ಕಾಶ್ಮೀರದಲ್ಲಿ ಏರ್ಪಟ್ಟಿದ್ದ ಕೃತಕ ಮೈತ್ರಿ ಮತ್ತು ಬದ್ಧತೆಯಿಲ್ಲದ ಕದನ ವಿರಾಮಗಳನ್ನು ಕೊನೆಗೊಳಿಸುವುದರ ಮೂಲಕ ಬಿಜೆಪಿಯು ಹಿಂದೂ ಬಹುಸಂಖ್ಯಾತ ಕಾರ್ಯಸೂಚಿಯನ್ನು ಜಾರಿಗೆ ತರಲು ಸಜ್ಜಾಗುತ್ತಿದೆ.

ಕಾಶ್ಮೀರದಲ್ಲಿ ನಡೆಯುತ್ತಿದ್ದ ಪ್ರಹಸನವೊಂದರ ಅಂತ್ಯ

ಜಗತ್ತಿನೆಲ್ಲೆಡೆ ಬಹುಸಂಖ್ಯಾತ ದುರಭಿಮಾನಿ ರಾಜಕೀಯ ವಾತಾವರಣವೇ ವ್ಯಾಪಿಸಿರುವಾಗ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಮಿಷನರ್ ಅವರು ಕಾಶ್ಮೀರದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯಗಳ ಬಗ್ಗೆ ನೀಡಿದ್ದ ಗಂಭೀರ ವರದಿಯನ್ನು ಭಾರತವು ಕಿಂಚಿತ್ತೂ ಕಾಳಜಿಯಿಲ್ಲದೆ ತಿರಸ್ಕರಿಸಿದ ಪ್ರಸಂಗವು ಯಾವ ವ್ಯತಿರಿಕ್ತ ಬೆಳವಣಿಗೆಗಳಿಗೂ ಈಡುಮಾಡಿಕೊಡಲಿಲ್ಲ. ಇದು ಪ್ರಭುತ್ವವು ಜನತೆಗೆ ತೋರಬೇಕಾದ ಉತ್ತರದಾಯಿತ್ವದಲ್ಲಿ ಆಗಿರುವ ಪತನಕ್ಕೆ ಸಂಕೇತವಾಗಿದೆ.


ಇತ್ತೀಚಿನ ದಿನಗಳಲ್ಲಿ ಕಾಶ್ಮೀರದ ಬಗ್ಗೆ ಪ್ರಚಲಿತದಲ್ಲಿದ್ದ ಎರಡು ಅತಿರಂಜಿತ ಕಥನಗಳು ಅಂತ್ಯಕಂಡಿವೆ. ಪರಸ್ಪರ ಅನುಮಾನಗಳ ತಳಹದಿಯ ಮೇಲೆ ಘೋಷಿಸಲಾಗಿದ್ದ ಕದನ ವಿರಾಮವನ್ನು ಹಿಂದೆಗೆದುಕೊಳ್ಳಲಾಗಿದೆ ಮತ್ತು ಎರಡು ತದ್ವಿರುದ್ಧ ಹಿತಾಸಕ್ತಿಗಳು ಮಾಡಿಕೊಂಡಿದ್ದ ರಾಜಕೀಯ ಮೈತ್ರಿಯೂ ಅಂತ್ಯಕಂಡಿದೆ. ಆದರೆ ರಮಝಾನ್ ಮಾಸದ ಕೊನೆಯ ದಿನ ಕಾಶ್ಮೀರದ ಪ್ರಖ್ಯಾತ ಪತ್ರಕರ್ತರೂ ಗಣ್ಯಮಾನ್ಯರೂ ಆಗಿದ್ದ ಶುಜಾತ್ ಬುಖಾರಿ ಅವರ ಭೀಕರ ಹತ್ಯೆಯು ಮಾತ್ರ ತಲ್ಲಣ ಹುಟ್ಟಿಸುವಷ್ಟು ನೈಜವಾಗಿತ್ತು. ಅದೇ ರೀತಿ, ಕಾಶ್ಮೀರದಲ್ಲಿನ ಮಾನವ ಹಕ್ಕುಗಳ ಪರಿಸ್ಥಿತಿಯ ಬಗ್ಗೆ ವಿಶ್ವಸಂಸ್ಥೆಯು ಹೊರತಂದ ಪ್ರಪ್ರಥಮ ವರದಿಯ ಸತ್ಯಾಧಾರಗಳ ತಳಹದಿಯ ಬಗ್ಗೆಯೂ ಯಾರಿಗೂ ಯಾವ ಸಂದೇಹವೂ ಇರಲಿಲ್ಲ. ಆದರೆ ಭಾರತ ಸರಕಾರ ಮಾತ್ರ ಅವೆಲ್ಲಾ ಸುಳ್ಳು ಎಂಬ ಕಪಟ ನಾಟಕವನ್ನಾಡುತ್ತಲೇ ಇದೆ.

