---

ಎರಡನೇ ಮಹಾಯುದ್ಧ ಮತ್ತದರ ಜಾಗತಿಕ ಪರಿಣಾಮಗಳು

ಎರಡನೇ ವಿಶ್ವ ಯುದ್ಧದ ನಂತರ ಜಾಗತಿಕವಾಗಿ ಹಲವು ಮಹತ್ತರ ಬೆಳವಣಿಗೆಗಳು ನಡೆದವು. ಅವುಗಳಲ್ಲಿ ಒಂದು ಬ್ರಿಟನ್ ಸಾಮ್ರಾಜ್ಯಶಾಹಿ ತನ್ನ ಬಹುತೇಕ ವಸಾಹತುಗಳನ್ನು ಕಳೆದುಕೊಂಡು ಸೂರ್ಯ ಮುಳುಗುವ ಸಣ್ಣ ಸಾಮ್ರಾಜ್ಯವಾಯಿತು. ಚೀನಾದಲ್ಲಿ ಅಲ್ಲಿನ ಕಮ್ಯುನಿಸ್ಟ್ ಪಕ್ಷದ ನೇತೃತ್ವದಲ್ಲಿ ಅಂತರ್ಯುದ್ಧ ನಡೆದು ಕ್ರಾಂತಿಯಾಗಿ ನವ ಪ್ರಜಾತಾಂತ್ರಿಕ ವ್ಯವಸ್ಥೆ ಸ್ಥಾಪನೆಯಾಯಿತು. ಸೋವಿಯತ್ ರಶ್ಯಾದ ಜಾಗತಿಕ ಪ್ರಭಾವ ಹೆಚ್ಚಾಯಿತು. ಜಪಾನ್ ಕೂಡ ತನ್ನ ವಸಾಹತುಗಳನ್ನು ಕಳೆದುಕೊಂಡು ಹಲವು ನಿರ್ಬಂಧಗಳಿಗೆ ಒಳಗಾಗಿ ಬಲಹೀನ ಸ್ಥಿತಿಗೆ ಇಳಿಯಿತು. ಅಮೆರಿಕ ಆರ್ಥಿಕವಾಗಿ ರಾಜಕೀಯವಾಗಿ ಮತ್ತಷ್ಟು ಬಲಾಢ್ಯವಾಯಿತು.


ಜಾಗತಿಕ ಬಂಡವಾಳಶಾಹಿ ಶಕ್ತಿಗಳು ಏನೆಲ್ಲಾ ತಿಪ್ಪರಲಾಗ ಹಾಕಿ ಪ್ರಯತ್ನಿಸಿದರೂ ಜಾಗತಿಕ ಬಿಕ್ಕಟ್ಟು ದಿನೇ ದಿನೇ ತೀವ್ರಗೊಳ್ಳುತ್ತಾ ಹೋಯಿತೇ ವಿನಹ ಕಡಿಮೆಯಾಗಲಿಲ್ಲ. ಮೊದಲ ವಿಶ್ವ ಯುದ್ಧ ಮುಗಿದು ಕೆಲವೇ ವರ್ಷಗಳಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟು ಆರಂಭ. ಮೊದಲ ವಿಶ್ವ ಯುದ್ಧದ ಸಮಯದಲ್ಲಿ ಜರ್ಮನಿ ವರ್ಸೈಲ್ಸ್ ಒಪ್ಪಂದಕ್ಕೆ ಒಳಪಟ್ಟಿದ್ದರಿಂದ ಜನರು ತೀವ್ರ ರೀತಿಯ ಸಂಕಷ್ಟಗಳಿಗೆ ಗುರಿಯಾಗಿದ್ದರು. ಕಾರಣ ಆ ಒಪ್ಪಂದ ಜರ್ಮನಿಯ ಮೇಲೆ ತೀವ್ರ ನಿರ್ಬಂಧಗಳನ್ನು ಹೇರಿದ್ದಲ್ಲದೆ, ಭರಿಸಲಾಗದ ದಂಡವನ್ನೂ ಹೇರಲಾಗಿತ್ತು. ಸೇನಾ ನಿರ್ಮಾಣ ಹಾಗೂ ಶಸ್ತ್ರಾಸ್ತ್ರ ಸಂಗ್ರಹಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಅಲ್ಲದೆ ತನ್ನ ಮೊದಲಿನ ಭೂಪ್ರದೇಶಗಳನ್ನೂ ಬಿಟ್ಟುಕೊಡಬೇಕಾಗಿ ಬಂದಿತ್ತು. ಭಾರೀ ಸಾಲಗಳಿಗೆ ಈಡಾಗಬೇಕಾದ ಸ್ಥಿತಿ. ಇದೆಲ್ಲದರಿಂದ ಜರ್ಝರಿತವಾಗಿದ್ದ ಜರ್ಮನಿ, ಅಸಮಾಧಾನ, ಅಶಾಂತಿಗಳಿಗೆ ಈಡಾಗಿತ್ತು. 1929ರ ಅಕ್ಟೋಬರ್‌ನಲ್ಲಿ ನ್ಯೂಯಾರ್ಕ್ ಶೇರು ಮಾರುಕಟ್ಟೆ ಕುಸಿಯುತ್ತದೆ. ಅದರೊಂದಿಗೆ ಅಮೆರಿಕ ತಾನು ಹಲವು ದೇಶಗಳಿಗೆ ನೀಡಿದ್ದ ಸಾಲಗಳನ್ನು ಏಕಾಏಕಿ ಹಿಂಪಡೆಯಲು ತೊಡಗುತ್ತದೆ. ಸಾಲ ಮರುಪಾವತಿ ಮಾಡಲಾಗದೆ ಹಲವು ದೇಶಗಳ ಆರ್ಥಿಕತೆಗಳು ಬೀಳಲು ಆರಂಭವಾಗುತ್ತದೆ. 1930ರ ವೇಳೆಗೆ ಜಾಗತಿಕ ಆರ್ಥಿಕ ಬಿಕ್ಕಟ್ಟು ಉಚ್ಚ ಸ್ಥಾಯಿಗೆ ಏರತೊಡಗುತ್ತದೆ. ಇದನ್ನು ಜಾಗತಿಕ ಆರ್ಥಿಕತೆಯ ಮಹಾ ಪತನ ಎಂದು ಕರೆಯಲಾಗುತ್ತದೆ. 

