದೆ ಅನ್ವಯ ರಾಮಸೇತುವನ್ನು ರಾಷ್ಟ್ರೀಯ ಪರಂಪರಾ ಸ್ಮಾರಕ ಎಂದು ಘೋಷಿಸಬೇಕು. ಅದನ್ನು ಅವರು ಮಾಡಿಲ್ಲ. ರಾಮಮಂದಿರದಲ್ಲಿ, ಸರ್ಕಾರ ಸಕ್ರಿಯ ಹೋರಾಟಗಾರನಾಗಿಲ್ಲ. ಈ ವಿಚಾರಗಳು ಅವರಿಗೆ ಪ್ರಮುಖವಲ್ಲ. ಆದರೆ ಅವರು ಆರೆಸ್ಸೆಸ್ ಮಾರ್ಗದಲ್ಲಿಲ್ಲ. ಅವರಿಗೆ ವಿರುದ್ಧವಾಗಿಯೂ ಇಲ್ಲ. ಎಷ್ಟಾದರೂ ಅವರೊಬ್ಬ ಪ್ರಚಾರಕ ಮಾತ್ರ. ಅವರು ಆರೆಸ್ಸೆಸ್‍ನಲ್ಲಿ ಪಳಗಿದ ವ್ಯಕ್ತಿ.

ಪ್ರ: ಈ ಹಿಂದುತ್ವ ವಿಷಯಗಳನ್ನು ಮೋದಿಗೆ ಏಕೆ ಮಾಡಲು ಸಾಧ್ಯವಾಗಿಲ್ಲ ಎನ್ನುವುದು ನಿಮ್ಮ ಭಾವನೆ?

ಉತ್ತರ: ಮೋದಿ ಪ್ರತಿಯೊಬ್ಬರಿಗೂ ಸ್ವೀಕಾರಾರ್ಹರಾಗಲು ಬಯಸುತ್ತಿದ್ದಾರೆ. ನನ್ನ ಅಭಿಪ್ರಾಯದ ಪ್ರಕಾರ ಅದು ಸ್ವಯಂ ಸೋಲು. ವಾಜಪೇಯಿ ಕೂಡಾ ಈ ಪ್ರಯತ್ನ ಮಾಡಿದರೂ ಅದು ಫಲ ನಿಡಲಿಲ್ಲ. ಅವರು ಕಾಲವಾಗಿರುವುದರಿಂದ ನೀವು ಅವರನ್ನು ಹೊಗಳಬಹುದು; ಆದರೆ ಅವರು ಪಕ್ಷದ ಬಲವನ್ನು ಅರ್ಧಕ್ಕೆ ಇಳಿಸಿದರು. ತಾವು ಗೆಲುವು ಸಾಧಿಸುತ್ತೇವೆ ಎಂಬ ಹುಸಿ ಭಾವನೆಯಿಂದ, ಅವರು ‘ಭಾರತ ಹೊಳೆಯುತ್ತಿದೆ’ ಎಂದರು. ನನ್ನ ಅಭಿಪ್ರಾಯದ ಪ್ರಕಾರ ಅದು ನಿಜವಾದ ಸಮಸ್ಯೆ. ಬಿಜೆಪಿ ಹೆಚ್ಚು ಸ್ವೀಕಾರಾರ್ಹ ಪಕ್ಷವಾಗಬೇಕು ಮತ್ತು ಪ್ರತಿಯೊಬ್ಬರನ್ನೂ ಜತೆ ಸೇರಿಸಿಕೊಳ್ಳಬೇಕು ಎನ್ನುವುದು ಮೋದಿ ಬಯಕೆ. ಆದರೆ ಕಾರ್ಯಕರ್ತರು ಇದಕ್ಕೆ ಸಿದ್ಧರಿಲ್ಲ. ಇಲ್ಲಿ ಸಂಘರ್ಷ ಉಂಟಾಗುತ್ತದೆ.

ಪ್ರ: ಮೋದಿಗೆ ಈ ಸಂಘರ್ಷ ನಿವಾರಿಸಲು ಸಾಧ್ಯವಿದೆಯೇ?

ಉತ್ತರ: ಇಲ್ಲ. ಇದುವರೆಗೂ ಇಲ್ಲ. ಆದರೆ ಮಾಡಬೇಕಾದದ್ದು ಕೇವಲ ಎರಡು ಅಥವಾ ಮೂರು ಅಂಶಗಳು ಮಾತ್ರ. ಅವರು ರಾಮಮಂದಿರಕ್ಕೆ ಸಂಸತ್ತಿನ ನಿರ್ಣಯ ತರಬಹುದು. ಗೋಹತ್ಯೆಯನ್ನು ನಿಷೇಧಿಸುವ ರಾಷ್ಟ್ರೀಯ ಕಾಯ್ದೆ ಬಗ್ಗೆ ಮಾತನಾಡಬಹುದು. ಖಂಡಿತವಾಗಿಯೂ ಇದು ಪರಿಣಾಮ ಬೀರುತ್ತದೆ.

ಪ್ರ: ಆದರೆ ಯಾಕೆ ಸಾರ್ವಜನಿಕರ ಬಳಿಗೆ ಹೋಗಬೇಕು?

ಉತ್ತರ: ಏಕೆಂದರೆ ಅವರು ಈಗಾಗಲೇ ಕಟ್ಟಾವಾದಿಗಳನ್ನು ತಲುಪಿದ್ದಾರೆ. ಇದೀಗ ಸಾರ್ವಜನಿಕರನ್ನು ತಲುಪಲು ಬಯಸಿದ್ದಾರೆ. ಹಿಂದುತ್ವವನ್ನು ಇಡೀ ದೇಶ ಸಂಭ್ರಮಿಸಬೇಕು ಎನ್ನುವುದು ಅವರ ಬಯಕೆ. ಆದ್ದರಿಂದ ಅವರು, "ನೀವು ಈ ಪೂರ್ವಾಗ್ರಹ ಹೊಂದಿದ್ದೀರಿ; ಇದನ್ನು ಹೊಂದಬೇಡಿ" ಎಂದು ಹೇಳುತ್ತಾರೆ. ಶೇಕಡ 83ರಷ್ಟು ಮಂದಿ ನಾನು ಹಿಂದೂ ಎಂದು ಹೇಳಿಕೊಳ್ಳುವುದಾದರೆ, ಹಿಂದೂವಾಗಿರುವ ಜತೆಗೆ ನೀವು ಸಂಸ್ಕೃತ ಪರವೂ ಆಗಿರಬೇಕು ಎಂದು ನಾನು ಹೇಳುತ್ತೇನೆ. ನೀವು ನಿಮ್ಮ ಇತಿಹಾಸವನ್ನು ಮರು ವ್ಯಾಖ್ಯಾನಿಸಲು ಸಮರ್ಥರಾಗಬೇಕು. ನೀವು ಲಿಂಗ ಸಮಾನತೆ ಸಾಧಿಸಬೇಕು, ಈ ಎಲ್ಲ ವಿಷಯಗಳನ್ನೂ ಜನ ನಾನು ಹಿಂದೂ ಎನ್ನುತ್ತಾರೆ. ಆದರೆ ಅದನ್ನು ಖಾಸಗಿಯಾಗಿ ಹೇಳುತ್ತಾರೆ. ಅದನ್ನು ಹೊರಗೆ ಹೇಳಬೇಕು.

