ನರೇಂದ್ರ ಮೋದಿಯವರ ನಿರ್ದಿಷ್ಟ ದಾಳಿ: ಬಹುಜನರ ತತ್ತರ! | Vartha Bharati- ವಾರ್ತಾ ಭಾರತಿ

ನರೇಂದ್ರ ಮೋದಿಯವರ ನಿರ್ದಿಷ್ಟ ದಾಳಿ: ಬಹುಜನರ ತತ್ತರ!

ನರೇಂದ್ರ ಮೋದಿಯವರ ನಿರ್ದಿಷ್ಟ ದಾಳಿಯಿಂದ ಬಹುಜನರು (ಅಹಿಂದ) ತತ್ತರಗೊಳ್ಳುವಂತೆ ಮಾಡಿದ್ದಾರೆ. ಶಿಷ್ಯವೇತನವನ್ನು ನಂಬಿ ಅನೇಕ ಒತ್ತಡಗಳ ನಡುವೆ ಪಿಎಚ್.ಡಿ, ಎಂ.ಟೆಕ್. ಹಾಗೂ ಎಂಫಿಲ್ ಶಿಕ್ಷಣಕ್ಕೆ ಪ್ರವೇಶಿಸುವ ವಿದ್ಯಾರ್ಥಿಗಳು ಇಂತಹ ಅನ್ಯಾಯಗಳಿಂದ ಇಂದು ತಮ್ಮ ಉನ್ನತ ವ್ಯಾಸಂಗದ ಕನಸುಗಳನ್ನು ಕೈಬಿಡುವಂತಾಗಿದೆ.ಬಹುಜನರು ಮುಖ್ಯವಾಹಿನಿಗೆ ಬರುವುದಕ್ಕೆ ಇದ್ದ ಅವಕಾಶಗಳನ್ನು ಮೋದಿಯವರು ಸದ್ದಿಲ್ಲದೆ ನಿರ್ನಾಮ ಮಾಡಿ, ತಡೆಗೋಡೆಯನ್ನು ನಿರ್ಮಿಸಿದ್ದಾರೆ. ಅತ್ತ ಕೇಂದ್ರ ಸಚಿವರು, ಅಧಿಕಾರಿಗಳು ಜಾಣ ಕಿವುಡನ್ನು ಪ್ರದರ್ಶಿಸುತ್ತಿದ್ದಾರೆ. ಇನ್ನು ಈ ಅನ್ಯಾಯಗಳ ವಿರುದ್ಧ ಹೋರಾಟ ಮಾಡಬೇಕಿದ್ದ ಯುವ ಸಮೂಹ ಮೋದಿ-ಮೋದಿ ಎಂಬ ಜಪದಲ್ಲಿ ತಲ್ಲೀನವಾಗಿದೆ.

ಯಾವುದೇ ಸಮುದಾಯದ ಪ್ರಗತಿಯನ್ನು ಮೌಲ್ಯಮಾಪನ ಮಾಡಲು ನಿಗದಿಪಡಿಸುವ ಮಾನದಂಡಗಳಲ್ಲಿ ಶಿಕ್ಷಣವೂ ಒಂದು. ಉನ್ನತ ಶಿಕ್ಷಣ (ಪಿಎಚ್.ಡಿ, ಎಂ.ಫಿಲ್., ವೃತ್ತಿ ಶಿಕ್ಷಣ, ಪದವಿ) ಹಾಗೂ ಪದವಿ ಪೂರ್ವ ಶಿಕ್ಷಣವು ಸಮಾಜದ ಅಭಿವೃದ್ಧಿಗೆ ಅತ್ಯವಶ್ಯಕವಾಗಿದೆ. ಶಿಕ್ಷಣವು ವ್ಯಕ್ತಿಯು ಸ್ವಾಭಿಮಾನದಿಂದ ಬದುಕಲು ಕಲಿಸುವುದು ಮಾತ್ರವಲ್ಲದೆ ಸಮಾಜದ ಜಡತ್ವಗಳನ್ನು ಕಿತ್ತೊಗೆದು ಸಮಾನತೆಯ ಹೂವರಳಿಸಲು ಸಹಕಾರಿ. ಸಂವಿಧಾನ ಕೊಡಮಾಡಿರುವಂತೆ ಶಿಕ್ಷಣ ಪ್ರತಿಯೊಬ್ಬರ ಹಕ್ಕು. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪ್ರಜೆಗಳಿಗೆ ವಿಶೇಷ ಕಾನೂನು ಮತ್ತು ಸವಲತ್ತುಗಳ ಮೂಲಕ ಅವಕಾಶ ಕಲ್ಪಿಸಿಕೊಡುವುದು ಸರಕಾರದ ಕರ್ತವ್ಯ ಎಂದು ಭಾರತೀಯ ಸಂವಿಧಾನದ ವಿಭಾಗ 3 (ಮೂಲಭೂತ ಹಕ್ಕುಗಳು) ಪರಿಚ್ಛೇದ 15(4)ರಲ್ಲಿ ಸ್ಪಷ್ಟವಾಗಿ ವಿವರಿಸಲಾಗಿದೆ. ಆದರೆ ಸಂವಿಧಾನದ ಕೆಳಗೆ ಆಳುವ ಸರಕಾರಗಳು, ವಿಶೇಷವಾಗಿ ನರೇಂದ್ರ ಮೋದಿಯವರ ಸರಕಾರವು ಈ ಸಮುದಾಯಗಳ ಮೇಲೆ ನಿರ್ದಿಷ್ಟ ದಾಳಿ ಮಾಡಿ ಇರುವ ಅವಕಾಶಗಳನ್ನು ನಾಶಮಾಡಿದ್ದಾರೆ. ಪರಿಚ್ಛೇದ 15(4)ರಲ್ಲಿ ಉಲ್ಲೇಖವಾಗಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ವಿಶೇಷ ಅವಕಾಶಗಳೆಂಬ ಮೂರು ಪದಗಳಿಗಷ್ಟೆ ಅಲ್ಲದೆ ಬಹುಜನರ (ಅಹಿಂದ) ಏಳ್ಗೆಗೆ ನೇರ ಪೆಟ್ಟು ಕೊಟ್ಟಿದ್ದಾರೆ. ಇದೆಲ್ಲವೂ ಆರೆಸ್ಸೆಸ್ ರಹಸ್ಯ ಕಾರ್ಯಸೂಚಿಯ ಆಣತಿಯೆಂತೆ ನಡೆಯುತ್ತಿರುವುದು ಸತ್ಯ.

ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆೆ, ಬುಡಕಟ್ಟು ವ್ಯವಹಾರಗಳ ಸಚಿವಾಲಯ ಮತ್ತು ಅಲ್ಪಸಂಖ್ಯಾತ ಸಚಿವಾಲಯಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (2005-06 ನೇ ಹಣಕಾಸಿನ ವರ್ಷದಿಂದ), ಹಿಂದುಳಿದ ಜಾತಿಗಳು ಮತ್ತು ಅಲ್ಪಸಂಖ್ಯಾತ (2011-12 ಮತ್ತು 2014-15ನೇ ಹಣಕಾಸಿನ ವರ್ಷದಿಂದ) ವಿದ್ಯಾರ್ಥಿಗಳಿಗೆ ವಿಜ್ಞಾನ, ಮಾನವ ಶಾಸ್ತ್ರ, ಸಾಮಾಜಿಕ ವಿಜ್ಞಾನ, ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಷಯಗಳಲ್ಲಿ ಎಂ.ಫಿಲ್. ಮತ್ತು ಪಿಎಚ್.ಡಿ. ಉನ್ನತ ವ್ಯಾಸಂಗವನ್ನು ಕೈಗೊಳ್ಳಲು ಸಹಕಾರಿಯಾಗಲೆಂದು ಶಿಷ್ಯವೇತನವನ್ನು ನೀಡಲು ಕೇಂದ್ರ ವಲಯ ಯೋಜನೆಯೊಂದನ್ನು (ರಾಜೀವ್ ಗಾಂಧಿ ನ್ಯಾಶನಲ್ ಫೆಲೊಶಿಪ್ ಫಾರ್ ಎಸ್ಸಿ, ಎಸ್ಟಿ, ಒಬಿಸಿ ಮತ್ತು ಮೌಲಾನ ಆಝಾದ್ ನ್ಯಾಶನಲ್ ಫೆಲೊಶಿಪ್ ಫಾರ್ ಮೈನಾರಿಟಿ ಸ್ಟೂಡೆಂಟ್ಸ್) ಪರಿಚಯಿಸಿತು. ಈ ನಿಟ್ಟಿನಲ್ಲಿ ಉನ್ನತ ಶಿಕ್ಷಣದ ಮೌಲ್ಯ, ಗುಣಮಟ್ಟದ ನಿರ್ವಹಣೆ ಮತ್ತು ಮೇಲ್ವಿಚಾರಣೆ, ಸಂಯೋಜನೆ ಮತ್ತು ಧನ ಸಹಾಯದ ಜವಾಬ್ದಾರಿಯನ್ನು ಹೊತ್ತ ಭಾರತದ ಶಾಸನಬದ್ಧ ಘಟಕವಾದ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗಕ್ಕೆ ಈ ಯೋಜನೆಯ ಅನುಷ್ಠಾನಗೊಳಿಸುವಿಕೆ, ವಿದ್ಯಾರ್ಥಿಗಳ ಆಯ್ಕೆ ಮತ್ತು ಹಣಕಾಸಿನ ನಿರ್ವಹಣೆಯ ಜವಾಬ್ದಾರಿಯನ್ನು ನೀಡಿತು. ಎಂ.