ರೋಗಗ್ರಸ್ತ ಆಯುಷ್ ಇಲಾಖೆ
ನಕಲಿ ಕಂಪೆನಿಗಳ ಔಷಧಿ ಸರಬರಾಜು ಆರೋಪ
ಬೆಂಗಳೂರು, ಜ.15: ಆರಂಭವಾಗಿ ಎರಡು ದಶಕದಲ್ಲಿಯೇ ರಾಜ್ಯ ಆಯುಷ್ ಇಲಾಖೆಯು, ಸಹಸ್ರಾರು ನಕಲಿ ವೈದ್ಯರನ್ನು ತಡೆಯುವಲ್ಲಿ ವಿಫಲ, ಅನಗತ್ಯ ಹುದ್ದೆಗಳ ಸೃಷ್ಟಿ, ಲಾಭದಾಯಕ ಹುದ್ದೆಗಾಗಿ ಅಧಿಕಾರಿಗಳ ನಡುವೆ ಕಿತ್ತಾಟ, ನಕಲಿ ಕಂಪೆನಿ ಹೆಸರಿನಲ್ಲಿ ಔಷಧ ಸರಬರಾಜು ಸೇರಿ ಇನ್ನಿತರ ಆರೋಪಗಳಿಗೆ ಹೆಸರುವಾಸಿಯಾಗಿ ರೋಗಗ್ರಸ್ತವಾಗಿದೆ.
1995ರಲ್ಲಿ ಹೋಮಿಯೋಪಥಿ ಇಲಾಖೆ ಪ್ರಾರಂಭವಾಯಿತು. 2003ರಲ್ಲಿ ಇದು ಆಯುಷ್ ಇಲಾಖೆ ಎಂದು ನಾಮಕರಣವಾಯಿತು. ರಾಷ್ಟ್ರೀಯ ಆಯುಷ್ ಮಿಷನ್ ಅಡಿ ಇಲಾಖೆ ಬರುತ್ತದೆ. ಈ ಇಲಾಖೆ ವ್ಯಾಪ್ತಿಯಲ್ಲಿ ಹೋಮಿಯೋಪಥಿ, ಆಯುರ್ವೇದ, ಯೋಗ, ಪ್ರಕೃತಿ ಚಿಕಿತ್ಸೆ, ಯುನಾನಿ ಮತ್ತು ಸಿದ್ಧ ಸೇರುತ್ತದೆ. ಫಾರ್ಮಾಕೊಪಿಯಲ್ ಮಾನದಂಡದ ಅಡಿ ಕಚ್ಚಾ ಔಷಧ ಲಭ್ಯತೆ ಸುಲಭಗೊಳಿಸುವುದು, ರಾಷ್ಟ್ರೀಯ ಕಾರ್ಯಕ್ರಮಗಳನ್ನು ಜಾರಿಗೆ ತರುವುದು, ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದು, ಸಂಶೋಧನೆ ನಡೆಸುವುದು, ನೈಸರ್ಗಿಕ, ಗಿಡಮೂಲಿಕೆ ಮೂಲಕ ಪೌಷ್ಟಿಕಾಂಶ ಮತ್ತು ವಿಟಮಿನ್ ಔಷಧ ಒದಗಿಸುವುದು, ರೋಗಿಗಳಿಗೆ ಪರಿಣಾಮಕಾರಿ ಆರೋಗ್ಯ ಸೇವೆ ಒದಗಿಸುವುದು ಆಯುಷ್ ಇಲಾಖೆಯ ಕಾರ್ಯವಾಗಿದೆ.