ಜಾಗತಿಕ ಬಂಡವಾಳಶಾಹಿ ಶಕ್ತಿಗಳು ಇನ್ನಿಲ್ಲದ ಪೈಪೋಟಿಗೆ ಇಳಿಯುತ್ತವೆ. ತಮ್ಮ ಮಾರುಕಟ್ಟೆ ವಿಸ್ತರಣೆ ಹಾಗೆಯೇ ತಮ್ಮಲ್ಲಿ ಅಗಾಧ ಪ್ರಮಾಣದಲ್ಲಿ ಒಟ್ಟುಗೂಡಿಸಿ ಇಟ್ಟಿದ್ದ ಹೆಚ್ಚುವರಿ ಸರಕುಗಳ ಮಾರಾಟ ಮಾಡುವುದೇ ಅದರ ಗುರಿಯಾಗಿತ್ತು. ಆದರೆ ವ್ಯಾಪಾರ ವಹಿವಾಟು ಭಾರೀ ಪ್ರಮಾಣದಲ್ಲಿ ಕುಸಿಯುತ್ತಾ ಹೋಗುತ್ತದೆ. 1931ರಲ್ಲಿ ಜಪಾನ್ ತೀವ್ರ ಆರ್ಥಿಕ ಕುಸಿತಕ್ಕೀಡಾಗುತ್ತದೆ. ಜನರು ವ್ಯವಸ್ಥೆಯ ಮೇಲೆ ಭರವಸೆ ಕಳೆದುಕೊಳ್ಳುತ್ತಾರೆ. ಜಪಾನಿ ಸೇನೆ ಚೀನಾವನ್ನು ಆಕ್ರಮಿಸುತ್ತದೆ. ‘ಲೀಗ್ ಆಫ್ ನೇಷನ್ಸ್’ ಮಧ್ಯ ಪ್ರವೇಶದ ನಂತರ ಜಪಾನಿ ಸರಕಾರ ಆಕ್ರಮಣ ನಿಲ್ಲಿಸುವಂತೆ ನೀಡಿದ ನಿರ್ದೇಶನವನ್ನೂ ಲೆಕ್ಕಿಸದೆ ಜಪಾನಿ ಸೇನೆ ತನ್ನ ಆಕ್ರಮಣವನ್ನು ಮುಂದುವರಿಸಲು ತೊಡಗುತ್ತದೆ. ಇದೇ ಸಂದರ್ಭ ಅಂದರೆ 1933ರಲ್ಲಿ ಅಡೋಲ್ಫ್ ಹಿಟ್ಲರ್ ಜರ್ಮನಿಯಲ್ಲಿ ಅಧಿಕಾರಕ್ಕೆ ಏರುತ್ತಾನೆ. ಈತ ಇಟಲಿಯ ಸರ್ವಾಧಿಕಾರಿ ಬೆನಿಟೊ ಮುಸಲೋನಿ ಪ್ರತಿಪಾದಿಸಿದ್ದ ನಿರಂಕುಶ ಸಿದ್ಧಾಂತವಾದ ಫ್ಯಾಶಿಸಂ ಅನ್ನು ಅಪ್ಪಿಕೊಳ್ಳುತ್ತಾನೆ. ಮೊದಲ ವಿಶ್ವ ಯುದ್ಧ ಮುಗಿಯುತ್ತಿದ್ದ ಹಂತದಲ್ಲೇ, ಅಂದರೆ 1915ರಲ್ಲೇ ಮುಸಲೋನಿ ಇದನ್ನು ಪ್ರತಿಪಾದಿಸಿರುತ್ತಾನೆ.

ಹುಸಿ ಜನಾಂಗೀಯ ಶ್ರೇಷ್ಠತೆ, ಹುಸಿ ರಾಷ್ಟ್ರೀಯ ಶ್ರೇಷ್ಠತೆಗಳನ್ನು ದೊಡ್ಡ ರೀತಿಯಲ್ಲಿ ಪ್ರಚುರಪಡಿಸುತ್ತಾ ತೀವ್ರ ಬಿಕ್ಕಟ್ಟುಗಳಲ್ಲಿ ಸಿಲುಕಿ ಒದ್ದಾಡುತ್ತಿರುವ ಜನಸಾಮಾನ್ಯರನ್ನು ಭಾರೀ ಭ್ರಮೆಗಳಿಗೆ ನೂಕುವ, ಪರಸ್ಪರ ಎತ್ತಿಕಟ್ಟುವ ಕಾರ್ಯಗಳನ್ನು ಸುವ್ಯಸ್ಥಿತ ರೀತಿಯಲ್ಲಿ ಸಂಘಟಿಸುತ್ತಾನೆ. ತನ್ನದು ನಾಝಿ ಸಮಾಜವಾದ ಎಂದು ಬಿಂಬಿಸುತ್ತಾ ಆರ್ಯನ್(ನಾರ್ದಿಕ್) ಜನಾಂಗ ಶ್ರೇಷ್ಠತೆಯನ್ನು ಪ್ರತಿಪಾದಿಸಿ ಜನಸಾಮಾನ್ಯರ ಮೇಲೆ ಅದನ್ನು ಹೇರಲಾರಂಭಿಸುತ್ತಾನೆ. ಕೈಗಾರಿಕಾ ಕ್ರಾಂತಿ ಹಾಗೆಯೇ ಬಂಡವಾಳಶಾಹಿ ಕ್ರಾಂತಿ ಪ್ರತಿಪಾದಿಸಿದ್ದ ಪ್ರಜಾತಾಂತ್ರಿಕ, ಉದಾರವಾದಿ ವಿಚಾರಧಾರೆಗಳನ್ನು ಇನ್ನಿಲ್ಲದಂತೆ ಹತ್ತಿಕ್ಕಲು ತೊಡಗುತ್ತಾನೆ. ಅದೇ ವೇಳೆಯಲ್ಲಿ ತನ್ನದು ನಿಜವಾದ ಸಮಾಜವಾದ ಎಂದು ಬಿಂಬಿಸುತ್ತಾನೆ. ಆತನ ಪಕ್ಷದ ಹೆಸರು ನಾಝಿ, ಅಂದರೆ ಜರ್ಮನ್ ಸಮಾಜವಾದಿ ಪಕ್ಷವೆಂದೇ ಆಗಿರುತ್ತದೆ. ಸೋವಿಯತ್ ರಶ್ಯಾ ಪ್ರತಿಪಾದಿಸುತ್ತಿದ್ದ ಕಮ್ಯುನಿಸ್ಟ್ ಸಮಾಜವಾದದ ಹೆಚ್ಚುತ್ತಿದ್ದ ಪ್ರಭಾವವನ್ನು ಆ ಮೂಲಕ ಕುಗ್ಗಿಸಲು ಪ್ರಯತ್ನಿಸುತ್ತಾನೆ. ಕಮ್ಯುನಿಸ್ಟರನ್ನು ಹುಡುಕಿ ಕೊಲ್ಲಲು ತೊಡಗುತ್ತಾನೆ.

