Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮಹಿಳಾ-ಮಕ್ಕಳ ಆಸ್ಪತ್ರೆ: ಜನರ ಕಣ್ಣಿಗೆ...

ಮಹಿಳಾ-ಮಕ್ಕಳ ಆಸ್ಪತ್ರೆ: ಜನರ ಕಣ್ಣಿಗೆ ಮಣ್ಣೆರಚಿತೇ ಸರಕಾರ?

ಕೆಪಿಎಂಇ ಕಾಯ್ದೆಯಡಿ ನೋಂದಣಿ: ಆರ್‌ಟಿಐ ಮಾಹಿತಿಯಿಂದ ಬಹಿರಂಗ

ಬಿ.ಬಿ.ಶೆಟ್ಟಿಗಾರ್ಬಿ.ಬಿ.ಶೆಟ್ಟಿಗಾರ್24 March 2019 10:31 AM IST
share
ಮಹಿಳಾ-ಮಕ್ಕಳ ಆಸ್ಪತ್ರೆ: ಜನರ ಕಣ್ಣಿಗೆ ಮಣ್ಣೆರಚಿತೇ ಸರಕಾರ?

 ಉಡುಪಿ, ಮಾ.23: ಉಡುಪಿಯ ಜನತೆಗೆ ವಿವಿಧ ರೀತಿಯ ಆಸೆ-ಆಮಿಷಗಳನ್ನು ಒಡ್ಡಿ, ರಂಗುರಂಗಿನ ಭರವಸೆಗಳನ್ನು ನೀಡಿ, ಉಡುಪಿಯ ಕೊಡುಗೈ ದಾನಿ ಹಾಜಿ ಅಬ್ದುಲ್ಲಾ ಸಾಹೇಬರು ಎಂಟು ದಶಕಗಳ ಹಿಂದೆ ಬಡಜನರ ಬಳಕೆಗಾಗಿ ತನ್ನದೇ ಜಾಗದಲ್ಲಿ ನಿರ್ಮಿಸಿಕೊಟ್ಟ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಸುಮಾರು ನಾಲ್ಕು ಎಕರೆ ಜಾಗವನ್ನು ಅನಿವಾಸಿ ಭಾರತೀಯ ಉದ್ಯಮಿ, ಉಡುಪಿ ಮೂಲದ ಬಿ.ಆರ್.ಶೆಟ್ಟಿಯವರಿಗೆ ನೀಡುವ ಮೂಲಕ ರಾಜ್ಯ ಸರಕಾರ ಹಾಗೂ ಆರೋಗ್ಯ ಇಲಾಖೆ ಜನರ ಕಣ್ಣಿಗೆ ಮಣ್ಣೆರಚುವಲ್ಲಿ ಯಶಸ್ವಿಯಾಯಿತೇ ಎಂಬ ಬಲವಾದ ಸಂಶಯ ಈಗ ಎಲ್ಲರನ್ನು ಕಾಡತೊಡಗಿದೆ.

ಉಡುಪಿಯಲ್ಲೀಗ ಕಾರ್ಯಾಚರಿಸುತ್ತಿರುವ ಸರಕಾರಿ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳಿಗಾಗಿಯೇ ಇರುವ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆ (ಕೆಪಿಎಂಇ) ಕಾಯ್ದೆಯಡಿ ನೋಂದಣಿಗೊಂಡಿರುವುದು ಈ ಸಂಶಯಕ್ಕೆ ಕಾರಣವಾಗಿದೆ. ನಾಡಿನ ಖ್ಯಾತ ಮನೋರೋಗ ತಜ್ಞ ಡಾ.ಪಿ.ವಿ.ಭಂಡಾರಿ ಮಾಹಿತಿ ಹಕ್ಕು ಅಧಿನಿಯಮ 2005ರ ಅಡಿಯಲ್ಲಿ ಕೋರಿರುವ ಮಾಹಿತಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿಯವರ ಕಚೇರಿ ಇದನ್ನು ಲಿಖಿತವಾಗಿ ತಿಳಿಸಿದೆ.