ಪ್ರ: ಮಹಾಮೈತ್ರಿ ಸಾಧ್ಯ ಎಂದು ನಿಮಗೆ ಅನಿಸುತ್ತದೆಯೇ?

ಉತ್ತರ: ಇಲ್ಲ. ಇಂದಿನ ಪರಿಸ್ಥಿತಿಯಲ್ಲಿ ಮಹಾಮೈತ್ರಿಯಲ್ಲಿ ಕಾಂಗ್ರೆಸ್ ಪಾತ್ರ ತೀರಾ ನಗಣ್ಯ. ಆದರೆ ಮಾಧ್ಯಮ ಇದನ್ನು ಎಲ್ಲೆಡೆಗಳಲ್ಲಿ ಕಾಂಗ್ರೆಸ್ ಇದೆ ಎಂದು ಬಿಂಬಿಸುತ್ತಿದೆ. ಮಾಯಾವತಿ ಮೈತ್ರಿ ಮುರಿದುಕೊಂಡಿದ್ದಾರೆ. (ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ). ಉತ್ತರ ಪ್ರದೇಶದ ಬದ್ಧತೆಯ ಕಾರಣದಿಂದ ಅಖಿಲೇಶ್ ಕೂಡಾ ಮೈತ್ರಿಯಿಂದ ದೂರ ಉಳಿದರೆ ಅಚ್ಚರಿ ಇಲ್ಲ. (ಮಧ್ಯಪ್ರದೇಶದಲ್ಲಿ ಸಮಾಜವಾದಿ ಪಕ್ಷ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಅಖಿಲೇಶ್ ಹೇಳಿದ್ದಾರೆ). ಕಾಂಗ್ರೆಸ್ ಪಕ್ಷದ ಸಖ್ಯವನ್ನು ಡಿಎಂಕೆ ತೊರೆದರೂ ಆಶ್ಚರ್ಯವಿಲ್ಲ. ಅದು ಆಂಧ್ರಪ್ರದೇಶ, ತೆಲಂಗಾಣ ಎಲ್ಲೆಡೆಯ ಸಮಸ್ಯೆ. ಅದಕ್ಕೆ ಸ್ವೀಕಾರಾರ್ಹತೆಯೇ ಇಲ್ಲ.

ರಾಹುಲ್‍ಗಾಂಧಿ ಚಿಂತನೆಗಳ ವ್ಯಕ್ತಿಯಾಗಿ ಹೊರಹೊಮ್ಮಿಲ್ಲ. ಅವರ ಶೇಕಡ 90ರಷ್ಟು ಭಾಷಣಗಳು ನಿಂದನೆಗಳು. ಅದು ಕೂಡಾ ಅಸಂಬದ್ಧ. ದಿಢೀರನೇ ಅವರು ಪ್ರಧಾನಿ ಬಳಿಗೆ ಬಂದು ಅವರನ್ನು ಅಪ್ಪಿಕೊಳ್ಳುತ್ತಾರೆ. ಅದು ತೀರಾ ಬಾಲಿಶ ಎನಿಸುತ್ತದೆ. ಅವರ ಬಗ್ಗೆ ಪರಿಸ್ಥಿತಿಯನ್ನು ನಿಯಂತ್ರಿಸುವ ವ್ಯಕ್ತಿ ಎಂಬ ಭಾವನೆ ನನಗೆ ಬರುತ್ತಿಲ್ಲ.

ಪ್ರ: ಆದರೆ ರಾಹುಲ್‍ ಗಾಂಧಿ ಸ್ವಂತ ಪ್ರಯತ್ನದಿಂದ ಮುಂದೆ ಬರುತ್ತಿದ್ದಾರೆ; ಸುಧಾರಿಸುತ್ತಿದ್ದಾರೆ ಎಂಬ ಭಾವನೆ ಜನರಲ್ಲಿದೆ.

ಉತ್ತರ: ಅದೆಲ್ಲವೂ ನಿಮ್ಮ ಮಾಧ್ಯಮದ ಊಹೆ. ಮೂಲ ಸಮಸ್ಯೆ ಎಂದರೆ ಅವರಿಗೆ ಹೊಸ ಯೋಚನೆಗಳೇ ಇಲ್ಲ. ನೀವು ಅದನ್ನು ಮಾಡಿಲ್ಲ; ಇದನ್ನು ಮಾಡಿಲ್ಲ ಎಂದು ಹೇಳುವುದು ಬಿಟ್ಟರೆ, ಆರ್ಥಿಕತೆ ಬಗ್ಗೆ ಅವರಿಗೆ ಏನಾದರೂ ಕಲ್ಪನೆ ಇದೆಯೇ?

ಪ್ರ: ಆದರೆ ಅದು ವಿರೋಧ ಪಕ್ಷದ ಕೆಲಸ ಕೂಡಾ.

ಉತ್ತರ: ಅದು ಕೂಡಾ ಅವರ ಕೆಲಸ ನಿಜ. ಆದರೆ ಅದಷ್ಟೇ ಕೆಲಸವಲ್ಲ. ನೀವು ನಿರ್ದಿಷ್ಟ ಕಲ್ಪನೆ ಹೊಂದಿರಬೇಕು. ನಮ್ಮಲ್ಲಿ ಹೊಸ ಕಲ್ಪನೆಗಳಿರುವ ಜನ ಸಾಕಷ್ಟು ಮಂದಿ ಇದ್ದಾರೆ. ರಾಮಮಂದಿರ ಒಂದು ಪರಿಕಲ್ಪನೆ. ಇದೀಗ ಅವರು ಕೃತಿಚೋರ. ಅಷ್ಟೇ. "ನಾನು ಶಿವಭಕ್ತ ಕೂಡಾ"

ಪ್ರ: ಅವರು ರಫೇಲ್ ಒಪ್ಪಂದದ ಬಗ್ಗೆ ಪಟ್ಟು ಬಿಡದೇ ಹಠಮಾಡಿ ಸರ್ಕಾರಕ್ಕೆ ಮುಜುಗರ ತಂದಿದ್ದಾರೆ.

ಉತ್ತರ: ಹಠದಿಂದ ಏನು ಪ್ರಯೋಜನ?, ಅವರು ಸಾಧಿಸಿದ್ದಾದರೂ ಏನು?, ಅನಿಲ್ ಅಂಬಾನಿಗೆ ಗುತ್ತಿಗೆ ನೀಡಲಾಗಿದೆ. ಇದು ಸಾರ್ವಜನಿಕರ ಅಭಿಪ್ರಾಯ. ಅದೇ ವೇಳೆ ನಾನು ಈ ದಾಖಲೆಗಳನ್ನು ನೋಡಿಲ್ಲ. ಆದ್ದರಿಂದ ನನಗೆ ಗೊತ್ತಿಲ್ಲ. ಇರಲೂಬಹುದು ಎಂದು ಹೇಳಬಯಸುತ್ತೇನೆ. ದಾಖಲೆಗಳನ್ನು ನೋಡದೇ ನಾನೇನೂ ಹೇಳಲಾರೆ. ರಾಹುಲ್‍ ಗಾಂಧಿಯವರ ಲಾಭಕ್ಕಾಗಿ ನಾನು ನನ್ನ ಪಕ್ಷದ ವಿರುದ್ಧ ಈ ಹೊಣೆಯನ್ನು ವಹಿಸಿಕೊಳ್ಳಬೇಕು ಎಂದು ನೀವು ಬಯಸುತ್ತೀರಿ. ನಾನು ಮೂರ್ಖನಲ್ಲ.