 1935ರಲ್ಲಿ ಇಟಲಿ ಅಬಿಸೀನಿಯಾವನ್ನು (ಈಗಿನ ಇಥಿಯೋಪಿಯಾ) ಆಕ್ರಮಿಸುತ್ತದೆ. ಬಲಹೀನ ಅಬಿಸೀನಿಯಾ ಲೀಗ್ ಆಫ್ ನೇಷನ್ಸ್ ಮೊರೆ ಹೋಗುತ್ತದೆ. ಏನೂ ಪ್ರಯೋಜನವಾಗುವುದಿಲ್ಲ. ಇಟಲಿ ಲೀಗ್ ಆಫ್ ನೇಷನ್ಸ್ ನಿರ್ಣಯಗಳನ್ನು ಮಾನ್ಯ ಮಾಡುವುದಿಲ್ಲ. ಇಟಲಿ ಬ್ರಿಟನ್ ನೊಂದಿಗೆ ಗುಪ್ತ ಒಪ್ಪಂದ ಮಾಡಿಕೊಂಡಿದ್ದಲ್ಲದೆ ನಾಝಿ ಜರ್ಮನಿಗೂ ಹತ್ತಿರವಾಗತೊಡಗುತ್ತದೆ. ಮೊದಲ ವಿಶ್ವ ಯುದ್ಧದ ಸಮಯದಲ್ಲಿ ಜರ್ಮನಿ ಜೊತೆ ‘ಸೆಂಟ್ರಲ್ ಪವರ್ಸ್‌’ ಹೆಸರಿನಲ್ಲಿ ಒಂದಾಗಿದ್ದ ರಾಷ್ಟ್ರಗಳು ಭಾರೀ ಹಿನ್ನೆಡೆಗಳನ್ನು ಅನುಭವಿಸಿದ್ದ ಪರಿಣಾಮಗಳು ಇನ್ನೂ ಹೊಗೆಯಾಡುತ್ತಿದ್ದವು. ಈ ಸಂದರ್ಭವನ್ನು ಚೆನ್ನಾಗಿ ಬಳಸಿಕೊಂಡ ಹಿಟ್ಲರ್ ಆಸ್ಟ್ರಿಯಾ ನಂತರ ಝೆಕೊಸ್ಲಾವಾಕಿಯಾವನ್ನು ಆಕ್ರಮಿಸುತ್ತಾನೆ. ಆತ ಜರ್ಮನ್ ಐಕ್ಯತೆಯನ್ನು ಪ್ರತಿಪಾದಿಸುತ್ತಾ 1939ರಲ್ಲಿ ಪೋಲೆಂಡ್ ಮೇಲೆ ಆಕ್ರಮಣ ಮಾಡುವುದರೊಂದಿಗೆ ಫ್ರಾನ್ಸ್, ಬ್ರಿಟನ್‌ಗಳು ಜರ್ಮನಿ ಮೇಲೆ ಯುದ್ಧ ಸಾರಬೇಕಾದ ಅನಿವಾರ್ಯತೆಗೆ ಒಳಗಾಗುತ್ತವೆ. ಹಿಟ್ಲರ್ ಯುರೋಪಿನಲ್ಲಿ ತನ್ನ ಹಿಡಿತ ಬಲಗೊಳಿಸಲು ತೊಡಗುತ್ತಾನೆ. ಈ ಸಂದರ್ಭದಲ್ಲಿ ಜಪಾನ್ ಕೂಡ ತನ್ನ ಹಿಡಿತವನ್ನು ಚೀನಾದ ಮೇಲೆ ಹೆಚ್ಚಿಸಿಕೊಳ್ಳತೊಡಗುತ್ತದೆ. ವರ್ಸೈಲ್ಸ್ ಒಪ್ಪಂದವನ್ನು ಧಿಕ್ಕರಿಸಿ ತನ್ನ ಸೇನಾಬಲವನ್ನು ವೃದ್ಧಿಸಿಕೊಳ್ಳುತ್ತದೆ. ಹಿಟ್ಲರ್‌ಗೆ ಸೋವಿಯತ್ ಒಕ್ಕೂಟದ ಸವಾಲು ಪ್ರಧಾನವಾದುದಾಗಿತ್ತು. ಆತ ಮೊದಲೇ ಅದರ ಮೇಲೆ ನೇರ ಯುದ್ಧಕ್ಕೆ ತೊಡಗುವ ಕೆಲಸಕ್ಕೆ ಹೋಗುವುದಿಲ್ಲ.

