ಅರೆಭಾಷೆ ಸಬಲೀಕರಣದ ಸುತ್ತ ಮುತ್ತ

ಭಾಗ 3

ಮೂಲತಃ ಉಪಭಾಷೆ ಎಂಬ ಪದವು ಗ್ರೀಕ್ ಮೂಲದ ಡಯಲೆಕ್ಟ್ ಪದಕ್ಕೆ ಸಂವಾದಿಯಾಗಿ ಸೃಷ್ಟಿಯಾಗಿದೆ. 16ನೇ ಶತಮಾನದ ಇಂಗ್ಲಿಷ್ ವಿದ್ವಾಂಸರು ಈ ಪದವನ್ನು ಶಿಷ್ಟೇತರ ಜನ ಅಥವಾ ಅವಿದ್ಯಾವಂತರು ಆಡುವ ಭಾಷಾ ಪ್ರಭೇದ ಎಂಬರ್ಥದಲ್ಲಿ ಬಳಸಿದ್ದಾರೆ. ಉಪಭಾಷೆಯೆಂದಾಗ ಪ್ರಧಾನಭಾಷೆಯೊಂದಿದೆ ಎನ್ನುವ ಅರ್ಥ ತಾನೇ ತಾನಾಗಿ ಬರುತ್ತದೆ. ಸ್ಥೂಲವಾಗಿ ನೋಡಿದಾಗ ಅರೆಭಾಷೆಗೆ ಕನ್ನಡ ಪ್ರಧಾನ ಭಾಷೆಯೇ ಹೌದು . ಆದರೆ ಸೂಕ್ಷ್ಮವಾಗಿ ನೋಡಿದಾಗ ಅರೆಭಾಷೆಯು ಸುಳ್ಯ ಪರಿಸರದ ಬೇರೆ ಬೇರೆ ಭಾಗಗಳು, ಬೆಟ್ಟಗಳು, ಹಳ್ಳಗಳು, ದಟ್ಟವಾದ ಕಾಡು ಇತ್ಯಾದಿ ಪ್ರಾಕೃತಿಕ ಕಾರಣಗಳಿಂದ ಚಾರಿತ್ರಿಕವಾಗಿ ತುಂಬ ಬೇರೆಯಾಗಿಯೇ ಬೆಳೆದಿದೆ. ಇಲ್ಲಿಯ ಜನರಿಗೆ ಇತರೆಡೆಯ ವಿಭಾಗಗಳಲ್ಲಿನ ಜನರ ಸಂಪರ್ಕ ಬಹಳ ಕಡಿಮೆ ಇದ್ದುದರಿಂದ ಅರೆಭಾಷೆಯಯಲ್ಲಿನ ವಿಲಕ್ಷಣಗಳು ಹೆಚ್ಚುತ್ತಾ ಹೋಗಿ, ಉಪ ಭಾಷೆಯಲ್ಲಿನ ಗುಣಗಳನ್ನು ಕಳಕೊಳ್ಳುತ್ತಾ ಬೆಳೆದಿದೆ. ಮತ್ತು ಸ್ವತಂತ್ರ ಭಾಷೆಯ ಲಕ್ಷಗಳಿಗೆ ಮೈಗೊಟ್ಟಿದೆ. ಹಾಗೆ ನೋಡಿದರೆ ಅರೆಭಾಷೆಯು ಕನ್ನಡದ ಮೂಗಿನಡಿಗೆ ನೇರವಾಗಿ ಬಂದು ನೂರು ವರುಷಗಳಿಗಿಂತ ಹೆಚ್ಚು ಆದ ಹಾಗೆಯೇ ಇಲ್ಲ. ಅರೆ ಭಾಷೆಯನ್ನು ಪ್ರಧಾನವಾಗಿ ಆಡುವ ಗೌಡರು ಸುಳ್ಯ ಪರಿಸರಕ್ಕೆ ಬಂದು 600 ವರ್ಷಗಳಿಗಿಂತ ಹೆಚ್ಚಾಗಿಲ್ಲ. ಹಾಗೆ ವಲಸೆ ಬಂದಾಗ ಇಲ್ಲಿದ್ದ ಮಲೆಕುಡಿಯರಾಗಲೀ, ದಲಿತರಾಗಲೀ ಮಾತಾಡುತ್ತಿದ್ದುದು ತುಳುವನ್ನೇ. ಆನಂತರದ ಕಾಲದಲ್ಲಿ ಆಡಳಿತಾತ್ಮಕವಾಗಿ ಅದು ಕೊಡಗು ಮತ್ತು ತುಳುನಾಡಿನ ನಡುವೆ ಓಲಾಡುತ್ತಿದ್ದರೂ ಭೌಗೋಳಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಅದು ತುಳುನಾಡಿನ ಭಾಗವೇ ಆಗಿತ್ತು. ಅರೆಭಾಷಿಕರು ಬಹಳ ಕಾಲ ತಮ್ಮ ತಮ್ಮಲ್ಲೇ ಹೆಚ್ಚಾಗಿ ವ್ಯವಹಾರಗಳನ್ನು