ಫಿಲ್ ವಿದ್ಯಾರ್ಥಿಗಳಿಗೆ ಗರಿಷ್ಠ 2 ವರ್ಷ ಜೆಆರ್‌ಎಫ್ ಮತ್ತು ಪಿಎಚ್.ಡಿ ವಿದ್ಯಾರ್ಥಿಗಳಿಗೆ ಗರಿಷ್ಠ 5 ವರ್ಷ (ಜೆಆರ್‌ಎಫ್ 2 ವರ್ಷ ಮತ್ತು ಎಸ್‌ಆರ್‌ಎಫ್ 3 ವರ್ಷ) ಶಿಷ್ಯವೇತನವನ್ನು ನೀಡಲಾಗುತ್ತಿದೆ. ಮೇಲಿನ ಯಾವ ಶಿಷ್ಯವೇತನಕ್ಕ್ಕೂ ಯುಜಿಸಿ ಅಥವಾ ಯುಜಿಸಿ-ಸಿಎಸ್‌ಐಆರ್ ಜಂಟಿಯಾಗಿ ನಡೆಸುವ ಜೆಆರ್‌ಎಫ್/ನೆಟ್ ಪರೀಕ್ಷೆಯ ಅರ್ಹತೆ ಬೇಕಾಗಿರುವುದಿಲ್ಲ. ಈ ಯೋಜನೆಯ ಉದ್ದೇಶವು ಪ.ಜಾ./ಪ.ಪಂ., ಹಿಂದುಳಿದ ಜಾತಿಗಳು ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಕೇವಲ ಹಣಕಾಸಿನ ನೆರವು ಮತ್ತು ಅನೇಕ ವಿಶ್ವವಿದ್ಯಾನಿಲಯಗಳಲ್ಲಿ ಖಾಲಿ ಉಳಿದಿರುವ ಉಪನ್ಯಾಸಕ ವೃತ್ತಿಗೆ ಅರ್ಹತೆಯನ್ನು ನೀಡುವುದಕ್ಕಷ್ಟೇ ಆಗಿರದೆ ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುತ್ತಿರುವ ಆರ್ಥಿಕ ವ್ಯವಸ್ಥೆಗೆ ಅನುಗುಣವಾಗಿ ಅವಕಾಶಗಳ ಸದುಪಯೋಗವನ್ನು ಪಡೆಯಲು ಅವರನ್ನು ಸಜ್ಜುಗೊಳಿಸುವುದಾಗಿದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ತನ್ನ ಒಕ್ಕಣೆಯಲ್ಲಿ ಬರೆದುಕೊಂಡಿದೆ.

ಮುಖ್ಯ ವಿಷಯಕ್ಕೆ ಬರುವುದಾದರೆ ಮೇಲೆ ತಿಳಿಸಿದ ಶಿಷ್ಯವೇತನಗಳು ಯೋಜಿತ ಅನುದಾನ (planned grants/heads )ದ ಅಡಿಯಲ್ಲಿ ಬರುತ್ತದೆ. ಪ್ರತಿ ಹಣಕಾಸಿನ ವರ್ಷದಲ್ಲಿ ಈ ಯೋಜನೆಗಳಿಗೆ ತಗಲುವ ವೆಚ್ಚವನ್ನು ಮೊದಲೇ ನಿರ್ಧರಿಸಲಾಗಿರುತ್ತದೆ ಮತ್ತು ಸದರಿ ಹಣಕಾಸಿನ ವರ್ಷದಲ್ಲಿ ಅನುದಾನವನ್ನು ಖರ್ಚು ಮಾಡಬೇಕು. 2005ರಿಂದ 2014ರ ಹಣಕಾಸಿನ ವರ್ಷದವರೆಗೆ ಫಲಾನುಭವಿ ವಿದ್ಯಾರ್ಥಿಗಳ ಆಯ್ಕೆ ಹಾಗೂ ಅನುದಾನವನ್ನು ಸದರಿ ವರ್ಷಗಳಲ್ಲಿ ಖರ್ಚು ಮಾಡಲಾಗಿದೆ ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಪ್ರವೇಶ ಪಡೆದ ದಿನದಿಂದ ಗರಿಷ್ಠ 5 ವರ್ಷ ಶಿಷ್ಯವೇತನ ನೀಡಲಾಗಿದೆ. ಆದರೆ 2015-16ನೇ ಹಣಕಾಸು ವರ್ಷದಿಂದ ವಿದ್ಯಾರ್ಥಿಗಳಿಗೆ ಸುಮಾರು ಎಂಟು ತಿಂಗಳ! ಶಿಷ್ಯವೇತನವು