ಪ್ರ: ಬಿಜೆಪಿ ಗೆಲುವು ಸಾಧಿಸದಿದ್ದರೆ ಏನು ಸಂಭವಿಸಬಹುದು ಎನಿಸುತ್ತದೆ?

ಉತ್ತರ: ಮುಂಬರುವ ಸರ್ಕಾರ ಒಂದು ವರ್ಷಕ್ಕಿಂತ ಹೆಚ್ಚು ಬಾಳುವುದಿಲ್ಲ.

ಪ್ರ: ಮೋದಿ ಹೊರತುಪಡಿಸಿ ಬೇರೆ ಯಾರಾದರೂ ಪ್ರಧಾನಿಯಾಗುತ್ತಾರೆ ಎನಿಸುತ್ತದೆಯೇ?

ಉತ್ತರ: ಭಾರತದಲ್ಲಿ ಅದನ್ನು ಯಾರೂ ಹೇಳಲಾರರು. ನೆಹರೂ ಜೀವಂತವಿದ್ದಾಗ ಲಾಲ್‍ ಬಹದ್ದೂರ್ ಶಾಸ್ತ್ರಿ ಪ್ರಧಾನಿಯಾಗುತ್ತಾರೆ ಎಂದು ಯಾರಾದರೂ ಯೋಚಿಸಿದ್ದರೇ?, ನೆಹರೂ ಬಳಿಕ ಯಾರು ಎಂಬ ಪ್ರಶ್ನೆ ಇತ್ತು. ಸದ್ಯಕ್ಕೆ ಯಾರೂ ಇಲ್ಲ. ನಮ್ಮಲ್ಲಿ 130 ಕೋಟಿ ಮಂದಿ ಇದ್ದೇವೆ. ಯಾರಾದರೂ ಆಗಬಹುದು. ನಮ್ಮ ಸಂಸ್ಕೃತಿಯಲ್ಲಿ, ಒಬ್ಬ ವ್ಯಕ್ತಿಯನ್ನು ಮುಂದಿನ ಪ್ರಧಾನಿ ಎಂದು ಗುರುತಿಸಿದರೆ, ಅದು ಅವರ ಕೊನೆ ಎಂದು ನಾನು ಎಣಿಸುತ್ತೇನೆ. ಕಾಂಗ್ರೆಸ್‍ನಲ್ಲಿ ಎಚ್.ಎನ್.ಬಹುಗುಣ ಎಂಬ ವ್ಯಕ್ತಿ ಇದ್ದರು. ಅವರನ್ನು ಇಂದಿರಾಗಾಂಧಿಗೆ ಪರ್ಯಾಯ ಎಂದು ಬಿಂಬಿಸಲಾಗಿತ್ತು. ಅವರು ದುರಂತ ಅಂತ್ಯ ಕಂಡರು. ಆದ್ದರಿಂದ ಯಾರೂ ನಾನು ಅಭ್ಯರ್ಥಿ ಎಂದು ಹೇಳಿಕೊಳ್ಳುವುದಿಲ್ಲ.

ಪ್ರ: ಉತ್ತರ ಪ್ರದೇಶದಲ್ಲಿ ಎಸ್ಪಿ ಹಾಗೂ ಬಿಎಸ್ಪಿಯ ಮೈತ್ರಿ ಬಗ್ಗೆ ಏನು ಹೇಳುತ್ತೀರಿ?

ಉತ್ತರ: ಇಲ್ಲಿ ಇರುವ ನಿಜವಾದ ಪ್ರಶ್ನೆ ಎಂದರೆ, ಮಾಯಾವತಿಯ ಅಭ್ಯರ್ಥಿಗಳು ಇಲ್ಲ ಎಂದಾದಲ್ಲಿ ಪರಿಶಿಷ್ಟ ಜಾತಿಯವರು ತಮ್ಮ ಮತವನ್ನು ಯಾದವರಿಗೆ ನೀಡುತ್ತಾರೆಯೇ ಅಥವಾ ಬಿಜೆಪಿ ಕಣಕ್ಕಿಳಿಸಿದ ಪರಿಶಿಷ್ಟ ಅಭ್ಯರ್ಥಿಗೆ ಹಾಕುತ್ತಾರೆಯೇ ಎನ್ನುವುದು. ಈ ವರ್ಗಾವಣೆ 1971ರಲ್ಲಿ ಏಕೆ ಆಗಲಿಲ್ಲ. ಇಂದಿರಾಗಾಂಧಿ ಏಕಾಂಗಿಯಾಗಿ ಇಡೀ ವಿರೋಧ ಪಕ್ಷಗಳನ್ನು ಸೋಲಿಸಿದರು; ಅವರೆಲ್ಲರೂ ಎತ್ತರದ ವ್ಯಕ್ತಿಗಳು. ಇಂದಿನ ಸಣ್ಣವರಂತಲ್ಲ. ಸಾರ್ವಜನಿಕರು ಮೈತ್ರಿಯ ಪರವಾಗಿ ಹೋಗದೇ, ತಮ್ಮ ಹಿತಾಸಕ್ತಿಗೆ ಅವಕಾಶವಿದೆಯೇ ಎಂದು ನೋಡುತ್ತಾರೆ. ಪರಿಶಿಷ್ಟರ ವಿರುದ್ಧ ಎಲ್ಲ ದೌರ್ಜನ್ಯಗಳನ್ನು ಬ್ರಾಹ್ಮಣರು ಎಸಗಿಲ್ಲ. ಇವೆಲ್ಲವನ್ನೂ ಹಿಂದುಳಿದ ವರ್ಗದವರೇ ಎಸಗಿದ್ದಾರೆ.

ಪ್ರ: ಮಾಯಾವತಿಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಭಾವಿಸುತ್ತೀರಾ?

ಉತ್ತರ: ಈ ದೇಶದಲ್ಲಿ ಹೇಳುವುದು ಕಷ್ಟ. 1970ರಿಂದ ನಾನು ಹಲವು ಮಂದಿ ಪ್ರಧಾನಿಗಳನ್ನು ನೋಡಿದ್ದೇನೆ. ಆದರೆ ಅವರು ಪ್ರಧಾನಿಯಾಗುತ್ತಾರೆ ಎಂದು ನಾನು ಯೋಚಿಸಿಯೂ ಇರಲಿಲ್ಲ. ಮಾಯಾವತಿ ತಮ್ಮದೇ ಬಲದಿಂದ ಮುಖ್ಯಮಂತ್ರಿಯಾಗುತ್ತಾರೆ ಎಂದು ನಾನು ಎಣಿಸಿರಲಿಲ್ಲ. ಏಕೆಂದರೆ ಪರಿಶಿಷ್ಟರ ಮತ ಶೇಕಡ 18ಕ್ಕಿಂತ ಅಧಿಕ ಇಲ್ಲ. ಆದರೆ ಅವರು ಮುಖ್ಯಮಂತ್ರಿಯಾದರು. ನನಗೆ ವೈಯಕ್ತಿಕವಾಗಿ ಅವರನ್ನು ಗೊತ್ತು. ಆಕೆ ಒಳ್ಳೆಯ ಸ್ನೇಹಿತೆ. ಇತರ ರಾಜಕಾರಣಿಗಳಿಗಿಂತ ಲಾಭ ಪಡೆದದ್ದನ್ನು ನೆನಪಿಸಿಕೊಳ್ಳುವ ಗುಣ ಅವರಲ್ಲಿದೆ. ಆಕೆ ಪ್ರಧಾನಿಯಾದರೆ, ಅದು ನಮ್ಮ ಸಾಮಾಜಿಕ ಬದಲಾವಣೆಗೆ ಒಳ್ಳೆಯದು. ಆದರೆ ಅವರು ಆಗುತ್ತಾರೆಯೇ ಇಲ್ಲವೇ ಎಂದು ನಾನು ಹೇಳಲಾರೆ.