ನಡೆಸುತ್ತಾ ಬಂದಿರುವುದರಿಂದ ಆ ಭಾಷೆಯು ತನ್ನ ವಿಶಿಷ್ಟತೆಯನ್ನು ಬೆಳೆಸಿಕೊಂಡೇ ಬಂದಿದೆ. ಇದರಿಂದಾಗಿ ಅರೆಭಾಷೆಯಲ್ಲಿ ಉಪಭಾಷೆಯ ಲಕ್ಷಣಗಳಿಗಿಂತ ಹೆಚ್ಚಾಗಿ ಸ್ವತಂತ್ರ ಭಾಷೆಯ ಲಕ್ಷಣಗಳೇ ಹೆಚ್ಚು ಕಾಣಿಸುತ್ತವೆ. ಕೋಟ, ಕೊಡವ, ಮುಂಡ, ತೋಡ, ಕುಇ, ನಾಯ್ಕಿ, ಗದಬ ಮೊದಲಾದ ಭಾಷೆಗಳು ಸ್ವತಂತ್ರ ದ್ರಾವಿಡ ಭಾಷೆಗಳೇ ಹೌದಾಗಿದ್ದರೆ ಬಹುಶಃ ಅರೆಭಾಷೆಯೂ ಒಂದು ಸ್ವತಂತ್ರಭಾಷೆಯೇ ಹೌದು. ಜಾನಪದ ಅಧ್ಯಯನಗಳ ಆರಂಭಿಕ ಹಂತದಲ್ಲಿ ನಾವು ಪಾಠಾಂತರ ಎಂಬ ಪದವನ್ನು ಬಳಸುತ್ತಿದ್ದೆವು. ಅಂದರೆ ಯಾವುದೋ ಒಂದು ಮೂಲ ಪಾಠದಿಂದ ಸಿಡಿದು ಪ್ರತ್ಯೇಕಗೊಂಡ ಪಾಠ ಇರಬೇಕು ಎಂಬರ್ಥದಲ್ಲಿ ಆ ಪದ ಬಳಕೆಯಾಗುತ್ತಿತ್ತು. ಆದರೆ ಈಗ ನಾವು ಎಲ್ಲಾ ಪಠ್ಯಗಳನ್ನೂ ಸ್ವತಂತ್ರ ಪಠ್ಯಗಳೆಂದೇ ಕರೆಯುತ್ತೇವೆ. ಹಾಗೆಯೇ ಭಾಷೆಯ ಕುರಿತೂ ನಾವು ಹೊಸ ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾಗಿದೆ. ಮುಖ್ಯ ಹಾಗೂ ಸ್ವತಂತ್ರ ಭಾಷೆಗಳೇ ಪತನಮುಖಿಯಾಗುತ್ತಿರುವ ಇಂದಿನ ಸಂದರ್ಭಗಳಲ್ಲಿ ಉಪಭಾಷೆಗಳನ್ನು ಯಾರು ಕೇಳುತ್ತಾರೆ. ಹಾಗಾಗಿ ಈ ಕುರಿತು ನಮ್ಮ ಸಂಶೋಧನೆಗಳು ಇನ್ನಷ್ಟು ಮುಂದುವರಿಯಬೇಕು. ಪ್ರಾಚೀನ ಗ್ರೀಸ್‌ನಲ್ಲಿ ಇದ್ದ ನಾಲ್ಕು ಉಪಭಾಷೆಗಳಲ್ಲಿ ರಾಜಕೀಯ ಕಾರಣಗಳಿಂದಾಗಿ ಅಥೆನ್ಸಿನ ಭಾಷೆ ಪ್ರಬಲವಾಗಿ, ಶಿಷ್ಟಭಾಷೆಯೆನಿಸಿಕೊಂಡಿತು. ಈಗಿನ ಇಟಾಲಿಯನ್ ಭಾಷೆ ಹಿಂದೆ ರೋಮ್ ನಗರದ ಸುತ್ತ ಮುತ್ತ ಆಡುತ್ತಿದ್ದ ಲ್ಯಾಟಿನ್ನಿನ ಒಂದು ಉಪಭಾಷೆಯೇ ಆಗಿತ್ತು. ಇಂಗ್ಲೆಂಡಿನಲ್ಲಿ ಲಂಡನ್ ಮತ್ತು ಆಕ್ಸಫರ್ಡ್ ಇಂಗ್ಲಿಷ್ ಭಾಷೆಯೇ ಶಿಷ್ಟಭಾಷೆಯೆನಿಸಿಕೊಂಡಿದೆ. ಹೀಗೆ ರಾಜಕೀಯ ಅಥವಾ ಸಾಂಸ್ಕೃತಿಕ ಕಾರಣಗಳಿಂದಾಗಿ ಒಂದು ಪ್ರದೇಶದ ಭಾಷೆ ಮೇಲ್ಮೆಯನ್ನು ಪಡೆಯುತ್ತದೆ. ಈ ಅಂಶವನ್ನು ಅರೆಭಾಷಿಕರು ಯಾವತ್ತೂ ಮರೆಯಬಾರದು.