ಕಾಶ್ಮೀರದಲ್ಲಿ ಜಾರಿಯಲ್ಲಿದೆ ಎಂದು ಹೇಳಲಾಗುತ್ತಿದ್ದ ಕದನ ವಿರಾಮಕ್ಕೂ ಮತ್ತು ಅದರ ನಿಜವಾದ ಅರ್ಥಕ್ಕೂ ಯಾವ ಸಂಬಂಧವೂ ಇರಲಿಲ್ಲ. ತಾನು ತನ್ನ ಕಾನೂನು ಬಾಹಿರ ಸಶಸ್ತ್ರ ಎದುರಾಳಿಯೆಂದು ಪರಿಗಣಿಸುವ ಸಂಸ್ಥೆಗಳ ವಿರುದ್ಧ ಕದನ ವಿರಾಮ ಘೋಷಿಸಿದ್ದೇನೆ ಎಂದು ಹೇಳಲು ಸಹ ಹಿಂದೆ ಮುಂದೆ ನೋಡುತ್ತಿದ್ದ ಭಾರತ ಸರಕಾರವು ಇಡೀ ಅವಧಿಯುದ್ದಕ್ಕೂ ಕದನ ವಿರಾಮಕ್ಕೆ ಪರ್ಯಾಯವಾದದ್ದನ್ನೇ ಹೇಳಿಕೊಂಡು ಬಂದಿತ್ತು. ಹೀಗಾಗಿ ಅದರ ನಿಜವಾದ ಅರ್ಥ ಒಂದು ಚಿಕ್ಕ ಕಾಲಾವಧಿಗಾಗಿ ದಮನಕಾರಿ ಕ್ರಮಗಳ ವಿರಾಮ ಎಂದಷ್ಟೇ ಆಗಿತ್ತು. ಈ ಶಾಂತಿ ಸೂಚಕ ಘೋಷಣೆಯು ಜಮ್ಮು-ಕಾಶ್ಮೀರ ರಾಜ್ಯದ ಬಹುಸಂಖ್ಯಾತ ಮುಸ್ಲಿಮರ ಪವಿತ್ರ ರಮಝಾನ್ ಮಾಸದ ಮೊದಲ ದಿನದಂದು ಘೋಷಿತವಾಗಿತ್ತು. ಅದಕ್ಕೆ ಕೆಲವೇ ದಿನಗಳ ಮುಂಚೆ ಭಾರತದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು, ರಾಜಕೀಯದಿಂದ ತಟಸ್ಥರಾಗುಳಿಯಬೇಕೆಂಬ ಸೇನೆಯ ಗೌರವಯುತ ಸಂಪ್ರದಾಯವನ್ನು ಮುರಿದು ಕಾಶ್ಮೀರದ ಬಗ್ಗೆ ತಮ್ಮ ಸೇನಾನೀತಿಯು ಏನಿರುತ್ತದೆಂಬುದನ್ನು ಸ್ಪಷ್ಟಪಡಿಸಿದ್ದರು.

‘‘ಆಝಾದಿ ಎಂಬುದು ಯಾವತ್ತಿಗೂ ಈಡೇರಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಕಾಶ್ಮೀರದ ಯುವಜನರಿಗೆ ಮನವರಿಕೆ ಮಾಡಿಕೊಡುವುದೇ ಕಾಶ್ಮೀರದಲ್ಲಿ ತಾವು ಅನುಸರಿಸಲಿರುವ ಕಾರ್ಯತಂತ್ರ’’ವೆಂದು ಅವರು ಘೋಷಿಸಿದ್ದರು. ರಾಜ್ಯದಲ್ಲಿ ಹೆಚ್ಚುತ್ತಿರುವ ಹಿಂಸಾಚಾರಗಳ ಬಗ್ಗೆ ಅವರಿಗೆ ಯಾವುದೇ ಪರಿವೆಯಿರಲಿಲ್ಲ. ಆಝಾದಿ ಹೋರಾಟಗಳಿಗೆ ಹೊಸದಾಗಿ ಮಿಲಿಟೆಂಟುಗಳು ಭರ್ತಿಯಾಗುತ್ತಿದ್ದರೂ ಅವರೆಲ್ಲರಿಗೂ ತಮ್ಮ ಹೋರಾಟ ನಿರರ್ಥಕವೆಂದು ಮನವರಿಕೆ ಮಾಡಿಕೊಡುವುದಾಗಿ ಭಾರತ ಸೇನೆಯು ಹೇಳಿತ್ತು. ಹೀಗೆ ಕಾಶ್ಮೀರಿ ಹೋರಾಟದ ಬಗ್ಗೆ ಅಪಾರ ಅಸಹನೆಯ ಹಿನ್ನೆಲೆಯ ಬಾಯಲ್ಲೇ ಸದುದ್ದೇಶದ ಮಾತುಗಳೂ ಹೊರಬಿದ್ದಿದ್ದವು. ಈ ಪೀಠಿಕೆಯೊಂದಿಗೆ ಪ್ರಾರಂಭವಾದ ರಮಝಾನ್ ಕದನ ವಿರಾಮವು ಅನುಮಾನ ಮತ್ತು ಅಸಮಧಾನಗಳಿಂದ ಸುತ್ತುವರಿದಿತ್ತು. ಕೋಲಾಹಲದಿಂದ ಕೂಡಿತ್ತು. ಶೋಪಿಯಾನ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಬೀಡುಬಿಟ್ಟಿದ್ದ ಸೇನಾ ತುಕಡಿಯು ನೀಡಿದ ಇಫ್ತಾರ್ ಕೂಟದ ಆಹ್ವಾನವನ್ನು ಗ್ರಾಮಸ್ಥರು ನಿರಾಕರಿಸಿದ್ದರಿಂದ ಅಲ್ಲಿ ಹಿಂಸಾಚಾರಗಳು ಪ್ರಾರಂಭಗೊಂಡವು. ನಂತರ ಶ್ರೀನಗರದಲ್ಲಿ ಶುಕ್ರವಾರದ ಪ್ರಾರ್ಥನೆಯ ನಂತರ ಹೊರಬಂದ ಪ್ರದರ್ಶನಕಾರರು ಎದುರಾದ ಸಿಆರ್‌ಪಿಎಫ್ ವಾಹನವೊಂದಕ್ಕೆ ಮುತ್ತಿಗೆ ಹಾಕಿದರು. ಇದರಿಂದ ಗಾಬರಿಯಾದ ಅದರ ಚಾಲಕನು ಎದುರಲ್ಲಿದ್ದ ಜನರ ಮೇಲೆ ವಾಹನವನ್ನು ಹರಿಬಿಟ್ಟಿದ್ದರಿಂದ ಒಬ್ಬರು ಸತ್ತು ಹಲವರು ಗಾಯಗೊಂಡರು. ಮರುದಿನ ಶವದ ಅಂತಿಮ ಸಂಸ್ಕರದ ವೇಳೆ ದೊಡ್ಡ ಪ್ರದರ್ಶನಗಳು ಭುಗಿಲೆದ್ದವು. ಹಿಂದಿನ ದಿನ ನಡೆದ ಘಟನೆಯ ಫೋಟೋ ಒಂದನ್ನು ಪ್ರಕಟಿಸಿದ್ದಕ್ಕಾಗಿ ‘ರೈಸಿಂಗ್ ಕಾಶ್ಮೀರ್’ನ ಸಂಪಾದಕ ಬುಖಾರಿಯವರು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರ ನಿಂದನೆಗೆ ಗುರಿಯಾದರು.