ಪ್ರ: ಮಾಯಾವತಿ ಮೇಲೆ ಸಿಬಿಐ ತನಿಖೆ ಮೂಲಕ ಬಿಜೆಪಿ ಒತ್ತಡ ಹೇರುತ್ತಿದೆ ಎಂಬ ವದಂತಿ ಇದೆ. ಆಕೆಗೆ ಉಪರಾಷ್ಟ್ರಪತಿ ಹುದ್ದೆ ನೀಡಿ, ಅವರು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳದಂತೆ ಮಾಡಲಾಗುತ್ತದೆ ಎಂಬ ಗಾಳಿ ಸುದ್ದಿ ಇದೆ. ನಿಮ್ಮ ಅಭಿಪ್ರಾಯವೇನು?

ಉತ್ತರ: ಅವರು ಅದಕ್ಕೆ ತೀರಾ ಕಠಿಣ. ಅವರು ಉಪರಾಷ್ಟ್ರಪತಿಯಾಗಲು ಇಚ್ಛಿಸಿರಬಹುದು. ಅಂದರೆ ನಾವು ಅಂಥ ವಾಗ್ದಾನ ಮಾಡಿದರೆ ಅವರು ಸ್ವೀಕರಿಸಬಹುದೇ ಎನ್ನುವುದು ನನಗೆ ಗೊತ್ತಿಲ್ಲ. ಆದರೆ ಯಾರೂ ಆಕೆಯನ್ನು ಮುರಿಯಲು ಸಾಧ್ಯವಾಗದು.

ಪ್ರ: ಮಮತಾ ಬ್ಯಾನರ್ಜಿ ಬಗ್ಗೆ ಏನು ಹೇಳುತ್ತೀರಿ?

ಉತ್ತರ: ಆಕೆ ನನ್ನ ಸ್ನೇಹಿತೆ. ಆಕೆಯನ್ನು ಸರಿಯಾಗಿ ನಿಭಾಯಿಸಿದರೆ ಆಕೆ ತಾರ್ಕಿಕ ವ್ಯಕ್ತಿ. ಆಕೆಗೆ ಒಂದು ಭೀತಿ ಇದೆ. ಆಕೆ ಹೋರಾಟಗಾರ್ತಿ ಎನ್ನುವುದು ನನ್ನ ವೈಯಕ್ತಿಕ ಅನಿಸಿಕೆ. ನಾನು ಕಮ್ಯುನಿಸ್ಟ್ ವಿರೋಧಿ. ಆದ್ದರಿಂದ ನನ್ನ ಹೃದಯ ಆಕೆಯ ಪರವಾಗಿದೆ. ಆಕೆ ಮುಖ್ಯವಾಹಿನಿಗೆ ಬರಬೇಕು ಎನ್ನುವುದು ನನ್ನ ಇಚ್ಛೆ.

ಪ್ರ: ಸುಪ್ರೀಂಕೋರ್ಟ್ ಸಲಿಂಗಕಾಮದ ಬಗ್ಗೆ ಐತಿಹಾಸಿಕ ತೀರ್ಪು ನೀಡಿದ ಬಳಿಕ ಸಲಿಂಗಕಾಮವನ್ನು ನೀವು ವಂಶವಾಹಿ ದೋಷ ಎಂದು ಕರೆದಿದ್ದೀರಿ. ಇದು ಸಹ ನಾಗರಿಕರಿಗೆ ನೋವು ತಂದಿದೆ.

ಉತ್ತರ: ಆದರೆ ಏನು?, ನೀವು ಖಾಸಗಿಯಾಗಿ ಅದನ್ನು ಮಾಡಬಾರದು ಎಂದು ನಾನು ಹೇಳಿಲ್ಲ. ಅದನ್ನು ಸಂಭ್ರಮಿಸಬೇಡಿ, ವಿವಾಹವಾಗಬೇಡಿ, ಸಾರ್ವನಿಕವಾಗಿ ಚುಂಬಿಸಬೇಡಿ ಎಂದಷ್ಟೇ ನಾನು ಹೇಳಿದ್ದೆ. ಅಮೆರಿಕನ್ನರು ಏನು ಮಾಡಿದ್ದಾರೆ ಎಂದು ನಾನು ಬಲ್ಲೆ. ಅವರು ಸಲಿಂಗಿ ಬಾರ್‍ಗಳನ್ನು ಆರಂಭಿಸಿದ್ದಾರೆ. ನಮ್ಮ ದೇಶದಲ್ಲಿ ಇಂಥದ್ದನ್ನು ನಾನು ಬಯಸುವುದಿಲ್ಲ. ಇದು ಶಿಶುಕಾಮಕ್ಕೆ ಕಾರಣವಾಗುತ್ತದೆ.

ಪ್ರ: ಇಂಥದ್ದಕ್ಕೆ ನಿರ್ದಿಷ್ಟವಾಗಿ ಯಾವ ಪುರಾವೆಯೂ ಇಲ್ಲ.

ಉತ್ತರ: ಇವೆಲ್ಲವೂ ಅವುಗಳ ಕೇಂದ್ರ. ಇದು ಅಂಥದ್ದಕ್ಕೆ ಅವಕಾಶ ಒದಗಿಸುತ್ತದೆ. ಅಮೆರಿಕದಲ್ಲಿ ನಾನದನ್ನು ನೋಡಿದ್ದೇನೆ. ನಮ್ಮ ಸಂಸ್ಕೃತಿಯಲ್ಲಿ ನಾವು ಎಂದೂ ಸಲಿಂಗಕಾಮವನ್ನು ಆಯ್ಕೆ ಎಂದು ಸಂಭ್ರಮಿಸಿಲ್ಲ. ಇದು ಆಯ್ಕೆಯೂ ಅಲ್ಲ. ಇದು ವಂಶವಾಹಿ ಸಮಸ್ಯೆ ಮತ್ತು ನಾವದನ್ನು ವೈಭವೀಕರಿಸಬಾರದು. ಖಾಸಗಿಯಾಗಿ ಮಾಡಿಕೊಳ್ಳಲಿ. ನಿಮ್ಮ ಕೋಣೆಗೆ ನಾವು ಬರುವುದಿಲ್ಲ. ಆದರೆ ಸಲಿಂಗಿ ವಿವಾಹ ಬೇಡ. ಆದರೆ ಸಾಮರ್ಥ್ಯದ ವಿಚಾರದಲ್ಲಿ ಆರ್ಥಿಕ ವಲಯದಲ್ಲಿ ಯಾವುದೇ ತಾರತಮ್ಯ ಬೇಡ. ನನಗೆ ಇಬ್ಬರು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಗೊತ್ತು. ಅವರು ಸಲಿಂಗಕಾಮಿಗಳೆನ್ನುವುದೂ ಗೊತ್ತು. ಆದರೆ ನಾನು ಆ ಬಗ್ಗೆ ಎಂದೂ ಏನೂ ಹೇಳಿಲ್ಲ. ಅವರು ಒಳ್ಳೆಯ ನ್ಯಾಯಮೂರ್ತಿಗಳು. ಆದರೆ ನೀವು ಇದನ್ನು ವೈಭವೀಕರಿಸಿದರೆ, ಎಚ್ಚರ ವಹಿಸಬೇಕಾಗುತ್ತದೆ. ಮನುಕುಲ ಉಳಿಯಬೇಕಾದರೆ, ಪುರುಷ- ಸ್ತ್ರೀ ಸಂಬಂಧ ಇರಲೇಬೇಕು. ಅದಲ್ಲದೇ ಬೇರಾವುದರಿಂದಲೂ ಸಾಧ್ಯವಿಲ್ಲ.