ಡಾ.ಭಂಡಾರಿ ಅವರು ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಈಗ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ 400 ಹಾಸಿಗೆಗಳ ಶಂಭು ಶೆಟ್ಟಿ ಸ್ಮಾರಕ ಸೆಂಟರ್ ಆಫ್ ಎಕ್ಸಲೆನ್ಸ್ ಆಸ್ಪತ್ರೆಗಳು ಕೆಪಿಎಂಇ ಕಾಯ್ದೆಯಡಿಯಲ್ಲಿ ನೋಂದಣಿಗೊಂಡಿದೆಯೇ ಎಂಬ ಮಾಹಿತಿ ಕೋರಿ 10ಕ್ಕೂ ಅಧಿಕ ಅರ್ಜಿಗಳನ್ನು ಸಲ್ಲಿಸಿದ್ದರು. ಇದಕ್ಕೆ ಮಾ.15ರಂದು ಕರ್ನಾಟಕ ಸರಕಾರ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಕೆಪಿಎಂಇ ಕಾಯ್ದೆಯಡಿ ನೋಂದಣಿಗೊಂಡಿದೆ ಎಂಬ ಉತ್ತರ ಲಭಿಸಿದೆ. ಆದರೆ ಶಂಭು ಶೆಟ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕುರಿತು ಯಾವುದೇ ಮಾಹಿತಿಯನ್ನು ಅದು ನೀಡಿಲ್ಲ.

ಹಿನ್ನೆಲೆ: ಉಡುಪಿಯ ಕೇಂದ್ರ ಸ್ಥಾನವಾದ ಕವಿ ಮುದ್ದಣ ರಸ್ತೆಯಲ್ಲಿರುವ ನಗರಸಭಾ ಕಟ್ಟಡದ ಎದುರು ಜಿಲ್ಲೆ ಹಾಗೂ ಹೊರಜಿಲ್ಲೆಗಳ ಸಾವಿರಾರು ಬಡವರ ಸಂಜೀವಿನಿಯಾಗಿದ್ದ ಹಾಜಿ ಅಬ್ದುಲ್ಲ ಮಹಿಳೆಯರು ಮತ್ತು ಮಕ್ಕಳ ಆಸ್ಪತ್ರೆಯ ಒಟ್ಟು 4.07 ಎಕರೆ ವಿಸ್ತೀರ್ಣದ ಮೂರು ನಿವೇಶನಗಳನ್ನೊಳಗೊಂಡ ಜಮೀನನ್ನು ಡಾ.ಬಿ.ಆರ್.ಶೆಟ್ಟಿ ಅಧ್ಯಕ್ಷರಾಗಿರುವ ಬಿ.ಆರ್.ಎಸ್. ಹೆಲ್ತ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಪ್ರೈವೇಟ್ ಲಿ.ಗೆ 30 ವರ್ಷಗಳ ಸುದೀರ್ಘ ಅವಧಿಗೆ ಗುತ್ತಿಗೆ ಆಧಾರದಲ್ಲಿ (ಲೀಸ್) ನೀಡಲು ಹಾಗೂ ಅಗತ್ಯವಿದ್ದಲ್ಲಿ ಇನ್ನೂ 30 ವರ್ಷಗಳ ಅವಧಿಗೆ ಲೀಸ್‌ನ್ನು ಮುಂದುವರಿಸಲು ರಾಜ್ಯ ಸರಕಾರ ಹಾಗೂ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಒಪ್ಪಂದ ಮಾಡಿಕೊಂಡಿವೆ.