ಸಾಮಾಜಿಕ ಜಾಲತಾಣಿಗರ ಭಾಷೆಯನ್ನೇ ಬಳಸಿ ಇದಕ್ಕೆ ಟ್ವಿಟರ್‌ನಲ್ಲಿ ಉತ್ತರವಿತ್ತ ಬುಖಾರಿಯವರು ‘‘ಕಾಶ್ಮೀರವೆಂದರೆ ಕೇವಲ ನೆಲದ ತುಂಡಲ್ಲ’’ ಎಂಬ ಗ್ರಹಿಕೆಯನ್ನು ಈ ಪ್ರಕರಣಕ್ಕೂ ವಿಸ್ತರಿಸುವುದಾದರೆ ‘‘ಸಿಆರ್‌ಪಿಎಫ್ ಗೂ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಹಕ್ಕಿದೆಯೆಂಬುದನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ’’ ಎಂದು ವಿವರಿಸಿದರು. ಅವರ ಟೀಕಾಕಾರರು ತಮ್ಮ ವಿಮರ್ಶೆಗಳ ಬಗ್ಗೆ ಗಂಭೀರವಾಗಿರುವುದೇ ಆಗಿದ್ದಲ್ಲಿ ಏಕೆ ಕಾಶ್ಮೀರಿ ಯುವಕರಲ್ಲಿ ಸಾವಿನ ಭಯವೇ ಕಾಣುತ್ತಿಲ್ಲವೆಂಬುದನ್ನು ಯೋಚಿಸಬೇಕು. ಭಾರತದೊಳಗೆ ಮತ್ತು ಹೊರಗೆ ಹಾಗೂ ತಮ್ಮ ಸಂಪಾದಕೀಯ ನಿಲುವುಗಳಲ್ಲಿ ಯಥಾಸ್ಥಿತಿವಾದದ ಮಿತಿಗಳನ್ನು ದಾಟುವುದು ಮತ್ತು ಅದರ ಬಗ್ಗೆ ಸಮಾಲೋಚನೆ ಹಾಗೂ ಮನವರಿಕೆ ಮಾಡಿಕೊಡುವ ಧಾಟಿಯು ಬುಖಾರಿಯವರ ಬರಹದ ವಿಶಿಷ್ಟ ಲಕ್ಷಣವಾಗಿತ್ತು.

2016ರ ಜುಲೈ ಬಳಿಕ ಕಣಿವೆಯಲ್ಲಿ ಹಿಂಸಾಚಾರಗಳು ಮತ್ತೊಮ್ಮೆ ಭುಗಿಲೆದ್ದ ನಂತರದಲ್ಲಿ ಅವರ ಧೋರಣೆಯು ಮತ್ತಷ್ಟು ತುರ್ತು ಹಾಗೂ ಗಟ್ಟಿ ಧ್ವನಿಯನ್ನು ಪಡೆದುಕೊಳ್ಳತೊಡಗಿತ್ತು. ಭಾರತವು ಕಾಶ್ಮೀರದ ಬಗ್ಗೆ ನಡೆದುಕೊಳ್ಳುತ್ತಿದ್ದ ರೀತಿಯಲ್ಲಿ ಮತ್ತಷ್ಟು ಅನುಮಾನ ಹಾಗೂ ಆಕ್ರಮಣಗಳೇ ಪ್ರಧಾನವಾಗಿದ್ದದ್ದೂ ಸಹ ಬುಖಾರಿಯವರ ಈ ಧೋರಣೆಯಲ್ಲಿ ಬದಲಾವಣೆಯನ್ನೇನೂ ತರಲಿಲ್ಲ. ಇದೇ ಜೂನ್ 14ರಂದು ಇಫ್ತಾರ್ ಸಮಯದಲ್ಲಿ ಬುಖಾರಿಯವರು ತಮ್ಮ ಕಚೇರಿಯಿಂದ ಹೊರಬರುತ್ತಿದ್ದಾಗ ಅತ್ಯಂತ ಸನಿಹದಿಂದಲೇ ಅವರನ್ನು ಮತ್ತು ಅವರು ಇಬ್ಬರು ಅಂಗರಕ್ಷಕರನ್ನು