ಅಮೆರಿಕ ತಟಸ್ಥವಾಗುಳಿಯುವ ನಿರ್ಧಾರ ಕೈಗೊಂಡಿತ್ತು. ಅಮೆರಿಕ ಮತ್ತು ಯುನೈಟೆಡ್ ಕಿಂಗ್‌ಡಮ್‌ಗಳು ರಶ್ಯಾ ನೀಡಿದ ಫ್ಯಾಶಿಸ್ಟ್ ಹಿಟ್ಲರ್‌ನ ವಿರುದ್ಧ ಐಕ್ಯಹೋರಾಟದ ಆಹ್ವಾನವನ್ನು ಮಾನ್ಯ ಮಾಡದ ಕಾರಣ, ರಶ್ಯಾ ಹಿಟ್ಲರ್‌ನೊಂದಿಗೆ 1939ರ ಆಗಸ್ಟ್‌ನಲ್ಲಿ ಪರಸ್ಪರ ಆಕ್ರಮಣ ಮಾಡದಿರುವ (ಮೊಲೊಟೊವ್ ರಿಬ್ಬನ್‌ಟ್ರೊಪ್ ಪ್ಯಾಕ್ಟ್) ಒಪ್ಪಂದ ಏರ್ಪಡಿಸಿಕೊಳ್ಳುತ್ತದೆ. ಇದರಿಂದ ಸೋವಿಯತ್ ರಶ್ಯಾಕ್ಕೆ ತಯಾರಿಗೆ ಒಂದಷ್ಟು ಸಮಯ ಸಿಗುವಂತಾಗುತ್ತದೆ. ಅಲ್ಲದೆ ಅಮೆರಿಕ ಮತ್ತದರ ಕೂಟಗಳು ಅನಿವಾರ್ಯವಾಗಿ ಹಿಟ್ಲರ್‌ನನ್ನು ಎದುರಿಸಬೇಕಾದ ಸ್ಥಿತಿಯನ್ನೂ ನಿರ್ಮಿಸಿಬಿಡುತ್ತದೆ. 1939ರ ಸೆಪ್ಟಂಬರ್ 1ರಂದು ಹಿಟ್ಲರ್ ಪೋಲೆಂಡ್ ಮೇಲೆ ದಾಳಿ ಮಾಡಿದ. ಸುತ್ತುವರಿದು ರಶ್ಯಾವನ್ನು ಆಕ್ರಮಿಸುವ ಹಿಟ್ಲರ್‌ನ ತಂತ್ರವನ್ನು ಮನಗಂಡ ಸ್ಟಾಲಿನ್ ನೇತೃತ್ವದ ಸೋವಿಯತ್ ರಶ್ಯಾ ಆತನ ಮುನ್ನುಗ್ಗುವಿಕೆಯನ್ನು ತಡೆಯುವ ಯೋಜನೆ ಹಾಕುತ್ತದೆ. ಪೋಲೆಂಡಿನ ಉಳಿದ ಭಾಗವನ್ನು, ಫಿನ್‌ಲ್ಯಾಂಡಿನ ಕೆಲ ಭಾಗಗಳನ್ನು, ಜೊತೆಗೆ ಎಸ್ಟೋನಿಯಾ, ಲಾಟ್‌ವಿಯಾ, ಲಿಥುವೇನಿಯಾ, ಹಾಗೇನೆ ರೊಮೇನಿಯಾದ ಕೆಲ ಭಾಗಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳುತ್ತದೆ. ನಿರೀಕ್ಷಿಸಿದಂತೆಯೇ ಹಿಟ್ಲರ್ 22 ಜೂನ್ 1941 ರಂದು ರಶ್ಯಾದ ಮೇಲೆ ದಾಳಿ ಆರಂಭಿಸುತ್ತಾನೆ. ಇದನ್ನು ಆಪರೇಷನ್ ಬಾರ್‌ಬರೊಸ್ಸ ಎಂದು ಹೆಸರಿಸುತ್ತಾನೆ.

ಸೋವಿಯತ್ ರಷ್ಯಾದ ಕೆಂಪುಸೇನೆ ಹಿಟ್ಲರ್‌ನ ನಾಝಿಸೇನೆಯನ್ನು ರಶ್ಯಾದ ಒಳಗೆ ಬರುವಂತೆ ಯುದ್ಧ ತಂತ್ರ ಹೂಡಿ ರಾಜಧಾನಿ ಮಾಸ್ಕೊವಿಗೆ 30 ಕಿ.ಮೀ. ಅಂತರದಲ್ಲಿ ನಾಝಿ ಸೇನೆಯ ಮುನ್ನುಗ್ಗುವಿಕೆಯನ್ನು ತಡೆದು ನಿಲ್ಲಿಸಿ ಹಿಮ್ಮೆಟ್ಟಿಸತೊಡಗುತ್ತದೆ. ನೈಸರ್ಗಿಕವಾಗಿದ್ದ ಪ್ರತಿಕೂಲ ವಾತಾವರಣ ಕೂಡ ಕೆಂಪುಸೇನೆಗೆ ಪೂರಕವಾಗಿರುತ್ತದೆ. ರಶ್ಯಾದ ಸ್ಟಾಲಿನ್ ಗ್ರಾಡ್ ಹಾಗೂ ಕುರ್ಸ್ಕ್ ಕದನ ನಾಝಿ ಆಕ್ರಮಣಕ್ಕೆ ನಿರ್ಣಾಯಕ ಅಂತ್ಯ ಹಾಡಿ ಹಿಟ್ಲರ್‌ನನ್ನು ಜರ್ಮನಿಯ ಬರ್ಲಿನ್‌ವರೆಗೆ ಹಿಮ್ಮೆಟ್ಟಿಸುತ್ತದೆ. 1945 ಎಪ್ರಿಲ್‌ನಲ್ಲಿ ನಾಝಿಸೇನೆ ಸೋತು ಯುದ್ಧ ಅಂತ್ಯವಾಗುತ್ತದೆ. ಫ್ಯಾಶಿಸ್ಟ್ ಹಿಟ್ಲರ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಈ ಯುದ್ಧದಲ್ಲಿ ಸುಮಾರು 26 ದಶಲಕ್ಷ ರಶ್ಯನ್ನರು ಸಾವಿಗೀಡಾಗುತ್ತಾರೆ. ಅಪಾರ ಪ್ರಮಾಣದ ನಷ್ಟಗಳು ಉಂಟಾಗುತ್ತದೆ. ಅತೀ ಹೆಚ್ಚು ನಷ್ಟಗಳನ್ನು ಸೋವಿಯತ್ ರಶ್ಯಾ ಭರಿಸುವಂತಾಗುತ್ತದೆ. ಅಮೆರಿಕ, ಬ್ರಿಟನ್ ಅಲ್ಪನಷ್ಟವನ್ನು ಅನುಭವಿಸುತ್ತವೆ. ಪ್ರಧಾನವಾಗಿ ಈ ಎರಡು ರಾಷ್ಟ್ರಗಳು ಜರ್ಮನಿಯ ಮೇಲಿನ ಯುದ್ಧವನ್ನು ವಾಯು ದಾಳಿಗಳಿಗೆ ಸೀಮಿತಗೊಳಿಸುತ್ತವೆ. ಅಮೆರಿಕ ಈ ಯುದ್ಧವನ್ನು ಕೂಡ ತನ್ನ ಲಾಭಕ್ಕೆ ಬಳಸಿಕೊಳ್ಳುತ್ತಾ ತನ್ನ ಶಸ್ತ್ರಾಸ್ತ್ರಗಳನ್ನು ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡಿ ಭಾರೀ ಲಾಭ ಗಳಿಸುತ್ತದೆ. ಇದಕ್ಕಾಗಿ ‘ಲೆಂಡ್ ಲೀಸ್ ಆ್ಯಕ್ಟ್’ ಎಂಬ ಕಾನೂನನ್ನೇ ರೂಪಿಸಿಕೊಳ್ಳುತ್ತದೆ.