ಸಮಾರೋಪ:

ಸುಳ್ಯ ಪರಿಸರದ ಗೌಡ ಸಮುದಾಯದ ಪ್ರಧಾನ ಭಾಷೆ ಅರೆಭಾಷೆ. ಹಾಗಂತ ಎಲ್ಲ ಗೌಡರೂ ಅರೆಭಾಷೆ ಮಾತಾಡುತ್ತಾರೆ ಎಂದೇನೂ ಅಲ್ಲ. ತುಳು ಮಾತಾಡುವ ಗೌಡರೂ ಇದ್ದಾರೆ. ಅರೆಭಾಷೆಯು ಗೌಡರಿಗೆ ಸೀಮಿತವಾಗಿದೆ ಎಂದೂ ಭಾವಿಸಬೇಕಾಗಿಲ್ಲ. ದಲಿತರು, ಮಲೆಕುಡಿಯರು, ಮುಸಲ್ಮಾನರು, ಬ್ರಾಹ್ಮಣರು ಮತ್ತಿತರರು ಕೂಡಾ ಈ ಭಾಷೆಯನ್ನು ಅಗತ್ಯ ಬಿದ್ದಾಗ ಮಾತಾಡುತ್ತಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ ಈ ಭಾಷೆಗೆ ‘ಗೌಡ ಕನ್ನಡ’ ಎಂಬ ಅಧಿಕೃತ ಹೆಸರನ್ನು ಪ್ರೊ. ಎಂ. ಮರಿಯಪ್ಪ ಭಟ್ಟರು ಮೊದಲು ಬಳಕೆಗೆ ತಂದರು (ಕುಶಾಲಪ್ಪ ಗೌಡ 1967) ಇದರಿಂದ ಆನಂತರದ ಶಾಸ್ತ್ರೀಯವಾದ ಅಧ್ಯಯನಗಳಲ್ಲೆಲ್ಲ ಅರೆಭಾಷೆಯನ್ನು ಗೌಡ ಕನ್ನಡವೆಂದೇ ಗುರುತಿಸಲಾಗಿದೆ. ಈ ಭಾಷೆಯ ಬಗೆಗೆ ಮೊದಲ ಬಾರಿಗೆ ವೈಜ್ಞಾನಿಕ ಅಧ್ಯಯನ ನಡೆಸಿದ ಪ್ರೊ. ಕೆ. ಕುಶಾಲಪ್ಪ ಗೌಡರು ‘ಗೌಡ ಕನ್ನಡ’ ಎಂಬ ಹೆಸರನ್ನೇ ಉಳಿಸಿಕೊಂಡಿದ್ದಾರೆ. (Kushalappa Gowda;1970). ಆದರೆ ಜನರ ನಡುವೆ ಇವತ್ತಿಗೂ ಉಳಿದುಕೊಂಡಿರುವ ಪದವೆಂದರೆ ಅರೆಭಾಷೆಯೇ ಆಗಿದೆ. ಈ ಪದವನ್ನೂ ಕೂಡಾ ಬೇರ್ಯಾರೋ, ಯಾವುದೋ ಕಾಲಘಟ್ಟದಲ್ಲಿ ಬಳಕೆಗೆ ತಂದಂತೆ ತೋರುತ್ತದೆ. ಏಕೆಂದರೆ ಈ ಭಾಷೆಯನ್ನು ಬಳಸುವವರಿಗೆ ಇದು ‘ಅರೆ ಅಥವಾ ಅರ್ಧ ಭಾಷೆ ಆಗಿರಲು ಸಾಧ್ಯವಿಲ್ಲ. ನಾ ಹೋನೆ, ನಾ ಬನ್ನೆ, ನಾ ಕುದ್ದನೆ, ನೀ ಹೋಕು, ಅಂವ ಬಾಕು’, ಮೊದಲಾದ ವಾಕ್ಯಗಳು ಅದನ್ನು ಬಳಸುವವರಿಗೆ ಪೂರ್ಣ ಅರ್ಥ ಕೊಡುವ ವಾಕ್ಯಗಳೇ ಆಗಿದ್ದು ಅದರಲ್ಲಿ ಸಮಸ್ಯೆ ಏನೂ ಇಲ್ಲ. ಇದು ಹೌದಾದರೆ, ಕನ್ನಡ ಮಾತಾಡುವ ಅಧಿಕಾರಿಗಳು ಯಾರೋ ಈ ಭಾಷೆಯನ್ನು ಕನ್ನಡದೊಡನೆ ಹೋಲಿಸಿ, ಇದನ್ನು ಅರೆಭಾಷೆ ಅಥವಾ ಅರೆ ಕನ್ನಡ ಎಂದು ಕರೆದಿರುವ ಸಾಧ್ಯತೆಯೇ ಹೆಚ್ಚು. ನನ್ನ ಪ್ರಕಾರ ಇದು 1871ರಲ್ಲಿ ಮೈಸೂರಿನಲ್ಲಿ ನಡೆದ ಮೊದಲ ಜನಗಣತಿಯ ಸಂದರ್ಭದಲ್ಲಿ ನಡೆದಿದೆ. ಎ.ಡಬ್ಲ್ಯೂ.ಸಿ. ಲಿಂಡ್ಸೆ ಹಾಗೂ ಅಂದಿನ ದಿವಾನರಾಗಿದ್ದ ಸಿ. ರಂಗಾಚಾರಿಯವರು ಇದನ್ನು ಅರೆ ಕನ್ನಡವೆಂದು ಕರೆದಿರುವ ಬಗ್ಗೆ ಕೆಲವು ಸೂಚನೆಗಳಿವೆ. ಈ ನಿಟ್ಟಿನಲ್ಲಿ ನಮ್ಮ ಸಂಶೋಧನೆಗಳು ಇನ್ನಷ್ಟು ಮುಂದುವರಿಯಬೇಕಾಗಿದೆ. ಉಳಿದಂತೆ ಕರಾವಳಿಯಲ್ಲಿ ವ್ಯಾಪಕವಾಗಿ ಕೆಲಸ ಮಾಡಿದ ಮಿಶನರಿಗಳಾಗಲೀ, ವಸಾಹತು ಕಾಲದ ಅಧಿಕಾರಿಗಳಾಗಲಿ, ಆ ಕಾಲದಲ್ಲಿ ತಯಾರಾದ ಗಜೆಟಿಯರ್‌ಗಳಲ್ಲಾಗಲಿ ಅರೆ ಭಾಷೆಯ ಬಗ್ಗೆ ಉಲ್ಲೇಖಗಳೇ ಇಲ್ಲ. ಶೈಕ್ಷಣಿಕ ವಲಯಗಳಲ್ಲಿ ಇದೀಗ ಈ ಭಾಷೆಯನ್ನು ಅರೆಭಾಷೆಯೆಂದೂ, ಅರೆಬಾಸೆಯೆಂದೂ ಕರೆಯುತ್ತಿದ್ದೇವೆ. ಪ್ರೊ.ಕುಶಾಲಪ್ಪ ಗೌಡರು ಸರಿಯಾಗಿಯೇ ಗುರುತಿಸಿದಂತೆ ಈ ಭಾಷೆಯಲ್ಲಿ ಕೇವಲ ‘ಸ’ ಇದೆ, ‘ಶ’ ಮತ್ತು ‘ಷ’ ಇಲ್ಲ. ‘ಅವಂಗೆ ಬಾಸೆ ಉಟ್ಟಯಾ? ಬಾಸೆ ಇಲ್ಲದಂವ’ ಎಂಬಂಥ ಪ್ರಯೋಗಗಳಲ್ಲಿಯೂ ಸ ಇದೆ. ಮಹಾಪ್ರಾಣವಂತೂ ಇಲ್ಲ. ಇದನ್ನು ಗಮನಿಸಿದರೆ ಸದ್ಯಕ್ಕೆ ‘ಅರೆಬಾಸೆ’ ಎಂಬ ಪದವೇ ಸೂಕ್ತವಾಗಿರುವಂತೆ ತೋರುತ್ತದೆ. ಹೆಸರಿನ ಈ ಗೊಂದಲವನ್ನೂ ನಾವೀಗ ಪರಿಹರಿಸಿಕೊಳ್ಳಬೇಕಾಗಿದೆ.