ಪ್ರ: ಮೋದಿ ಆಡಳಿತದಲ್ಲಿ ಆರ್ಥಿಕತೆ ಭಯಾನಕ ಎಂದು ಹೇಳಿದ್ದೀರಿ. ಏಕೆ?

ಉತ್ತರ: ಆರ್ಥಿಕತೆಯನ್ನು ಅರ್ಥ ಮಾಡಿಕೊಳ್ಳದಿರುವುದು ಮುಖ್ಯ ಕಾರಣ. ಮೊದಲನೆಯದಾಗಿ ನಮಗೆ ಅಮೆರಿಕದಿಂದ ಆಮದು ಮಾಡಿಕೊಂಡ ಗವರ್ನರ್ ಇದ್ದರು. ಅವರಿಗೆ ಅರ್ಥಶಾಸ್ತ್ರದ ‘ಎಬಿಸಿ’ ಕೂಡಾ ಗೊತ್ತಿಲ್ಲ. ಅವರು ವಾಸ್ತವವಾಗಿ ವ್ಯವಸ್ಥಾಪನಾ ಪದವಿಯನ್ನು ಐಐಟಿಯಲ್ಲಿ ಪಡೆದವರು. ವ್ಯವಸ್ಥಾಪನಾ ಪದವಿ ದ್ವಿಪಕ್ಷೀಯ. ಅರ್ಥಶಾಸ್ತ್ರ ಎನ್ನುವುದು ಸಾಮಾನ್ಯ ಸಮತೋಲನ. ನಾನು ಇಲ್ಲಿ ಏನು ಮಾಡುತ್ತೇನೆಯೋ ಅದರ ಪರಿಣಾಮ ಅಲ್ಲಿ ಆಗುತ್ತದೆ. ಕಾರ್ಮಿಕ ಸಂಘಗಳ ಜತೆ ಮಾತನಾಡಿ ವೇತನ ಕಡಿತಗೊಳಿಸಿದರೆ, ನಿರುದ್ಯೋಗ ಕಡಿಮೆಯಾಗುತ್ತದೆ ಎಂದು ಅಮೆರಿಕದ ಅಧ್ಯಕ್ಷ ಯೋಚಿಸಿದ್ದು, 1930ರ ಅಮೆರಿಕದ ಆರ್ಥಿಕ ಹಿಂಜರಿತಕ್ಕೆ ಕಾರಣವಾಯಿತು. ಆದರೆ ಆದದ್ದು ವ್ಯತಿರಿಕ್ತ. ಏಕೆ?... ನೀವು ವೇತನ ಕಡಿತಗೊಳಿಸಿದ ತಕ್ಷಣ ನೀವು ಖರೀದಿಸುವ ಶಕ್ತಿಯನ್ನೂ ಕಡಿತಗೊಳಿಸಿದಂತಾಗುತ್ತದೆ. ಖರೀದಿ ಶಕ್ತಿಯನ್ನು ಕುಂದಿಸಿದರೆ, ಬೇಡಿಕೆ ಕುಸಿಯುತ್ತದೆ. ಆಗ ಎಲ್ಲ ವಾಣಿಜ್ಯ ಸಂಸ್ಥೆಗಳು ಮುಚ್ಚುತ್ತವೆ.

ಬಡ್ಡಿದರ ಹೆಚ್ಚಿಸುವ ಮೂಲಕ ನಾನು ಹಣದುಬ್ಬರ ತಡೆಯಬಹುದು ಎಂದು ರಘುರಾಮ್ ರಾಜನ್ ಹೇಳಿದ್ದರು. ಆದರೆ ಬಡ್ಡಿದರ ಹೆಚ್ಚಿಸುವುದರಿಂದ, ನೀವು ಬಂಡವಾಳದ ವೆಚ್ಚವನ್ನೂ ಹೆಚ್ಚಿಸಿದಂತಾಗುತ್ತದೆ ಹಾಗೂ ಎಲ್ಲ ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ದಿಮೆಗಳು ಪತನವಾಗುತ್ತವೆ. ಭಾರತ ಈಗಾಗಲೇ ಗರಿಷ್ಠ ಬಡ್ಡಿದರ ಹೊಂದಿರುವ ದೇಶ. ಅಮೆರಿಕದಲ್ಲಿ ಶೇಕಡ 2ರ ದರದಲ್ಲಿ ಸಾಲ ಸಿಗುತ್ತದೆ. ಆದರೆ ಭಾರತದಲ್ಲಿ ಶೇಕಡ 12ಕ್ಕಿಂತ ಕಡಿಮೆ ಇಲ್ಲ. ಸಾಮಾನ್ಯವಾಗಿ ಶೇಕಡ 18ರವರೆಗೂ ಇರುತ್ತದೆ. ಜೇಟ್ಲಿಗೆ ಇದು ಅರ್ಥವಾಗುವುದಿಲ್ಲ ಏಕೆಂದರೆ ಅವರೆಂದೂ ಅರ್ಥಶಾಸ್ತ್ರ ಓದಿಲ್ಲ. ಆದ್ದರಿಂದ ಅವರು ಅಧಿಕಾರಿಗಳು ಅಥವಾ ಆರ್ಥಿಕ ಸಲಹೆಗಾರರನ್ನೇ ಅವಲಂಬಿಸಬೇಕು. ಸಾಮಾನ್ಯ ಸಮತೋಲನ ಅಥವಾ ವಿಸ್ತೃತ ಆರ್ಥಿಕ ವ್ಯವಸ್ಥೆ ಬಗ್ಗೆ ಅವರಿಗೆ ಕಲ್ಪನೆಯೇ ಇಲ್ಲ. ಆದರೆ ಪ್ರಧಾನಿ ಬಯಸಿದರೆ ಅವರನ್ನು ಯಾರೂ ಏನೂ ಮಾಡುವಂತಿಲ್ಲ. ಹಿಂದಿನ ಆಡಳಿತದಲ್ಲಿ ಭ್ರಷ್ಟವಾಗಿದ್ದ ಸಂಕೀರ್ಣ  ಹತೋಟಿಕೂಟವೊಂದು ಇಂದು ಹಣಕಾಸು ಸಚಿವಾಲಯವನ್ನು ನಿಯಂತ್ರಿಸುತ್ತಿದೆ.

ಪ್ರ: ಈ ಹತೋಟಿಕೂಟದಲ್ಲಿ ಯಾರಿದ್ದಾರೆ?

