---

ಹಿಂದೂಸ್ಥಾನಿ ಸಂಗೀತದ ಆಧುನಿಕ ಪಿತಾಮಹ: ವಿಷ್ಣು ನಾರಾಯಣ ಭಾತಖಂಡೆ

ಭಾರತದ ಸಂಗೀತವು ಉತ್ತರಾದಿ ಮತ್ತು ದಕ್ಷಿಣಾದಿ ಸಂಗೀತ ಅಂದರೆ, ಹಿಂದೂಸ್ಥಾನಿ ಮತ್ತು ಕರ್ನಾಟಕ ಸಂಗೀತವೆಂಬ ಪ್ರಕಾರಗಳಲ್ಲಿ ಚಾಲ್ತಿಯಲ್ಲಿದ್ದರೂ ಸಹ ಇವೆರಡರ ರಾಗ, ತಾಳ ಮತ್ತು ಸ್ವರಗಳಲ್ಲಿ ಅನೇಕ ಸಾಮ್ಯತೆಗಳಿವೆ. ಹಿಂದೂಸ್ಥಾನಿ ಸಂಗೀತಕ್ಕಿಂತ ಕರ್ನಾಟಕ ಸಂಗೀತ ಹಳೆಯದಾದುದು. ಉತ್ತರ ಭಾರತದಲ್ಲಿ ಹಿಂದೂಸ್ಥಾನಿ ಸಂಗೀತಕ್ಕೆ ಭದ್ರವಾದ ತಳಪಾಯ ಹಾಕಿದ ವರಲ್ಲಿ ಕನ್ನಡಿಗನಾದ ಗೋಪಾಲ ನಾಯಕ ಮತ್ತು ಅಮೀರ್ ಖುಸ್ರು ಮುಖ್ಯರು. ಇವರ ನಂತರ ಮತ್ತೊಬ್ಬ ಕನ್ನಡಿಗನಾದ ಪುಂಡರೀಕ ವಿಠಲ ಎಂಬಾತ ಸದ್ರಾಗ ಚಂದ್ರೋದಯ, ರಾಗಮಾಲ, ರಾಗಮಂಜರಿ ಮುಂತಾದ ಸಂಗೀತ ಶಾಸ್ತ್ರ ಗ್ರಂಥಗಳನ್ನು ರಚಿಸಿದನು. ಉತ್ತರ ಭಾರತವನ್ನಾಳಿದ ಬಹುತೇಕ ಮುಸ್ಲಿಂ ದೊರೆಗಳು ಸಂಗೀತ ಮತ್ತು ನೃತ್ಯ ಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡಿದ ಫಲವಾಗಿ, ನೆರೆಯ ಪರ್ಷಿಯ ದೇಶದಿಂದ ಬಂದ ಕೆಲವು ಸಂಗೀತದ ರಾಗಗಳು ಹಿಂದೂಸ್ಥಾನಿ ಸಂಗೀತದಲ್ಲಿ ಮಿಳಿತಗೊಂಡವು.

ರಾಗಗಳ ವರ್ಗೀಕರಣ ಪದ್ಧತಿಯು ಕರ್ನಾಟಕ ಮತ್ತು ಹಿಂದೂಸ್ಥಾನಿ ಈ ಎರಡೂ ಸಂಗೀತ ಪ್ರಕಾರಗಳಲ್ಲಿ ಅತ್ಯಂತ ಪ್ರಾಚೀನವಾದ ಪದ್ಧತಿಯಾಗಿದೆ. ಮತಂಗಮುನಿಗಿಂತ ಮುಂಚಿತವಾಗಿ ಹಿಂದಿನ ಕೆಲವು ಪಂಡಿತರು ರಾಗಗಳನ್ನು ಪುಲ್ಲಿಂಗ ಮತ್ತು ಸ್ತ್ರೀಲಿಂಗ ಎಂದು ವಿಂಗಡಿಸಿದ್ದರು. ಇದರಿಂದಾಗಿ ಉತ್ತರ ಭಾರತದಲ್ಲಿ ರಾಗರಾಗಿಣಿ ಪದ್ಧತಿಯು ಹದಿನಾರನೆಯ ಶತಮಾನದಿಂದ ಅಸ್ತಿತ್ವಕ್ಕೆ ಬಂದಿತು. ಇದರ ಜೊತೆಗೆ ರಾಗವೇಳಾ ಎಂಬ ನಿಯಮವು ಪ್ರಾಚೀನ ಕಾಲದಿಂದ ರೂಢಿಯಲ್ಲಿತ್ತು. ಯಾವ ಕಾಲದಲ್ಲಿ ಮತ್ತು ಯಾವ ಋತುವಿನಲ್ಲಿ ಯಾವ ರಾಗವನ್ನು ಹಾಡಬೇಕು ಎಂಬುದರ ಕುರಿತು ನಿಯಮವಿತ್ತು. 13ನೆ ಶತಮಾನದಲ್ಲಿ ಶಾರ್ಙ್ಗದೇವನಿಂದ ಆರಂಭವಾಯಿತು ಎಂದು ಹೇಳಲಾಗುವ ಈ ಪದ್ಧತಿಯನ್ನು ಪುಂಡರೀಕ ವಿಠಲ ಎಂಬಾತ ಹಿಂದೂಸ್ಥಾನಿ ಸಂಗೀತದಲ್ಲಿ ಮೊದಲ ಬಾರಿಗೆ ಅಳವಡಿಸಿದನು. ಇಂತಹ ರಾಗವೇಳಾಪಟ್ಟಿಯನ್ನು ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ತಿದ್ದುಪಡಿ ಮಾಡುವುದರ ಜೊತೆಗೆ ಹಿಂದೂಸ್ಥಾನಿ ಸಂಗೀತದ ರಾಗಗಳನ್ನು ನಿರ್ದಿಷ್ಟವಾಗಿ ಗುರುತಿಸಿ, ಕೆಲವು ಶಾಸ್ರಗಳನ್ನು ಬರೆದ ಮಹನೀಯರಲ್ಲಿ ವಿಷ್ಣು ನಾರಾಯಣ ಭಾತಖಂಡೆಯವರು ಅಗ್ರಗಣ್ಯರು. ಜೀವನ ಪೂರ್ತಿ ಸಂಗೀತದ ಅಧ್ಯಯನದಲ್ಲಿ ತೊಡಗಿಕೊಂಡು, ಹಿಂದೂಸ್ಥಾನಿ ಸಂಗೀತದ ಪ್ರಕಾರಗಳು, ರಾಗಗಳ ವೈಶಿಷ್ಟ ಮತ್ತು ಅವುಗಳ ಲಕ್ಷಣ ಕುರಿತು ಅಕ್ಷರ ರೂಪದಲ್ಲಿ ದಾಖಲಿಸಿದರು. ಇದಕ್ಕೂ ಮುನ್ನ ಅನೇಕ ರಾಗಗಳು ಮತ್ತು ಹಿಂದೂಸ್ಥಾನಿ ಸಂಗೀತ ಪದ್ಧತಿಗಳು ತಮ್ಮದೇ ಆದ ಪ್ರತ್ಯೇಕ ಶೈಲಿಯಲ್ಲಿ (ಘರಾಣೆ ಹೆಸರಿನಲ್ಲಿ)ಮೌಖಿಕ ಪಠ್ಯವಾಗಿ ಬಾಯಿಂದ ಬಾಯಿಗೆ ಮತ್ತು ಎದೆಯಿಂದ ಎದೆಗೆ ಹರಿದು ಬರುತ್ತಿದ್ದವು.