ಸಿಗದಂತೆ ಮಾಡಲಾಗಿದೆ. ಅಂದರೆ ಸದರಿ ಹಣಕಾಸು ವರ್ಷದಲ್ಲಿ ಆಯ್ಕೆಯಾದ ವಿದ್ಯಾರ್ಥಿಯು ಆಗಸ್ಟ್ ತಿಂಗಳಿನಲ್ಲಿ ವಿಶ್ವವಿದ್ಯಾನಿಲಯಕ್ಕೆ ಪ್ರವೇಶ ಪಡೆದಿದ್ದರೆ ಆತನಿಗೆ ಶಿಷ್ಯವೇತನ ದೊರೆತದ್ದು ಮುಂದಿನ ಎಪ್ರಿಲ್ ತಿಂಗಳಿನಿಂದ! ಅಂದರೆ ಒಟ್ಟು 40 ಕೋಟಿ! ರೂಪಾಯಿ ಇಲಾಖೆಯು ಲಾಭಮಾಡಿಕೊಂಡಿದೆ.

ಮುಂದುವರಿದು ಯುಜಿಸಿಯು ತನ್ನ ಸಾರ್ವಜನಿಕ ಪ್ರಕಟನೆಯಲ್ಲಿ ಈ ಹಿಂದಿನ ತನ್ನ ಎಲ್ಲ ಯೋಜನೆಗಳನ್ನು ತರ್ಕಬದ್ಧವಾಗಿ ಮಾರ್ಚ್ 31, 2019ರವರೆಗೆ ಅಂದರೆ 2018-19ನೇ ಹಣಕಾಸು ವರ್ಷದವರೆಗೆ ಮುಂದುವರಿಸಲಾಗುವುದು ಎಂದು ತಿಳಿಸಿದೆ. ಇದರಲ್ಲಿ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ವಿದ್ಯಾರ್ಥಿನಿಯರಿಗೆ ನಿಲಯಗಳು, ಮಹಿಳಾ ವಿಶ್ವವಿದ್ಯಾನಿಲಯಗಳ ನಿರ್ಮಾಣ, ಇತ್ಯಾದಿ ಇತರ ಯೋಜನೆಗಳು ಒಳಗೊಂಡಿವೆ. 2018-19ನೇ ಹಣಕಾಸು ವರ್ಷವೂ ಸಹ ಮುಗಿದು 2019-20ನೇ ಹಣಕಾಸು ವರ್ಷ ಪ್ರಾರಂಭವಾಗಿದೆ. ಆದರೆ 2017-18 ಮತ್ತು 2018-19ನೇ ಸಾಲಿನಲ್ಲಿ ವಿಶ್ವವಿದ್ಯಾನಿಲಯಗಳಲ್ಲಿ ಪ್ರವೇಶ ಪಡೆದ ಕೇವಲ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಂದ ಮೇಲಿನ ಶಿಷ್ಯವೇತನಕ್ಕೆ ಯಾವುದೇ ಅರ್ಜಿಯನ್ನು ಸಹ ಆಹ್ವಾನಿಸಿಲ!್ಲ. ಇದರಿಂದ ಒಟ್ಟು ನಾಲ್ಕು ಸಾವಿರ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ವಂಚನೆ ಮಾಡಲಾಗಿದೆ. ಈ ವಿದ್ಯಾರ್ಥಿಗಳ ಕೈಸೇರಬೇಕಿದ್ದ ಸುಮಾರು 620 ಕೋಟಿ ರೂಪಾಯಿಗಳು ಮಂಗಮಾಯವಾಗಿದೆ. ಪರಿಣಾಮ ವರ್ಷದಿಂದ ವರ್ಷಕ್ಕೆ ಈ ಸಮುದಾಯದ ವಿದ್ಯಾರ್ಥಿಗಳಿಂದ ಪಿ.ಎಚ್‌ಡಿ ಮತ್ತು ಎಂ.ಫಿಲ್.ನಂತಹ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವವರ ಸಂಖ್ಯೆ ಇಳಿಮುಖವಾಗಿದೆ. ಅದೆಷ್ಟೋ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ತಮ್ಮ ವ್ಯಾಸಂಗವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ.