ಉತ್ತರ: ನಾನು ಆಡಳಿತಗಾರರನ್ನು ಗುರುತಿಸಬಲ್ಲೆ. ಆದರೆ ನಾನು ಸಚಿವರ ಬಗ್ಗೆ ಮಾತನಾಡಲಾರೆ.

ಪ್ರ: ನಿಮ್ಮನ್ನು ಹಣಕಾಸು ಸಚಿವರನ್ನಾಗಿ ಮಾಡಿದರೆ ಭಿನ್ನವಾಗಿ ಏನು ಮಾಡಬಲ್ಲಿರಿ?

ಉತ್ತರ: ನಾನು ಮೊದಲ ದಿನವೇ ಆದಾಯ ತೆರಿಗೆ ರದ್ದು ಮಾಡುತ್ತೇನೆ ಹಾಗೂ ಬಡ್ಡಿದರ ಇಳಿಸುತ್ತೇನೆ. ನಿರಖು ಠೇವಣಿಯ ದರವನ್ನು ಶೇಕಡ 9ಕ್ಕೆ ಹೆಚ್ಚಿಸುತ್ತೇನೆ. ಜಿಎಸ್‍ಟಿಯಿಂದ ಹೊರಬರುತ್ತೇನೆ. ಎಕ್ಸೈಸ್ ಸರಕಿನ ಸಂಖ್ಯೆಯನ್ನು 4781ರಿಂದ ಕೇವಲ 21ಕ್ಕೆ ಇಳಿಸುತ್ತೇನೆ. ಉತ್ತೇಜನಕಗಳನ್ನು ನೀಡುತ್ತೇನೆ. ಭಾರತೀಯರು ಉತ್ತೇಜಕಗಳಿಗೆ ಸ್ಪಂದಿಸುತ್ತಾರೆ. ದಾದಾಗಿರಿಯನ್ನು ಅವರು ಬಯಸುವುದಿಲ್ಲ.

ನಾನು ಆದಾಯ ತೆರಿಗೆ ರದ್ದು ಮಾಡಲು ಕಾರಣವೆಂದರೆ, ನ್ಯಾಯಬದ್ಧ ತೆರಿಗೆಯನ್ನು ಜನರು ನೀಡಲು ತಯಾರಿದ್ದರೂ, ನಿಮ್ಮ ತೆರಿಗೆಯನ್ನು ನೀವು ಪಾವತಿಸಿದರೂ, ಶಿಷ್ಟವಾಗಿರಲು ಸಮರ್ಥವಾದ ವ್ಯವಸ್ಥೆ ನಮ್ಮಲ್ಲಿ ಇಲ್ಲ. ಆದ್ದರಿಂದ ಅದನ್ನು ರದ್ದುಪಡಿಸಬೇಕು. ನಾಳೆ ಕಲ್ಲಿದ್ದಲು ಬ್ಲಾಕ್ ಹರಾಜು ನಡೆದರೆ, ಆದಾಯ ತೆರಿಗೆಯ ಮೂರು ಪಟ್ಟು ಆದಾಯ ಬರುತ್ತದೆ. ಭಾರತೀಯ ಆರ್ಥಿಕತೆಯಲ್ಲಿ ಕ್ರೋಢೀಕರಿಸಲು ದೊಡ್ಡ ಪ್ರಮಾಣದ ಸಂಪನ್ಮೂಲ ಇದೆ. ಜನರಿಗೆ ಆದಾಯ ತೆರಿಗೆ ರದ್ದು ಮಾಡುವುದಾಗಿ ಹೇಳಿ, ಆ ಹಣವನ್ನು ಖರ್ಚು ಮಾಡಬೇಡಿ; ಎರಡು ವರ್ಷಗಳ ನಿರಖು ಠೇವಣಿ ಮಾಡಿ ಎಂದು ಹೇಳುತ್ತೇನೆ. ಆಗ ನಿಮ್ಮ ಆರ್ಥಿಕತೆ ಬದಲಾಗಿರುತ್ತದೆ ಹಾಗೂ ನೀವು ವೆಚ್ಚ ಮಾಡಲು ಆರಂಭಿಸಬಹುದು. ಜನ ಸಹಕರಿಸುತ್ತಾರೆ.

ಪ್ರ: 2014-15ರ ರಫೇಲ್ ಒಪ್ಪಂದ ಭ್ರಷ್ಟ ಎಂದು ನೀವು ಹೇಳಿದ್ದೀರಿ. ಅಂದಿಗೂ ಇಂದಿಗೂ ಏನು ಬದಲಾವಣೆ ಆಗಿದೆ?

ಉತ್ತರ: 2013ರ ವೇಳೆಗೆ ಸೋನಿಯಾಗಾಂಧಿ ಹಾಗೂ ಅಂದಿನ ಫ್ರಾನ್ಸ್ ಅಧ್ಯಕ್ಷರಾಗಿದ್ದ ನಿಕೋಲಸ್ ಸರ್ಕೋಜಿಯವರ ಪತ್ನಿ ಕಾರ್ಲಾ ಬ್ರೂನಿ 126 ರಫೇಲ್ ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದರು. ಇದಕ್ಕೆ ವಾಸ್ತವವಾಗಿ ಪ್ರಧಾನಿ ಅಥವಾ ರಕ್ಷಣಾ ಸಚಿವರ ಸಹಿ ಬೇಕು. ಬಳಿಕ ನಮ್ಮ ಸರ್ಕಾರ ಬಂತು. ನವೆಂಬರ್‍ನಲ್ಲಿ ಪ್ರಧಾನಿ, ಬುದ್ಧಿವಂತ ಹಾಗೂ ಪ್ರಾಮಾಣಿಕ ವ್ಯಕ್ತಿಯಾಗಿದ್ದ  ಅಂದಿನ ರಕ್ಷಣಾ ಸಚಿವ ಪಾರಿಕ್ಕರ್ ಜತೆಗೆ ಪ್ರಯಾಣಿಸಿದರು. ಕೆಲ ಡಸಾಲ್ಟ್ ದಲ್ಲಾಳಿಗಳಿದ್ದರು. ದೊಡ್ಡ ಕುಳ ನಮಗೆ ಸಿಗುತ್ತದೆ ಹಾಗೂ ರಫೇಲ್‍ಗೆ ಮೋದಿ ಸಹಿ ಮಾಡುತ್ತಾರೆ ಎಂಬ ಅತಿವಿಶ್ವಾಸದಿಂದ ಇವರಿದ್ದರು.

ಅದೇ ವೇಳೆಗೆ, ಅದಕ್ಕೆ ನೀವು ಸಹಿ ಮಾಡಿದರೆ ನಾನು ನ್ಯಾಯಾಲಯಕ್ಕೆ ಹೋಗುತ್ತೇನೆ ಎಂದು ಹೇಳಿದೆ. ನಾನು ಪಕ್ಷದ ಶಿಸ್ತು ಉಲ್ಲಂಘಿಸಿದ್ದೇನೆ ಎಂಬ ಕೋಲಾಹಲ ಎದ್ದಿತು. ನಾನು ಅದಕ್ಕೆ ಗಮನ ಕೊಡಲಿಲ್ಲ. ಆಗ ಪಾರಿಕ್ಕರ್, 126 ವಿಮಾನಗಳನ್ನು ನಾವು ಮುಟ್ಟುವುದಿಲ್ಲ. ಬದಲಾಗಿ 36 ವಿಮಾನಗಳಿಗೆ ಮತ್ತೆ ಚರ್ಚೆ ಮಾಡುತ್ತೇವೆ ಎಂದು ಘೋಷಿಸಿದರು. ಪಾರಿಕ್ಕರ್ ಹೋದ ಬಳಿಕ ಜೇಟ್ಲಿ ಏನು ಮಾಡಿದರು ಎನ್ನುವುದು ನನಗೆ ತಿಳಿಯದು.