 ಜಪಾನಿನ ನೌಕಾಪಡೆ ಹಾಗೂ ವಾಯುಪಡೆ ಅಮೆರಿಕದ ಪರ್ಲ್ ಹಾರ್ಬರ್ (ಹವಾಯಿ ದ್ವೀಪದ ಬಂದರಿನ ಹೆಸರು) ಮೇಲೆ 1941ರ ಡಿಸೆಂಬರ್ 7ರಂದು ದಾಳಿ ಮಾಡಿ ತನ್ನ ಬೌಗೋಳಿಕ ಹಿಡಿತವನ್ನು ಹೆಚ್ಚಿಸಿಕೊಳ್ಳಲು ಹವಣಿಸುತ್ತದೆ. ಫೆಸಿಫಿಕ್ ಸಮುದ್ರದ ಈ ಆಯಕಟ್ಟಿನ ದ್ವೀಪವನ್ನು 1898ರಿಂದ ಅಮೆರಿಕ ತನ್ನ ವಶದಲ್ಲಿ ಇಟ್ಟುಕೊಂಡಿತ್ತು. ಅಲ್ಲಿದ್ದ ಜನಸಂಖ್ಯೆಯಲ್ಲಿ ಜಪಾನಿಯರೇ ಹೆಚ್ಚಿನವರಾಗಿದ್ದರು. ಜಪಾನ್ ನಡೆಸಿದ ಈ ದಾಳಿ ಅಮೆರಿಕವನ್ನು ಯುದ್ಧರಂಗಕ್ಕೆ ಇಳಿಯುವಂತೆ ಮಾಡಿದರೂ ಅದರ ಭಾಗವಹಿಸುವಿಕೆ ಒಟ್ಟಾರೆ ಹೋಲಿಕೆಯಲ್ಲಿ ನಾಮಮಾತ್ರದ್ದಾಗಿರುತ್ತದೆ. ಯುದ್ಧ ಇನ್ನೇನು ಮುಗಿಯುವ ಹಂತದಲ್ಲಿದ್ದಾಗ ಅಮೆರಿಕ ತನ್ನ ಆಧಿಪತ್ಯವನ್ನು ವಿಶ್ವಮಟ್ಟದಲ್ಲಿ ಸ್ಥಾಪಿಸುವ ಉದ್ದೇಶ ಇಟ್ಟುಕೊಂಡು ಜಪಾನಿನ ಹಿರೋಷಿಮ ಹಾಗೂ ನಾಗಸಾಕಿ ಮೇಲೆ ಅನಗತ್ಯ ಪರಮಾಣು ಬಾಂಬ್ ದಾಳಿ ನಡೆಸಿ ಚರಿತ್ರೆಯಲ್ಲಿ ಮಾಸಲಾಗದ ದುರಂತಕ್ಕೆ ಕಾರಣವಾಗುತ್ತದೆ. ಇದು ಪರಮಾಣು ಬಾಂಬಿನ ಕಂಡು ಕೇಳರಿಯದ ಭೀಕರತೆಯನ್ನು ಜಗತ್ತಿಗೆ ಕ್ರೂರವಾಗಿ ಪರಿಚಯಿಸುತ್ತದೆ.