ಅರೆಬಾಸೆಯ ಸ್ಥೂಲ ಸ್ವರೂಪ:

ಪ್ರಸ್ತುತ ಲೇಖನದ ಆರಂಭದಲ್ಲಿ ಹೇಳಿದಂತೆ, ಅರೆಬಾಸೆಯಲ್ಲಿ ಅತಿ ಪ್ರಾಚೀನ ಪದಗಳಿವೆ. ಇದರ ಅಖ್ಯಾತ ವಿಭಕ್ತಿಗಳ ಪ್ರಸರಣವನ್ನು ಗಮನಿಸಿಕೊಂಡು, ಅರೆಬಾಸೆಯು ಉತ್ತರ ದ್ರಾವಿಡ ಭಾಷಾ ಗುಂಪಿಗೆ ಸೇರಿದ ಬ್ರಾಹೂಯಿಯ ಆನಂತರದ ಸ್ಥಾನವನ್ನು ಪಡೆಯುತ್ತದೆಂದು ಖ್ಯಾತ ವಿದ್ವಾಂಸ ಎಸ್.ಎ. ಷಣ್ಮುಗಂ ಅವರು ಅಭಿಪ್ರಾಯಪಟ್ಟಿದ್ದಾರೆ. (Shanmugam : 1922)