ಇದರಂತೆ ಉಡುಪಿ ನಗರಸಭೆಯ ಎದುರು, ಮಹಾತ್ಮ ಗಾಂಧಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ (ಮೈನ್ ಶಾಲೆ)ಯ ಹಿಂಭಾಗದ ಜಾಗದಲ್ಲಿ 70 ಹಾಸಿಗೆಗಳ ಸರಕಾರಿ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಗಳ ಬದಲಿಗೆ 200 ಹಾಸಿಗೆ ಸಾಮರ್ಥ್ಯದ ಆರು ಮಹಡಿಗಳನ್ನೊಳಗೊಂಡ ನೂತನ ‘ಕರ್ನಾಟಕ ಸರಕಾರಿ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ’ ಕಳೆದ ಐದಾರು ತಿಂಗಳುಗಳಿಂದ ಕಾರ್ಯಾಚರಿಸುತ್ತಿದೆ.

ಅಲ್ಲದೇ ಇದರ ಎದುರು ಇದ್ದ ಹಾಜಿ ಅಬ್ದುಲ್ಲಾ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಕೆಡವಿ ಈ ಜಾಗದಲ್ಲಿ ಶಂಭು ಶೆಟ್ಟಿ ಸ್ಮಾರಕ 400 ಹಾಸಿಗೆಗಳ ಸಾಮರ್ಥ್ಯದ ಸೆಂಟರ್ ಆಫ್‌ಎಕ್ಸಲೆನ್ಸ್ ಆಸ್ಪತ್ರೆ (ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ) ನಿರ್ಮಾಣ ಕಾಮಗಾರಿಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. 2017ರ ನ.19ರಂದು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಯನ್ನು ಉದ್ಘಾಟಿಸುವ ಸಂದರ್ಭ ಹಾಗೂ ಅದಕ್ಕೆ ಮೊದಲು 2016ರ ಅ.30ರಂದು ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವ ಸಂದರ್ಭದಲ್ಲೂ ಈ ಆಸ್ಪತ್ರೆ ಸರಕಾರಿ ಆಸ್ಪತ್ರೆಯಾಗಿಯೇ ಮುಂದುವರಿಯಲಿದ್ದು, ಈಗಿರುವಂತೆ ಇಲ್ಲಿ ಚಿಕಿತ್ಸೆ ಪಡೆಯುವ ಎಲ್ಲರಿಗೂ ಉಚಿತ ಚಿಕಿತ್ಸೆಯೇ ಸಿಗಲಿದೆ ಎಂದು ಘೋಷಿಸಿದ್ದರು. ಅವರೊಂದಿಗೆ ಆಗಿನ ಆರೋಗ್ಯ ಸಚಿವ ರಮೇಶ್ ಕುಮಾರ್ ಧ್ವನಿಗೂಡಿಸಿದ್ದಲ್ಲದೇ, ಇದನ್ನು ವಿರೋಧಿಸುವವರ ವಿರುದ್ಧ ಕೆಂಡಾಮಂಡಲ ಕೋಪ ತೋರ್ಪಡಿಸಿದ್ದರು.

ಆದರೆ ಇವರಿಬ್ಬರು, ಆಸ್ಪತ್ರೆಯನ್ನು ಖಾಸಗಿಯವರಿಗೆ ನೀಡುವುದಕ್ಕೆ ಪ್ರತಿರೋಧ ತೋರಿಸುತ್ತಿದ್ದ ಉಡುಪಿಯ ಜನಸಾಮಾನ್ಯರು, ಪ್ರಗತಿಪರರು ಹಾಗೂ ಕೆಲ ರಾಜಕೀಯ ಪಕ್ಷಗಳ ವಿರೋಧವನ್ನು ತಣಿಸಲು ಜನರ ಕಿವಿಯ ಮೇಲೆ ಹೂವಿಟ್ಟರೇ ಎಂಬ ಪ್ರಶ್ನೆ ಈಗ ಎದ್ದು ನಿಂತಿದೆ.