ಅಮೆರಿಕ ಹಾಗೂ ಬ್ರಿಟನ್‌ಗಳು ಮೊದಲಿಗೇ ಸೋವಿಯತ್ ರಶ್ಯಾದ ಮೇಲೆ ಹಿಟ್ಲರ್‌ನ ಆಕ್ರಮಣ ನಡೆಯಬೇಕೆಂದು ಬಯಸಿದ್ದವು. ಅದರ ಲಾಭವನ್ನು ಹಂಚಿಕೊಳ್ಳಲು ಬಯಸಿದ್ದವು. ಅಮೆರಿಕ ಬ್ರಿಟನ್ ಮಿತ್ರಕೂಟ ಮ್ಯೂನಿಚ್ ಒಪ್ಪಂದದ ಮೂಲಕ ಝೆಕೊಸ್ಲಾವಾಕಿಯಾವನ್ನು ಹಿಟ್ಲರ್‌ನಿಗೆ ತಕರಾರಿಲ್ಲದೆ ಬಿಟ್ಟುಕೊಟ್ಟಿದ್ದು ಮತ್ತು ನಂತರದ ಅವುಗಳ ನಡೆಗಳು ಇದನ್ನು ದೃಢೀಕರಿಸಿದ್ದವು. ಹಿಟ್ಲರ್‌ನ ವಿರುದ್ಧದ ಯುದ್ಧದಲ್ಲಿ ಬ್ರಿಟನ್ ಹಾಗೂ ಅಮೆರಿಕ ಸೋವಿಯತ್ ರಶ್ಯಾಕ್ಕೆ ಸಹಕಾರ ನೀಡುವ ಗೋಜಿಗೆ ಹೋಗಿರಲಿಲ್ಲ. ಇದನ್ನು ಸೋವಿಯತ್ ರಶ್ಯಾದ ನಾಯಕತ್ವ ಮೊದಲೇ ಅಂದಾಜು ಮಾಡಿತ್ತು. ಹಾಗಾಗಿ ಸೋವಿಯತ್ ರಶ್ಯಾ ಹಿಟ್ಲರ್‌ನ ವಿರುದ್ಧ ಬಹುತೇಕ ಏಕಾಂಗಿಯಾಗಿ ಸೆಣಸಬೇಕಾದ ಅನಿವಾರ್ಯತೆ ಬಂತು. ವಾಸ್ತವದಲ್ಲಿ ಹಿಟ್ಲರ್‌ಗೆ ಬ್ರಿಟನ್ ಹಾಗೂ ಅಮೆರಿಕ ಮೇಲೆ ದಾಳಿ ಮಾಡಿ ವಶಪಡಿಸಿಕೊಳ್ಳುವ ಇರಾದೆಯೇನೂ ಬಲವಾಗಿ ಇರಲಿಲ್ಲ. ಅವನು ಬ್ರಿಟನ್ ಸಾಮ್ರಾಜ್ಯದ ಅಭಿಮಾನಿಯಾಗಿದ್ದ. ಅದನ್ನು ಆತನೇ ಹಲವಾರು ಬಾರಿ ಹೇಳಿಕೊಂಡಿದ್ದ ಕೂಡ. ಅದು ಅವನಿಗೆ ಮಾದರಿಯಾಗಿತ್ತು. ಆದರೆ ಬ್ರಿಟನ್ ಹಿಡಿತದಲ್ಲಿದ್ದ ಹಲವು ರಾಷ್ಟ್ರಗಳನ್ನು ಅವನು ತನ್ನ ವಶಕ್ಕೆ ಪಡೆಯಲು ಹೊರಟಿದ್ದ. ಅವನಿಗೆ ಕಮ್ಯುನಿಸ್ಟ್ ಸಮಾಜವಾದಿ ಸೋವಿಯತ್ ರಶ್ಯಾವನ್ನು ಸುತ್ತುವರಿದು ಆಕ್ರಮಿಸಿಕೊಳ್ಳುವ ಉದ್ದೇಶ ಬಲವಾಗಿತ್ತು. ಕಮ್ಯುನಿಸ್ಟ್ ಸೋವಿಯತ್ ರಶ್ಯಾದ ಪತನ ಅಮೆರಿಕ ನೇತೃತ್ವದ ಬಂಡವಾಳಶಾಹಿ ಬಣದ ದೊಡ್ಡ ಬಯಕೆ ಕೂಡ ಆಗಿತ್ತು. ಹಿಟ್ಲರ್ ಕಮ್ಯುನಿಸ್ಟ್ ಸಿದ್ಧಾಂತ ಹಾಗೂ ವಿಚಾರಧಾರೆಯನ್ನು ಕಟುವಾಗಿ ದ್ವೇಷಿಸುತ್ತಿದ್ದ. ಅದರಂತೆಯೇ ಅವನ ನಡೆಗಳು ಕೂಡ ಇದ್ದವು.

ಎರಡನೇ ವಿಶ್ವ ಯುದ್ಧದ ನಂತರ ಜಾಗತಿಕವಾಗಿ ಹಲವು ಮಹತ್ತರ ಬೆಳವಣಿಗೆಗಳು ನಡೆದವು. ಅವುಗಳಲ್ಲಿ ಒಂದು ಬ್ರಿಟನ್ ಸಾಮ್ರಾಜ್ಯಶಾಹಿ ತನ್ನ ಬಹುತೇಕ ವಸಾಹತುಗಳನ್ನು ಕಳೆದುಕೊಂಡು ಸೂರ್ಯ ಮುಳುಗುವ ಸಣ್ಣ ಸಾಮ್ರಾಜ್ಯವಾಯಿತು. ಚೀನಾದಲ್ಲಿ ಅಲ್ಲಿನ ಕಮ್ಯುನಿಸ್ಟ್ ಪಕ್ಷದ ನೇತೃತ್ವದಲ್ಲಿ ಅಂತರ್ಯುದ್ಧ ನಡೆದು ಕ್ರಾಂತಿಯಾಗಿ ನವ ಪ್ರಜಾತಾಂತ್ರಿಕ ವ್ಯವಸ್ಥೆ ಸ್ಥಾಪನೆಯಾಯಿತು. ಸೋವಿಯತ್ ರಶ್ಯಾದ ಜಾಗತಿಕ ಪ್ರಭಾವ ಹೆಚ್ಚಾಯಿತು. ಜಪಾನ್ ಕೂಡ ತನ್ನ ವಸಾಹತುಗಳನ್ನು ಕಳೆದುಕೊಂಡು ಹಲವು ನಿರ್ಬಂಧಗಳಿಗೆ ಒಳಗಾಗಿ ಬಲಹೀನ ಸ್ಥಿತಿಗೆ ಇಳಿಯಿತು. ಅಮೆರಿಕ ಆರ್ಥಿಕವಾಗಿ ರಾಜಕೀಯವಾಗಿ ಮತ್ತಷ್ಟು ಬಲಾಢ್ಯವಾಯಿತು. ಜರ್ಮನಿ ಪಶ್ಚಿಮ ಹಾಗೂ ಪೂರ್ವ ಎಂದು ಎರಡು ಹೋಳಾಗಿ ಮಧ್ಯ ಬರ್ಲಿನ್ ಗೋಡೆ ನಿರ್ಮಾಣವಾಗುತ್ತದೆ. ಪಶ್ಚಿಮ ಜರ್ಮನಿ ಅಮೆರಿಕ ನೇತೃತ್ವದ ಬಂಡವಾಳಶಾಹಿ ಬಣದೊಂದಿಗೆ, ಪೂರ್ವ ಜರ್ಮನಿ ಸೋವಿಯತ್ ರಶ್ಯಾ ನೇತೃತ್ವದ ಕಮ್ಯುನಿಸ್ಟ್ ಸಮಾಜವಾದಿ ಬಣದೊಂದಿಗೆ ಗುರುತಿಸಿಕೊಂಡಿತು.