ಪ್ರ: ಅನಿಲ್ ಅಂಬಾನಿಯವರ ರಿಯಲನ್ಸ್ ಡಿಫೆನ್ಸ್ ಈ ವ್ಯವಹಾರ ಪಡೆಯಲು ಮೋದಿ ಸಹಕರಿಸಿದ್ದಾರೆ ಎಂದು ಕಾಂಗ್ರೆಸ್ ಹೇಳುತ್ತಿದೆ.

ಉತ್ತರ: ನಿಮ್ಮಲ್ಲಿ ಇದಕ್ಕೆ ಪುರಾವೆ ಇದ್ದರೆ ನೀವು ಏಕೆ ಕೇಸು ದಾಖಲಿಸಬಾರದು ಎಂದು ನಾನು ಕಾಂಗ್ರೆಸ್ ಪಕ್ಷಕ್ಕೆ ಕೇಳುತ್ತಲೇ ಬಂದಿದ್ದೇನೆ. ಒಂದು ಖಾಸಗಿ ದೂರು. ಆದರೆ ಯಾರೂ ಅದನ್ನು ಬಯಸುತ್ತಿಲ್ಲ. ಅವರು ಗಂಭೀರ ವ್ಯಕ್ತಿಗಳಲ್ಲ. ಸಾರ್ವಜನಿಕ ನಿಂದನೆಯಲ್ಲೇ ಕೆಲಸ ಮಾಡುವವರು. ಪುರಾವೆಯ ಮೌಲ್ಯ ಇರುವ ಒಂದು ದಾಖಲೆಯನ್ನೂ ಕಾಂಗ್ರೆಸ್ ಪಕ್ಷ ಇದುವರೆಗೆ ಪ್ರಸ್ತುತಪಡಿಸಿಲ್ಲ.

ಈ ಮೂಲಕ ರಫೇಲ್ ವಿಮಾನ ಖರೀದಿಸಲು ಯಾರೂ ಬಯಸುತ್ತಿಲ್ಲ. ವಿಮಾನ ಖರೀದಿಸುವುದರಲ್ಲಿ ಏಕೆ ಸಮಯ ವ್ಯರ್ಥ ಮಾಡುತ್ತೀರಿ?, ಕಂಪನಿಯನ್ನು ಖರೀದಿಸಿ ಎಂದು ನಾನು ಪಾರಿಕ್ಕರ್‍ಗೆ ಹೇಳಿದ್ದೆ. ಏಕೆಂದರೆ, ಭಾರತ ಈ ಒಪ್ಪಂದ ಮಾಡಿಕೊಳ್ಳದಿದ್ದರೆ ಕಂಪನಿ ಮುಚ್ಚಬೇಕಾಗುತ್ತದೆ ಎಂದು ಡಸಾಲ್ಟ್ ಅಧ್ಯಕ್ಷ, ಫ್ರಾನ್ಸ್ ಅಧ್ಯಕ್ಷರಿಗೆ ಹೇಳಿದ್ದರು. ಲಿಬಿಯಾದಲ್ಲಿ ಅದು ವಿಫಲವಾಗಿದೆ. ಆದರೆ ಅದನ್ನು ಆಧುನೀಕರಿಸಲಾಗುತ್ತದೆ ಎಂದು ಪಾರಿಕ್ಕರ್ ಹೇಳಿದ್ದರು. ಅದನ್ನು ಆಧುನೀಕರಿಸಲಾಗಿದೆಯೇ ಇಲ್ಲವೇ ಎಂದು ನಾನು ನೋಡಿಲ್ಲ. ಆದರೆ ನಮ್ಮ ವಾಯುಪಡೆ ಮುಖ್ಯಸ್ಥರು ಇದರಿಂದ ಸಂತೋಷಗೊಂಡಂತಿದೆ.

ಪ್ರ: ಫ್ರಾನ್ಸ್ ನ ಮಾಜಿ ಅಧ್ಯಕ್ಷ ಫ್ರಾಂಸ್ವಾ ಒಲಾಂಡ್ ಹೇಳಿದಂತೆ ಡಸಾಲ್ಟ್‍ಗೆ ಅನಿಲ್ ಅಂಬಾನಿಯವರ ರಿಲಯನ್ಸ್ ಡಿಫೆನ್ಸ್ ಜತೆಗೆ ಪಾಲುದಾರಿಕೆ ಮಾಡಿಕೊಳ್ಳುವ ಏಕೈಕ ಆಯ್ಕೆ ನೀಡಲಾಗಿತ್ತು.

ಉತ್ತರ: ಈ ಸಮಸ್ಯೆಯನ್ನು ನಾನು ಅಧ್ಯಯನ ಮಾಡಿಲ್ಲ. ಅನಿಲ್ ಅಂಬಾನಿ ಕೈ ಹಾಕಿದ ಎಲ್ಲ ಕ್ಷೇತ್ರಗಳಲ್ಲೂ ವಿಫಲರಾಗಿದ್ದಾರೆ. ಆದ್ದರಿಂದ ಫ್ರಾನ್ಸ್ ಅವರನ್ನು ಏಕೆ ಆಯ್ಕೆ ಮಾಡಿಕೊಂಡಿತು ಎಂದು ನನಗೆ ತಿಳಿಯದು.

ಪ್ರ: ಒಲಾಂಡ್ ಹೇಳುವಂತೆ ಮೋದಿ ಸರ್ಕಾರವೇ ಅಂಬಾನಿಯವರನ್ನು ಶಿಫಾರಸ್ಸು ಮಾಡಿದೆ

ಉತ್ತರ: ಅವರು ಬಿಳಿ ವ್ಯಕ್ತಿ ಎಂಬ ಕಾರಣದಿಂದ ಅವರು ಸತ್ಯವನ್ನೇ ಹೇಳುತ್ತಿರಬೇಕು!.

ಪ್ರ: ರಫೇಲ್ ಒಪ್ಪಂದದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳು ಮೋದಿ ಬಗೆಗೆ ಜನರ ತಿಳಿವಳಿಕೆ ಮೇಲೆ ಪ್ರಭಾವ ಬೀರುತ್ತದೆಯೇ?

ಉತ್ತರ: ಈ ಆರೋಪಗಳನ್ನು ವಿಶ್ವಾಸಾರ್ಹ ಎಂದು ಯಾರಾದರೂ ಪರಿಗಣಿಸುತ್ತಾರೆ ಎನಿಸುವುದಿಲ್ಲ. ಕಾಂಗ್ರೆಸ್ ಹೇಳುತ್ತಿರುವುದು ನನಗೆ ನಗು ತರುತ್ತದೆ.

ಪ್ರ: ರಫೇಲ್ ಬಗ್ಗೆ ಮತದಾರರು ಮತ ಹಾಕುವ ಮುನ್ನ ಯೋಚಿಸುತ್ತಾರೆ ಎನಿಸುತ್ತದೆಯೇ?

ಉತ್ತರ: ಬೋಫೋರ್ಸ್ ವಿಚಾರದಲ್ಲಿ ಮುಚ್ಚುಮರೆ ಇದ್ದ ಕಾರಣದಿಂದ ಜನರಿಗೆ ಮನದಟ್ಟಾಯಿತು. ಕೆಲವರು ಫ್ರಾನ್ಸ್ ಬಂದೂಕನ್ನು ಶಿಫಾರಸ್ಸು ಮಾಡಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಅದು ಬದಲಾಯಿತು. ಆ ವೇಳೆಗೆ ರಕ್ಷಣಾ ಸಚಿವರಾಗಿದ್ದ ವಿ.ಪಿ.ಸಿಂಗ್, ಹೊರಬಂದು ಅದನ್ನು ಹೇಳಿದ್ದರು. ಅವರು ವಿಶ್ವಾಸಾರ್ಹತೆ ಉಳಿಸಿಕೊಂಡಿದ್ದರು. ಇಂದು ನಿಮಗೆ ಸಿಕ್ಕಿರುವುದು ಯಾರು?, ಸ್ವತಃ ಭ್ರಷ್ಟರಾಗಿರುವ ಮಂದಿ. ಅವರು ಆರೋಪ ಮಾಡುತ್ತಾರೆ. ನಾವು ಅದನ್ನು ನಂಬುವುದು ಹೇಗೆ?, ವಿಶ್ವಾಸಾರ್ಹ ವ್ಯಕ್ತಿಗಳು ಆರೋಪ ಮಾಡಬೇಕಾಗುತ್ತದೆ.

ಪ್ರ: ನೀವು ಹಣಕಾಸು ಕಾರ್ಯದರ್ಶಿ ಹಸ್ಮುಖ್ ಅಧಿಯಾ ಬಗ್ಗೆ ಗಂಭೀರ ಆರೋಪ ಮಾಡಿದ್ದೀರಿ

ಉತ್ತರ: ಆತ ವಂಚಕ. ಅವರ ವಿಚಾರಣೆಗೆ ನಾನು ಅನುಮತಿ ಕೋರಿದ್ದೇನೆ. ಅನುಮತಿ ಸಿಕ್ಕದಿದ್ದರೆ, 2ಜಿ ಪ್ರಕರಣದಂತೆ ನಾನು ನೇರವಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಿ ಅನುಮತಿ ಕೋರುತ್ತೇನೆ. ನೀರವ್ ಮೋದಿಯಿಂದ ಚಿನ್ನದ ಬಿಸ್ಕತ್‍ಗಳನ್ನು ಪಡೆದದ್ದನ್ನು ನಾನು ಪತ್ತೆ ಮಾಡಿದ್ದೇನೆ. ಅದರಲ್ಲಿ ಸಿಕ್ಕಿ ಬಿದ್ದಾಗ, ಅದನ್ನು ನಾನು ತೋಷಖಾನಕ್ಕೆ ಕಳುಹಿಸಿದ್ದಾಗಿ ಹೇಳಿದರು. ನೀವು ದೇಶಗಳ ಮುಖ್ಯಸ್ಥರಿಂದ ಪಡೆದ ಉಡುಗೊರೆಗಳಿಗಾಗಿ ತೋಷಖಾನ ಇರುವುದು. ನೀವು ಅದನ್ನು ತಕ್ಷಣ ಕಳುಹಿಸಬೇಕು. ಐದು- ಆರು ತಿಂಗಳು ಕಳೆದ ಬಳಿಕ ಅಲ್ಲ. ಅದು ಪ್ಯಾಕೆಟ್‍ನಲ್ಲಿ ಬಂದಿರುವುದರಿಂದ ಅದು ಏನು ಎನ್ನುವುದು ತಿಳಿಯಲಿಲ್ಲ ಎಂದು ಹೇಳುತ್ತಾರೆ. ಅದನ್ನು ನಂಬಲು ಸಾಧ್ಯವೇ?

ಪ್ರ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದಾಖಲೆಗಳ ಪ್ರಸ್ತುತಪಡಿಸುವಿಕೆ ಪೂರ್ಣಗೊಂಡಿದೆಯೇ?

ಉತ್ತರ: ಹೌದು. ಅದು ಮುಗಿದಿದೆ. ಅಕ್ಟೋಬರ್ 27ರಂದು ಪಾಟಿ ಸವಾಲು ಹಾಕುತ್ತೇನೆ. ಡಿಸೆಂಬರ್ ವೇಳೆಗೆ ಎಲ್ಲವೂ ಮುಗಿಯುತ್ತದೆ.

ಪ್ರ: ರಾಮಮಂದಿರ ನಿರ್ಮಾಣವಾಗುತ್ತದೆ ಎಂದು ನಿಮಗನಿಸುತ್ತದೆಯೇ?

ಉತ್ತರ: ಮುಂದಿನ ಕೆಲ ತಿಂಗಳುಗಳಲ್ಲಿ ಕಟ್ಟಡ ಆರಂಭವಾಗುತ್ತದೆ ಎಂಬ ನಂಬಿಕೆ ನನ್ನದು.

ಪ್ರ: ಸುಪ್ರೀಂಕೋರ್ಟ್ ತೀರ್ಪು ನೀಡುವವರೆಗೆ...

ಉತ್ತರ: ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿರುವ ಪ್ರಕರಣ, ಆ ಆಸ್ತಿ ವಕ್ಫ್ ಮಂಡಳಿಗೆ ಸೇರಬೇಕೇ ಅಥವಾ ರಾಮ ಜನ್ಮಭೂಮಿ ನ್ಯಾಸ ಸಮಿತಿಗೆ ಸೇರಬೇಕೇ ಎನ್ನುವುದನ್ನು ನಿರ್ಧರಿಸುವುದಕ್ಕೆ ಸಂಬಂಧಿಸಿದ್ದು. ನನಗೆ ಹೆಚ್ಚು ಪ್ರಚಾರಕ್ಕೆ ಬಾರದ ಮತ್ತೊಂದು ಪ್ರಕರಣ ಸಿಕ್ಕಿದೆ. ಇದರ ವಿಚಾರಣೆ ಈ ತಿಂಗಳು ಆರಂಭವಾಗುತ್ತದೆ. ರಾಮ ಎಲ್ಲಿ ಹುಟ್ಟಿದ್ದಾನೆ ಎಂದು ನನ್ನ ನಂಬಿಕೆ ಹೇಳುತ್ತದೆಯೋ ಅಲ್ಲಿ ಪ್ರಾರ್ಥನೆ ಮಾಡುವುದು ನನ್ನ ಮೂಲಭೂತ ಹಕ್ಕು. ಅದು ಮೂಲಭೂತ ಹಕ್ಕು. ಆ ಆಸ್ತಿಗೆ ಸುನ್ನಿ ವಕ್ಫ್ ಮಂಡಳಿಯ ಆಗ್ರಹ ಸಾಮಾನ್ಯ ಹಕ್ಕು. ನನ್ನ ಹಕ್ಕು ಉಳಿದುಕೊಳ್ಳುತ್ತದೆ. ಅದು ತಕ್ಷಣ ಪೂರ್ಣಗೊಳ್ಳಬೇಕು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top