ಜತೆಗೆ, ಔಷಧಗಳಿಗೆ ಲೈಸನ್ಸ್ ನೀಡುವುದು, ಸರಕಾರಿ ಕೇಂದ್ರ ಆಯುರ್ವೇದ ಔಷಧಾಲಯ ತೆರೆಯುವುದು, ಔಷಧ ಪರೀಕ್ಷಾ ವಿಭಾಗಗಳಿಂದ ಔಷಧ ಪರೀಕ್ಷೆ ನಡೆಸವುದು ಹಾಗೂ ಕೇಂದ್ರದ ಅನುದಾನದ ಮುಖೇನ ಸುಸಜ್ಜಿತ ಆಯುಷ್ ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸುವ ಹೊಣೆ ಹೊತ್ತಿಕೊಂಡಿದೆ. ಕೇಂದ್ರದಿಂದ ಬರುವ ನೂರಾರು ಕೋಟಿ ರೂ.ಅನುದಾನವನ್ನು ಇಲಾಖೆ ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳುತ್ತಿಲ್ಲವೆಂಬ ಆರೋಪಗಳು ಕೇಳಿಬರುತಿತವೆ. ಇದರಿಂದಾಗಿ ರಾಷ್ಟ್ರೀಯ ಕಾರ್ಯಕ್ರಮಗಳನ್ನು ಪರಿಣಾಮಕಾರಿ ಜಾರಿಗೆ ತರುವಲ್ಲಿ ಇಲಾಖೆ ಎಡವಿದೆ.
ಮತ್ತೊಂದೆಡೆ, ಇಲಾಖೆಯ ಕೆಲ ಅಧಿಕಾರಿಗಳು ನಕಲಿ ಕಂಪೆನಿ ಹೆಸರಿನಲ್ಲಿ ಔಷಧ ಸರಬರಾಜು, ಟೆಂಡರ್‌ನಲ್ಲಿ ಅವ್ಯವಹಾರ ನಡೆಸುವುದಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಲಕ್ಷಾಂತರ ರೂ.ವೇತನ ಪಡೆಯುವ ಜಿಲ್ಲಾ ಆಯುಷ್ ಅಧಿಕಾರಿಗಳು ಒಂದಿಲ್ಲೊಂದು ಹಗರಣದಲ್ಲಿ ತೊಡಗಿದ್ದಾರೆ. ಸಿಬ್ಬಂದಿಗೆ ಬೆದರಿಕೆ ಹಾಕುವುದು, ಲಾಭದಾಯಕ ಹುದ್ದೆಗಾಗಿ ಕಿತ್ತಾಟ ನಡೆಸುತ್ತಿದ್ದಾರೆ. ಇಲಾಖೆ ಉನ್ನತ ಅಧಿಕಾರಿಗಳು ಬಹಳ ವರ್ಷಗಳಿಂದ ಒಂದೇ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕೆಲ ಅಧಿಕಾರಿಗಳಂತೂ ಹಲವು ಹುದ್ದೆಗಳಿಗೆ ಪ್ರಭಾರ ಮೇಲೆ ನೇಮಕಗೊಂಡು ಹಣ ಮಾಡುವ ದಂಧೆಯಲ್ಲಿ ತೊಡಗಿರುವ ದೂರುಗಳು ಸಾಮಾನ್ಯವಾಗಿವೆ.
ರಾಷ್ಟ್ರೀಯ ಆಯುಷ್ ಮಿಷನ್ ಅಡಿ ಕಾರ್ಯಕ್ರಮಗಳನ್ನು ನೆಪ ಮಾತ್ರಕ್ಕೆ ಅಧಿಕಾರಿಗಳು ಮಾಡುತ್ತಿದ್ದಾರೆ ಹೊರತು ಆಯುಷ್ ಅಭಿವೃದ್ಧಿಗೊಳಿಸುವ ಬಗ್ಗೆ ನೈಜ ಕಾಳಜಿ ಇಲ್ಲದಂತಾಗಿದೆ. ಆಯ್ದ ಕಡೆ ಮಾತ್ರವೇ ಆಯುಷ್ ಆಸ್ಪತ್ರೆ ತೆರೆಯಲು ಇವರು ಅನುಮತಿ ನೀಡುತ್ತಿದ್ದಾರೆ.