ಸರಕಾರಿ ಅಲ್ಲ ಖಾಸಗಿ:  ಸರಕಾರದ ಈ ವಿವಾದಾತ್ಮಕ ನಡೆಯನ್ನು ಆರಂಭದಿಂದಲೂ ವಿರೋಧಿಸುತ್ತಿದ್ದ ಡಾ.ಪಿ.ವಿ.ಭಂಡಾರಿ, ಹಾಜಿ ಅಬ್ದುಲ್ಲಾ ಅವರ ಕುಟುಂಬಿ ಕರೊಂದಿಗೆ ಸೇರಿ ಜಿಲ್ಲೆಯ ಬಡಜನರ ಆಶಾಕಿರಣವಾಗಿದ್ದ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಖಾಸಗೀಕರಣದ ವಿರುದ್ಧ ನ್ಯಾಯಾಲಯದ ಮೂಲಕವೂ ಹೋರಾಟ ನಡೆಸುತ್ತಿದ್ದಾರೆ. ಇದೀಗ ಅವರು ಆರ್‌ಟಿಐಯಡಿ ಕೇಳಿದ ಮಾಹಿತಿಗೆ ಇಲಾಖೆ ನೀಡಿದ ಉತ್ತರ, ಇಡೀ ಪ್ರಕರಣದಲ್ಲಿ ಅವರಿಗಿದ್ದ ಸಂಶಯವನ್ನು ನಿಜಗೊಳಿಸಿದೆ.

 ರಾಜ್ಯದಲ್ಲಿ ಸರಕಾರಿ ಆಸ್ಪತ್ರೆಗಳಿಗೆ ಯಾವುದೇ ನೋಂದಣಿಯ ಅಗತ್ಯವಿಲ್ಲ. ಆದರೆ ಖಾಸಗಿ ಆಸ್ಪತ್ರೆಗಳ ಮೇಲೆ ಕೆಲ ನಿಯಂತ್ರಣ ಹೇರಲು ಕೆಪಿಎಂಇ ಕಾಯ್ದೆಯಡಿ ನೋಂದಣಿಯನ್ನು ಕಡ್ಡಾಯಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹಾಜಿ ಅಬ್ದುಲ್ಲಾ ಆಸ್ಪತ್ರೆ ಸರಕಾರಿ ಆಸ್ಪತ್ರೆಯಾಗಿಯೇ ಮುಂದುವರಿಯಲಿದೆ ಎಂಬ ಸಿಎಂ ಮತ್ತು ಆರೋಗ್ಯ ಸಚಿವರ ಭರವಸೆಯ ಸಾಚಾತನದ ಕುರಿತೇ ಸಂಶಯ ಹುಟ್ಟಿಕೊಂಡಿದೆ. ನೋಂದಣಿ ಕುರಿತಂತೆ ಡಾ.ಭಂಡಾರಿ ಆರ್‌ಟಿಐಯಡಿ ಕೇಳಿದ ಹಿಂದಿನ 9 ಅರ್ಜಿಗಳಿಗೂ ಈ ಪ್ರಕ್ರಿಯೆ ಜಾರಿಯಲ್ಲಿದೆ ಎಂಬ ಉತ್ತರವೇ ಬಂದಿರುವುದೇ ಇದಕ್ಕೆ ಕಾರಣ.