ಅದೇನೇ ಇದ್ದರೂ ಈ ಭಾಷೆಯು ಧ್ವನಿ, ವ್ಯಾಕರಣ, ಪದಕೋಶ ಮುಂತಾದ ನೆಲೆಗಳಲ್ಲಿ ತನ್ನದೇ ಆದ ಕೆಲವು ವೈಶಿಷ್ಟಗಳನ್ನು ತೋರಿಸುತ್ತಿರುವುದು ಮಹತ್ವದ ವಿಚಾರವಾಗಿದೆ. ಈ ನಿಟ್ಟಿನಲ್ಲಿ ಪ್ರೊ.ಕುಶಾಲಪ್ಪ ಗೌಡರು ( 1970) ಮಾಡಿದ ಕೆಲಸವು ಅಸಾಮಾನ್ಯವಾದುದು. 14 ಸ್ವರಗಳು ಮತ್ತು 22 ವ್ಯಂಜನಗಳನ್ನು ಧ್ವನಿಮಾಗಳೆಂದು ನಿರ್ಧರಿಸಿರುವ ಅವರು ಶಿಷ್ಟ ಕನ್ನಡದಲ್ಲಿಲ್ಲದ ಆದರೆ ಅರೆಬಾಸೆಯಲ್ಲಿ ಮಾತ್ರ ಕಾಣ ಸಿಗುವ ಮಧ್ಯೋನ್ನತ ( ಉದಾ : ಅಡ್ಕೆಸ, ಅಗ್ಟೆನ, ಚಗ್ ಟೆ, ಅವ್ ಕೆ ಇತ್ಯಾದಿ) ಮಧ್ಯ ಮಧ್ಯ (ಉದಾ : ಕ್ ಯಿ, ನ್ಡಿ, ಗ್ ಂಡ್ ಇತ್ಯಾದಿ), ಪೂರ್ವ ನಿಮ್ನ ( ಉದಾ : ಎಮ್ಮೆ, ತಂಗೆ, ಬಾವೆ, ಹೆಬಗ ಇತ್ಯಾದಿ), ಪಶ್ಚ ನಿಮ್ನ ( ಉದಾ : ಒಳೊ, ಕೋಟೆ, ನೋಡೊಮೊ ಇತ್ಯಾದಿ) ಸ್ವರಗಳನ್ನು ಗುರುತಿಸಿದ್ದಾರೆ. ಮಧ್ಯೋನ್ನತ, ಮಧ್ಯ ಮಧ್ಯ, ಪೂರ್ವ ನಿಮ್ನ, ಪಶ್ಚ ನಿಮ್ನಗಳಿಗೆ ಅರೆ ಬಾಸೆಯಲ್ಲಿ ದೀರ್ಘ ರೂಪಗಳಿಲ್ಲ.

ವ್ಯಂಜನಗಳಲ್ಲಿ ‘ಙ’ ಮತ್ತು ‘ಞ’ಗಳು ಅರೆ ಭಾಷೆಯಲ್ಲಿ ಧ್ವನಿಮಾಗಳಾಗಿಯೇ ಉಳಿದಿರುವುದೊಂದು ವಿಶೇಷವೇ ಸರಿ. ಮಙ, ಕುಞ, ಇತ್ಯಾದಿ. ಇದಕ್ಕೂ ಮಿಗಿಲಾಗಿ ಇವಕ್ಕೆ ದ್ವಿತ್ವ ರೂಪವೂ ಇದೆ. ಉದಾ: ಮಙ್ಙಣೆ, ಅಙ್ಙಣ, ಹಞ್ಞ , ಮುಳ್ಳುಙ್ಙ ಇತ್ಯಾದಿ

ವ್ಯಂಜನಗಳಲ್ಲಿ ಇವತ್ತಿಗೂ ಅನುನಾಸಿಕಗಳು ಉಳಿದು ಕೊಂಡಿರುವುದು ಕೂಡಾ ವಿಶೇಷವೇ ಆಗಿದೆ. ಉದಾ: ತಾಂಗ್, ಬೇಂಕೆ, ನೂಂಕು ಇತ್ಯಾದಿ ವ್ಯಾಕರಣ ರಚನೆಯನ್ನು ಗಮನಿಸಿದರೆ, ಪ್ರಥಮ ಪುರುಷ ಸರ್ವನಾಮದಲ್ಲಿ ಪುಲ್ಲಿಂಗ ಮತ್ತು ನಪುಂಸಕ ಲಿಂಗ, ಎಂಬ ಎರಡು ವ್ಯತ್ಯಾಸ ಮಾತ್ರ ಕಂಡು ಬರುತ್ತದೆ. ಸ್ತ್ರೀ ಲಿಂಗಕ್ಕೆ ಪ್ರತ್ಯೇಕ ರೂಪ ಇಲ್ಲ. ಬಹುವಚನದಲ್ಲಿ ಪುಲ್ಲಿಂಗ ಮತ್ತು ನಪುಂಸಕ ಲಿಂಗಕ್ಕೆ ವ್ಯತ್ಯಾಸ ಇಲ್ಲ. ಕ್ರಿಯಾಪದಗಳಲ್ಲಿ ವಿಶೇಷವಾಗಿ ಅರೆಬಾಸೆಯು ಮೂರು ಕಾಲಕ್ಕೂ ಪ್ರತ್ಯೇಕ ರೂಪಗಳನ್ನು ಹೊಂದಿರುವುದು ನಿಜಕ್ಕೂ ಅಚ್ಚರಿಯ ವಿಷಯವಾಗಿದೆ. (ಏಕೆಂದರೆ ಹೆಚ್ಚಿನ ಕನ್ನಡದಲ್ಲಿ ಎರಡೇ ಕಾಲವನ್ನು ಸೂಚಿಸುವ ಕ್ರಿಯಾಪದಗಳಿವೆ. ಪೂರ್ಣ ಕ್ರಿಯಾಪದಗಳಲ್ಲಿ ವರ್ತಮಾನದ ರೂಪವೇ ಭವಿಷ್ಯತ್ತಿನ ಅರ್ಥದಲ್ಲಿ ಬಳಕೆಯಾಗುತ್ತದೆ. ಅರೆಬಾಸೆಯ ಈ ಅಪೂರ್ವ ಗುಣದ ಬಗ್ಗೆ ಇನ್ನಷ್ಟು ಅಧ್ಯಯನ ನಡೆಯಬೇಕಾಗಿದೆ. ಒಟ್ಟಿಂದ ಈ ಭಾಷೆಯ ಅನನ್ಯ ಗುಣಗಳನ್ನು ಹೀಗೆ ಸಂಗ್ರಹಿಸಿಕೊಡಬಹುದು-