ಸರಕಾರ ಮತ್ತು ಅದರ ಸಚಿವಾಲಯ ಹಾಗೂ ಇಲಾಖೆಗಳಿಂದ ಮಲತಾಯಿ ಧೋರಣೆ; ಪ.ಜಾ. ಮತ್ತು ಒಬಿಸಿ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವನ್ನು ನೀಡುತ್ತಿರುವ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆೆಯ ನಿರ್ದೇಶಕರು, ನ್ಯಾಶನಲ್ ಫೆಲೊಶಿಪ್ ಫಾರ್ ಎಸ್ಸಿ (ಪರಿಶಿಷ್ಟ ಜಾತಿ) ಯೋಜನೆಯನ್ನು ಪರಿಷ್ಕೃತಗೊಳಿಸಿ ಅದನ್ನು 2017-18 ರಿಂದ 2019-20ರ ಅವಧಿಗೆ ಕಾರ್ಯಗತಗೊಳಿಸುವಂತೆ ಸೂಚಿಸಲಾಗಿದೆ. ಇದರಲ್ಲಿ ಯುಜಿಸಿ ಅಥವಾ ಯುಜಿಸಿ-ಸಿಎಸ್‌ಐಆರ್ ಜಂಟಿಯಾಗಿ ನಡೆಸುವ ಜೆಆರ್‌ಎಫ್/ನೆಟ್ ಪರೀಕ್ಷೆಯ ಅರ್ಹತೆಯನ್ನು ಒಬಿಸಿ, ಮೈನಾರಿಟಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಕೇವಲ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಕಡ್ಡಾಯ ಮಾಡಲಾಗಿದೆ!. ಸಮಾಜದ ಕೆಳಸ್ಥರದಲ್ಲಿರುವ ಈ ಸಮುದಾಯದ ಅಭ್ಯುದಯಕ್ಕೆ ಸಂವಿಧಾನವೇ ವಿಶೇಷ ಸವಲತ್ತುಗಳನ್ನು ಕೊಡಮಾಡಿರುವಾಗ ಮತ್ತು ಸರಕಾರಗಳು ಕಲ್ಪಿಸಿಕೊಡಬೇಕೆಂದು ಸ್ಪಷ್ಟವಾಗಿ ಹೇಳಿರುವಾಗ ಇದೆಂತಹ ದ್ವಂದ್ವ ನಿಲುವನ್ನು ಸರಕಾರ ಮತ್ತು ಅದರ ಸಚಿವಾಲಯಗಳು ಹೊಂದಿರಬಹುದು. ಇದು ಸ್ಪಷ್ಟವಾಗಿ ಭಾರತೀಯ ಸಂವಿಧಾನದ ವಿಭಾಗ-3 (ಮೂಲಭೂತ ಹಕ್ಕುಗಳು) ಪರಿಚ್ಛೇದ 15(4)ರ ಉಲ್ಲಂಘನೆಯಾಗಿದೆ!. ಪರಿಶಿಷ್ಟರ ಮೇಲಿನ ಮೋದಿಯವರ ನಿರ್ದಿಷ್ಟ ದಾಳಿಯು ಇಲ್ಲಿಗೆ ನಿಲ್ಲುವುದಿಲ್ಲ. ಪೋಸ್ಟ್ ಗ್ರ್ಯಾಜುಯೇಟ್ ಸ್ಕಾಲರ್‌ಶಿಪ್ ಫಾರ್ ಪ್ರೊಫೆಸನಲ್ ಕೋರ್ಸಸ್ ಫಾರ್ ಎಸ್ಸಿ/ಎಸ್ಟಿ ಸ್ಟೂಡೆಂಟ್ಸ್ (PGSPROF) ಎಂಬ ವಿದ್ಯಾರ್ಥಿ ವೇತನಕ್ಕೆ 2017-18 ನೇ ಶೈಕ್ಷಣಿಕ ವರ್ಷದಿಂದ ಎಂ.ಟೆಕ್./ಎಂ.ಇ. ಮತ್ತು ಎಂ.ಫಿಲ್. ವಿದ್ಯಾರ್ಥಿಗಳ ಆಯ್ಕೆಯನ್ನು ಸಹ ಮಾಡಿಲ್ಲ. ಅಂದರೆ ಈ ವಿದ್ಯಾರ್ಥಿಗಳ ಸುಮಾರು 37 ಕೋಟಿ ರೂಪಾಯಿ ಹಣವನ್ನು ಇಲಾಖೆಯು ತನ್ನಲ್ಲೇ ಉಳಿಸಿಕೊಂಡಿದೆ.