ಇನ್ನೂ ಒಪ್ಪಂದ ಆಗಿಲ್ಲ:  ನೋಂದಣಿ ಕುರಿತು ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಲು ಯಾರೂ ಸಂಪರ್ಕಕ್ಕೆ ಸಿಗಲಿಲ್ಲ. ಹೆಸರು ಬಹಿರಂಗಗೊಳಿಸದ ಭರವಸೆಯೊಂದಿಗೆ ಮೂಲವೊಂದು ಕೆಲ ಮಾಹಿತಿಗಳನ್ನು ಹಂಚಿಕೊಂಡಿದೆ. ಈ ಮೂಲ ಹೇಳುವಂತೆ ಸರಕಾರಿ ಆಸ್ಪತ್ರೆಗಳಿಗೆ ನೋಂದಣಿ ಬೇಕಿಲ್ಲ. ಆದರೆ ಇಲ್ಲಿ ರಾಜ್ಯ ಸರಕಾರ ಮತ್ತು ಆರೋಗ್ಯ ಇಲಾಖೆ ಇನ್ನೂ ಬಿ.ಆರ್.ಶೆಟ್ಟಿ ಅವರ ಬಿ.ಆರ್.ಎಸ್. ಹೆಲ್ತ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಪ್ರೈವೇಟ್ ಲಿ.ನೊಂದಿಗೆ ಈ ಆಸ್ಪತ್ರೆಯ ಕುರಿತಂತೆ ಅಂತಿಮ ಒಪ್ಪಂದವನ್ನು ಮಾಡಿಕೊಂಡಿಲ್ಲ.

ಈಗ ಇರುವುದು ತಾತ್ಕಾಲಿಕ ಒಪ್ಪಂದ. ಅಂತಿಮ ಒಪ್ಪಂದ ಅಥವಾ ನಿರ್ಣಾಯಕ ಒಪ್ಪಂದದ (ಡೆಫಿನೆಟೀವ್ ಅಗ್ರಿಮೆಂಟ್) ಪ್ರಕ್ರಿಯೆ ಇನ್ನೂ ನಡೆಯುತ್ತಿದೆ. ಹೀಗಾಗಿ ಆರೋಗ್ಯ ಇಲಾಖೆ, ಕೆಪಿಎಂಇ ಕಾಯ್ದೆಯಡಿ ನೋಂದಣಿ ಮಾಡಿಕೊಳ್ಳುವಂತೆ ಜಿಲ್ಲಾಡಳಿತದ ಮೂಲಕ ಸೂಚನೆ ನೀಡಿದೆ. ಅದರಂತೆ ಈ ಆಸ್ಪತ್ರೆಯನ್ನು ಖಾಸಗಿ ಆಸ್ಪತ್ರೆ ಕಾಯ್ದೆಯಡಿ ನೋಂದಾಯಿಸಿಕೊಳ್ಳಲಾಗಿದೆ ಎಂದರು. ಅಂತಿಮ ಒಪ್ಪಂದವಾದಾಗ ಇದು ರದ್ದುಗೊಳ್ಳಲೂಬಹುದು ಎಂದು ಮೂಲ ತಿಳಿಸಿದೆ.