1.ಕನ್ನಡದಲ್ಲಲ್ಲದೆ ನಾಲ್ಕು ಸ್ವರಗಳು ಗೌಡ ಕನ್ನಡದಲ್ಲಿ ಧ್ವನಿಮಾಗಳಾಗಿವೆ.

2.ಙ ಮತ್ತು ಞ ಗಳು ಗೌಡ ಕನ್ನಡದಲ್ಲಿ ಇನ್ನೂ ಉಳಿದುಕೊಂಡು ಬಂದಿವೆ.

3.ಸಂಯುಕ್ತ ವ್ಯಂಜನಗಳ ಬಾಹುಳ್ಯದಿಂದಾಗಿ ಗೌಡ ಕನ್ನಡದಲ್ಲಿ ಮಿತವ್ಯಯ ಸಾಧಿತವಾಗಿದೆ.

4.ಹಳಗನ್ನಡದಿಂದ ಮರೆಯಾಗಿ ಹೋದ ಲಾಂತ ಶಬ್ದಗಳು ಅರೆಬಾಸೆಯಲ್ಲಿ ಇನ್ನೂ ಉಳಿದುಕೊಂಡಿದೆ.

5.ಸಪ್ತಮಿ ವಿಭಕ್ತ್ಯರ್ಥದಲ್ಲಿ ಪ್ರಯೋಗವಾಗುವ ‘ಹಕ್ಕಲೆ’ ರೂಪದ ಪ್ರಯೋಗ ಕನ್ನಡದಲ್ಲಿ ಸಿಗದ ಪ್ರಾಚೀನ ದ್ರಾವಿಡ ರೂಪವಾಗಿದೆ.

6.ಭೂತ, ಭವಿಷ್ಯತ್, ವರ್ತಮಾನ ಕಾಲವನ್ನು ಸೂಚಿಸುವ ಪ್ರತ್ಯೇಕವಾದ ಕ್ರಿಯಾಪದ ರೂಪಗಳು ಅರೆಬಾಸೆಯಲ್ಲಿವೆ.