ಶಿಕ್ಷಣ ಸಾಲ ಎಂಬ ಯೋಜನೆಯ ಅಡಿಯಲ್ಲಿ ವಿದ್ಯಾರ್ಥಿಗಳನ್ನು ಭವಿಷ್ಯದಲ್ಲಿ ಸಾಲವಂತರನ್ನಾಗಿ ಮಾಡುವ ಹುನ್ನಾರವಾದ ಶೈಕ್ಷಣಿಕ ಸಾಲಕ್ಕೆ ವಿದ್ಯಾಲಕ್ಷ್ಮೀ ಎಂಬ ಆನ್ಲೈನ್ ಪೋರ್ಟಲ್‌ನ್ನು ಕೇಂದ್ರ ಸರಕಾರವು ಜಾರಿಗೆ ತಂದಿದೆ. ಆದರೆ ಬ್ಯಾಂಕ್‌ನಲ್ಲಿನ ನೂರೆಂಟು ಪರಿಧಿಯನ್ನು ಕ್ರಮಿಸಿ ಹೈರಾಣಾಗಿ ವಿದ್ಯಾರ್ಥಿಗೆ ಸಾಲ ಮಂಜೂರು ಆಗುವವರೆಗೆ ಒಂದು ಶೈಕ್ಷಣಿಕ ವರ್ಷವೇ ಮುಗಿದಿರುತ್ತದೆ ಹಾಗೂ ಎಷ್ಟೋ ವಿದ್ಯಾರ್ಥಿಗಳ ತಂದೆ ತಾಯಿಯರ ವಾರ್ಷಿಕ ಆದಾಯವು ಕಡಿಮೆ ಇರುವ ಕಾರಣಕ್ಕೆ ಅರ್ಜಿಗಳು ತಿರಸ್ಕೃತಗೊಂಡಿವೆ. ಅತ್ತ ಸಂವಿಧಾನಬದ್ದ ನ್ಯಾಯಯುತ ಪೆಲೊಶಿಪ್ ಇಲ್ಲ ಇತ್ತ ಸಾಲ ಮಂಜೂರಾಗದೆ ಅದರಲ್ಲೂ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ಒತ್ತಡದಿಂದ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಬೇಕು ಇಲ್ಲ ಭವಿಷ್ಯದಲ್ಲಿ ಸಾಲವಂತರಾಗಬೇಕು ಎಂಬಂತಿದೆ ಇಂದಿನ ಸರಕಾರದ ನೀತಿ-ನಡೆ. ಅಷ್ಟಕ್ಕೂ ಈ ವಿದ್ಯಾರ್ಥಿಗಳು ಸಾಲವನ್ನು ಏಕೆ ಮಾಡಬೇಕು? ಬೇರೆಲ್ಲ ಸಮುದಾಯಗಳಿಗಿಂತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಹಿಂದುಳಿದಿರುವಾಗ ಅವರನ್ನು ಫೆಲೊಶಿಪ್‌ಗಳಿಂದ ವಂಚಿತರನ್ನಾಗಿ ಮಾಡಿ ಶಿಕ್ಷಣ ಸಾಲವನ್ನು ಸರಕಾರಗಳೇಕೆ ಉತ್ತೇಜಿಸುತ್ತಿವೆ?