ಆಯುಷ್ ಶಿಕ್ಷಣ ಹದಗೆಟ್ಟಿದ್ದು, ಅರೆಬರೆಯಾಗಿ ಬರುವ ವೈದ್ಯರ ಸ್ಥಿತಿ ಅತಂತ್ರವಾಗಿದೆ. ನಿಯಮ ಉಲ್ಲಂಘನೆ ಮಾಡಿ ಬೇಕಾಬಿಟ್ಟಿ ‘ಡಿ ಫಾರ್ಮ’ ಅಲೋಪಥಿ ಔಷಧ ಮಳಿಗೆ ತೆರೆಯಲು ಪರವಾನಿಗೆ ನೀಡಲಾಗುತ್ತಿದೆ. ಒಟ್ಟಿನಲ್ಲಿ ಲಂಗು ಲಗಾಮು ಇಲ್ಲದ ಇಲಾಖೆಯಲ್ಲಿ ಬೇಕಾಬಿಟ್ಟಿ ವರ್ಗಾವಣೆಯಾಗಿವೆ. ಸಾಕಷ್ಟು ಬಾರಿ ಆಯುಕ್ತರ ಗಮನಕ್ಕೆ ಬಾರದೆ ನಿಯಮಬಾಹಿರವಾಗಿ ಅಧಿಕಾರಿ, ಸಿಬ್ಬಂದಿ ವರ್ಗಾವಣೆ ಮಾಡಲಾಗುತ್ತಿದೆ ಎನ್ನುವ ದೂರುಗಳು ಕೇಳಿಬಂದಿವೆ.
ಈ ಇಲಾಖೆಯ ಅಡಿ 570 ಆಯುರ್ವೇದ ಚಿಕಿತ್ಸಾಲಯ, 119 ಆಯುರ್ವೇದ ಆಸ್ಪತ್ರೆ, 63 ಹೋಮಿಯೋಪಥಿ ಚಿಕಿತ್ಸಾಲಯ, 20 ಹೋಮಿಯೋಪಥಿ ಆಸ್ಪತ್ರೆ,14 ಪ್ರಕೃತಿ ಚಿಕಿತ್ಸಾಲಯ, 2 ಪ್ರಕೃತಿ ಚಿಕಿತ್ಸೆ ಆಸ್ಪತ್ರೆ, 8 ನ್ಯಾಚುರೋಪಥಿ, ಯೋಗ ಚಿಕಿತ್ಸಾಲಯ, 6 ನ್ಯಾಚುರೋಪಥಿ ಹಾಗೂ ಯೋಗ ಆಸ್ಪತ್ರೆ ಹಾಗೂ 4 ಆಯುರ್ವೇದ ಕಾಲೇಜುಗಳಿವೆ. ಬಹುತೇಕ ಆಯುರ್ವೇದ ಕಾಲೇಜು ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಕಡಿಮೆ ಇದೆ.
ಬರೀ ವಿದ್ಯಾರ್ಥಿಗಳಿಗೆ ಪಾಠ ಹೇಳುವುದಕ್ಕೆ ಮಾತ್ರ ಕಾಲೇಜುಗಳು ಸೀಮಿತವಾಗಿವೆ. ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವಲ್ಲಿ ವಿಫಲವಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಡಿ ಆಯುಷ್ ಇಲಾಖೆಯನ್ನು ಒಂದೆರೆಡು ಬಾರಿ ವಿಲೀನ ಮಾಡಲಾಗಿತ್ತು. ಆದರೆ, ಆಯುಷ್ ಉನ್ನತೀಕರಣಕ್ಕಾಗಿ ಸ್ವತಂತ್ರ ಇಲಾಖೆಯನ್ನಾಗಿ ಸರಕಾರ ರಚಿಸಿತ್ತು. ಹಲವು ಸಮಸ್ಯೆಗಳಿಂದ ನಲುಗಿರುವ ಇಲಾಖೆಯ ಬಗ್ಗೆ ಸರಕಾರ ಕಣ್ತುತೆರೆದು ನೋಡಬೇಕಿದೆ.