7.ಲಿಂಗ ನಿರ್ದೇಶನದ ವ್ಯವಸ್ಥೆಯಲ್ಲಿ ಅರೆಬಾಸೆಯು ದ್ರಾವಿಡ ಭಾಷೆಗಳಲ್ಲಿ ಬ್ರಾಹುಯಿಯ ಅನಂತರದ ಬೆಳವಣಿಗೆಯನ್ನು ಸೂಚಿಸುತ್ತದೆ. ಅರೆಭಾಷೆಯಂತಹ ಭಾಷೆಯೊಂದು ಸಬಲೀಕರಣಗೊಳ್ಳಲು ಮೊದಲು ಅದು ತನ್ನ ಸಾಂಪ್ರದಾಯಿಕ ಗಡಿಗಳನ್ನು ದಾಟಬೇಕು. ಜನರು ಶಿಕ್ಷಣ, ವ್ಯಾಪಾರ, ಸಾಮಾಜಿಕ ಜಾಲತಾಣ, ಅಭಿವೃದ್ಧಿ ಚಟುವಟಿಕೆಗಳು ಧಾರ್ಮಿಕ ಚಟುವಟಿಕೆಗಳು ಮತ್ತು ಮಾಧ್ಯಮಗಳಲ್ಲಿ ನಿಸ್ಸಂಕೋಚವಾಗಿ ಉಪಯೋಗಿಸಬೇಕು. ಅರೆ ಭಾಷೆಯಲ್ಲಿ ಪಠ್ಯ ಪುಸ್ತಕಗಳು ರಚನೆಯಾಗಬೇಕು. ಬೇರೆ ಜಾತಿಯ ಜನರು ಈ ಭಾಷೆಯನ್ನು ಆಡಿದರೆ ಅವರಿಗೆ ಸೂಕ್ತ ಮನ್ನಣೆಯೋ ಗೌರವವೋ ದೊರೆಯಬೇಕು. ಮದುವೆ ಮೊದಲಾದ ಸಾಮಾಜಿಕ ಆಚರಣೆಗಳಲ್ಲಿ ಕನ್ನಡ ಅಥವಾ ಸಂಸ್ಕೃತದ ಪ್ರವೇಶ ನಿಲ್ಲಬೇಕು. ಸುದ್ದಿ ವಾಹಿನಿಗಳಲ್ಲಿ ಅರೆ ಭಾಷೆಗೆ ಅವಕಾಶ ಇರಬೇಕು. 24,000 ಜನರಿರುವ ಸಂಸ್ಕೃತದಲ್ಲಿ ವಾರ್ತೆ ಪ್ರಸಾರ ಆಗಬಹುದಾದರೆ, ಲಕ್ಷಾಂತರ ಜನ ಮಾತಾಡುವ ಅರೆ ಭಾಷೆಯಲ್ಲಿ ಸುದ್ದಿ ಪ್ರಸಾರ ಯಾಕೆ ಆಗಬಾರದು. ನೈಜೀರಿಯಾದ ಭಾಷಾ ಶಾಸ್ತ್ರಜ್ಞನಾದ ಉವಾಜೆಯು ವಾದಿಸಿದಂತೆ ಮೊದಲು ಸಣ್ಣ ಭಾಷೆಗಳಲ್ಲಿ ಬೌದ್ಧಿಕ ಚಟುವಟಿಗೆಳು ಹೆಚ್ಚು ಹೆಚ್ಚು ನಡೆಯಬೇಕು. ಇಂದು ಆಫ್ರಿಕಾದ ಯೊರುಬಾದಂಥ ಭಾಷೆಯು ಮತ್ತೆ ಶಕ್ತಿಶಾಲಿಯಾಗಿ ಬೆಳೆಯಲು ಆ ಭಾಷೆಯ ಮೊದಲ ಪ್ರಾಧ್ಯಾಪಕ ಅಕಿನ್ವುಮಿ ಇಸೋಲಾ ಮಾಡಿದ ಕೆಲಸಗಳು ಕಾರಣ. ಹೀಗೆಯೇ ಅರೆ ಭಾಷೆಯಲ್ಲಿಯೂ ಸೃಜನಶೀಲ ಕೃತಿಗಳು ಬರಬೇಕು. ಸುಳ್ಯದ್ದೇ ಆದ ಬೆಟ್ಟದ ಜೀವ, ಸ್ವಾಮಿ ಅಪರಂಪರ, ಕಲ್ಯಾಣಸ್ವಾಮಿ ಮೊದಲಾದ ಕೃತಿಗಳು ಅರೆ ಭಾಷೆಗೆ ಅನುವಾದವಾಗಬೇಕು. ಇಂಥ ಅನುವಾದಗಳು ಅರೆ ಭಾಷೆಯ ಸತ್ವವನ್ನು ಹೆಚ್ಚಿಸುತ್ತವೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top