ಇನ್ನು ಪಿಎಚ್.ಡಿ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರಧಾನಮಂತ್ರಿ ಶಿಷ್ಯವೇತನ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯು ಸಾರ್ವಜನಿಕ-ಖಾಸಗಿ-ಸಹಭಾಗಿತ್ವದಲ್ಲಿ ನಡೆಯುತ್ತದೆ. ಅರ್ಧ ಹಣವನ್ನು ಸರಕಾರ ಮತ್ತು ಇನ್ನರ್ಧ ಹಣವನ್ನು ಖಾಸಗಿ ಕಂಪೆನಿಗಳು ಸೇರಿ ತಿಂಗಳಿಗೆ 70 ಸಾವಿರದಂತೆ ಶಿಷ್ಯವೇತನವನ್ನು ಐದು ವರ್ಷಗಳವರೆಗೆ ನೀಡಲಾಗುತ್ತದೆ. ಈ ಯೋಜನೆಯಲ್ಲಿ ಮೀಸಲಾತಿ ನೀತಿಯನ್ನು ಸಹ ಅನುಸರಿಸಿಲ್ಲ. ಖಾಸಗಿ ಕಂಪೆನಿಯನ್ನು ವಿದ್ಯಾರ್ಥಿಗಳೇ ಹುಡುಕಬೇಕಾಗಿದೆ. ದಲಿತ ಸಮುದಾಯದ ವಿದ್ಯಾರ್ಥಿಗಳೆಂದರೆ ಹಿಂದು-ಮುಂದು ನೋಡುವ ಮತ್ತು ಬೇಕಂತಲೇ ಕೀಟಲೆ ನೀಡುವ ಪ್ರಾಧ್ಯಾಪಕರುಗಳಿರುವಾಗ, ವಿದ್ಯಾರ್ಥಿಗಳ ಸಂಶೋಧನಾ ವಿಷಯವನ್ನು ನಿರ್ಧರಿಸಿ, ಖಾಸಗಿ ಕಂಪೆನಿಯೊಂದಿಗೆ ಚರ್ಚಿಸಿ ಈ ವಿದ್ಯಾರ್ಥಿಗಳಿಗೆ ಶಿಷ್ಯವೇತನ ದೊರೆಯುವಂತೆ ಮಾಡುವರೇ? ಸರ್ ನೇಮ್ (ಉಪ-ನಾಮ) ಗಳನ್ನು ಪತ್ತೆಹಚ್ಚಿ ಕೆಲಸ ಕೊಡುವ ಕಂಪೆನಿಗಳಿಂದ ಈ ವಿದ್ಯಾರ್ಥಿಗಳ ಆಯ್ಕೆ ಸುಲಭಕ್ಕೆ ದಕ್ಕುವುದೇ? ಈ ಯೋಜನೆಯ ಫಲಾನುಭವಿ ವಿದ್ಯಾರ್ಥಿಗಳ ಅಂಕಿ-ಅಂಶವನ್ನು ಸರಕಾರವು ಇನ್ನಷ್ಟೆ ಬಿಡುಗಡೆ ಮಾಡಬೇಕಿದೆ.

 ಅನೇಕ ವರ್ಷಗಳಿಂದಲೂ ಸಂವಿಧಾನ ಮತ್ತು ಮೀಸಲಾತಿ ನೀತಿಯನ್ನು ವಿರೋಧಿಸುತ್ತಲೇ ಬಂದಿರುವ ಸಂಘಪರಿವಾರ ಮತ್ತು ಅದರ ಅಂಗಸಂಸ್ಥೆಗಳು, ಕಾರ್ಯಕರ್ತರು, ಬಿಜೆಪಿ ಅದರಲ್ಲ್ಲೂ ಮೋದಿ ಮತ್ತವರ ಸಂಪುಟ ಸಚಿವರು ಕೊನೆಗೂ ಒಂದು ಹೆಜ್ಜೆ ಮುಂದುವರಿದರು. ಸಂವಿಧಾನಕ್ಕೆ ಕೊಡಲಿ ಏಟು ನೀಡಿ ಜಾತಿ ವ್ಯವಸ್ಥೆಯನ್ನು ಸಮರ್ಥಿಸಿಕೊಂಡರು. ಮೀಸಲಾತಿ ನೀತಿಯನ್ನು ಸಂವಿಧಾನದಲ್ಲಿ ಅಡಕಮಾಡಿರುವುದು ಶತಶತಮಾನಗಳಿಂದ ತುಳಿತಕ್ಕೊಳಗಾದವರ ಮುಖ್ಯವಾಹಿನಿಗೆ ತರಲು ಮತ್ತು ಜಾತಿ ವ್ಯವಸ್ಥೆಯನ್ನು ಸರಿಪಡಿಸಲು. ಆದರೆ ಇಂದು ಯಾವುದೇ ಸಮಿತಿ ಅಥವಾ ಆಯೋಗವನ್ನು ನಿಯೋಜನೆ ಮಾಡದೆ, ಆಳವಾದ ಅಧ್ಯಯನವಿಲ್ಲದೆ ಮತ್ತು ಸಂಸತ್‌ಗಳಲ್ಲಿ ಚರ್ಚೆಮಾಡದೆ ತರಾತುರಿಯಲ್ಲಿ ಸಂವಿಧಾನಕ್ಕೆ ತಿದ್ದುಪಡಿಯನ್ನು ಅಂಗೀಕಾರ ಮಾಡಲಾಯಿತು. ಅತ್ಯಂತ ಮುಂದುವರಿದ ಮತ್ತು ಜನಸಂಖ್ಯೆಯಲ್ಲಿ ತೀರಾ ಕಡಿಮೆ ಇರುವ ಜಾತಿಯೊಂದಕ್ಕೆ (ಕರ್ನಾಟಕದ ಮಟ್ಟಿಗೆ ಕೇವಲ ಶೇ. 3 ಜನರಾದ ಬ್ರಾಹ್ಮಣರು ಈ ವರ್ಗದಡಿ ಬರುತ್ತಾರೆ) ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಅತ್ಯಂತ ಹಿಂದುಳಿದ ಜಾತಿಗಳಿಗಿಂತಲೂ, ಜನಸಂಖ್ಯೆಯಲ್ಲಿ ಅತ್ಯಂತ ಹೆಚ್ಚಿರುವ ಜಾತಿಗಳಿಗಿಂತಲೂ ಹೆಚ್ಚಿನ ಮೀಸಲಾತಿಯನ್ನು (ಶೇ. 10) ಸಂವಿಧಾನಬದ್ಧವಾಗಿ ದಕ್ಕಿಸಿಕೊಟ್ಟಿದ್ದಾರೆ. ತನ್ಮೂಲಕ ಸಾಮಾಜಿಕ-ನ್ಯಾಯದ ಪರಿಕಲ್ಪನೆ ಮತ್ತು ಸಂವಿಧಾನವನ್ನೇ ಅಣಕಿಸುತ್ತಿದ್ದಾರೆ.