 ಅದೇ ರೀತಿ ಜಪಾನಿನ ವಸಾಹತು ಆಗಿದ್ದ ಕೊರಿಯ ಕೂಡ ಇಬ್ಭಾಗವಾಗಿ ಉತ್ತರ ಕೊರಿಯ ಸೋವಿಯತ್ ರಶ್ಯಾದ ಬಣವಾದರೆ, ದಕ್ಷಿಣ ಕೊರಿಯ ಅಮೆರಿಕ ಸಂಯುಕ್ತ ಸಂಸ್ಥಾನದ ಬಣವಾಯಿತು. ವಿಶ್ವ ಮುಖ್ಯವಾಗಿ ಈ ಎರಡು ಬಣಗಳಿಗೆ ಸೇರಿಕೊಂಡಿತು. ಅಲ್ಲದೆ ಕೆಲವು ರಾಷ್ಟ್ರಗಳು ‘ಅಲಿಪ್ತರಾಷ್ಟ್ರಗಳು’ ಎಂದು ಪ್ರತ್ಯೇಕವಾಗಿ ಗುರುತಿಸಿಕೊಂಡವು. ಬ್ರಿಟಿಷ್ ವಸಾಹತುಶಾಹಿಯ ನೇರ ಹಿಡಿತದಿಂದ ಭಾರತ ಹೊರಬಂತು. ಯುದ್ಧದಿಂದಾಗಿ ಸುಮಾರು 50ದಶಲಕ್ಷ ಜನರ ಮಾರಣಹೋಮವಾಗಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟಗಳು ಸಂಭವಿಸಿದ್ದು ಅದರ ಕರಾಳ ನೆರಳು ಮತ್ತೂ ಮುಂದುವರಿಯುತ್ತಿದೆ. ಅಲ್ಲದೆ ಪರಮಾಣು ಶಸ್ತ್ರಗಳ ಬಳಕೆಯ ಸಾಧ್ಯತೆ ಹಾಗೂ ಅದರಿಂದ ವಿಶ್ವಕ್ಕೆ ಒದಗುವ ಭೀಕರ ಅಪಾಯದ ಕರಿಛಾಯೆ ಜಾಗತಿಕ ಪ್ರಭಾವ ಬೀರಿತ್ತು. ಬಹುತೇಕ ರಾಷ್ಟ್ರಗಳ ಆರ್ಥಿಕತೆ ಭಾರೀ ನಷ್ಟಕ್ಕೊಳಗಾಯಿತಲ್ಲದೆ, ಮೂಲಸೌಲಭ್ಯಗಳು ನೆಲ ಕಚ್ಚಿ ಜನರು ಅಗಾಧ ಸಮಸ್ಯೆಗಳಿಗೆ ಒಳಗಾಗಿ ಯುದ್ಧ ಪಿಪಾಸುತನಕ್ಕೆ ವಿರೋಧ ಹೆಚ್ಚಾಯಿತು. ಅಮೆರಿಕ ಮಾತ್ರ ಕಡಿಮೆ ಹಾನಿಗೊಳಗಾಗಿ ಅತ್ಯಂತ ಹೆಚ್ಚು ಲಾಭ ಪಡೆಯಿತು. ಈ ಎಲ್ಲಾ ಬೆಳವಣಿಗೆಗಳಿಂದಾಗಿ ನಷ್ಟ ಸಂಭವಿಸದೆ ಜಾಗತಿಕ ಮಾರುಕಟ್ಟೆಯ ಲಾಭ, ಹಿಡಿತ ಪಡೆಯುವ ಅಗತ್ಯ ಹಿಂದಿಗಿಂತಲೂ ಹೆಚ್ಚಿನ ಮಹತ್ವ ಪಡೆಯುತ್ತದೆ.

ಈ ಹಿನ್ನೆಲೆಯಲ್ಲಿ ಹೆಚ್ಚು ಸಂಘಟಿತವಾಗಿ ಜಾಗತಿಕ ಸಂಘಟನೆಗಳು ರೂಪುಗೊಳಿಸಿಕೊಳ್ಳಬೇಕಾದ ಅವಶ್ಯಕತೆ ಜಾಗತಿಕ ಶಕ್ತಿಗಳಿಗೆ ಬರುವುದರೊಂದಿಗೆ ವಿಶ್ವಸಂಸ್ಥೆ 1945 ಅಕ್ಟೋಬರ್ 24ಕ್ಕೆ ಅಸ್ತಿತ್ವಕ್ಕೆ ಬಂತು. ಇದು ಮೊದಲ ಮಹಾಯುದ್ಧದ ನಂತರ ಸಂಘಟಿತಗೊಂಡ ‘ಲೀಗ್ ಆಫ್ ನೇಷನ್ಸ್’ನ ಸುಧಾರಿತ ರೂಪ. ಇದರ ಘೋಷಿತ ಉದ್ದೇಶಗಳು ವಿಶ್ವಯುದ್ಧಗಳನ್ನು ತಡೆಯುವುದು, ಪ್ರಜಾಪ್ರಭುತ್ವ ಹಾಗೂ ಜಾಗತಿಕ ಶಾಂತಿ ನೆಲೆಗೊಳಿಸುವುದು, ಮಾತುಕತೆಗಳು, ನಿರ್ಬಂಧಗಳ ಮೂಲಕ ಸಮಸ್ಯೆಗಳನ್ನು ಬಗೆಹರಿಸುವುದು ಎನ್ನುವುದಾಗಿತ್ತು. ಇದರಲ್ಲಿ ಬಲಿಷ್ಠ ರಾಷ್ಟ್ರಗಳಾದ ಚೀನಾ, ಫ್ರಾನ್ಸ್, ಸೋವಿಯತ್ ರಶ್ಯಾ, ಯುನೈಟೆಡ್ ಕಿಂಗ್ ಡಮ್, ಯುೈಟೆಡ್ ಸ್ಟೇಟ್ಸ್ ‘ವೀಟೋ’ ಅಧಿಕಾರವಿರುವ ಶಾಶ್ವತ ಸದಸ್ಯ ರಾಷ್ಟ್ರಗಳಾದವು. ಆದರೆ ಯುದ್ಧವನ್ನು ತಡೆಯುವ ಉದ್ದೇಶದಿಂದ ವಿಶ್ವಸಂಸ್ಥೆ ಇದ್ದರೂ 1950 ಜೂನ್‌ನಲ್ಲಿ ಕೊರಿಯ ಯುದ್ಧ ನಡೆಯಿತು. ಚೀನಾ, ಸೋವಿಯತ್ ರಶ್ಯಾಗಳು ಉತ್ತರ ಕೊರಿಯ ಬೆಂಬಲಕ್ಕೆ ನಿಂತರೆ, ಅಮೆರಿಕ ಸಂಯುಕ್ತ ಸಂಸ್ಥಾನ ದಕ್ಷಿಣ ಕೊರಿಯ ಬೆಂಬಲಕ್ಕೆ ನಿಂತಿತು.