ಹಿಂದಿನ ತರಾತುರಿ ಈಗೇಕಿಲ್ಲ?: ಮೂರು ವರ್ಷಗಳ ಹಿಂದೆ ಹಾಜಿ ಅಬ್ದುಲ್ಲಾ ಆಸ್ಪತ್ರೆಯ ನಿರ್ವಹಣೆಯನ್ನು ತಮಗೆ ನೀಡುವಂತೆ ಡಾ.ಬಿ.ಆರ್.ಶೆಟ್ಟಿ ಕೋರಿಕೆಯೊಂದಿಗೆ ಪ್ರಸ್ತಾಪ ಸಲ್ಲಿಸಿದ ಎರಡೇ ತಿಂಗಳಲ್ಲಿ ಅವರಿಗೆ ಜಾಗವನ್ನು 30 ವರ್ಷಗಳ ಲೀಸ್‌ನಲ್ಲಿ ನೀಡಲು ತೋರಿದ ತರಾತುರಿಯನ್ನು, ಆಸ್ಪತ್ರೆ ನಿರ್ಮಾಣಗೊಂಡು ಕಾರ್ಯಾರಂಭಿಸಿ ಒಂದೂವರೆ ವರ್ಷವಾದರೂ, ಸರಕಾರಿ ಆಸ್ಪತ್ರೆಯಾಗಿ ಮುಂದುವರಿಸಲು ಅಂತಿಮ ಒಪ್ಪಂದ ಮಾಡಿಕೊಳ್ಳಲು ಸರಕಾರ ಯಾಕೆ ಮೀನಮೇಷ ಎಣಿಸುತ್ತಿದೆ ಎಂದು ಡಾ.ಭಂಡಾರಿ ಪ್ರಶ್ನಿಸುತ್ತಾರೆ. ಡಾ.ಭಂಡಾರಿ ಹೇಳುವಂತೆ ಕೆಪಿಎಂಇ ಕಾಯ್ದೆಯಡಿ ಆಸ್ಪತ್ರೆ ನೋಂದಣಿಗೊಳ್ಳುವ ಮೂಲಕ ತಾವೆಲ್ಲ ಆರಂಭದಿಂದಲೂ ಸಂಶಯ ವ್ಯಕ್ತಪಡಿಸಿದಂತೆ ಈ ಆಸ್ಪತ್ರೆ ಸರಕಾರಿ ಆಸ್ಪತ್ರೆಯಾಗಿ ಮುಂದುವರಿಯುವ ಬಗ್ಗೆ ಬಲವಾದ ಶಂಕೆ ವ್ಯಕ್ತಪಡಿಸಿದರು. ಒಂದೆರಡು ವರ್ಷಗಳ ಬಳಿಕ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾರ್ಯಾರಂಭಿಸಿದ ಬಳಿಕ, ನಷ್ಟದ ನೆಪದಲ್ಲಿ ಕೈಎತ್ತಿದರೆ, ಇದು ಖಾಸಗಿ ಆಸ್ಪತ್ರೆ ಎಂದು ಹೇಳಿದರೆ ಏನು ಮಾಡುತ್ತೀರಿ ಎಂದವರು ಪ್ರಶ್ನಿಸಿದರು.

 ‘ಆಸ್ಪತ್ರೆಗೆ ಎರವಲು ಸೇವೆ ನೀಡುತ್ತಿಲ್ಲ’

ಸರಕಾರಿ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಕಳೆದ ಐದಾರು ತಿಂಗಳಿನಿಂದ ನೀಡುತ್ತಿದ್ದ ಸರಕಾರಿ ತಜ್ಞ ವೈದ್ಯರ ಸೇವೆ ಮಾ.15ರಂದು ಮುಕ್ತಾಯಗೊಂಡಿದೆ. ಈಗ ಯಾವುದೇ ಸರಕಾರಿ ವೈದ್ಯರು ಎರವಲು ಸೇವೆಯ ಮೇಲೆ ಇಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಉಡುಪಿ ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಮಧುಸೂಧನ್ ನಾಯಕ್ ಸ್ಪಷ್ಟಪಡಿಸಿದರು.

ಆಸ್ಪತ್ರೆ ಪ್ರಾರಂಭಗೊಂಡಾಗ, ವಿಶೇಷ ವಿನಂತಿ ಮೇರೆಗೆ ನಾಲ್ವರು ವೈದ್ಯರ ( ತಲಾ ಇಬ್ಬರು ಮಕ್ಕಳ ತಜ್ಞರು ಹಾಗೂ ಇಬ್ಬರು ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರು) ಸೇವೆಯನ್ನು ತಾತ್ಕಾಲಿಕ ನೆಲೆಯಲ್ಲಿ ಎರಡು ತಿಂಗಳ ಮಟ್ಟಿಗೆ ಹೊಸ ಆಸ್ಪತ್ರೆಗೆ ನಿಯೋಜಿಸಿ ಸರಕಾರ ಆದೇಶ ನೀಡಿತ್ತು. ಬಳಿಕ ಇದನ್ನು ಇನ್ನೂ ಮೂರು ತಿಂಗಳಿಗೆ ವಿಸ್ತರಿಸಲಾಗಿತ್ತು ಎಂದವರು ವಿವರಿಸಿದರು.