ಒಟ್ಟಾರೆಯಾಗಿ ಭಾರತದಂತಹ ಪ್ರಜಾಪ್ರಭುತ್ವ ದೇಶದಲ್ಲಿ ಅಸ್ಪೃಶ್ಯತೆಯ ಬೇರು ಯಾವ ರೂಪದಲ್ಲಿದೆಯೆಂಬುದನ್ನು ಇದಕ್ಕಿಂತ ವಿಶೇಷವಾಗಿ ಹೇಳುವ ಅವಶ್ಯಕತೆ ಬಹುಶಃ ನಿಷ್ಪ್ರಯೋಜಕ. ನರೇಂದ್ರ ಮೋದಿಯವರ ನಿರ್ದಿಷ್ಟ ದಾಳಿಯಿಂದ ಬಹುಜನರು (ಅಹಿಂದ) ತತ್ತರಗೊಳ್ಳುವಂತೆ ಮಾಡಿದ್ದಾರೆ. ಶಿಷ್ಯವೇತನವನ್ನು ನಂಬಿ ಅನೇಕ ಒತ್ತಡಗಳ ನಡುವೆ ಪಿಎಚ್.ಡಿ, ಎಂ.ಟೆಕ್. ಹಾಗೂ ಎಂಫಿಲ್ ಶಿಕ್ಷಣಕ್ಕೆ ಪ್ರವೇಶಿಸುವ ವಿದ್ಯಾರ್ಥಿಗಳು ಇಂತಹ ಅನ್ಯಾಯಗಳಿಂದ ಇಂದು ತಮ್ಮ ಉನ್ನತ ವ್ಯಾಸಂಗದ ಕನಸುಗಳನ್ನು ಕೈಬಿಡುವಂತಾಗಿದೆ. ಬಹುಜನರು ಮುಖ್ಯವಾಹಿನಿಗೆ ಬರುವುದಕ್ಕೆ ಇದ್ದ ಅವಕಾಶಗಳನ್ನು ಮೋದಿಯವರು ಸದ್ದಿಲ್ಲದೆ ನಿರ್ನಾಮ ಮಾಡಿ, ತಡೆಗೋಡೆಯನ್ನು ನಿರ್ಮಿಸಿದ್ದಾರೆ. ಅತ್ತ ಕೇಂದ್ರ ಸಚಿವರು, ಅಧಿಕಾರಿಗಳು ಜಾಣ ಕಿವುಡನ್ನು ಪ್ರದರ್ಶಿಸುತ್ತಿದ್ದಾರೆ. ಇನ್ನು ಈ ಅನ್ಯಾಯಗಳ ವಿರುದ್ಧ ಹೋರಾಟ ಮಾಡಬೇಕಿದ್ದ ಯುವ ಸಮೂಹ ಮೋದಿ-ಮೋದಿ ಎಂಬ ಜಪದಲ್ಲಿ ತಲ್ಲೀನವಾಗಿದೆ.

(ಲೇಖಕರು ಪಿಎಚ್.ಡಿ ಸಂಶೋಧನಾ ವಿದ್ಯಾರ್ಥಿ ಜವಾಹರಲಾಲ್ ನೆಹರೂ ಕೃಷಿ ವಿಶ್ವವಿದ್ಯಾನಿಲಯ, ಜಬಲ್ಪುರ್, ಮಧ್ಯ ಪ್ರದೇಶ)

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top