ಸಹಸ್ರಾರು ನಕಲಿ ವ್ರೆದ್ಯರ ತಾಣ
ಇಲಾಖೆ ಅಧೀನದಡಿ ಕರ್ನಾಟಕ ಆಯುರ್ವೇದ ಹಾಗೂ ಯುನಾನಿ ವೈದ್ಯ ಮಂಡಳಿ (ಕೆಎಯುಪಿ) ಬರುತ್ತದೆ. ನಕಲಿ ವೈದ್ಯರನ್ನು ತಡೆಯಬೇಕಾದ ಮಂಡಳಿ, ಸಹಸ್ರಾರು ನಕಲಿ ವೈದ್ಯರನ್ನು ಸೃಷ್ಟಿಸುವ ತಾಣವಾಗಿ ಮಾರ್ಪಟ್ಟಿದೆ. ಕೆಎಯುಪಿಯಲ್ಲಿ ಒಮ್ಮೆ ನೋಂದಣಿಯಾದ ವೈದ್ಯರು ನಿಧನರಾದರೆ, ಹೊರ ರಾಜ್ಯಕ್ಕೆ ಅಥವಾ ವಿದೇಶಗಳಿಗೆ ತೆರಳಿದರೆ ಅವರ ನೋಂದಣಿ ಸಂಖ್ಯೆ ರದ್ದಾಗುತ್ತದೆ.
ರದ್ದಾದ ನೋಂದಣಿ ಸಂಖ್ಯೆಯನ್ನು ಬೇರೆಯವರಿಗೆ ನೀಡಲು ಅವಕಾಶವಿಲ್ಲ. ಆದರೆ, ಈ ನೋಂದಣಿ ಸಂಖ್ಯೆಯನ್ನು ಬಳಸಿಕೊಂಡಿರುವ ಮಂಡಳಿ, ಕಾನೂನುಬಾಹಿರವಾಗಿ ಸಾವಿರಾರು ನಕಲಿ ವೈದ್ಯರಿಗೆ ಪ್ರಮಾಣ ಪತ್ರ ನೀಡಿದೆ. ಪ್ರತಿ ಪ್ರಮಾಣ ಪತ್ರಕ್ಕೆ ನಾಲ್ಕೈದು ಲಕ್ಷ ರೂ.ಲಂಚ ಪಡೆದು ಮಂಡಳಿ ನೀಡಿದೆ ಎನ್ನುವ ಆರೋಪ ಇದೆ.
ಪ್ರಮಾಣ ಪತ್ರದಲ್ಲಿ ಹೆಸರು ನಮೂದಿಸಿ ಮತ್ತು ಭಾವಚಿತ್ರ ಅಂಟಿಸಿಕೊಂಡು ದಂಧೆಗೆ ಇಳಿಯುವ ನಕಲಿ ವೈದ್ಯರು, ಕ್ಲಿನಿಕ್ ತೆರೆದು ಚಿಕಿತ್ಸೆ ನೀಡುತ್ತಿದ್ದಾರೆ. ಆರೋಗ್ಯ ಇಲಾಖೆಗೆ ಸಿಕ್ಕಿಬಿದ್ದಿರುವ ಸಾಕಷ್ಟು ವೈದ್ಯರು ಆಯುರ್ವೇದ ಹಾಗೂ ಹೋಮಿಯೋಪಥಿ ಹೆಸರಿನಲ್ಲಿ ದಂಧೆ ನಡೆಸುತ್ತಿರುವುದು ಬಹಿರಂಗವಾಗಿದೆ. ನಕಲಿ ವೈದ್ಯರ ಪತ್ತೆಹಚ್ಚಿ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಬೇಕಿದ್ದ ಕೆಎಯುಪಿ, ಹಲ್ಲು ಕಿತ್ತ ಹಾವಿನಂತಾಗಿದೆ.