1860ರಲ್ಲಿ ಇಂದಿನ ಮುಂಬೈ ನಗರದ ಗಿರ್‌ಗಾಂವ್‌ನಲ್ಲಿ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಭಾತಖಂಡೆಯವರು ತನ್ನ ತಂದೆಯವರ ಮೂಲಕ ಗೋರಾ ರಾಮ ಮಂದಿರದಲ್ಲಿ ಜರುಗುತ್ತಿದ್ದ ಸಂಗೀತವನ್ನು ಕೇಳುತ್ತಾ ಪ್ರಭಾವಗೊಂಡವರು. ತಮ್ಮ ಹದಿನೈದನೆಯ ವಯಸ್ಸಿನಲ್ಲಿ ವಲ್ಲಭದಾಸ್ ಗೋಪಾಲಗಿರಿ ಎಂಬವರಿಂದ ಸಿತಾರ್ ಕಲಿಯಲು ಆರಂಭಿಸಿದರು. ಈ ವೇಳೆಯಲ್ಲಿ ಅವರಿಗೆ ಸಂಗೀತಶಾಸ್ತ್ರ ಮತ್ತು ರಾಗಗಳ ಲಕ್ಷಣ ಕುರಿತು ಆಸಕ್ತಿ ಮೂಡಿತು. ಈ ಕುರಿತಂತೆ ಅವರು ಹಿಂದೂಸ್ಥಾನಿ ಸಂಗೀತ ಕುರಿತು ಆಳವಾದ ಅಧ್ಯಯನ ಮಾಡಲು ನಿರ್ಧರಿಸಿದರು. ಆ ಕಾಲಕ್ಕೆ ಪ್ರಖ್ಯಾತ ಸಿತಾರ್ ವಾದಕರಾಗಿದ್ದ ಪಂಡಿತ್ ಪನ್ನಾಲಾಲ್ ಘೋಷ್ ಅವರು ರಚಿಸಿದ್ದ ನಾದ್-ವಿನೋದ್ ಎಂಬ ಕೃತಿಯನ್ನು ಓದಿ ಗಂಭೀರವಾದ ಅಧ್ಯಯನದಲ್ಲಿ ತೊಡಗಿಕೊಂಡರು.

  1884ರಲ್ಲಿ ತಮ್ಮ ಕಾನೂನು ಪದವಿಯನ್ನು ಮುಗಿಸಿ, ಸಂಗೀತವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ‘ಶಾಪೂರ್ ಸ್ಪೆನ್ಸರ್’ ಎಂಬ ಸಂಸ್ಥೆ ಹಾಗೂ ಕೆಲವು ಪಾರ್ಸಿ ಕುಟುಂಬಗಳು ಆರಂಭಿಸಿದ ‘ಪಾರ್ಸಿ ಗಾಯನೋತ್ತೇಜಕ್ ಮಂಡಳಿ’ಗೆ ಭಾತಖಂಡೆಯವರು ಸೇರ್ಪಡೆಯಾದರು. ಈ ಮಂಡಳಿಯಲ್ಲಿ ಪ್ರಸಿದ್ಧ ವಿದ್ವಾಂಸರಾದ ಪಂಡಿತ್ ರಾಜೀವ್ ಬುವಾ, ಉಸ್ತಾದ್‌ಅಲಿಖಾನ್, ವಿಲಾಯತ್ ಹುಸೈನ್, ಮುಂತಾದವರು ಆಸಕ್ತ ವಿದ್ಯಾರ್ಥಿಗಳಿಗೆ ಹಿಂದೂಸ್ಥಾನಿ ಸಂಗೀತವನ್ನು ಕಲಿಸಿಕೊಡುತ್ತಿದ್ದರು.

 ಭಾತಖಂಡೆಯವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ಪಂಡಿತ್ ರಾಜೀವ್ ಬುವಾ ಅವರಿಂದ 300 ದ್ರುಪದ್ ಗಾಯನಗಳನ್ನು ಮತ್ತು ಉಸ್ತಾದ್ ಅಲಿಖಾನ್ ಮತ್ತು ವಿಲಾಯತ್ ಹುಸೈನ್‌ರಿಂದ 150 ಖ್ಯಾಲ್ ಗಾಯನಗಳನ್ನು ಕಲಿತರು. ಇವುಗಳ ಜೊತೆಗೆ ಭಾತಖಂಡೆಯವರು ಜೈಪುರ್ ಘರಾಣೆಯ ಮುನ್ನೂರಕ್ಕೂ ಹೆಚ್ಚು ಸಾಂಪ್ರದಾಯಿಕ ರಚನೆಗಳನ್ನು ಜೈಪುರದ ಅಸ್ಗರ್ ಅಲಿ ಖಾನ್‌ರವರಿಂದ ದಾಖಲಿಸಿಕೊಂಡರು. ಭಾತಖಂಡೆಯವರ ದಣಿವರಿಯದ ಉತ್ಸಾಹವನ್ನು ನೋಡಿದ ಅನೇಕ ಹಿಂದೂಸ್ಥಾನಿ ಗಾಯನದ ಪಂಡಿತರು ತಮ್ಮ ಬಳಿ ಇದ್ದ ಸಂಗೀತ ಸಾಹಿತ್ಯ ರಚನೆಗಳು (ಬಂದಿಷ್) ಇವುಗಳನ್ನು ಅವರಿಗೆ ನೀಡಿದರು. ಇವರಲ್ಲಿ ಗ್ವಾಲಿಯರ್ ಘರಾಣೆಯ ಏಕನಾಥ ಪಂಡಿತ್, ರಾಂಪುರ್ ಘರಾಣೆಯ ನವಾಬ್ ಹಮೀದ್ ಅಲಿಖಾನ್, ಗಿದ್ದೋರ್ ಘರಾಣೆಯ ಉಸ್ತಾದ್ ವಜೀಖಾನ್ ಮತ್ತು ಮುಹಮ್ಮದ್ ಅಲಿಖಾನ್ ಮುಂತಾದವರು ತಮ್ಮ ಸಂಗೀತ ಶೈಲಿಯಿಂದ ಹಿಡಿದು, ತಮ್ಮಲ್ಲಿದ್ದ ಸಂಗೀತ ಕೃತಿಗಳನ್ನು ನೀಡಿ ಸಹಕರಿಸಿದರು. ಇಂತಹ ಹಿರಿಯ ಸಂಗೀತ ದಿಗ್ಗಜರ ಸಹಕಾರ ಪ್ರೇರಣೆಯಿಂದ ಹಿಂದೂಸ್ಥಾನಿ ಸಂಗೀತದ ಶಾಸ್ತ್ರ ಗ್ರಂಥವನ್ನು ವಿಶೇಷವಾಗಿ ರಾಗಲಕ್ಷಣಗಳನ್ನು ಗುರುತಿಸುವ, ಸಂಗೀತದ ವ್ಯಾಕರಣಕ್ಕೆ ಸಂಬಂಧಿಸಿದ ಕೃತಿಗಳ ರಚನೆಗೆ ಮುಂದಾದರು. ಕೃತಿ ರಚನೆಗೆ ಮುನ್ನ, ಅವರು ದಿಲ್ಲಿ, ಗ್ವಾಲಿಯರ್, ಜೈಪುರ, ಆಗ್ರಾ, ಪಟಿಯಾಲ, ಬರೋಡ, ಹೈದರಾಬಾದ್ ನಗರಗಳಲ್ಲಿ ಪ್ರವಾಸ ಮಾಡಿ, ಅಲ್ಲಿನ ವಿವಿಧ ಶೈಲಿಯ ಹಿಂದೂಸ್ಥಾನಿ ಸಂಗೀತಕ್ಕೆ ಸಾಕ್ಷಿಯಾದರು. ಜೊತೆಗೆ ಗಾಯಕರ ಜೊತೆ ಚರ್ಚೆ ನಡೆಸಿದರು. ಇದು ಸಾಲದೆಂಬಂತೆ, ಕರ್ನಾಟಕ ಸಂಗೀತದ ರಾಗಗಳ ಲಕ್ಷಣಗಳನ್ನು ತಿಳಿದುಕೊಳ್ಳುವ ಉದ್ದೇಶದಿಂದ 1904ರಲ್ಲಿ ದಕ್ಷಿಣ ಭಾರತದ ಮದ್ರಾಸ್, ಮೈಸೂರು, ತಂಜಾವೂರು, ತಿರುವಾಂಕೂರ್ ಮಧುರೈ, ಬೆಂಗಳೂರು, ರಾಮನಾಥಪುರಂ ಮುಂತಾದ ನಗರಗಳಲ್ಲಿ ಸುತ್ತಾಡಿ, ಸಂಗೀತದ ವಿದ್ವಾಂಸರ ಜೊತೆ ಒಡನಾಡುತ್ತಾ, ಕರ್ನಾಟಕ ಸಂಗೀತದ ಕೃತಿಗಳ ಅಧ್ಯಯನ ನಡೆಸಿದರು. ಭಾತಖಂಡೆಯವರಿಗೆ ವೆಂಕಟಮುಖಿಯ ಮೇಳಕರ್ತ ರಾಗ ಎಂಬ ಕರ್ನಾಟಕ ಸಂಗೀತದ 72 ರಾಗಗಳ ಲಕ್ಷಣ ಕೃತಿಯು ಹೆಚ್ಚು ಪ್ರಭಾವ ಬೀರಿತು. ಇದೂ ಸಾಲದಂಬಂತೆ, 1906ರಿಂದ 1908ರವರೆಗೆ ಕೋಲ್ಕತಾ, ವಾರಣಾಸಿ, ಪುರಿ, ಅಲಹಾಬಾದ್, ಲಕ್ನೋ, ಉದಯಪುರ್ ಹೀಗೆ ಇಡೀ ದೇಶದ ಹಲವು ನಗರಗಳಲ್ಲಿ ಸಂಗೀತವನ್ನು ಅಧ್ಯಯನ ಮಾಡಿ, ವೆಂಕಟಮುಖಿಯ ಕೃತಿಯನ್ನು ಮಾದರಿಯನ್ನಾಗಿಟ್ಟುಕೊಂಡು, 1910ರಲ್ಲಿ ‘ಶ್ರೀ ಮಲ್ಲಕ್ಷ್ಯ ಸಂಗೀತ’ ಎಂಬ ಲಕ್ಷಣ ಗ್ರಂಥವನ್ನು ರಚನೆ ಮಾಡಿದರು. ಜೀವನೋಪಾಯಕ್ಕಾಗಿ ಕೆಲವು ಶ್ರೀಮಂತ ಕುಟುಂಬಗಳ ಆಸ್ತಿ ವ್ಯವಹಾರಕ್ಕೆ ಸಂಬಂಧಿಸಿದಂತೆ, ಕಾನೂನು ಸಲಹೆಗಾರರಾಗಿ ಮತ್ತು ಎಸ್ಟೇಟ್ ಮ್ಯಾನೆಜರ್ ಆಗಿ ಕಾರ್ಯನಿರ್ವಸುತ್ತಿದ್ದ ಅವರು ತಮ್ಮ ಹುದ್ದೆಗೆ ವಿದಾಯ ಹೇಳಿ, ಶಾರದ ಸಂಗೀತ ವಿದ್ಯಾಲಯ ಎಂಬ ಸಂಸ್ಥೆಯೊಂದನ್ನು ತೆರೆದು ವಿದ್ಯಾರ್ಥಿಗಳಿಗೆ ಸಂಗೀತ ಹೇಳಿಕೊಡುವ ಕ್ರಿಯೆಯಲ್ಲಿ ತೊಡಗಿಸಿಕೊಂಡರು. ಕೆಲವು ಸಂಸ್ಥಾನಗಳ ರಾಜಮಹಾರಾಜರ ನೆರವಿನಿಂದ ಮುಂಬೈ ನಗರದಲ್ಲಿ ಸಂಗೀತ ಕಚೇರಿಯನ್ನು ಏರ್ಪಡಿಸುವುದರ ಮೂಲಕ ದೇಶದ ವಿವಿಧ ಭಾಗಗಳಿಂದ ಕಲಾವಿದರನ್ನು ಕರೆಸಿ, ಅವರ ಗಾಯನ ಶೈಲಿ ಮತ್ತು ಸಂಗೀತದ ಪ್ರಕಾರಗಳನ್ನು ಮುಂಬೈನ ಕಲಾರಸಿಕರಿಗೆ ಪರಿಚಯಮಾಡಿಕೊಟ್ಟರು. ಇದರ ನಡುವೆ ಹದಿನೆಂಟಕ್ಕೂ ಹೆಚ್ಚು ಸಂಗೀತ ಲಕ್ಷಣ ಕುರಿತಾದ ಕೃತಿಗಳನ್ನು ಹಿಂದಿ ಮತ್ತು ಸಂಸ್ಕೃತ ಭಾಷೆಯಲ್ಲಿ ರಚನೆ ಮಾಡಿದರು. ಇವುಗಳಲ್ಲಿ ನಾಟ್ಯಶಾಸ್ತ್ರ, ಸಂಗೀತ ರತ್ನಾಕರ, ಸಂಗೀತ್ ದರ್ಪಣ, ರಾಗವಿಬೋಧ, ಸಂಗೀತ್ ಪಾರಿಜಾತ್ ಮುಖ್ಯವಾದ ಕೃತಿಗಳಾಗಿವೆ. ಅವರ ಮಹತ್ವದ ಕೃತಿಯೆಂದರೆ, ಕ್ರಮಿಕ್ ಪುಸ್ತಕ್ ಮಾಲಿಕಾ ಎಂಬ ಆರು ಸಂಪುಟಗಳ ಈ ಕೃತಿಯಲ್ಲಿ 1,800 ಸಂಗೀತದ ಸಾಹಿತ್ಯ ರಚನೆಗಳನ್ನು ಹತ್ತು ಥಾಟ್ ಗಳಾಗಿ ವಿಂಗಡನೆ ಮಾಡಿದ್ದಾರೆ. (ಸ್ವರಗಳ ಆಧಾರದ ಮೇಲೆ ರಾಗಗಳನ್ನು ವಿಂಗಡಿಸುವ ಅಥವಾ ಗುರುತಿಸುವ ವಿಧಾನ) ಥಾಟ್ ಪದ್ಧತಿಯನ್ನು ಬಳಕೆಗೆ ತಂದವರಲ್ಲಿ ಭಾತಖಂಡೆ ಮೊದಲಿಗರು. ಅವರ ಗ್ರಂಥದಲ್ಲಿ ಬಿಲಾವಲ್ ಥಾಟ್ ಅನ್ನು ಶುದ್ಧ ಸ್ವರ ಸಪ್ತಕ ಎಂದು ಕರೆದರು. ಕರ್ನಾಟಕ ಸಂಗೀತದಲ್ಲಿ ಶುದ್ಧರಿಷಭ, ಶುದ್ಧ ದೈವತ, ಸಾಧಾರಣಾ ಗಾಂಧಾರ, ಕೈಷಿಕಿ ನಿಷಾದಗಳು ಹಿಂದೂಸ್ಥಾನಿ ಸಂಗೀತದಲ್ಲಿ ಕೋಮಲ, ರಿಷಭ, ದೈವತ, ಗಾಂಧಾರ, ನಿಷಾದಗಳಾಗಿವೆ. ಎರಡು ಸಂಗೀತ ಪ್ರಕಾರಗಳು ಸ್ವರ ಮತ್ತು ಲಯ ಗಳನ್ನು ಆಧರಿಸಿದ್ದರೂ ಸಹ ಹಿಂದೂಸ್ಥಾನಿ ಸಂಗೀತದಲ್ಲಿ ತಾಳಕ್ಕೆ ಮಹತ್ವ ಇರುವಂತೆ, ಕರ್ನಾಟಕ ಸಂಗೀತದಲ್ಲಿ ಸ್ಮತಿಗೆ ಮಹತ್ವ ನೀಡಲಾಗಿದೆ. ಇಂದಿನ ಹಿಂದೂಸ್ಥಾನಿ ಸಂಗೀತದ ವಿವಿಧ ಪ್ರಕಾರಗಳಾದ ಸರ್‌ಗಮ್, ದ್ರುಪದ್, ಖ್ಯಾಲ್, ಠುಮ್ರಿ, ಧಮಾರ್, ಹೋರಿ ಈ ಗಾಯನಗಳಲ್ಲಿ ವಿವಿಧ ಘರಾಣೆಯ ಪ್ರಭಾವವಿದ್ದರೂ ಸಹ ಇವುಗಳ ಸಂಗೀತ ಕೃತಿ ಮತ್ತು ಬಳಸಲಾಗುವ ರಾಗಗಳಲ್ಲಿ ವಿಷ್ಣು ನಾರಾಯಣ್ ಭಾತಖಂಡೆಯವರ ಶ್ರಮವನ್ನು ಈಗಲೂ ನಾವು ಕಾಣಬಹುದು. ಹಾಗಾಗಿ ಅವರು ಆಧುನಿಕ ಹಿಂದೂಸ್ಥಾನಿ ಸಂಗೀತ ಪಿತಾಮಹರಲ್ಲಿ ಒಬ್ಬರಾಗಿದ್ದಾರೆ. 1937 ರಲ್ಲಿ ನಿಧನರಾದ ಭಾತಖಂಡೆಯವರು ಇಂದಿಗೂ ಸಹ ಹಿಂದೂಸ್ಥಾನಿ ಸಂಗೀತದಲ್ಲಿ ಅವಿಸ್ಮರಣೀಯರಾಗಿ ಉಳಿದಿದ್ದಾರೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top