ಎರಡನೇ ವಿಶ್ವಯುದ್ಧಾನಂತರ 70ರ ದಶಕದವರೆಗೆ ಜಾಗತಿಕ ಆರ್ಥಿಕತೆ ಸಾಪೇಕ್ಷ ಸ್ಥಿರತೆಯನ್ನು ಕಾಯ್ದುಕೊಂಡಂತೆ ಕಂಡಿತು. ಆದರೆ ಅದು 1970ರಲ್ಲಿ ಕಾಣಿಸಿಕೊಂಡ ಜಾಗತಿಕ ಆರ್ಥಿಕ ಬಿಕ್ಕಟ್ಟಿಗೆ ಮುನ್ನುಡಿಯಾಗಿತ್ತು. ಮತ್ತೆ ಸಮಸ್ಯೆಗಳ ಸರಮಾಲೆ ಶುರು. ಅಮೆರಿಕ ಆರ್ಥಿಕ ಹಿಂಜರಿತಕ್ಕೆ ಒಳಗಾಯಿತು. ನಿರುದ್ಯೋಗ ಹೆಚ್ಚತೊಡಗಿ, ಕೆಲವು ದೇಶಗಳು ಮೂರು ದಿನದ ವಾರವನ್ನು ಜಾರಿಗೊಳಿಸಿದವು, ಗಣಿ ಕಾರ್ಮಿಕರ ಮುಷ್ಕರ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಬಿರುಸುಗೊಂಡಿತು. ತೈಲ ಉತ್ಪಾದನಾ ರಾಷ್ಟ್ರಗಳು ತೈಲ ನಿರ್ಬಂಧವನ್ನು ವಿಧಿಸುವ ಮೂಲಕ ತೈಲಬಿಕ್ಕಟ್ಟು ಆರಂಭ. ವಿದ್ಯುಚ್ಛಕ್ತಿ ಉಪಯೋಗ ಪಡಿತರ ಹಂಚುವ ರೀತಿಯಂತಾಯಿತು. ದೂರದರ್ಶನ ಪ್ರಸಾರಕ್ಕೆ ಸಮಯ ನಿಗದಿಯಾಯಿತು.

ಅಮೆರಿಕದ ಶೇರು ಮಾರುಕಟ್ಟೆ ಭಾರೀ ಕುಸಿತ ಕಂಡು ಹದಿನೆಂಟು ತಿಂಗಳ ಅವಧಿಯಲ್ಲಿ ಶೇ.40ರಷ್ಟು ನಷ್ಟಕ್ಕೆ ಈಡಾಯಿತು. ಈ ಅವಧಿಯಲ್ಲಿ ಮಹಾ ಹಣದುಬ್ಬರ ಜಗತ್ತಿನ ಹಲವು ದೇಶಗಳನ್ನು ಬಾಧಿಸಿದ್ದಲ್ಲದೆ ಜನಜೀವನವನ್ನು ಅಲ್ಲೋಲಕಲ್ಲೋಲಗೊಳಿಸಿಬಿಟ್ಟಿತು. ಅಮೆರಿಕ, ಬ್ರಿಟನ್, ಫ್ರಾನ್ಸ್ ಮೊದಲಾದ ಬಂಡವಾಳಶಾಹಿ ರಾಷ್ಟ್ರಗಳ ಆರ್ಥಿಕ ಬೆಳವಣಿಗೆ ತೀವ್ರ ರೀತಿಯಲ್ಲಿ ಕುಂಠಿತಗೊಂಡಿತು. ಸೋವಿಯತ್ ರಶ್ಯಾ ಹಾಗೂ ಚೀನಾ ಇನ್ನಿತರ ಸಮಾಜವಾದಿ ಬಣವೆಂದು ಗುರುತಿಸಿಕೊಂಡಿದ್ದ ರಾಷ್ಟ್ರಗಳು ಸಾಪೇಕ್ಷ ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಂಡವು. ಈ ಬಿಕ್ಕಟ್ಟು ಈಗಲೂ ಹಾಗೆಯೇ ಮುಂದುವರಿದಿದೆ ಎನ್ನಬಹುದು. ಈ ಬಿಕ್ಕಟ್ಟಿನ ನಂತರವೇ ಜಾಗತೀಕರಣದ ಪರಿಕಲ್ಪನೆಯನ್ನು ವಿಸ್ತಾರಗೊಳಿಸಿ ಜಾರಿಗೊಳಿಸುವುದು ಜಾಗತಿಕ ಬಂಡವಾಳಶಾಹಿ ಶಕ್ತಿಗಳಿಗೆ ಅನಿವಾರ್ಯವೆನಿಸಿತು. ಆದರೆ ಜಾಗತೀಕರಣದ ಪರಿಕಲ್ಪನೆ ಆಗ ತಾನೇ ಹುಟ್ಟಿದ್ದಲ್ಲ. ಅದು ಆಧುನಿಕ ಜಾಗತಿಕ ವ್ಯಾಪಾರ ಶುರುವಾದಾಗಲೇ ಹುಟ್ಟಿತೆನ್ನಬಹುದು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top