ಹಂತಕರು ಕೊಂದು ಹಾಕಿದರು. ಇದು ಕಾಶ್ಮೀರದಲ್ಲಿದ್ದ ಅತ್ಯಂತ ಸಂಧಾನ ಮಾರ್ಗಿ ದನಿಯೊಂದನ್ನು ಶಾಶ್ವತವಾಗಿ ಅಡಗಿಸಿದ ಅತ್ಯಂತಿಕ ಕೃತ್ಯವಾಗಿತ್ತು. ಹತ್ಯೆಯ ನಂತರ ಅದರ ಬಗ್ಗೆ ಕೂಲಂಕಷ ತನಿಖೆಯಾಗಬೇಕೆಂಬ ಆಗ್ರಹಗಳೇ ಗಟ್ಟಿಯಾಗಿ ಕೇಳಬರದಿರುವುದರಲ್ಲಿ ಆಶ್ಚರ್ಯವೇನಿಲ್ಲ. ಏಕೆಂದರೆ ಕಾಶ್ಮೀರವನ್ನು ಆವರಿಸಿಕೊಳ್ಳುತ್ತಿರುವ ಅರಾಜಕ ವಾತಾವರಣದಲ್ಲಿ ಅಂಥದೊಂದು ಕ್ರಮ ಯಾರ ಪ್ರಶಂಸೆಯನ್ನೂ ಪಡೆದುಕೊಳ್ಳುವುದಿಲ್ಲ.

ನಮ್ಮ ದೇಶದ ಮಾಧ್ಯಮ ಸಂಸ್ಥೆಗಳು ಕಾಶ್ಮೀರದ ಬಗ್ಗೆ ಉಗ್ರ ದಮನದ ನೀತಿಯನ್ನು ಅನುಸರಿಸಬೇಕೆಂದು ಮಾತ್ರ ಆಗ್ರಹಿಸುತ್ತವೆ. ಹೀಗಾಗಿ ಮಾಧ್ಯಮಗಳು ಬುಖಾರಿಯವರ ಕೊಲೆಯನ್ನು ಮಾತುಕತೆಯ ನಿರರ್ಥಕತೆಯನ್ನು ಒತ್ತಿ ಹೇಳುವ ಸ್ಪಷ್ಟ ಸಂದೇಶವನ್ನಾಗಿ ವ್ಯಾಖ್ಯಾನಿಸಿದವು. ರಮಝಾನ್ ಕದನ ವಿರಾಮ ಎಷ್ಟೇ ಅರೆಬರೆಯಾಗಿದ್ದರೂ ಅದರ ಹಿಂದಿದ್ದ ಮಧ್ಯಮ ಮಾರ್ಗಿ ಧೋರಣೆಯನ್ನು ಈ ಬೆಳವಣಿಗೆಗಳು ವಿಫಲಗೊಳಿಸಿತು. ಬದಲಿಗೆ, ಈ ಹಿಂದಿನ ಐಬಿ ಮುಖ್ಯಸ್ಥರೂ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಹಾಲೀ ಭದ್ರತಾ ಸಲಹೆಗಾರರೂ ಆಗಿರುವ ಅಜಿತ್ ದೋವಲ್ ಅವರ ಹೆಸರಿನಲ್ಲಿ ಚಾಲ್ತಿಯಲ್ಲಿರುವ ನೀತಿಯೆಡೆಗೆ ಭಾರತದ ಕಾಶ್ಮೀರಿ ನೀತಿ ಸರಿಯಿತು. ದೋವಲ್ ತತ್ವವೆಂದರೆ ಕಾಶ್ಮೀರದಲ್ಲಿ ನಿರಂತರವಾದ ಮತ್ತು ಕ್ರೂರ ದಮನಕಾರಿ ನೀತಿಯನ್ನು ಅತಿ ಹೆಚ್ಚಿನ ಮಟ್ಟಿಗೆ ಜಾರಿಯಲ್ಲಿಡುವುದು. ಇಂತಹ ವಿಷಯಗಳಲ್ಲಿ ತೋರಬೇಕಾದ ಯಾವ ಸೂಕ್ಷ್ಮತೆಯನ್ನೂ ದೇಶ ತೋರಲು ಸಿದ್ಧವಿಲ್ಲವೆಂಬುದು ಅದು ಏಕಪಕ್ಷೀಯವಾಗಿ ಕದನ ವಿರಾಮವನ್ನು