 ಇದೀಗ ಇವರನ್ನು ಮಂಗಳೂರು, ಉಡುಪಿ, ಬ್ರಹ್ಮಾವರ ಹಾಗೂ ಶಿರ್ವದ ಅವರ ಮೂಲ ಸ್ಥಳಕ್ಕೆ ವಾಪಸ್ ಕಳುಹಿಸಲಾಗಿದೆ ಎಂದರು. ಈ ಆಸ್ಪತ್ರೆಯ ಮೇಲೆ ನಮಗೆ ಹೆಚ್ಚಿನ ನಿಯಂತ್ರಣವಿಲ್ಲ. ಪ್ರತೀ ತಿಂಗಳು ಅಲ್ಲಿ ನಡೆಯುವ ಹೆರಿಗೆ, ಟ್ಯೂಬೆಕ್ಟಮಿ ಹಾಗೂ ಇವರ ಶಸ್ತ್ರಚಿಕಿತ್ಸೆಗಳ ವಿವರಗಳನ್ನು ನಮಗೆ ನೀಡುತ್ತಿದ್ದಾರೆ ಎಂದವರು ನುಡಿದರು.

ಹಿಂದಿನ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಹೋಲಿಸಿದರೆ, ಕೂಸಮ್ಮ ಶೆಟ್ಟಿ ಆಸ್ಪತ್ರೆಗೆ ಬರುತ್ತಿರುವ ರೋಗಿಗಳ ಸಂಖ್ಯೆಯಲ್ಲೇನು ಕಡಿಮೆಯಾಗಿಲ್ಲ. ಶಸ್ತ್ರಚಿಕಿತ್ಸೆಯೂ ಹಿಂದಿನಂತೆಯೇ ನಡೆಯುತ್ತಿದೆ. ನಮ್ಮಲ್ಲಿ ಹಿಂದೆ ತಿಂಗಳಿಗೆ 230ರಿಂದ 240 ಹೆರಿಗೆಗಳಾಗುತ್ತಿದ್ದರೆ, ಇಲ್ಲಿ ಕಳೆದ ತಿಂಗಳು 250 ಹೆರಿಗೆಗಳಾಗಿವೆ. ಸಿಸೇರಿಯನ್ ಹೆರಿಗೆಯ ಸಂಖ್ಯೆಯಲ್ಲಿ ಮಾತ್ರ ಹೆಚ್ಚಳ ಕಂಡುಬಂದಿದೆ ಎಂದರು.

ಆಸ್ಪತ್ರೆಯಲ್ಲೀಗ 9 ಮಂದಿ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರು, ಇಬ್ಬರು ಮಕ್ಕಳ ತಜ್ಞರು (ಇನ್ನಿಬ್ಬರು ತಾತ್ಕಾಲಿಕ) ಕಾರ್ಯನಿರ್ವಹಿಸುತ್ತಿದ್ದಾರೆ. ಅರಿವಳಿಕೆ ತಜ್ಞರನ್ನು ಹೊರಗಿನ ಆಸ್ಪತ್ರೆಗಳಿಂದ ಕರೆಸಲಾಗುತ್ತಿದೆ ಎಂದರು. ಆಸ್ಪತ್ರೆಯ ಕುರಿತು ಬರುವ ದೂರುಗಳು ಕಡಿಮೆಯಾಗಿದೆ. ದೂರುಗಳ ಬಗ್ಗೆ ತಕ್ಷಣ ವಿವರಣೆ ಪಡೆಯಲಾಗುತ್ತಿದೆ ಎಂದು ಡಾ.ಮಧುಸೂದನ್ ನಾಯಕ್ ತಿಳಿಸಿದರು.

share
ಬಿ.ಬಿ.ಶೆಟ್ಟಿಗಾರ್
ಬಿ.ಬಿ.ಶೆಟ್ಟಿಗಾರ್
Next Story
X