ಹಿಂದೆೆಗೆದುಕೊಂಡ ರೀತಿಯಲ್ಲೇ ವ್ಯಕ್ತವಾಗಿದೆ. ಇಂತಹ ಒಂದು ಕ್ರಮವು ಜಮ್ಮು-ಕಾಶ್ಮೀರದ ಮೈತ್ರಿ ಸರಕಾರದಲ್ಲಿ ಒಪ್ಪಿಗೆಯನ್ನು ಪಡೆದುಕೊಳ್ಳುವುದು ಕಷ್ಟ ಎಂದು ಬಲ್ಲ ಬಿಜೆಪಿಯು ತಾನು ಪಿಡಿಪಿಯೊಡನೆ ಮಾಡಿಕೊಂಡಿದ್ದ ಅನುಮಾನಾಸ್ಪದ ಮೈತ್ರಿಯನ್ನು ಕೊನೆಗೊಳಿಸಿ ರಾಜ್ಯವನ್ನು ಮತ್ತೊಮ್ಮೆ ರಾಜ್ಯಪಾಲರ ಆಳ್ವಿಕೆಗೆ ಒಪ್ಪಿಸಿದೆ.

ಜಮ್ಮು-ಕಾಶ್ಮೀರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯು ಜಮ್ಮು ಪ್ರಾಂತದಲ್ಲಿ ಬಹುಪಾಲು ಸ್ಥಾನಗಳನ್ನು ಗೆದ್ದುಕೊಂಡರೂ ಕಾಶ್ಮೀರದಲ್ಲಿ ಸ್ಪರ್ಧಿಸಿದ್ದ ಎಲ್ಲಾ ಕಡೆಗಳಲ್ಲಿ ಅಲ್ಲದಿದ್ದರೂ ಬಹು ಪಾಲು ಕಡೆಗಳಲ್ಲಿ ಠೇವಣಿಯನ್ನು ಸಹ ಕಳೆದುಕೊಂಡಿತ್ತು. ಆದರೂ ನಂತರ ಪಿಡಿಪಿಯೊಡನೆ ಸೇರಿ ರಚಿಸಿದ ಮೈತ್ರಿ ಸರಕಾರದ ಮೇಲೆ ತನ್ನ ಮರ್ಜಿಯನ್ನೇ ಹೇರುತ್ತಿತ್ತು. ಆದರೆ ಇದು ತದ್ವಿರುದ್ಧವಾದ ಬೆಳವಣಿಗೆಗಳಿಗೂ ದಾರಿ ಮಾಡಿಕೊಟ್ಟು ಇತರ ಕ್ಷೇತ್ರಗಳಲ್ಲಿ ಗೆಲ್ಲಬಹುದಾದ ಸಾಧ್ಯತೆಯನ್ನು ಮಸುಕುಗೊಳಿಸಿದೆ. ಭಾರತದಲ್ಲಿ ಕಾಶ್ಮೀರದ ಬಗ್ಗೆ ನಡೆಯುವ ಸಂವಾದಗಳಲ್ಲಿ ಕಾಶ್ಮೀರಿ ಭೂಭಾಗದ ಬಗ್ಗೆ ಚರ್ಚೆ ನಡೆಯುತ್ತದೆಯೇ ವಿನಃ ಕಾಶ್ಮೀರಿ ಅನನ್ಯತೆಯ ಪ್ರಶ್ನೆಗೆ ಅಲ್ಲಿ ಸ್ಥಾನವೇ ಇರುವುದಿಲ್ಲವೆಂದು ಪತ್ರಕರ್ತ ಶುಜಾತ್ ಬುಖಾರಿಯವರು ಹಲವಾರು ಬಾರಿ ಕಳವಳ ವ್ಯಕ್ತಪಡಿಸುತ್ತಿದ್ದರು. ರೂಸೋ ಅವರು ಹೇಳುವಂತೆ ‘‘ಜನರು ಎಂಬುದು ಕೇವಲ ಸಂಖ್ಯಾತ್ಮಕವಾಗಿ ಒಟ್ಟುಗೂಡಿಕೆ ಮಾತ್ರವಾಗದೆ ತಮ್ಮ ಸಾರ್ವತ್ರಿಕ ಅಭಿಲಾಷೆಯ ಮೂಲಕ ಜನತೆ ಒಂದು ಅನನ್ಯತೆಯನ್ನು ಪಡೆದುಕೊಳ್ಳುತ್ತಾರೆ’’ ಎಂಬುದು ನಿಜವಾದರೆ, ಭಾರತದಲ್ಲಿ ನಡೆಯುತ್ತಿರುವ ಹೊಸ ರಾಷ್ಟ್ರೀಯವಾದಿ ಯೋಜನೆಯಲ್ಲಿ ಕಾಶ್ಮೀರವು ಪಡೆದುಕೊಳ್ಳಬೇಕಾಗಿರುವ ಒಂದು ಭೂಭಾಗವಾಗಿದೆಯೇ ಹೊರತು ಮತ್ತೇನೂ ಆಗಿಲ್ಲ. ಅದರಲ್ಲೂ ಈಗ ಎಲ್ಲಾ ಗಮನವು ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಯತ್ತಲೇ ನೆಟ್ಟಿರುವಾಗ ಬಿಜೆಪಿಯು ಸಾರ್ವತ್ರಿಕ ಅಭಿಲಾಷೆಯ ನ್ನು ಗಟ್ಟಿಗೊಳಿಸುವುದರ ಬದಲಿಗೆ ತನ್ನನ್ನು ಚುನಾವಣೆಯಲ್ಲಿ ಗೆಲ್ಲಿಸಬಲ್ಲ ಪಾಕ್ಷಿಕ ಅಭಿಲಾಷೆಗಳಿಗೆ ಮಾತ್ರ ಮನ್ನಣೆ ನೀಡಲಿದೆ.

ಕಾಶ್ಮೀರವನ್ನು ಹೊರಗಿಡದೆ ಆಕ್ರೋಶದಲ್ಲಿರುವ ಬಹುಸಂಖ್ಯಾತ ಮನೋಭಾವದ ಪಾಕ್ಷಿಕ ಅಭಿಲಾಷೆಯನ್ನು ಗಟ್ಟಿಮಾಡಿಕೊಳ್ಳಲು ಸಾಧ್ಯವಿಲ್ಲ. ಜಗತ್ತಿನೆಲ್ಲೆಡೆ ಬಹುಸಂಖ್ಯಾತ ದುರಭಿಮಾನಿ ರಾಜಕೀಯ ವಾತಾವರಣವೇ ವ್ಯಾಪಿಸಿರುವಾಗ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಮಿಷನರ್ ಅವರು ಕಾಶ್ಮೀರದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯಗಳ ಬಗ್ಗೆ ನೀಡಿದ್ದ ಗಂಭೀರ ವರದಿಯನ್ನು ಭಾರತವು ಕಿಂಚಿತ್ತೂ ಕಾಳಜಿಯಿಲ್ಲದೆ ತಿರಸ್ಕರಿಸಿದ ಪ್ರಸಂಗವು ಯಾವ ವ್ಯತಿರಿಕ್ತ ಬೆಳವಣಿಗೆಗಳಿಗೂ ಈಡುಮಾಡಿಕೊಡಲಿಲ್ಲ. ಇದು ಪ್ರಭುತ್ವವು ಜನತೆಗೆ ತೋರಬೇಕಾದ ಉತ್ತರದಾಯಿತ್ವದಲ್ಲಿ ಆಗಿರುವ ಪತನಕ್ಕೆ ಸಂಕೇತವಾಗಿದೆ. ಕಾಶ್ಮೀರಿಗಳ ಮಟ್ಟಿಗೆ ಇದು ಮುಂದೆ ಎದುರಿಸಬೇಕಿರುವ ಅಪಾರ ವಿಪತ್ತುಗಳ ಮುನ್ಸೂಚನೆಯೂ ಆಗಿದೆ.

ಕೃಪೆ: Economic and Political Weekly

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top